ArticlesLatest News

ಕೇಂದ್ರ ಸರ್ಕಾರದ ಭಾರತ ಪರ್ವದಲ್ಲಿ ಮೈಸೂರಿನ ಹೆಮ್ಮೆಯ ಪ್ರತಿನಿಧಿಯಾಗಿ “ಆಸ್ಕ್ ಮೈಸೂರು”

-ಏಕತಾ ನಗರ, ಗುಜರಾತ್

 

ಏಕತೆಯಲ್ಲಿ ವೈವಿಧ್ಯತೆ, ವೈವಿಧ್ಯತೆಯಲ್ಲಿ ಭಾರತದ ಸೌಂದರ್ಯ!
ಭಾರತ ಪರ್ವ 2026 ಕಾರ್ಯಕ್ರಮದ ಭಾಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಭಾರತ ಸರ್ಕಾರದ ವಾರ್ತಾ ಶಾಖೆ PIB ಬೆಂಗಳೂರು ವತಿಯಿಂದ ಕರ್ನಾಟಕದ 8 ಕಂಟೆಂಟ್ ಕ್ರಿಯೇಟರ್ಸ್ ಗಳಿಗೆ ಗುಜರಾತ್ ನ ಕೇವಾಡಿಯಗೆ ಪ್ರವಾಸ ಆಯೋಜಿಸಿದ್ದಾಗ, ನಮ್ಮ ಮೈಸೂರಿನ ಹೆಸರಾಂತ ಡಿಜಿಟಲ್ ಮಧ್ಯಮವಾದ ASK ಮೈಸೂರು ಪ್ರಶಾಂತ್ ಅವರು ಈ ಪ್ರವಾಸಕ್ಕೆ ಆಹ್ವಾನ ಪಡೆದು ಹೋಗಿ ಅಲ್ಲಿನ ಏಕತಾ ಪ್ರತಿಮೆಗೆ ಭೇಟಿ ನೀಡಿ ಅಲ್ಲಿನ ಸಾಂಸ್ಕೃತಿಕ ವೈವಿದ್ಯತೆ ಮತ್ತು ಮಹತ್ವದ ಕುರಿತು ಮಾಹಿತಿ ಪಡೆದರು.

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಅಕ್ಟೋಬರ್ 30ರಂದು ಈ ಉತ್ಸವಕ್ಕೆ ಚಾಲನೆ ನೀಡಿದ್ದು, ನವೆಂಬರ್ 15ರವರೆಗೆ ಈ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ರಾಷ್ಟ್ರೀಯ ಏಕತಾ ದಿನದ ಆಚರಣೆಯ ಭಾಗವಾಗಿ ಆರಂಭಗೊಂಡಿರುವ ಈ ಕಾರ್ಯಕ್ರಮವು ‘ಏಕ್ ಭಾರತ್ ಶ್ರೇಷ್ಠ ಭಾರತ್‘ ಎಂಬ ಆಶಯವನ್ನು ಪ್ರತಿಬಿಂಬಿಸುತ್ತಿದೆ.

 

ಏನಿದು ಭಾರತ ಪರ್ವ?
ಭಾರತ ಪರ್ವ ಎನ್ನುವುದು ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಕೃತಿಕ ವೈಶಿಷ್ಟ್ಯ, ಸ್ಥಳೀಯ ಕಲೆ, ಕರಕುಶಲ ಕೌಶಲ್ಯ, ಸಂಗೀತ, ನೃತ್ಯ, ಆಹಾರ ಪದ್ಧತಿ ಹಾಗೂ ಪ್ರವಾಸಿ ತಾಣಗಳನ್ನು ಜನರಿಗೆ ಪರಿಚಯಿಸುವ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಉತ್ಸವವಾಗಿದ್ದು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಗುಜರಾತ್ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಈ ಉತ್ಸವವನ್ನು ಆಯೋಜಿಸಿದೆ. ದೇಶದ ವಿವಿಧ ಭಾಗಗಳ ಜನರು ಪರಸ್ಪರರ ಸಂಸ್ಕೃತಿ ಮತ್ತು ಪರಂಪರೆಯನ್ನು ಅರಿತುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ.

29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭಾಗವಹಿಸುವಿಕೆ ಈ ಬಾರಿಯ ಭಾರತ ಪರ್ವದಲ್ಲಿ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸುತ್ತಿದ್ದು, ‘ಇನ್‌ಕ್ರೆಡಿಬಲ್ ಇಂಡಿಯಾ’ ಹಾಗೂ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕೂಡ ತಮ್ಮ ಕೊಡುಗೆ ನೀಡಿವೆ.

ಇಲ್ಲಿನ ಪ್ರಮುಖ ಆಕರ್ಷಣೆಯಾದ ಥೀಮ್ ಪೆವಿಲಿಯನ್‌ನಲ್ಲಿ 100ಕ್ಕೂ ಹೆಚ್ಚು ‘ಒಂದು ಜಿಲ್ಲೆ, ಒಂದು ಉತ್ಪನ್ನ’ (ODOP) ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಜೊತೆಗೆ ವಿವಿಧ ರಾಜ್ಯಗಳ ಕೈಮಗ್ಗ ಉತ್ಪನ್ನಗಳು, ಸಾಂಪ್ರದಾಯಿಕ ಉಡುಪುಗಳು, ಚಿತ್ರಕಲೆಗಳು, ಕೃಷಿ ಉತ್ಪನ್ನಗಳು ಹಾಗೂ ವಿಶಿಷ್ಟ ಕರಕುಶಲ ವಸ್ತುಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ. ಸ್ಥಳೀಯ ಕಲಾವಿದರಿಗೆ ರಾಷ್ಟ್ರೀಯ ವೇದಿಕೆ ಭಾರತದ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಲಾವಿದರು ಸ್ಥಳದಲ್ಲಿಯೇ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ.

