ಪಿರಿಯಾಪಟ್ಟಣದ ಸಿನಿ ಪರಂಪರೆ ನೆನೆಸಿದ ದುನಿಯಾ ವಿಜಯ್ : ಪುಟ್ಟಣ್ಣ ಕಣಗಾಲ್ ನೆಲಕ್ಕೆ ದುನಿಯಾ ವಿಜಯ್ ಗೌರವ
ಪಿರಿಯಾಪಟ್ಟಣ: ತಾಲೂಕು ಸಿನಿಮಾ ರಂಗಕ್ಕೆ ಪುಟ್ಟಣ್ಣ ಕಣಗಾಲ್ ರಂತಹ ಮಹಾನ್ ನಿರ್ದೇಶಕರನ್ನು ನೀಡಿದ ನೆಲವಾಗಿದೆ ಎಂದು ಚಲನಚಿತ್ರ ನಟ ದುನಿಯಾ ವಿಜಯ್ ಹೇಳಿದರು.
ಪಟ್ಟಣದಲ್ಲಿ ನಡೆದ ಪ್ರೀಮಿಯರ್ ಲೀಗ್ 9ನೇ ಸೀಸನ್ “ಪುನೀತ್ ರಾಜಕುಮಾರ್ ಕಪ್” ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮುಂತಾದ ಮಹನೀಯರ ಪುಣ್ಯಭೂಮಿ ಎಂದರು. ಇಂದಿನ ಯುವಕರು ಗಾಂಜಾ ಸೇರಿದಂತೆ ಮಾದಕ ವಸ್ತುಗಳ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಯುವಕರು ಇಂತಹ ದುಷ್ಪ್ರವೃತ್ತಿಗಳಿಂದ ದೂರವಿದ್ದು ಕ್ರೀಡೆಗಳತ್ತ ಹೆಚ್ಚಿನ ಗಮನ ಹರಿಸಿ ಉತ್ತಮ ಸಾಧನೆ ಮಾಡಬೇಕು. ಅಕ್ರಮ ಮಾದಕ ದ್ರವ್ಯಗಳ ಮಾರಾಟದ ವಿರುದ್ಧ ಸಮಾಜವೇ ಒಟ್ಟಾಗಿ ಧ್ವನಿ ಎತ್ತಬೇಕು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮೈಮೂಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ಕ್ರೀಡೆಗಳು ಯುವಕರಲ್ಲಿ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ “ಫ್ರೆಂಡ್ಸ್ ಇಲವೆನ್” ತಂಡ ಪ್ರಥಮ ಬಹುಮಾನವಾಗಿ ರೂ. 1 ಲಕ್ಷ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. “ಪವರ್ ಸ್ಟ್ರೈಕರ್ಸ್” ತಂಡ ದ್ವಿತೀಯ ಬಹುಮಾನವಾಗಿ ರೂ. 50 ಸಾವಿರ ಮತ್ತು ಟ್ರೋಫಿ ಪಡೆದರೆ, “ಮೈಟಿ ಹಲಗನಹಳ್ಳಿ” ತಂಡ ತೃತೀಯ ಹಾಗೂ “ಭೀಮ ವಾರಿಯರ್ಸ್” ತಂಡ ಚತುರ್ಥ ಸ್ಥಾನ ಗಳಿಸಿತು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮಾಯಿ, ಲಾಯರ್ ಸುದೇಶ್, ವ್ಯವಸ್ಥಾಪಕರಾದ ಉಮೇಶ್, ರಾಮ, ಲಕ್ಷಣ, ಕೌಶಿಕ್, ಕಾರ್ತಿಕ್, ಮನು, ಮಣಿ, ದರ್ಶನ್, ರವಿ ಚಿಂಚು, ದಿಲನ್, ಶ್ರೀನಿವಾಸ್, ಫಿಲಿಪ್ ರೋಯ್, ಪ್ರದೀಪ್ ಸೇರಿದಂತೆ ಹಲವರು ಹಾಜರಿದ್ದರು.

