Latest News

ಕಡಕೊಳದಲ್ಲಿ ರಸ್ತೆ ಸುರಕ್ಷತಾ ಜಾಗೃತಿ: 400 ಮಂದಿಗೆ ಉಚಿತ ಹೆಲ್ಮೆಟ್ ವಿತರಣೆ

ಮೈಸೂರು: ರಸ್ತೆ ಮೇಲೆ ಓಡುವ ಪ್ರತಿಯೊಂದು ಬೈಕ್‌ ಒಂದು ಜವಾಬ್ದಾರಿ, ಪ್ರತಿಯೊಂದು ಹೆಲ್ಮೆಟ್‌ ಒಂದು ಜೀವದ ಕವಚ. ಈ ಸಂದೇಶವನ್ನು ಹಬ್ಬಿಸುವ ಉದ್ದೇಶದಿಂದ ಕಡಕೊಳದಲ್ಲಿ ಮಂಗಳವಾರ ವಿಶಿಷ್ಟ ರಸ್ತೆ ಸುರಕ್ಷತಾ ಅಭಿಯಾನ ಜೋರಾಗಿ ನಡೆಯಿತು.

ಕಡಕೊಳದ ಸಿರೇನ್ ಇಂಡಿಯಾ ಕಂಪೆನಿಯು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ 400 ಹೆಲ್ಮೆಟ್‌ಗಳನ್ನು ವಿತರಿಸಲಾಯಿತು. ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಎಸ್‌.ಪಿ. ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ವತಃ ಜನರಿಗೆ ಹೆಲ್ಮೆಟ್ ಹಾಕಿಸಿ, ಅದರ ಮಹತ್ವವನ್ನು ತಿಳಿಸುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಸ್ಪರ್ಶ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗಡಿಬಿಡಿ ಜೀವನದಲ್ಲಿ ಒಂದು ಕ್ಷಣದ ಅಲಕ್ಷ್ಯ ಜೀವಕ್ಕೆ ಅಪಾಯ ತರಬಹುದು. ಎಷ್ಟೇ ತುರ್ತು ಇದ್ದರೂ ಹೆಲ್ಮೆಟ್ ಧರಿಸುವುದು ಮರೆಯಬೇಡಿ” ಎಂದು ಕಿವಿಮಾತು ಹೇಳಿದರು. ಇಂದಿನ ದಿನಗಳಲ್ಲಿ ಹೆಚ್ಚಿನ ಬೈಕ್ ಸವಾರರು ಚಾಲನಾ ಪರವಾನಗಿ ನವೀಕರಣ ಮಾಡಿಸದೇ, ವಿಮೆ ಪಡೆಯದೇ ರಸ್ತೆಗಿಳಿಯುತ್ತಿರುವುದು ಆತಂಕಕಾರಿ ಎಂದರು. ಅಪಘಾತದ ಸಂದರ್ಭದಲ್ಲಿ ಇವುಗಳ ಕೊರತೆಯಿಂದ ಕುಟುಂಬಕ್ಕೆ ಪರಿಹಾರವೂ ಸಿಗುವುದಿಲ್ಲ ಎಂದು ಎಚ್ಚರಿಸಿದರು.

