Latest News

ಗೃಹಿಣಿ ಸಾವಿನ ಹಿಂದೆ ಅಕ್ರಮ ಸಂಬಂಧದ ಸುಳಿವು :  pendrive ಲ್ಲಿ ಸತ್ಯ? ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

ದಾವಣಗೆರೆಯಲ್ಲಿ ಮಹಿಳೆಯ ಅನುಮಾನಾಸ್ಪದ ಸಾವು: ಪತಿಯ ವಿರುದ್ಧ ಹತ್ಯೆ ಆರೋಪ, ಪರಸ್ತ್ರೀ ಸಹವಾಸದ ಸುಳಿವು

ದಾವಣಗೆರೆ: ಮನೆಯೊಳಗೆ 26 ವರ್ಷದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯ ರೇಲ್ವೆ ಕ್ವಾಟರ್ಸ್ನಲ್ಲಿ ನಡೆದಿದೆ. ಕಾವ್ಯಾ ಎಂಬ ಯುವತಿ ಸಾವನ್ನಪ್ಪಿದ್ದು, ಪತಿ ಮನು ವಿರುದ್ಧ ಪರಸ್ತ್ರೀ ಸಹವಾಸ, ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆ ಮಾಡಿ ಕೊಲೆಗೈದಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಮೃತ ಕಾವ್ಯಾ ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಬಡ ಕುಟುಂಬದವರು. ಎರಡು ವರ್ಷಗಳ ಹಿಂದೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನುವಿನೊಂದಿಗೆ ವಿವಾಹವಾಗಿದ್ದರು. ಮನು ಅಂಚೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಕಾರಣ, ಕಾವ್ಯಾಳ ಪೋಷಕರು ಸಾಲ ಮಾಡಿ ಸುಮಾರು ₹2.50 ಲಕ್ಷ ನಗದು ಹಾಗೂ 70 ಗ್ರಾಂ ಚಿನ್ನ ನೀಡಿ ಮದುವೆ ಮಾಡಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮದುವೆಯ ಆರಂಭದಲ್ಲಿ ಜೀವನ ಸರಾಗವಾಗಿದ್ದರೂ, ಕೆಲವೇ ತಿಂಗಳಲ್ಲಿ ಮನುವಿನ ವರ್ತನೆ ಬದಲಾಗಿತ್ತು ಎನ್ನಲಾಗಿದೆ. ಮನು ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಕಾವ್ಯಾಳಿಗೆ ಮೂಡಿದ್ದು, ಈ ವಿಚಾರವಾಗಿ ದಂಪತಿಗಳ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದವು. ಜೊತೆಗೆ ವರದಕ್ಷಿಣೆ ವಿಚಾರದಲ್ಲಿಯೂ ಕಾವ್ಯಾಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ನಡೆದ ದಿನ ಶನಿವಾರ (ಏಪ್ರಿಲ್ 18), ಕಾವ್ಯಾ ತನ್ನ ತಾಯಿಯೊಂದಿಗೆ ಮಂತ್ರಾಲಯಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಳು. ಮನೆಯ ಮುಂದೆ ವಾಹನ ನಿಂತು ಎಲ್ಲರೂ ಕಾಯುತ್ತಿದ್ದರು. ಮಧ್ಯಾಹ್ನದಿಂದ ಕಾವ್ಯಾಳ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಕುಟುಂಬಸ್ಥರಿಗೆ ರಾತ್ರಿ ವೇಳೆ ಮನು ಕರೆ ಮಾಡಿ “ಕಾವ್ಯಾ ಮಾತನಾಡುತ್ತಿಲ್ಲ” ಎಂದು ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ಸಂಬಂಧಿಕರು ಮನೆಗೆ ಧಾವಿಸಿದಾಗ, ಕಾವ್ಯಾ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದಳು. ಈ ನಡುವೆ ಪತಿ ಮನು ಸ್ಥಳದಿಂದ ಪರಾರಿಯಾಗಿದ್ದಾನೆ.

ತಕ್ಷಣ ಕಾವ್ಯಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆಕೆ ಕೊನೆಯುಸಿರೆಳೆದಿದ್ದಳು. ಈ ಘಟನೆ ತಿಳಿದ ಕೂಡಲೇ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ, “ಮನುವೇ ಕಾವ್ಯಾಳನ್ನು ಹಲ್ಲೆ ಮಾಡಿ ಕೊಲೆಗೈದಿದ್ದಾನೆ” ಎಂದು ಆರೋಪಿಸಿದರು.

ಇನ್ನೊಂದೆಡೆ, ಕಾವ್ಯಾ ತನ್ನ ಪತಿಯ ಅನೈತಿಕ ಸಂಬಂಧ ಮತ್ತು ಕಿರುಕುಳದ ಬಗ್ಗೆ ಸಾಕ್ಷ್ಯಗಳನ್ನು ಒಂದು ಪೆನ್ಡ್ರೈವ್ನಲ್ಲಿ ಸಂಗ್ರಹಿಸಿದ್ದಾಳೆ ಎಂಬ ಮಾಹಿತಿ ಹೊರಬಂದಿದೆ. ಈ ಪೆನ್ಡ್ರೈವ್ ಇದೀಗ ಪ್ರಕರಣದ ತನಿಖೆಯಲ್ಲಿ ಪ್ರಮುಖ ಸುಳಿವಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯ ನಂತರ ನ್ಯಾಯಕ್ಕಾಗಿ ಕಾವ್ಯಾಳ ಸಂಬಂಧಿಕರು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಗಳ ಸಾವಿನ ಸುದ್ದಿ ಕೇಳಿ ಕಾವ್ಯಾಳ ತಾಯಿ ಶಶಿಕಲಾ ಪ್ರಜ್ಞೆ ತಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ದಾವಣಗೆರೆ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮನುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾವ್ಯಾಳ ಸಾವಿನ ನಿಜವಾದ ಕಾರಣ ತಿಳಿದುಬರುವಂತೆ ಪೋಸ್ಟ್ಮಾರ್ಟಂ ವರದಿ ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಘಟನೆ ಮತ್ತೊಮ್ಮೆ ಕುಟುಂಬದೊಳಗಿನ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಅನೈತಿಕ ಸಂಬಂಧಗಳು ಹೇಗೆ ದುರಂತಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದನ್ನು ಮನಗಾಣಿಸುತ್ತದೆ. ಪೊಲೀಸರು ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಹೊರತರುವ ಭರವಸೆ ನೀಡಿದ್ದಾರೆ.

Contact us for classifieds and ads : +91 9742974234