Latest News

ತುಮಕೂರು: ಮಗಳ ಪ್ರಿಯಕರನ ಜೊತೆ ಸೇರಿ ಅಳಿಯನ ಹತ್ಯೆ : ತಾಯಿ, ತಮ್ಮ ಸೇರಿ ಮೂವರು ಬಂಧನ

ತುಮಕೂರು, ಏಪ್ರಿಲ್ 19: ಮಗಳ ಸಾವಿನ ಬಳಿಕ ಕುಟುಂಬದೊಳಗಿನ ಅಕ್ರಮ ಸಂಬಂಧ ಮತ್ತು ವೈಮನಸ್ಸು ಕೊನೆಗೆ ರಕ್ತಪಾತಕ್ಕೆ ಕಾರಣವಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಂಡೀಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಗಳ ಪ್ರಿಯಕರನ ಜೊತೆ ಸೇರಿ ಆಕೆಯ ತಾಯಿ ಹಾಗೂ ಸಹೋದರನೇ ಅಳಿಯನನ್ನು ಕೊಲೆ ಮಾಡಿರುವ ಪ್ರಕರಣವನ್ನು ಕೊಡಿಗೇನಹಳ್ಳಿ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು 32 ವರ್ಷದ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ನರಸಿಂಹಮೂರ್ತಿ ಸುಜಾತಾಳನ್ನು ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗಿದ್ದ. ಮದುವೆಯ ನಂತರ ಸುಜಾತಾ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಈ ವೇಳೆ ಅಮರ್ ಎಂಬ ಯುವಕನ ಪರಿಚಯವಾಗಿದ್ದು, ನಂತರ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.

ಈ ಮಧ್ಯೆ ಸುಜಾತಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ಸುಜಾತಾ ಮೃತಪಟ್ಟಿದ್ದಳು. ಪತ್ನಿಯ ಸಾವಿನಿಂದ ಮನನೊಂದ ನರಸಿಂಹಮೂರ್ತಿ ಮದ್ಯಪಾನಕ್ಕೆ ಅಂಟಿಕೊಂಡಿದ್ದನು. ಇದೇ ವೇಳೆ ಸುಜಾತಾಳ ಪ್ರಿಯಕರ ಅಮರ್ ಆಕೆಯ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದು, ಈ ವಿಚಾರಕ್ಕೆ ನರಸಿಂಹಮೂರ್ತಿ ವಿರೋಧ ವ್ಯಕ್ತಪಡಿಸುತ್ತಿದ್ದನು. ಇದರಿಂದ ಕುಟುಂಬದಲ್ಲಿ ಗಲಾಟೆಗಳು ನಡೆಯುತ್ತಿದವು ಎಂದು ತಿಳಿದುಬಂದಿದೆ.

ಈ ಗಲಾಟೆಯನ್ನು ನೆಪವಾಗಿಸಿಕೊಂಡು ಸುಜಾತಾಳ ತಾಯಿ ಜಯಮ್ಮ, ತಮ್ಮ ನಂದೀಶ್ ಹಾಗೂ ಪ್ರಿಯಕರ ಅಮರ್ ಸೇರಿ ನರಸಿಂಹಮೂರ್ತಿಯನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಯೋಜನೆಯಂತೆ, ನರಸಿಂಹಮೂರ್ತಿಯನ್ನು ‘ಚಿಕನ್ ಪಾರ್ಟಿ’ ಹೆಸರಿನಲ್ಲಿ ಮನೆಗೆ ಕರೆಯಿಸಿಕೊಂಡು ಮದ್ಯಪಾನ ಮಾಡಿಸಿದ್ದಾರೆ. ನಂತರ ಅಮರ್ ಮತ್ತು ನಂದೀಶ್ ಆತನನ್ನು ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾರೆ. ಬಳಿಕ ಮೃತದೇಹವನ್ನು ಗ್ರಾಮದ ಸಮೀಪದ ರಸ್ತೆಯ ಬಳಿ ಬಿಸಾಡಿ, ಹೆಂಡತಿಯ ನೆನಪಿನಲ್ಲಿ ಕುಡಿದು ಸಾವನ್ನಪ್ಪಿದ್ದಾನೆ ಎಂಬಂತೆ ತೋರಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಮೀರಿ, ನರಸಿಂಹಮೂರ್ತಿಗೆ ಎಚ್ಚರವಾಗುತ್ತಿಲ್ಲವೆಂದು ನಾಟಕವಾಡಿ ತಾವೇ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿ, ಅಲ್ಲಿನ ವೈದ್ಯರು ಆತ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. ಮೃತದೇಹದ ಕುತ್ತಿಗೆಯ ಸುತ್ತ ಕಪ್ಪು ಗುರುತು ಹಾಗೂ ಎಡಕಿವಿಯಿಂದ ರಕ್ತಸ್ರಾವ ಕಂಡುಬಂದ ಹಿನ್ನೆಲೆಯಲ್ಲಿ ಇದು ಸಹಜ ಸಾವು ಅಲ್ಲ, ಕೊಲೆ ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆ ಮೃತನ ಅಕ್ಕ ಗಾಯತ್ರಿ ಪೊಲೀಸರಿಗೆ ದೂರು ನೀಡಿದ್ದು, ಕೊಡಿಗೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ತಾಯಿ ಜಯಮ್ಮ, ತಮ್ಮ ನಂದೀಶ್ ಹಾಗೂ ಅಮರ್ ಮೂವರೂ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಘಟನೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದು, ಕುಟುಂಬ ವೈಮನಸ್ಸು ಮತ್ತು ಅಕ್ರಮ ಸಂಬಂಧಗಳು ಹೇಗೆ ದುರ್ಘಟನೆಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.

Contact us for classifieds and ads : +91 9742974234