Latest News

ಮೈಸೂರು ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ : ಸರ್ಕಾರದ ವಿರುದ್ಧ ಕಿಡಿಕಾರಿರುವ ಸಂತೋಷ್ ಕುಮಾರ್ ಬಿ.ಎಂ

ಮೈಸೂರು :- ವಿಶ್ವ ವಿಖ್ಯಾತ ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಘಟನೆಗಳು ಕಾನೂನು ಸುವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿವೆ ಎಂದು ಬಿಜೆಪಿ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ.ಎಂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಹಾಗೂ ಕೆಲ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮೈಸೂರಿಗೆ ಕಪ್ಪು ಚುಕ್ಕೆ ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂಜಾಟ ನಿರಂತರವಾಗಿ ನಡೆಯುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದು ಗಂಭೀರ ವಿಷಯವಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಾನೂನು ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ದಸರಾ ಬಳಿಕ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಅರಮನೆ ಭಾಗದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಂಭವಿಸಿದ ಸಾವುಗಳು, ಬನ್ನಿಮಂಟಪದಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಹಾಗೂ ಕೋಟ್ಯಾಂತರ ಮೌಲ್ಯದ ಎಂಡಿಎಂ ವಶಪಡಿಸಿಕೊಳ್ಳಲಾಗಿದೆ ಎಂಬ ಘಟನೆಗಳು ಮೈಸೂರಿನ ಸುರಕ್ಷತೆಗೆ ಧಕ್ಕೆ ತಂದಿವೆ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ರೌಡಿ ಶೀಟರ್ಗಳ ಬರ್ಬರ ಹತ್ಯೆಗಳು ನಡೆಯುತ್ತಿರುವುದು ಸರ್ಕಾರದ ಕಣ್ಣೆದುರೇ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಸಿ.ಎಂ ಅವರ ತವರೂರು ಜಿಲ್ಲೆಯಲ್ಲೇ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ ಎಂದು ಸಂತೋಷ್ ಕುಮಾರ್ ಟೀಕಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇದೆ ಎಂದು ಹೇಳಲಾಗುತ್ತಿದ್ದರೂ, ಮುಖ್ಯಮಂತ್ರಿಗಳು “ನುಡಿದಂತೆ ನಡೆದ ಸರ್ಕಾರ” ಎಂದು ಹೇಳಿಕೊಳ್ಳುತ್ತಿರುವುದು ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ಟಾಂಗಾ ನಿಲ್ದಾಣ ನಿರ್ಮಾಣದ ವಿವಾದವೂ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದರು.
ವಿಷ್ಣುವರ್ಧನ್ ಪಾರ್ಕ್ ಕಾಂಪೌಂಡ್ ದುರಸ್ಥಿ ಕಾರ್ಯ ತಿಂಗಳುಗಳ ಕಾಲ ವಿಳಂಬವಾಗಿರುವುದು ಮಹಾನಗರ ಪಾಲಿಕೆ ಹಾಗೂ ತೋಟಗಾರಿಕೆ ಇಲಾಖೆಗಳ ಜವಾಬ್ದಾರಿಯಿಲ್ಲದ ವರ್ತನೆಗೆ ಸಾಕ್ಷಿಯಾಗಿದೆ. ಪರಂಪರೆಯ ಸ್ಮಾರಕಗಳನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ವಿಷಯದಲ್ಲಿ ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮೈಸೂರು ಉಸ್ತುವಾರಿ ಸಚಿವರಾದ ಎಚ್.ಸಿ. ಮಹದೇವಪ್ಪ ಹಾಗೂ ಜಿಲ್ಲಾಡಳಿತದ ನಡುವೆ ಸಮನ್ವಯದ ಕೊರತೆ ಇರುವ ಬಗ್ಗೆ ಜನರಲ್ಲಿ ಅನುಮಾನ ಮೂಡುತ್ತಿದೆ. ಇದು ಆಡಳಿತ ವ್ಯವಸ್ಥೆಯ ದೌರ್ಬಲ್ಯವನ್ನು ಬಹಿರಂಗಪಡಿಸುತ್ತದೆ ಎಂದು ಸಂತೋಷ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರು ಹಾಗೂ ಯುವಕರು ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲವಾದರೆ ಅಶಾಂತಿ ವಾತಾವರಣ ಹೆಚ್ಚಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಸಚಿವರು ತಕ್ಷಣ ಎಚ್ಚೆತ್ತುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ದೃಢ ಕ್ರಮ ಕೈಗೊಳ್ಳಬೇಕು. ಜನರಲ್ಲಿ ಭದ್ರತೆ ಹಾಗೂ ನಂಬಿಕೆ ಮೂಡಿಸುವುದು ಸರ್ಕಾರದ ಪ್ರಾಥಮಿಕ ಜವಾಬ್ದಾರಿ ಎಂದು ಸಂತೋಷ್ ಕುಮಾರ್ ಬಿ.ಎಂ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Contact us for classifieds and ads : +91 9742974234