Latest News

ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಿ.ಟಿ. ರವಿಗೆ ಪಿಎಚ್‌ಡಿ: ರಾಜ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪ್ರಧಾನ

ರಾಜಕೀಯ ಬ್ಯುಸಿಯ ಮಧ್ಯೆಯೂ ಶೈಕ್ಷಣಿಕ ಸಾಧನೆ: ಸಿ.ಟಿ. ರವಿ ಡಾಕ್ಟರೇಟ್ ಪಡೆದರು

ಮೈಸೂರು, ಜನವರಿ 31:- ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರು ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಡೆದ 21ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಸಿ.ಟಿ. ರವಿಗೆ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದರು. ಈ ವೇಳೆ ಸಿ.ಟಿ. ರವಿ ರಾಜ್ಯಪಾಲರ ಕಾಲಿಗೆ ನಮಸ್ಕರಿಸಿ ಗೌರವ ಸೂಚಿಸಿ ಪಿಎಚ್‌ಡಿ ಸ್ವೀಕರಿಸಿದ ದೃಶ್ಯ ಗಮನ ಸೆಳೆಯಿತು.

ಪಿಎಚ್‌ಡಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಿ.ಟಿ. ರವಿ, “ನಾನು ರಾಜಕೀಯದಲ್ಲಿ ಸಕ್ರಿಯವಾಗಿರುವ ಕಾರಣ ರಾಜ್ಯಶಾಸ್ತ್ರವನ್ನೇ ಆಯ್ಕೆ ಮಾಡಿಕೊಂಡೆ. ರಾಜಕೀಯ ಜೀವನದಲ್ಲಿ ಸದಾ ಬ್ಯುಸಿಯಾಗಿದ್ದ ನನಗೆ ‘ನೀವೇಕೆ ಪಿಎಚ್‌ಡಿ ಮಾಡಬಾರದು’ ಎಂದು ಕೆಲವರು ಸಲಹೆ ನೀಡಿದ್ದರು. ಆ ಪ್ರೇರಣೆಯಿಂದಲೇ ಅಧ್ಯಯನ ಆರಂಭಿಸಿ 2023ರಲ್ಲಿ ಪಿಎಚ್‌ಡಿಯನ್ನು ಸಂಪೂರ್ಣಗೊಳಿಸಿದ್ದೇನೆ” ಎಂದು ಹೇಳಿದರು.

 

ಅವರು ರಾಜ್ಯಶಾಸ್ತ್ರ ವಿಭಾಗದ ಡಾ. ಸುರೇಶ್ ಅವರ ಮಾರ್ಗದರ್ಶನದಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. “ನಾನು ನಿರಂತರ ಕಲಿಕೆಯ ವಿದ್ಯಾರ್ಥಿ. ಪ್ರತಿಕ್ಷಣವೂ ಹೊಸದನ್ನು ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ. ಎಲ್ಲರೊಂದಿಗೆ ಕುಳಿತು ಕಲಿಯುವುದೂ ಒಂದು ಮಹತ್ವದ ಅನುಭವ” ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟರು.

ಈ ಘಟಿಕೋತ್ಸವದಲ್ಲಿ ಕುಲಪತಿ, ಅಧ್ಯಾಪಕರು, ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Contact us for classifieds and ads : +91 9742974234