ಎಚ್.ಡಿ.ಕೋಟೆ: ಸಫಾರಿ ವಾಹನದ ಮುಂದೆ ಅಂಜಿಕೆ ಇಲ್ಲದೆ ಕಾಣಿಸಿಕೊಂಡ ಹೆಣ್ಣು ಹುಲಿ – ಛಾಯಾಗ್ರಾಹಕ ಕ್ಯಾಮೆರಾದಲ್ಲಿ ಸೆರೆ

ಎಚ್.ಡಿ.ಕೋಟೆ, ಫೆ.27:- ತಾಲೂಕಿನ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಪ್ರದೇಶದ ಸಫಾರಿಯಲ್ಲಿ ಸಂಜೆ ವೇಳೆ ಹೆಣ್ಣು ಹುಲಿ ಕಾಣಿಸಿಕೊಂಡು ಸಫಾರಿಗರಲ್ಲಿ ಉತ್ಸಾಹ ಮೂಡಿಸಿದ ಘಟನೆ ನಡೆದಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯ ದಮ್ಮನಕಟ್ಟೆಯ ಹಳೆಯ ಎಂಎಂ ರಸ್ತೆ ಸಮೀಪದ ಕರಿಯಣ್ಣನ ಮನೆ ಬಳಿ ಸಂಜೆ ಸಫಾರಿಗೆ ತೆರಳಿದ್ದ ವೇಳೆ ಈ ಹೆಣ್ಣು ಹುಲಿ ಕಾಣಿಸಿಕೊಂಡಿತು. ಬೇಟೆಯ ಹುಡುಕಾಟದಲ್ಲಿ ಅರಣ್ಯದೊಳಗಿಂದ ಹೊರಬಂದ ಹುಲಿ ಕೆಲಕಾಲ ಸಫಾರಿ ವಾಹನದ ಸಮೀಪವೇ ತಿರುಗಾಡಿದ್ದು, ಪ್ರವಾಸಿಗರಿಗೆ ಅಪರೂಪದ ದೃಶ್ಯಾವಳಿಯನ್ನು ನೀಡಿತು.
ಹುಲಿ ಯಾವುದೇ ಅಂಜಿಕೆ ಇಲ್ಲದೆ ಸಫಾರಿ ವಾಹನದ ಮುಂದೆ ನಿಂತು ಕೆಲ ಕ್ಷಣಗಳ ಕಾಲ ಸುತ್ತಮುತ್ತ ಗಮನ ಹರಿಸಿದ್ದು, ನಂತರ ನಿಧಾನವಾಗಿ ಅರಣ್ಯದೊಳಗೆ ಮರೆಯಾಯಿತು. ಹುಲಿಯನ್ನು ಸಮೀಪದಿಂದಲೇ ನೋಡುವ ಅವಕಾಶ ದೊರೆತ ಕಾರಣ ಸಫಾರಿಗೆ ತೆರಳಿದ್ದ ಪ್ರವಾಸಿಗರು ಸಂತೋಷ ವ್ಯಕ್ತಪಡಿಸಿದರು.
ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಸಫಾರಿಯಲ್ಲಿ ಈ ಅಪರೂಪದ ಕ್ಷಣವನ್ನು ಛಾಯಾಗ್ರಾಹಕ ಜಿ.ಎಸ್. ರವಿಶಂಕರ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಹುಲಿ ವಾಹನದ ಮುಂದೆ ನಿಂತಿರುವ ದೃಶ್ಯಗಳು ಇದೀಗ ಪ್ರಕೃತಿ ಪ್ರೇಮಿಗಳ ಗಮನ ಸೆಳೆಯುತ್ತಿವೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಭಾಗದಲ್ಲಿ ಹುಲಿಗಳ ಸಂಚಾರ ಸಾಮಾನ್ಯವಾಗಿದ್ದು, ಸಂಜೆ ಹಾಗೂ ಮುಂಜಾನೆ ವೇಳೆಯಲ್ಲಿ ಬೇಟೆಯಿಗಾಗಿ ಹುಲಿಗಳು ರಸ್ತೆ ಮತ್ತು ಹಿನ್ನೀರು ಪ್ರದೇಶಗಳಿಗೆ ಬರುತ್ತವೆ. ಸಫಾರಿ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಮ್ಮನಕಟ್ಟೆ ಹಾಗೂ ಕಬಿನಿ ಹಿನ್ನೀರು ಪ್ರದೇಶಗಳು ಕಾಡುಜೀವಿಗಳ ಸಂಚಾರಕ್ಕೆ ಪ್ರಮುಖ ವಾಸಸ್ಥಳವಾಗಿದ್ದು, ಇಲ್ಲಿನ ಸಫಾರಿಗಳಲ್ಲಿ ಆಗಾಗ ಹುಲಿ, ಚಿರತೆ, ಕಾಡೆಮ್ಮೆ ಹಾಗೂ ಜಿಂಕೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಈ ಭಾಗದಲ್ಲಿ ಹುಲಿಗಳ ಚಟುವಟಿಕೆ ಹೆಚ್ಚಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಸಂಜೆ ವೇಳೆಯಲ್ಲಿ ವಾಹನದ ಮುಂದೆ ನಿಂತು ಫೋಟೋಗೆ ಪೋಸ್ ನೀಡಿದಂತೆ ಕಂಡ ಹೆಣ್ಣು ಹುಲಿಯ ದೃಶ್ಯ ಸಫಾರಿಗರಿಗೆ ಮರೆಯಲಾಗದ ಅನುಭವವಾಗಿದ್ದು, ಈ ಘಟನೆ ಕಬಿನಿ ಸಫಾರಿಯ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿದೆ.ದಂತೆ ಕಂಡ ಹೆಣ್ಣು ಹುಲಿಯ ದೃಶ್ಯ ಸಫಾರಿಗರಿಗೆ ಮರೆಯಲಾಗದ ಅನುಭವವಾಗಿದ್ದು, ಈ ಘಟನೆ ಕಬಿನಿ ಸಫಾರಿಯ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿದೆ.



