ಕೆ.ಆರ್.ನಗರದಲ್ಲಿ ಕಾವೇರಿ ನದಿಯಲ್ಲಿ ದಾರುಣ ದುರಂತ: ಉರುಸ್ ಗೆ ಬಂದ 8ರಲ್ಲಿ 6 ಮಂದಿ ಸಾವು, ಇಬ್ಬರ ಸ್ಥಿತಿ ಗಂಭೀರ

ಕೆ.ಆರ್.ನಗರ: ಕಾವೇರಿ ನದಿಯಲ್ಲಿ ಈಜಲು ಇಳಿದ ಎಂಟು ಮಂದಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಇಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಆಸ್ಪತ್ರೆಗೆ ರವಾನಿಸಿರುವ ದುರ್ಘಟನೆ ಕೆ.ಆರ್.ನಗರ ಪಟ್ಟಣ ಸಮೀಪದ ಹಳೆಯ ಎಡತೊರೆ ಪಂಪ್ ಹೌಸ್ ಬಳಿ ನಡೆದಿದೆ. ಈ ಕುರಿತು ಪೊಲೀಸ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಮಾಹಿತಿ ನೀಡಿದ್ದು, ಘಟನೆ ಸ್ಥಳೀಯರು ಹಾಗೂ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.
ಹಳೇ ಎಡತೊರೆ ಭಾಗದಲ್ಲಿರುವ ಕಾವೇರಿ ನದಿ ದಂಡೆಯ ದರ್ಗಾದಲ್ಲಿ ನಡೆಯುತ್ತಿದ್ದ ಹಜರತ್ ಲಿಂಗಾವಳಿ ಉರುಸ್ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದ ಎಂಟು ಮಂದಿ ಸ್ನಾನಕ್ಕಾಗಿ ನದಿಗೆ ಇಳಿದಾಗ ಈ ದುರಂತ ಸಂಭವಿಸಿದೆ. ನದಿಯ ನೀರಿನ ವೇಗ ಮತ್ತು ಆಳವನ್ನು ಅಂದಾಜು ಮಾಡಲು ಸಾಧ್ಯವಾಗದೆ ಒಬ್ಬರ ನಂತರ ಒಬ್ಬರು ಮುಳುಗಲು ಆರಂಭಿಸಿದ್ದರೆಂದು ತಿಳಿದುಬಂದಿದೆ.

ಮೃತಪಟ್ಟವರನ್ನು ಮೈಸೂರು ಉದಯಗಿರಿ ನಿವಾಸಿಗಳಾದ ಫಾತೀಮ (42), ಉಜೇರ್ (5), ಬೆಂಗಳೂರು ಬಿಎಸ್ಆರ್ ಲೇಔಟ್ ನಿವಾಸಿಗಳಾದ ಮೊಹಮದ್ ಯಾಸೀನ್ (23), ನೇಹಾ ಕೌಸರ್ (19), ಬೆಂಗಳೂರು ಕಡಗೌಡನಹಳ್ಳಿ ನಿವಾಸಿ ಐಮಾನ್ ಹಾಗೂ ಕೆ.ಆರ್.ನಗರ ಪಟ್ಟಣದ ಮುಸ್ಲಿಂ ಬಡಾವಣೆಯ ಅಫೀಪ್ ಮೊಹಮದ್ (13) ಎಂದು ಗುರುತಿಸಲಾಗಿದೆ. ಒಂದೇ ಕುಟುಂಬ ಹಾಗೂ ಸಂಬಂಧಿಕರು ಸೇರಿ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿರುವುದು ನೋವನ್ನು ಮತ್ತಷ್ಟು ಗಾಢಗೊಳಿಸಿದೆ.
ನದಿಯಲ್ಲಿ ಮುಳುಗುತ್ತಿದ್ದ ಇನ್ನಿಬ್ಬರನ್ನು ಸ್ಥಳೀಯರು ಧೈರ್ಯದಿಂದ ರಕ್ಷಣೆ ಮಾಡಿದ್ದು, ತೀವ್ರ ನಿತ್ರಾಣಗೊಂಡ ಸ್ಥಿತಿಯಲ್ಲಿ ಅವರನ್ನು ತಕ್ಷಣವೇ ಕೆ.ಆರ್.ನಗರದ ಸಂವೃದ್ದಿ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ನಿರಂತರ ನಿಗಾವಹಿಸಿದ್ದಾರೆ.

