Latest News

ಬೆಟ್ಟದಪುರ ಜಾಗದ ಗೊಂದಲಕ್ಕೆ ತಿರುವು: ದಾಖಲೆಗಳೊಂದಿಗೆ ಮಂಜುನಾಥ್ ಪ್ರತಿಕ್ರಿಯೆ

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ: ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ದುರಾಲೋಚನೆಯ ಫಲ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ.ಎಸ್. ಮಂಜುನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಪೊಲೀಸ್ ಠಾಣೆ ಸಮೀಪದ ಮುಖ್ಯ ರಸ್ತೆಯಲ್ಲಿ ನನ್ನ ಹೆಸರಿನಲ್ಲಿ 67×35 ಅಳತೆಯ ನಿವೇಶನವಿದ್ದು, ಆ ಜಾಗದಲ್ಲಿ ಶೆಡ್ ನಿರ್ಮಿಸಿ ಬಾಡಿಗೆಗೆ ನೀಡಲಾಗಿದೆ. ಈ ಜಾಗಕ್ಕೆ ಸಂಬಂಧಿಸಿದಂತೆ ಕೆಲವರು ಅನಾವಶ್ಯಕವಾಗಿ ವಿವಾದ ಸೃಷ್ಟಿಸಿ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ಹೇಳಿದರು.

ಇತ್ತೀಚೆಗೆ ಬೆಟ್ಟದಪುರ ಗ್ರಾಮದ ಲೇಟ್ ಮಲ್ಲೇಗೌಡರ ಪುತ್ರ ಶಂಕರೇಗೌಡ ಹಾಗೂ ಅವರ ಕುಟುಂಬದವರು, ಈ ಜಾಗ ನಮ್ಮದೇ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಖಾಸಗಿ ಯೂಟ್ಯೂಬ್ ಚಾನೆಲ್ಗಳ ಮೂಲಕ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿಯೂ ಸುದ್ದಿಗೋಷ್ಠಿ ನಡೆಸಿ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

“ನನ್ನ ಹಾಗೂ ನನ್ನ ಕುಟುಂಬದವರ ವಿರುದ್ಧ ಯಾವುದೇ ಆಧಾರವಿಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಈ ಜಾಗಕ್ಕೆ ಸಂಬಂಧಿಸಿದ ಎಲ್ಲಾ ಕಾನೂನುಬದ್ಧ ದಾಖಲೆಗಳು ನನ್ನ ಬಳಿ ಇವೆ. ಅವುಗಳನ್ನು ಇಂದು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದೇನೆ. ಇದರಿಂದ ಸತ್ಯಾಂಶ ಸ್ಪಷ್ಟವಾಗುತ್ತದೆ” ಎಂದು ಮಂಜುನಾಥ್ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟದಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿರುದ್ಧವೂ ಕೆಲವರು ಆರೋಪ ಮಾಡಿರುವುದನ್ನು ಅವರು ತಳ್ಳಿ ಹಾಕಿದರು. “ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಸರ್ವೇ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಅವರ ಹೆಸರನ್ನು ಅನವಶ್ಯಕವಾಗಿ ವಿವಾದಕ್ಕೆ ಎಳೆದು ತರುವ ಕೆಲಸ ನಡೆಯುತ್ತಿದೆ. ಇದು ಸರಿಯಲ್ಲ” ಎಂದು ಅವರು ಹೇಳಿದರು.

ಈ ವಿವಾದದ ಹಿಂದೆ ಕೆಲವರ ವೈಯಕ್ತಿಕ ವೈಮನಸ್ಸು ಮತ್ತು ರಾಜಕೀಯ ಪ್ರೇರಣೆ ಇದ್ದು, ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಈ ರೀತಿಯ ಪಿತೂರಿ ನಡೆಯುತ್ತಿದೆ ಎಂದು ಮಂಜುನಾಥ್ ಅಭಿಪ್ರಾಯಪಟ್ಟರು. “ಸತ್ಯವು ಯಾವತ್ತಿಗೂ ಹೊರಬರುತ್ತದೆ. ಕಾನೂನು ಕ್ರಮಗಳ ಮೂಲಕ ನಾನು ನ್ಯಾಯ ಪಡೆದುಕೊಳ್ಳುತ್ತೇನೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ, ಇದೇ ಜಾಗಕ್ಕೆ ಸಂಬಂಧಿಸಿದಂತೆ ಕೆ. ಹೊಸಹಳ್ಳಿ ಗ್ರಾಮದ ಸೋಮರಾಜೆಗೌಡ ಅವರು ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಈ ಜಾಗದ ಮಾಲೀಕತ್ವ ಕುರಿತು ಯಾವುದೇ ಗೊಂದಲವಿಲ್ಲ. ದಾಖಲೆಗಳ ಪ್ರಕಾರ ಇದು ಮಂಜುನಾಥ್ ಅವರದೇ ಜಾಗವಾಗಿದ್ದು, ಅನವಶ್ಯಕವಾಗಿ ವಿವಾದ ಸೃಷ್ಟಿಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಸ್. ಮಂಜುನಾಥ್ ಅವರ ಪುತ್ರ ಯಶಸ್ ಗೌಡ ಹಾಗೂ ಸೋಮರಾಜೆಗೌಡ ಅವರ ಅಳಿಯ ಎನ್.ಸಿ. ಪ್ರದೀಪ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಾಖಲೆಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿತರಿಸಲಾಗಿದ್ದು, ನಿಜಾಂಶಗಳನ್ನು ಜನರಿಗೆ ತಲುಪಿಸುವಂತೆ ಮನವಿ ಮಾಡಲಾಯಿತು.
ಈ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಈ ಜಾಗದ ವಿವಾದ ಯಾವ ರೀತಿಯಲ್ಲಿ ಮುಂದುವರೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Contact us for classifieds and ads : +91 9742974234