Latest News

ಮೈಸೂರು: ಮನೆಗೆ ನುಗ್ಗಿದ ಚಿರತೆ : ಕುಟುಂಬದವರು ಸುರಕ್ಷಿತ, ಅರಣ್ಯ ಇಲಾಖೆಯಿಂದ ಸೆರೆ

ಮೈಸೂರು: ನಗರದ ಸಿದ್ದಾರ್ಥ ಬಡಾವಣೆಯಲ್ಲಿ ಭಯಾನಕ ಘಟನೆ ಒಂದು ನಡೆದಿದ್ದು, ಮನೆಯೊಳಗೆ ಚಿರತೆ ನುಗ್ಗಿದ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.

ಸಿದ್ದಾರ್ಥ ಬಡಾವಣೆಯ ನಿವಾಸಿ ಸುರೇಶ್ ಅವರ ಮನೆಯಲ್ಲಿ ಚಿರತೆ ನುಗ್ಗಿದ್ದು, ಮನೆಯೊಳಗಿನ ಒಂದು ಕೊಠಡಿಯಲ್ಲಿ ಮಂಚದ ಕೆಳಗೆ ಮಲಗಿ ಕುಳಿತಿತ್ತು. ಘಟನೆ ಸಂಭವಿಸಿದಾಗ ಮನೆಯಲ್ಲಿದ್ದ ಸುರೇಶ್ ಅವರ ಪತ್ನಿ ಸುಜಾತ ಹಾಗೂ ವೃದ್ಧ ತಾಯಿ ಶೈಲಜಾ ಇದ್ದರು.

ಆ ಸಮಯದಲ್ಲಿ ಕುಟುಂಬದವರು ಹಾಲ್‌ನಲ್ಲಿ ಇದ್ದ ಕಾರಣ, ಚಿರತೆ ಮನೆ ಒಳಗೆ ಪ್ರವೇಶಿಸಿದುದು ಅವರಿಗೆ ತಿಳಿಯಲಿಲ್ಲ. ಬಳಿಕ ಕೆಲಸದವಳು ಗಮನಿಸಿದ ನಂತರವೇ ಚಿರತೆ ಇರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಸುಜಾತ ಅವರು ಸಮಯಪ್ರಜ್ಞೆ ತೋರಿಸಿ, ಮಂಚದ ಮೇಲೆ ಮಲಗಿದ್ದ ವೃದ್ಧ ತಾಯಿ ಶೈಲಜಾ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದರು.

ನಂತರ ಕೊಠಡಿಯ ಬಾಗಿಲು ಮುಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.

ಅದೃಷ್ಟವಶಾತ್, ಚಿರತೆ ಮನೆಯಲ್ಲಿದ್ದ ಯಾರಿಗೂ ಯಾವುದೇ ಹಾನಿ ಮಾಡಿಲ್ಲ. ಘಟನೆಯ ಕುರಿತು ಮಾತನಾಡಿದ ಮನೆ ಮಾಲೀಕ ಸುರೇಶ್ ಅವರ ಪತ್ನಿ ಸುಜಾತ, “ಬೆಳಗಿನ ಜಾವ ನಮ್ಮ ಪ್ರದೇಶದಲ್ಲಿ ಚಿರತೆ ಓಡಾಡಿದ ಬಗ್ಗೆ ಮಾಹಿತಿ ಇತ್ತು. ನಾವು ಕೆಲವೇ ನಿಮಿಷಗಳ ಕಾಲ ಬಾಗಿಲು ತೆರೆದಿದ್ದಾಗ ಅದು ಮನೆಯೊಳಗೆ ನುಗ್ಗಿದೆ. ನಮ್ಮ ಅತ್ತೆ ಕೊಠಡಿಯಲ್ಲಿ ಇದ್ದರು, ನಮಗೆ ಗೊತ್ತಿರಲಿಲ್ಲ. ನಂತರ ತಿಳಿದುಬಂದ ತಕ್ಷಣ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದೆವು. ದೇವರ ಕೃಪೆಯಿಂದ ಯಾರಿಗೂ ಏನೂ ಆಗಿಲ್ಲ,” ಎಂದು ತಿಳಿಸಿದ್ದಾರೆ.

ಎರಡು ಗಂಟೆಗಳ ಕಾಲ ಒಂದೇ ಮನೆಯಲ್ಲಿ ಚಿರತೆಯೊಂದಿಗೆ ಇದ್ದರೂ ಯಾವುದೇ ಅನಾಹುತ ಸಂಭವಿಸದಿರುವುದು ಅಚ್ಚರಿ ಮೂಡಿಸಿದೆ.

Contact us for classifieds and ads : +91 9742974234