ಘಟನೆ ತಿಳಿದ ತಕ್ಷಣವೇ ಕೆ.ಆರ್.ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಎಂಟು ಮಂದಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಆರು ಮಂದಿ ಮೃತಪಟ್ಟಿದ್ದರು. ಮೃತದೇಹಗಳ ಶವ ಪರೀಕ್ಷೆಯನ್ನು ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಈ ದುರಂತದ ಸುದ್ದಿ ಪಟ್ಟಣದಲ್ಲಿ ಮಿಂಚಿನಂತೆ ಹರಡುತ್ತಿದ್ದಂತೆ ಸಾರ್ವಜನಿಕ ಆಸ್ಪತ್ರೆಯ ಶವಗಾರದ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅತ್ತ ಸಂವೃದ್ದಿ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಸಾವಿರಾರು ಮಂದಿ ಆಗಮಿಸಿ ಮೃತರಿಗೆ ಕಂಬನಿ ಮಿಡಿದರು. ಒಂದೇ ಕ್ಷಣದಲ್ಲಿ ಆರು ಜೀವಗಳು ನದಿಯ ಅಲೆಗಳಿಗೆ ಆಹುತಿಯಾಗಿರುವುದು ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿದೆ.
ಘಟನೆಯ ನಂತರ ಸ್ಥಳಕ್ಕೆ ಶಾಸಕ ಡಿ.ರವಿಶಂಕರ್, ಮಾಜಿ ಸಚಿವ ಸಾ.ರಾ.ಮಹೇಶ್, ತಹಶೀಲ್ದಾರ್ ಸುರೇಂದ್ರಮೂರ್ತಿ, ಜಿಲ್ಲಾ ಪೊಲೀಸ್ ಅಧೀಕ್ಷ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರಾಜಣ್ಣ, ಪೊಲೀಸ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಅನೇಕ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು ಹಾಗೂ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಕಾವೇರಿ ದುರಂತಕ್ಕೆ ಸರ್ಕಾರದ ಸ್ಪಂದನೆ : ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಣೆ
ಈ ವೇಳೆ ಮಾತನಾಡಿದ ಶಾಸಕ ಡಿ.ರವಿಶಂಕರ್, “ಕಾವೇರಿ ನದಿಯಲ್ಲಿ ಮುಳುಗಿ ಆರು ಮಂದಿ ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿ. ಈ ಘಟನೆ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ರಾಜ್ಯ ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು” ಎಂದು ಘೋಷಿಸಿದರು. ಜೊತೆಗೆ ತಾವು ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೂ 50 ಸಾವಿರ ರೂಪಾಯಿ ನೆರವು ನೀಡುವುದಾಗಿ ತಿಳಿಸಿದರು. ಮೃತರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದರು. ಮೃತದೇಹಗಳನ್ನು ಅವರ ಹುಟ್ಟೂರಿಗೆ ಸಾಗಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.
ಮೃತರ ಕುಟುಂಬಕ್ಕೆ ಸಾ.ರಾ.ಮಹೇಶ್ ತಲಾ ₹50 ಸಾವಿರ ಪರಿಹಾರ ಘೋಷಣೆ
ಇದೇ ವೇಳೆ ಮಾಜಿ ಸಚಿವ ಸಾ.ರಾ.ಮಹೇಶ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಪ್ರತಿ ಕುಟುಂಬಕ್ಕೂ ತಲಾ 50 ಸಾವಿರ ರೂಪಾಯಿ ವೈಯಕ್ತಿಕ ಪರಿಹಾರ ನೀಡುವುದಾಗಿ ಘೋಷಿಸಿದ ಅವರು, “ಗಾಯಾಳುಗಳು ಶೀಘ್ರ ಗುಣಮುಖರಾಗಲಿ” ಎಂದು ಆಶಿಸಿದರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದಿಂದಲೂ ಪರಿಹಾರ ಒದಗಿಸುವ ಬಗ್ಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಉರುಸ್ ಸಂಭ್ರಮಕ್ಕಾಗಿ ಬಂದಿದ್ದವರ ಮೇಲೆ ಕಾವೇರಿ ನದಿ ಕೋಪ ತೋರಿದಂತಾಗಿ, ಒಂದು ಕ್ಷಣದಲ್ಲಿ ಆರು ಅಮೂಲ್ಯ ಜೀವಗಳು ಕಳೆದುಹೋಗಿರುವುದು ಪ್ರದೇಶದ ಜನತೆಗೆ ಆಘಾತ ಉಂಟುಮಾಡಿದೆ. ನದಿಯಲ್ಲಿ ಈಜಲು ಇಳಿಯುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂಬ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಮನಗಾಣಿಸಿದೆ.
