Latest News

ಗ್ಲಾಕೋಮಾ ಮೌನ ಕಳ್ಳ: ಮುಂಚಿತ ಪತ್ತೆ ಮಾಡಿದರೆ ದೃಷ್ಟಿ ರಕ್ಷಣೆ ಸಾಧ್ಯ – ಜಾಗೃತಿ ಅಭಿಯಾನಕ್ಕೆ ಚಾಲನೆ

ಮೈಸೂರು, ಮಾ.25: ಕಣ್ಣಿನ ಆರೋಗ್ಯದ ಮೇಲೆ ಮೌನವಾಗಿ ದಾಳಿ ಮಾಡುವ ಗಂಭೀರ ಕಾಯಿಲೆಯಾದ ಗ್ಲಾಕೋಮಾವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಬಹುದು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಪಿ. ಮಂಜುನಾಥ್ ತಿಳಿಸಿದರು.

ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ “ಗ್ಲಾಕೋಮಾ ಜಾಗೃತಿ ಅಭಿಯಾನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ದೇಹದಲ್ಲಿ ಕಣ್ಣು ಅತ್ಯಂತ ಪ್ರಮುಖ ಅಂಗವಾಗಿದ್ದು, ಇತರ ಕಾಯಿಲೆಗಳಂತೆ ಗ್ಲಾಕೋಮಾ ಯಾವುದೇ ಸ್ಪಷ್ಟ ಮುನ್ಸೂಚನೆ ನೀಡದೆ ನಿಧಾನವಾಗಿ ದೃಷ್ಟಿಯನ್ನು ಹಾನಿಗೊಳಿಸುತ್ತದೆ ಎಂದು ಎಚ್ಚರಿಸಿದರು. ಈ ಕಾಯಿಲೆ ವಯಸ್ಸಿನ ಮಿತಿ ಮೀರಿ ಯಾರಿಗೂ ಬರುವ ಸಾಧ್ಯತೆ ಇರುವುದರಿಂದ, ನಿಯಮಿತ ಕಣ್ಣಿನ ತಪಾಸಣೆ ಅತ್ಯಗತ್ಯ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಸಿ. ಕುಮಾರಸ್ವಾಮಿ ಮಾತನಾಡಿ, ಗ್ಲಾಕೋಮಾ ಕಣ್ಣಿನ ಆಪ್ಟಿಕ್ ನರವನ್ನು ಹಾನಿಗೊಳಿಸುವ ಗಂಭೀರ ಸಮಸ್ಯೆಯಾಗಿದ್ದು, ಚಿಕಿತ್ಸೆ ಇಲ್ಲದೆ ಮುಂದುವರಿದರೆ ಶಾಶ್ವತ ಕುರುಡುತನಕ್ಕೆ ಕಾರಣವಾಗಬಹುದು ಎಂದು ತಿಳಿಸಿದರು. ಕಣ್ಣಿನ ಒಳ ಒತ್ತಡ ಹೆಚ್ಚಾಗುವುದು ಇದರ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶೇಷವಾಗಿ 40 ವರ್ಷ ಮೇಲ್ಪಟ್ಟವರು ಹಾಗೂ 60 ವರ್ಷ ದಾಟಿದವರು ಹೆಚ್ಚಿನ ಅಪಾಯದಲ್ಲಿದ್ದು, ಆರಂಭಿಕ ಹಂತದಲ್ಲಿ ಲಕ್ಷಣಗಳು ಕಾಣಿಸದಿರುವುದರಿಂದ ಜನರು ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು.

ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಪಿ. ಮಧು ಮಾಹಿತಿ ನೀಡಿ, ಗ್ಲಾಕೋಮಾ ಜಾಗೃತಿ ಅಭಿಯಾನದ ಅಂಗವಾಗಿ ರಿಯಾಯಿತಿ ದರದಲ್ಲಿ ತಪಾಸಣೆ ಪ್ಯಾಕೇಜ್ ಪರಿಚಯಿಸಲಾಗುತ್ತಿದೆ ಎಂದರು. ಸಾಮಾನ್ಯವಾಗಿ ₹2525 ವೆಚ್ಚವಾಗುವ ಪರೀಕ್ಷೆಗಳನ್ನು ₹1699ಕ್ಕೆ ನೀಡಲಾಗುತ್ತಿದ್ದು, ಈ ಸೌಲಭ್ಯ ಏಪ್ರಿಲ್ 1ರಿಂದ ಜೂನ್ 30ರವರೆಗೆ ಲಭ್ಯವಿರುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಿರುನಾಟಕದ ಮೂಲಕ ಗ್ಲಾಕೋಮಾ ಕುರಿತು ಅರಿವು ಮೂಡಿಸಿದ್ದು, “ಮೌನವಾಗಿ ಬರುತ್ತದೆ, ಆದರೆ ಜೀವನವನ್ನೇ ಕತ್ತಲೆಗೆ ತಳ್ಳುತ್ತದೆ” ಎಂಬ ಸಂದೇಶವನ್ನು ಮನಮುಟ್ಟುವ ರೀತಿಯಲ್ಲಿ ಸಾರಿದರು.

ಈ ಸಂದರ್ಭದಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ. ಹೆಚ್. ಬಸವನಗೌಡಪ್ಪ, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಬೃಂದಾ, ಸ್ಥಳೀಯ ವೈದ್ಯಾಧಿಕಾರಿ ಡಾ. ಶಾಂತಮಲ್ಲಪ್ಪ, ನೇತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Contact us for classifieds and ads : +91 9742974234