ಇನ್ನಷ್ಟು ಕಟ್ಟುನಿಟ್ಟಿನ ಸಲಹೆ ನೀಡಿದ ಅವರು, ಮೊಬೈಲ್‌ನಲ್ಲಿ ಮಾತನಾಡುತ್ತ ಬೈಕ್ ಓಡಿಸುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ಅಪ್ರಾಪ್ತರಿಗೆ ಬೈಕ್ ನೀಡುವುದು ಜೀವಕ್ಕೆ ಅಪಾಯಕಾರಿ ಎಂದು ಹೇಳಿದರು. “ನಿಮ್ಮ ವಾಹನದ ಫಿಟ್‌ನೆಸ್ ಕೂಡ ನಿಮ್ಮ ಜೀವದ ಸುರಕ್ಷತೆಯ ಭಾಗವೇ” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಎಸ್‌ಪಿ ಮಲ್ಲಿಕ್ ಸಿ. ಅವರು, ಮೈಸೂರು ಜಿಲ್ಲೆಯಲ್ಲಿ ದಿನವೂ ನಡೆಯುತ್ತಿರುವ ಅಪಘಾತಗಳ ಬಗ್ಗೆ ಗಂಭೀರ ಚಿತ್ರಣ ನೀಡಿದರು. “ಪ್ರತಿ ದಿನ ಸರಾಸರಿ 10ಕ್ಕೂ ಹೆಚ್ಚು ಅಪಘಾತಗಳು ನಡೆಯುತ್ತಿವೆ. ಅವುಗಳಲ್ಲಿ 2-3 ಪ್ರಕರಣಗಳು ಸಾವಿನಲ್ಲೇ ಅಂತ್ಯವಾಗುತ್ತವೆ. ಅದರಲ್ಲೂ ಬಹುತೇಕವು ಬೈಕ್ ಅಪಘಾತಗಳೇ” ಎಂದು ಹೇಳಿದರು.

ತಲೆಗೆ ಬಿದ್ದ ಗಾಯಗಳು ಹೆಚ್ಚು ಪ್ರಾಣಾಪಾಯಕಾರಿಯಾಗಿರುವುದರಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂಬುದನ್ನು ಅವರು ಒತ್ತಿ ಹೇಳಿದರು. “ಸಿಗ್ನಲ್ ಜಂಪ್ ಮಾಡುವುದು, ನಿಯಮಗಳನ್ನು ಲೆಕ್ಕಿಸದಿರುವುದು ಜೀವದ ಜೊತೆ ಆಟ ಆಡುವಂತದ್ದು” ಎಂದು ಎಚ್ಚರಿಸಿದರು.

ಸಿರೇನ್ ಇಂಡಿಯಾ ಕಂಪೆನಿಯ ನಿರ್ದೇಶಕ ಕೋಝೋ ಅಸಕುರ ಅವರು, ಸುರಕ್ಷತೆ ಎಂಬುದು ಕೇವಲ ನಿಯಮವಲ್ಲ, ದಿನನಿತ್ಯದ ಜೀವನ ಶೈಲಿ ಆಗಬೇಕು ಎಂದು ಹೇಳಿದರು. “ಹೆಲ್ಮೆಟ್ ಧರಿಸುವುದು ನಮ್ಮ ಮತ್ತು ನಮ್ಮ ಕುಟುಂಬದ ಭವಿಷ್ಯವನ್ನು ಕಾಪಾಡುವ ಒಂದು ಸರಳ ಅಭ್ಯಾಸ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ಗ್ರಾಮಾಂತರ ಡಿವೈಎಸ್ಪಿ ಟಿ.ಬಿ. ರಾಜಣ್ಣ, ಮೈಸೂರು ದಕ್ಷಿಣ ಠಾಣೆಯ ಇನ್ಸ್‌ಪೆಕ್ಟರ್ ಡಾ. ಎಂ.ಎಲ್. ಶೇಖರ್, ಜಿ.ಪಂ. ಮಾಜಿ ಅಧ್ಯಕ್ಷ ಕಡಕೊಳ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಎನ್. ಪದ್ಮನಾಭ ಸ್ವಾಗತಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪುರುಷರಿಗೆ ಒಟ್ಟು 400 ಹೆಲ್ಮೆಟ್‌ಗಳನ್ನು ವಿತರಿಸಲಾಯಿತು. ಜಾಗೃತಿ ಮತ್ತು ಕಾರ್ಯರೂಪ ಎರಡನ್ನೂ ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿದ ಈ ಕಾರ್ಯಕ್ರಮ ಕಡಕೊಳದಲ್ಲಿ ರಸ್ತೆ ಸುರಕ್ಷತೆಗೆ ಹೊಸ ದಿಕ್ಕು ತೋರಿದಂತಾಯಿತು.

 

Contact us for classifieds and ads : +91 9742974234