Latest News

ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಿ: ದರ್ಶನ್ ಧ್ರುವನಾರಾಯಣ್

ಶ್ರೀಕಂಠೇಶ್ವರ ದೇವಾಲಯದ ದೊಡ್ಡ ಜಾತ್ರೆಯ ಪೂರ್ವ ಸಿದ್ಧತಾ ಸಭೆ

ಮೈಸೂರು ಪೆಬ್ರವರಿ 09:-  ಶ್ರೀಕಂಠೇಶ್ವರ ದೇವಾಲಯದ  ದೊಡ್ಡ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಸೂಚಿಸಿದರು.

ಮಾರ್ಚ್ 30 ರಂದು ಹಮ್ಮಿಕೊಂಡಿರುವ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ದೊಡ್ಡ ಜಾತ್ರೆ ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾಧಿಗಳಿಗೆ ಯಾವುದೇ ಅನಾನುಕೂಲ  ಆಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕಸದ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ನಗರದ ಸ್ವಚ್ಛತೆಯನ್ನು ಕಾಪಾಡಬೇಕು. ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಬೇಕು. ಬರುವ ಭಕ್ತಾದಿಗಳ ಬಳಕೆಗೆ ಹೆಚ್ಚಿನ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ತೇರು ಎಳೆಯುವಾಗ ಹೆಚ್ಚಿನ ಜನರು ತೇರಿನ ಬಳಿ ಬರುತ್ತಾರೆ. ಅವರು ತೇರಿನ ಬಳಿ ಬರದಂತೆ ಬ್ಯಾರಿಕೇಡಿಂಗ್ ವ್ಯವಸ್ಥೆ ಆಗಬೇಕು. ಬ್ಯಾರಿಕೇಡ್ ಸುತ್ತಾ ಹೆಚ್ಚಿನ ಪೊಲೀಸ್ ವ್ಯವಸ್ಥೆ ಮಾಡಬೇಕು. ನೂಕು ನುಗ್ಗಲು ಉಂಟಾಗಬಾರದು. ವ್ಯವಸ್ಥಿತವಾಗಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸಬೇಕು ಎಂದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ರಥೋತ್ಸವ ದಿನದಂದು ರಥಗಳು ಚಲಿಸುವ ರಸ್ತೆಯಲ್ಲಿ ಅಡ್ಡಲಾಗಿರುವ ವಿದ್ಯುತ್ ತಂತಿಗಳನ್ನು ತೆಗೆದು, ರಥೋತ್ಸವ ಮುಗಿದ ನಂತರ ಪುನರ್ ಜೋಡಣೆ ಮಾಡಬೇಕು ಎಂದು ತಿಳಿಸಿದರು.

ರಥೋತ್ಸವದ ಅಂಗವಾಗಿ ನಡೆಯುವ ಉತ್ಸವಾದಿಗಳ ಮತ್ತು ತೆಪ್ಪೋತ್ಸವ ಕಾಲದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು . ರಥೋತ್ಸವದ ಪೂರ್ವಭಾವಿಯಾಗಿ 5 ರಥಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ ದುರಸ್ಥಿ ಅಗತ್ಯವಿದ್ದಲ್ಲಿ ವರದಿ ನೀಡುವುದು ಹಾಗೂ ರಥ ಎಳೆಯಲು ಯೋಗ್ಯವಾಗಿರುವ ಬಗ್ಗೆ ದೃಢೀಕರಣ ನೀಡಬೇಕು ಎಂದರು.

ರಥೋತ್ಸವದ ಪ್ರಯುಕ್ತ ದೇವಾಲಯದ ಸುತ್ತ, ರಥಗಳು ಚಲಿಸುವ ರಸ್ತೆಗಳಲ್ಲಿ, ಹಳ್ಳ ದಿಣ್ಣೆಗಳಿದ್ದಲ್ಲಿ ಸಮತಟ್ಟು ಮಾಡಬೇಕು. ಗುಂಡಿಗಳು ಇದ್ದಲ್ಲಿ ದುರಸ್ಥಿ ಪಡಿಸಬೇಕು.  ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆಗಮಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾತ್ರೆಗೆ ಕ್ರಮ ವಹಿಸಬೇಕು. ತುರ್ತು ಚಿಕಿತ್ಸೆಗೆ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು, ಸುಸಜ್ಜಿತ ಆಂಬ್ಯುಲೆನ್ಸ್ ವಾಹನ ಮತ್ತು ಔಷಧಿ ಸಲಕರಣೆಗಳೊಂದಿಗೆ ನುರಿತ ವೈದ್ಯಕೀಯ ಸಿಬ್ಬಂದಿ ನಿಯೋಜಿಸುವಂತೆ ಸೂಚನೆ ನೀಡಿದರು.

ರಥೋತ್ಸವ ಪ್ರಯುಕ್ತ ಭಕ್ತಾದಿಗಳಿಗೆ ಉಚಿತವಾಗಿ ಪ್ರಸಾದ ವಿತರಣೆಯ ಸಂಬಂಧ, ಸಂಘ ಸಂಸ್ಥೆಗಳಿಂದ ತಯಾರಿಸಿರುವ ಪ್ರಸಾದದ ಮಾದರಿಯನ್ನು ಸಂಗ್ರಹಿಸಿ, ಭಕ್ತಾದಿಗಳಿಗೆ ವಿತರಿಸಲು ಯೋಗ್ಯವಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು.

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಮಾರ್ಚ್ 29 ರಿಂದ  ಎಪ್ರಿಲ್  02 ರವರಿಗೆ  ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ರಥಗಳ ಜೊತೆಯಲ್ಲಿ ಸಾಗಲು ಅಗತ್ಯ ಸಿಬ್ಬಂದಿಗಳೊಂದಿಗೆ 2 ಅಗ್ನಿಶಾಮಕ ವಾಹನಗಳನ್ನು ರಥೋತ್ಸವದ ಹಿಂದಿನ ದಿನ ನಿಯೋಜಿಸಿ ಹಾಗೂ ರಥೋತ್ಸವ ಮುಗಿಯುವವರೆವಿಗೂ ಇರಲು ವ್ಯವಸ್ಥೆ ಮಾಡಬೇಕು

ಕಪಿಲಾ ನದಿ ತೀರದಲ್ಲಿ ಭಕ್ತಾದಿಗಳ ಸುರಕ್ಷತಾ ದೃಷ್ಠಿಯಿಂದ ಮುಳುಗು ತಜ್ಞರೊಂದಿಗೆ ಬೋಟುಗಳನ್ನು ನಿಯೋಜಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ  ಡಾ. ಪಿ. ಶಿವರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶ್ರೀರಾಂಪುರ, ಶಂಕರಪುರ, ಗೋಳೂರು, ದೇವರಸನಹಳ್ಳಿ, ಗೀಕಳ್ಳಿ, ನಂಜನಗೂಡು ಕಸಬಾ ಮತ್ತು ಮುಳ್ಳೂರು ಗ್ರಾಮಗಳ ಮುಖ್ಯಸ್ಥರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Contact us for classifieds and ads : +91 9742974234