
ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ
ಮೈಸೂರು, ಏಪ್ರಿಲ್ 10: ಕೇಂದ್ರ ಸರ್ಕಾರದಿಂದ ಪುರಸ್ಕೃತವಾಗಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ನೂರಕ್ಕೆ ನೂರು ಪ್ರಮಾಣದಲ್ಲಿ ಪೂರ್ಣಗೊಳಿಸುವತ್ತ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಸೂಚಿಸಿದರು.

ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಅತ್ಯಂತ ಮುಖ್ಯವಾಗಿದ್ದು, ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಮೈಸೂರು ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಉಳಿದಿರುವ ತಕರಾರುಗಳನ್ನು ತಕ್ಷಣ ಬಗೆಹರಿಸಿ ಕಾಮಗಾರಿಗೆ ವೇಗ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಭಿವೃದ್ಧಿ ಯೋಜನೆಗಳು ವಿಳಂಬವಾಗದಂತೆ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಅವರು ಹೇಳಿದರು.

ಬ್ಯಾಂಕಿಂಗ್ ಕ್ಷೇತ್ರದ ಕುರಿತು ಗಮನ ಹರಿಸಿದ ಸಚಿವರು, ಸಾರ್ವಜನಿಕರೊಂದಿಗೆ ಬ್ಯಾಂಕ್ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ಮೊದಲ ಬಾರಿ ಸಾಲ ಪಡೆಯುವವರಿಗೆ ಸಿಬಿಲ್ ಸ್ಕೋರ್ ನೆಪವಿಟ್ಟು ಕಿರಿಕಿರಿ ಮಾಡಬಾರದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು. ರೈತರಿಗೆ ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಸಾಲದ ಬಡ್ಡಿಗೆ ಕಡಿತಗೊಳಿಸುವ ಕ್ರಮ ತಪ್ಪಿಸಲು ಸೂಚಿಸಿದರು.
ಕೃಷಿ ಕ್ಷೇತ್ರದ ಬಗ್ಗೆ ಚಿಂತನೆ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಹತ್ತಿ ಬೆಳೆ ಪ್ರಮಾಣ ಕುಸಿಯುತ್ತಿರುವುದರ ಜೊತೆಗೆ ಮುಸುಕಿನ ಜೋಳದ ಬೆಳೆಯ ಪ್ರಮಾಣ ಹೆಚ್ಚುತ್ತಿರುವುದನ್ನು ಗಮನಿಸಿ, ಒಂದೇ ಬೆಳೆ ಪದೇ ಪದೇ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಕುಸಿಯುವ ಸಾಧ್ಯತೆ ಇದೆ. ಈ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
“ದಿಶಾ ಸಭೆಗಳು ಕೇವಲ ಅಂಕಿ-ಅಂಶಗಳ ಪರಿಶೀಲನೆಗೆ ಸೀಮಿತವಾಗಬಾರದು. ಅಧಿಕಾರಿಗಳು ವಾರದಲ್ಲಿ ಕನಿಷ್ಠ ಒಂದು ದಿನ ಗ್ರಾಮ ಮಟ್ಟದಲ್ಲಿ ಸ್ಥಳೀಯ ಪರಿಶೀಲನೆ ನಡೆಸಬೇಕು” ಎಂದು ಅವರು ಸ್ಪಷ್ಟಪಡಿಸಿದರು.

ಗ್ರಾಮೀಣ ಭಾಗಗಳಲ್ಲಿ ಇನ್ನೂ ವಸತಿ ರಹಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಉಲ್ಲೇಖಿಸಿದ ಅವರು, ಸಮಗ್ರ ಸಮೀಕ್ಷೆ ನಡೆಸಿ ನಿವೇಶನ ರಹಿತರು ಹಾಗೂ ಮನೆ ಇಲ್ಲದವರ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಫಲಿತಾಂಶ ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಪ್ರಮುಖವೆಂದು ಹೇಳಿದರು.
ಈ ಕಾರ್ಯಕ್ರಮದ ವೇಳೆ ಮಾತನಾಡಿದ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ನಗರದ ದೀರ್ಘಕಾಲೀನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು ಎಂದರು. ತಂಬಾಕು ಬೆಳೆಯ ಅವಲಂಬನೆ ಕಡಿಮೆ ಮಾಡಲು ಪರ್ಯಾಯ ಬೆಳೆಗಳನ್ನು ಗುರುತಿಸಿ ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಮೈಸೂರು ನಗರದಲ್ಲಿ ಕಸದ ಅನಿಯಂತ್ರಿತ ವಿಸರ್ಜನೆ ಬಗ್ಗೆ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ಬೆಲವತ್ತ ಹಾಗೂ ರಿಂಗ್‌ರೋಡ್ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿ ಅನಧಿಕೃತ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ, ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿ ಶೇಕಡಾ 60ರಷ್ಟು ಪೂರ್ಣಗೊಂಡಿದ್ದು, ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಮುಗಿದಿದೆ ಎಂದರು. ಉಳಿದಿರುವ ಸಮಸ್ಯೆಗಳನ್ನು ಪೊಲೀಸ್ ಬಂದೋಬಸ್ತ್‌ನೊಂದಿಗೆ ಪರಿಹರಿಸಿ ಕಾಮಗಾರಿ ಮುಂದುವರಿಸಲಾಗುವುದು ಎಂದು ಹೇಳಿದರು. ಮೈಸೂರು ವಿಮಾನ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 266 ಡೈವರ್ಶನ್‌ಗೆ ಡಿಪಿಆರ್ ಸಿದ್ಧವಾಗಿದ್ದು, ಅಗತ್ಯ ಭೂಮಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್ ಅವರು ನರೇಗಾ ಯೋಜನೆಯ ಪ್ರಗತಿ ಕುರಿತು ವಿವರ ನೀಡಿ, 2026ರ ಮಾರ್ಚ್ ಅಂತ್ಯದವರೆಗೆ 17.5 ಲಕ್ಷ ಮಾನವ ದಿನಗಳ ಗುರಿಯ ಎದುರು 17.81 ಲಕ್ಷ ಮಾನವ ದಿನಗಳ ಸಾಧನೆ ಮಾಡಿ ಶೇಕಡಾ 102ರಷ್ಟು ಗುರಿ ಸಾಧಿಸಲಾಗಿದೆ ಎಂದರು. ಒಟ್ಟು 8028.07 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್, ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ, ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಎಸ್. ಬಾಲದಂಡಿ, ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