ಅಸ್ಸಾಂನ ಮುಖವಾಡ ತಯಾರಿಕೆ, ಬಿಹಾರದ ಮಧುಬನಿ ಚಿತ್ರಕಲೆ, ಗುಜರಾತ್‌ನ ರೋಗನ್ ಕಲೆ, ಕೇರಳದ ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆ, ಒಡಿಶಾದ ಪಟಚಿತ್ರ ಕಲೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಸೋಜ್ನಿ ಕಸೂತಿ ಕಲೆ ಸೇರಿದಂತೆ ಹಲವು ವಿಶಿಷ್ಟ ಕಲಾ ಪ್ರಕಾರಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ಇದರೊಂದಿಗೆ ದೇಶದ ವಿವಿಧ ಭಾಗಗಳ ಜಾನಪದ ಮತ್ತು ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡುತ್ತಿವೆ. ಆಂಧ್ರಪ್ರದೇಶದ ಕೂಚಿಪುಡಿ, ಅಸ್ಸಾಂನ ಬಿಹು, ಗುಜರಾತ್‌ನ ಗರ್ಬಾ, ಕೇರಳದ ತೋಲ್ಪಾವಕೂತ್ತು, ರಾಜಸ್ಥಾನದ ರಾವಣಹತ್ತಾ ಸಂಗೀತ, ಪಶ್ಚಿಮ ಬಂಗಾಳದ ಬೌಲ್ ಸಂಗೀತ ಹಾಗೂ ಪುರುಲಿಯಾ ಛೌ ನೃತ್ಯ ಸೇರಿದಂತೆ ಹಲವು ಕಲಾ ಪ್ರಕಾರಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ.

23 ರಾಜ್ಯಗಳ ಆಹಾರ ವೈವಿಧ್ಯತೆಯ ಸವಿರುಚಿ
ಭಾರತ ಪರ್ವದ ಮತ್ತೊಂದು ಪ್ರಮುಖ ಆಕರ್ಷಣೆ ಆಹಾರ ಮೇಳ. 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಪರಿಚಯಿಸುವ ವಿಶೇಷ ಆಹಾರ ಮಳಿಗೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ.

ಇದರ ಜೊತೆಗೆ ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್‌ಮೆಂಟ್ ಅಂಡ್ ಕ್ಯಾಟರಿಂಗ್ ಟೆಕ್ನಾಲಜಿ (NCHMCT) ನಿರ್ವಹಣೆಯಲ್ಲಿ ವಿಶೇಷ ಸ್ಟುಡಿಯೋ ಕಿಚನ್ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಪ್ರಾದೇಶಿಕ ಖಾದ್ಯಗಳ ತಯಾರಿಕೆ ಮತ್ತು ಸಾಂಪ್ರದಾಯಿಕ ಅಡುಗೆ ವಿಧಾನಗಳ ನೇರ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತಿದೆ.
ಪ್ರತಿದಿನ ಸಂಜೆ 5ರಿಂದ ರಾತ್ರಿ 8ರವರೆಗೆ ಆಹಾರ ಮೇಳದ ಆವರಣದಲ್ಲಿ ವಿವಿಧ ರಾಜ್ಯಗಳ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಪ್ರದರ್ಶನಗಳೂ ನಡೆಯುತ್ತಿವೆ.


ರಾಷ್ಟ್ರೀಯ ಏಕತೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ
ಭಾರತ ಪರ್ವ ಕೇವಲ ಮನರಂಜನೆಯ ಉತ್ಸವವಲ್ಲ. ಸ್ಥಳೀಯ ಕುಶಲಕರ್ಮಿಗಳು, ಕಲಾವಿದರು ಹಾಗೂ ಸಾಂಪ್ರದಾಯಿಕ ಉತ್ಪನ್ನಗಳ ತಯಾರಕರಿಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಕಲ್ಪಿಸುವ ವೇದಿಕೆಯಾಗಿದೆ.

ವಿವಿಧ ರಾಜ್ಯಗಳ ಸಂಸ್ಕೃತಿಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವುದರ ಜೊತೆಗೆ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.


‘ಏಕ್ ಭಾರತ್ ಶ್ರೇಷ್ಠ ಭಾರತ್’ ಎಂಬ ಆಶಯದೊಂದಿಗೆ ನಡೆಯುತ್ತಿರುವ ಭಾರತ ಪರ್ವವು ಭಾರತದ ವೈವಿಧ್ಯತೆಯೇ ನಮ್ಮ ಶಕ್ತಿ ಮತ್ತು ಸಂಸ್ಕೃತಿಯೇ ನಮ್ಮ ಹೆಮ್ಮೆ ಎಂಬ ಸಂದೇಶವನ್ನು ಸಾರುತ್ತಿದೆ.
ನವೆಂಬರ್ 15ರವರೆಗೆ ನಡೆಯಲಿರುವ ಈ ಉತ್ಸವವು ದೇಶದ ವಿವಿಧ ಭಾಗಗಳ ಸಂಸ್ಕೃತಿ, ಕಲೆ, ಆಹಾರ ಮತ್ತು ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಅನುಭವಿಸುವ ಅಪೂರ್ವ ಅವಕಾಶವಾಗಿದ್ದು, ಭಾರತದ ಏಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ.

 

Contact us for classifieds and ads : +91 9742974234