Latest News

ಎಂ ಎಸ್ ಪಿ ಗ್ಯಾರಂಟಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ದೆಹಲಿಯ ಬೃಹತ್ ರೈತ ಸಮಾವೇಶ ನಿರ್ಣಯ

ನವದೆಹಲಿ, ಮಾ.20: ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಖಾತ್ರಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ರೈತರು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಘೋಷಣೆ ಮಾಡಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ 40 ದಿನಗಳ ಕಾಲ ನಡೆದ ರೈತ ಜಾಗೃತಿ ಯಾತ್ರೆಯ ಸಮಾರೋಪವಾಗಿ ಈ ಸಮಾವೇಶ ಆಯೋಜಿಸಲಾಗಿತ್ತು. ದೇಶದ 32 ಸಾವಿರ ಹಳ್ಳಿಗಳಿಂದ ಸುಮಾರು 10 ಲಕ್ಷ ರೈತರ ಸಹಿಗಳನ್ನು ಸಂಗ್ರಹಿಸಿ, ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಯಾತ್ರೆ ಕೈಗೊಳ್ಳಲಾಗಿತ್ತು. ಭಾರಿ ಮಳೆಯ ನಡುವೆಯೂ ಸಾವಿರಾರು ರೈತರು ಮೈದಾನದಲ್ಲಿ ಕೊನೆಯವರೆಗೂ ತಂಗಿ ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿದರು.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ದಲೈವಾಲಾ ಮಾತನಾಡಿ, ಸ್ವಾತಂತ್ರ್ಯಾನಂತರ ಹಲವು ಸರ್ಕಾರಗಳು ರೈತರಿಗೆ ನ್ಯಾಯಯುತ ಬೆಲೆ ನೀಡದೆ ಮೋಸಗೊಳಿಸಿರುವುದರಿಂದ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಸ್ವಾಮಿನಾಥನ್ ವರದಿ ಜಾರಿ ಹಾಗೂ ರೈತರ ಆದಾಯ ದ್ವಿಗುಣ ಮಾಡುವ ಭರವಸೆಗಳನ್ನು ಈಡೇರಿಸಲಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ಮಾತನಾಡಿ, ಅಮೆರಿಕದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮೂಲಕ ರೈತರ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದು ಕಿಡಿಕಾರಿದರು. ಸರ್ಕಾರ ತಕ್ಷಣವೇ ಇಂತಹ ಒಪ್ಪಂದಗಳಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. ಜೊತೆಗೆ, ದೇಶದಲ್ಲಿ ಉಂಟಾಗಿರುವ ಅಡಿಗೆ ಗ್ಯಾಸ್ ಕೊರತೆಯನ್ನು ಉಲ್ಲೇಖಿಸಿ, ರೈತರಿಗೆ ಎಥನಾಲ್ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ನೀಡಿದರೆ ದೇಶದ ವಿದೇಶಿ ವಿನಿಮಯ ಉಳಿತಾಯವಾಗುವುದರ ಜೊತೆಗೆ ರೈತರಿಗೂ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ಸಲಹೆ ನೀಡಿದರು.

ರೈತ ಮುಖಂಡ ಅಭಿಮನ್ಯು ಕೋಹರ್ ಮಾತನಾಡಿ, ಸರ್ಕಾರಗಳು ಬಂಡವಾಳಶಾಹಿಗಳಿಗೆ ಸಾಲ ಮನ್ನಾ ಮಾಡುತ್ತಿದ್ದರೂ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿವೆ ಎಂದು ಆಕ್ಷೇಪಿಸಿದರು. ರೈತ ಜಾಗೃತಿ ಯಾತ್ರೆಯಿಂದ ದೇಶದ ಕೋಟ್ಯಾಂತರ ರೈತರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿದ್ದಾರೆ ಎಂದು ಹೇಳಿದರು.

ಸಮಾವೇಶದಲ್ಲಿ ತಮಿಳುನಾಡಿನ ಪಿ.ಆರ್. ಪಾಂಡನ್, ಪಂಜಾಬಿನ ಸತ್ನನಾಮ್ ಸಿಂಗ್, ದೆಹಲಿಯ ಋಷಿಪಾಲ್ ಅಂಬಾವತ್, ಮಧ್ಯಪ್ರದೇಶದ ಲೀಲಾಧರ್ ರಜಪೂತ್, ಉತ್ತರ ಪ್ರದೇಶದ ರಜೆವೀರ್ ಸಿಂಗ್ ಸೇರಿದಂತೆ ಹಲವು ರಾಜ್ಯಗಳ ರೈತ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಮಾವೇಶದ ನಂತರ, ರೈತರು ಸಂಗ್ರಹಿಸಿದ ಸಹಿ ಒಳಗೊಂಡ ಮೂರು ಚೀಲಗಳ ಒತ್ತಾಯ ಪತ್ರವನ್ನು ಪ್ರಧಾನ ಮಂತ್ರಿಗಳ ಕಚೇರಿಗೆ ಪೊಲೀಸ್ ಭದ್ರತೆಯ ನಡುವೆ ಸಲ್ಲಿಸಲಾಯಿತು.

ಭಾರಿ ಮಳೆ, ನೀರು ನಿಂತ ಪರಿಸ್ಥಿತಿ ಇತ್ಯಾದಿ ಅಡಚಣೆಗಳ ನಡುವೆಯೂ ರೈತರ ಒಗ್ಗಟ್ಟು ಮತ್ತು ಹೋರಾಟದ ತೀವ್ರತೆ ಸಮಾವೇಶದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಮುಂದಿನ ದಿನಗಳಲ್ಲಿ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ರೈತರು ನೀಡಿದರು.

Contact us for classifieds and ads : +91 9742974234