ತುಮಕೂರು:- ಜನಪದ ಸುವಾಸನೆ, ಆಧ್ಯಾತ್ಮಿಕ ಹೊಳಪು ಮತ್ತು ರಂಗಭೂಮಿ ವೈಭವ ಒಂದೇ ವೇದಿಕೆಯಲ್ಲಿ ಮೂಡಿಬಂದ ಅಪರೂಪದ ನಾಟಕೀಯ ಅನುಭವಕ್ಕೆ ನಗರ ಸಾಕ್ಷಿಯಾಯಿತು. ಶನಿವಾರ ಸಂಜೆ ನಡೆದ ‘ಮಂಟೇಸ್ವಾಮಿ ಕಥಾಪ್ರಸಂಗ’ ನಾಟಕ, ತನ್ನ ವಿಶಿಷ್ಟ ನಿರೂಪಣೆ ಮತ್ತು ಮನಮುಟ್ಟುವ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನದಲ್ಲಿ ದೀರ್ಘಕಾಲ ಉಳಿಯುವ ಗುರುತು ಮೂಡಿಸಿತು.
ನಾಟಕ ಆರಂಭಕ್ಕೂ ಮೊದಲು ಇಡೀ ಸಭಾಂಗಣ ತಮಟೆ ನಾದದಿಂದ ಮಾರ್ದನಗೊಂಡಿತು. ಬಣ್ಣದ ಪೇಟ, ಕರಿ ಕೋಟು ಧರಿಸಿದ ಕಲಾವಿದರು ತಮಟೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ವೇದಿಕೆಗೆ ಪ್ರವೇಶಿಸಿದ ಕ್ಷಣವೇ ವಾತಾವರಣದಲ್ಲಿ ವಿಭಿನ್ನ ಸಂಚಲನ ಸೃಷ್ಟಿಯಾಯಿತು. ಮುಖ್ಯ ನೀಲಗಾರನ ಕೈಯಲ್ಲಿದ್ದ ಹಣತೆ ಬೆಳಕು ರಂಗದ ಕತ್ತಲೆಯನ್ನು ಸೀಳಿ ನಿಧಾನವಾಗಿ ಬೆಳಗಿದಂತೆ, ನಾಟಕಕ್ಕೂ ದೈವಿಕ ಆರಂಭ ಸಿಕ್ಕಂತಾಯಿತು.
‘ಆಡಿದವರ ಮನವ ಬಲ್ಲೆ.. ನೀಡಿದವರ ನಿಜವ ಬಲ್ಲೆ.. ಮಂಟೇದಾ ಸ್ವಾಮಿ ಬನ್ನಿ’ ಎಂಬ ಹಾಡಿನಿಂದ ಆರಂಭವಾದ ಈ ನಾಟಕ, ಅದರ ಮುಂದುವರಿದ ಭಾಗಗಳಲ್ಲೂ ಅದೇ ಭಾವಲಹರಿಯನ್ನು ಹರಡಿತು. ಮಧ್ಯ ಮಧ್ಯೆ ಮೂಡಿಬಂದ ‘ಆಡಿ ಬಾ ನನ ಕಂದ..’, ‘ತಾರಕ್ಕ ಬಿಂದಿಗೆಯ..’, ‘ಕಲ್ಯಾಣವೇ ಸೀತಾ ಕಲ್ಯಾಣವೇ..’, ‘ಅದಿಜ್ಯೋತಿ ಬನ್ಯೊ..’ ಮೊದಲಾದ ಜನಪದ ಗೀತೆಗಳು ನದಿಯ ಹರಿವಿನಂತೆ ಸಾಗಿದರೆ, ಮೊದಲ ಹಾಡು ಜೀವನದಿಯಂತೆ ಎಲ್ಲವನ್ನು ಒಂದೇ ಸುತ್ತಿನಲ್ಲಿ ಕಟ್ಟಿಹಾಕಿದಂತಾಯಿತು.
ಕಥೆಯು 12ನೇ ಶತಮಾನದ ಕಲ್ಯಾಣದಿಂದ ಆರಂಭವಾಗಿ, ಬಸವಣ್ಣನವರ ಕಾಲಘಟ್ಟದ ಅಸ್ಥಿರತೆಯನ್ನು ಚಿತ್ರಿಸುತ್ತದೆ. ಮಹಾಗುರುವಿನ ಹುಡುಕಾಟ, ನೀಲಾಂಬಿಕೆಯ ಸೂಚನೆಗಳು, ಗಣಂಗಳ ಹುಸಿ ಜಂಭ, ಮತ್ತು ಪಲ್ಲಕ್ಕಿಯಲ್ಲಿ ಬಂದ ಸಾಧುವಿನ ನಿರೀಕ್ಷೆ ಇವುಗಳ ನಡುವೆಯೇ ಮಂಟೇಸ್ವಾಮಿಗಳ ಪ್ರತ್ಯಕ್ಷತೆ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿತು. ವೇದಿಕೆಯ ಒಂದು ಮೂಲೆಯಲ್ಲಿ ಸುಮ್ಮನೆ ಬಿದ್ದಿದ್ದ ಹುಲ್ಲಿನ ಬವಣೆಯಿಂದಲೇ ಮಂಟೇಸ್ವಾಮಿಗಳು ಎದ್ದುಬರುವ ದೃಶ್ಯ ಅತ್ಯಂತ ಆಕರ್ಷಕವಾಗಿ ಮೂಡಿಬಂದಿತು.
