Latest News

ಮಹಿಳಾ ಕಸ್ಟಮ್ ಅಧಿಕಾರಿಗೆ ಅ* ಚಾರ, ಬ್ಲ್ಯಾಕ್ಮೇಲ್ ಆರೋಪ: ಉದ್ಯಮಿ ಬಂಧನ  ಹಲವು ಬೆಚ್ಚಿಬೀಳಿಸುವ ವಿವರಗಳು ಬಹಿರಂಗ

ಬೆಂಗಳೂರು,: ನಗರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಹಿಳಾ ಕಸ್ಟಮ್ ಅಧಿಕಾರಿಗೆ ಮದುವೆಯ ಆಮಿಷವೊಡ್ಡಿ ಪರಿಚಯ ಬೆಳೆಸಿ ನಂತರ ಅ*ಚಾರ ಹಾಗೂ ಬ್ಲ್ಯಾಕ್ಮೇಲ್ ಮಾಡಿದ ಆರೋಪದಡಿ ಉದ್ಯಮಿ ಎಂ. ಕೃಪಲಾನಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವು ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಆರೋಪಿಯ ವಿರುದ್ಧ ಇನ್ನೂ ಹಲವು ಅಕ್ರಮ ಚಟುವಟಿಕೆಗಳ ಶಂಕೆ ವ್ಯಕ್ತವಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಸುಮಾರು 9 ವರ್ಷಗಳ ಹಿಂದೆ ಕೃಪಲಾನಿ ಮಹಿಳಾ ಅಧಿಕಾರಿಯನ್ನು ಪರಿಚಯಿಸಿಕೊಂಡು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ. ನಂತರ ಪ್ರೀತಿಯ ನಾಟಕವಾಡಿ ಮದುವೆಯ ಭರವಸೆ ನೀಡಿದ ಆತ, ಆಕೆಯ ವಿಶ್ವಾಸ ಗಳಿಸಿದ್ದಾನೆ. ಇದೇ ಸಲುಗೆಯನ್ನು ದುರುಪಯೋಗಪಡಿಸಿಕೊಂಡು, ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಜೊತೆಗೆ, ಆಕೆಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪವೂ ಕೇಳಿಬಂದಿದೆ.

ಮಹಿಳಾ ಅಧಿಕಾರಿ ನೀಡಿದ ದೂರಿನ ಮೇರೆಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ತನಿಖೆಯ ಹಿತದೃಷ್ಟಿಯಿಂದ ಇಂದಿರಾನಗರ ಠಾಣೆಗೆ ವರ್ಗಾಯಿಸಲಾಯಿತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಪುಲಕೇಶಿನಗರ ವಿಭಾಗದ ಎಸಿಪಿ ಮತ್ತು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಇದರ ಫಲವಾಗಿ ಆರೋಪಿ ಕೃಪಲಾನಿಯನ್ನು ಬಂಧಿಸಲಾಗಿದೆ.

ತನಿಖೆಯ ವೇಳೆ ಕೃಪಲಾನಿ ಎಲೆಕ್ಟ್ರಾನಿಕ್ ವ್ಯವಹಾರ ನಡೆಸುತ್ತಿದ್ದ ಹಿನ್ನೆಲೆ, ಕಸ್ಟಮ್ಸ್ ನಿಯಮಗಳನ್ನು ತಪ್ಪಿಸಿಕೊಂಡು ಅಕ್ರಮ ವಹಿವಾಟು ನಡೆಸುತ್ತಿದ್ದ ಎಂಬ ಆರೋಪವೂ ಹೊರಬಂದಿದೆ. ಅಲ್ಲದೆ, ಮಹಿಳಾ ಅಧಿಕಾರಿಯಿಂದ ಪಡೆದ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು, ಇತರ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಹಣ ವಸೂಲಿ ಮಾಡುತ್ತಿದ್ದನೆಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಇದೇ ಮೊದಲಲ್ಲ, ಈತನ ವಿರುದ್ಧ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ. ತನ್ನ ಮಗ ನಾಪತ್ತೆಯಾಗಿದ್ದಾನೆಂದು ತಾಯಿ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲೂ, ಕೃಪಲಾನಿ ಉದ್ದೇಶಪೂರ್ವಕವಾಗಿ ಹೋಟೆಲ್ನಲ್ಲಿ ಅಡಗಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆ ಕೋರ್ಟ್ ಎರಡು ಲಕ್ಷ ರೂ. ದಂಡ ವಿಧಿಸಿತ್ತು. ಜೊತೆಗೆ, ಮದ್ಯಪಾನ ಮಾಡಿ ಮಹಿಳಾ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪವೂ ಈತನ ಮೇಲಿದೆ.

ಈತನ ಜಾಲಕ್ಕೆ ಸಿಲುಕಿ ಇನ್ನೂ ಹಲವು ಮಂದಿ ಕಸ್ಟಮ್ಸ್ ಅಧಿಕಾರಿಗಳು ತೊಂದರೆ ಅನುಭವಿಸಿರುವ ಸಾಧ್ಯತೆ ಇದ್ದು, ಯಾರಿಗಾದರೂ ಅನ್ಯಾಯವಾಗಿದ್ದರೆ ಮುಂದಾಗಿ ದೂರು ನೀಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಸತ್ಯಾಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ

Contact us for classifieds and ads : +91 9742974234