ನಂತರ ಕಥೆ ಕಲ್ಯಾಣದಿಂದ ವಿಜಯನಗರ, ಕಾಗಿನೆಲೆ, ಕುಂದೂರು ಮುಂತಾದ ಪ್ರದೇಶಗಳ ಮೂಲಕ ಸಾಗುತ್ತಾ, ಪವಾಡಗಳು, ಶಿಷ್ಯರ ಆಯ್ಕೆ ಮತ್ತು ಕಪ್ಪಣ್ಣನ ಪರಿವರ್ತನೆ ಮೂಲಕ ತೀವ್ರತೆಯನ್ನು ಪಡೆಯುತ್ತದೆ. ಅಂತಿಮವಾಗಿ ಪಾತಾಳಬಾವಿ ನಿರ್ಮಾಣ ಮತ್ತು ಕಲಿಯ ಪ್ರವೇಶದೊಂದಿಗೆ ಕಥೆ ತಾತ್ವಿಕ ಅಂತ್ಯವನ್ನು ಕಾಣುತ್ತದೆ.
ನೀಲಗಾರರ ಪಾತ್ರ ನಿರ್ವಹಣೆ ನಾಟಕದ ಪ್ರಮುಖ ಆಕರ್ಷಣೆಯಾಗಿದ್ದು, ಅವರು ವಿವಿಧ ಪಾತ್ರಗಳಲ್ಲಿ ಕ್ಷಣಕ್ಷಣಕ್ಕೂ ರೂಪಾಂತರಗೊಂಡು ಪ್ರೇಕ್ಷಕರನ್ನು ಮೆಚ್ಚಿಸಿದರು. ವ್ಯಾಪಾರಿಗಳು, ಅತಿಥಿಗಳು, ದೊರೆಗಳು, ದೇವತೆಗಳು, ಕಾವಲುಗಾರರು ಹೀಗೆ ಹಲವು ರೂಪಗಳಲ್ಲಿ ಕಾಣಿಸಿಕೊಂಡ ಕಲಾವಿದರ ಬಹುಮುಖ ಪ್ರತಿಭೆ ಗಮನಾರ್ಹವಾಗಿತ್ತು. ವಿಶೇಷವಾಗಿ ಮಂಟೇಸ್ವಾಮಿಗಳ ಪಾತ್ರಧಾರಿ ಪ್ರತೀ ಪ್ರವೇಶದಲ್ಲೂ ಅದೇ ಉತ್ಸಾಹ, ಅದೇ ಪ್ರಭಾವದಿಂದ ಅಭಿನಯಿಸಿ ಮೆಚ್ಚುಗೆ ಗಳಿಸಿದರು.
ಸುಮಾರು 1 ಗಂಟೆ 45 ನಿಮಿಷಗಳ ಕಾಲ ಸಾಗಿದ ಈ ನಾಟಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸಮನ್ವಯಗೊಳಿಸಿದ ವಿಶಿಷ್ಟ ಪ್ರಯೋಗವಾಗಿ ಪರಿಣಮಿಸಿತು. ಪ್ರತಿ ಸಂಭಾಷಣೆ, ಪ್ರತಿ ದೃಶ್ಯವೂ ವಿದ್ವತ್ತಿನ ಜೊತೆಗೆ ಭಾವನಾತ್ಮಕತೆಯನ್ನು ಹೊತ್ತಿದ್ದು, ಪ್ರೇಕ್ಷಕರನ್ನು ಚಿಂತನೆಗೆ ದೂಡಿತು.
ಆದರೆ, ನಾಟಕ ನಿಗದಿತ ಸಮಯಕ್ಕಿಂತ ಒಂದು ಗಂಟೆಗೂ ಹೆಚ್ಚು ತಡವಾಗಿ ಆರಂಭವಾದುದು ಕೆಲ ಪ್ರೇಕ್ಷಕರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಇದನ್ನು ಹೊರತುಪಡಿಸಿದರೆ, ಇಂತಹ ಜನಪದ ಹಾಗೂ ಆಧ್ಯಾತ್ಮಿಕ ನಾಟಕಗಳು ಇನ್ನಷ್ಟು ನಡೆಯಬೇಕು ಎಂಬ ಆಶಯ ಪ್ರೇಕ್ಷಕರಲ್ಲಿ ವ್ಯಕ್ತವಾಯಿತು.
ಒಟ್ಟಿನಲ್ಲಿ, ‘ಮಂಟೇಸ್ವಾಮಿ ಕಥಾಪ್ರಸಂಗ’ ಕೇವಲ ನಾಟಕವಲ್ಲ, ನಮ್ಮ ನೆಲಮೂಲದ ಪರಂಪರೆ, ಭಕ್ತಿ ಮತ್ತು ಜೀವನ ಮೌಲ್ಯಗಳನ್ನು ಜೀವಂತಗೊಳಿಸಿದ ರಂಗಯಾತ್ರೆಯಾಗಿ ಮೆರೆದಿತು.



