Latest News

ಭಾನುವಾರ ಬಂತಮ್ಮ…

~ಡಾ. ಗೌರಿ ಎಸ್. ವಿ.

ಬಹಳಷ್ಟು ಜನ, ಅದರಲ್ಲೂ ಉದ್ಯೋಗಸ್ಥರು, ಇನ್ನು ವಿಶೇಷವಾಗಿ ಮಹಿಳೆಯರು, ಭಾನು ವಾರವೆಂದರೆ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ವಾರದಲ್ಲಿ ಒಂದು ಭಾನುವಾರಕ್ಕೆ ಇರುವ ತೂಕ ಉಳಿದ ಆರು ದಿನಗಳಿಗೆ ಇಲ್ಲ. ಆ ಒಂದು ದಿನದ 24 ಘಂಟೆಗಳಲ್ಲಿ ಏನೆಲ್ಲ ಯೋಜನೆಗಳು! ಸೋಂಬೇರಿಗಳಿಗೆ ಆ ದಿನ ತುಂಬಾ ತಡವಾಗಿ ಏಳುವ ಪ್ಲಾನ್; ಪಾದರಸದಂತೆ ಚುರುಕಾಗಿರುವವರಿಗೆ ಏನಾದರೂ ಹೊಸ ಸಾಹಸ ಕೈಗೊಳ್ಳುವುದಕ್ಕಾಗಿ ಇನ್ನು ಬೇಗನೇ ಏಳುವ ಪ್ಲಾನ್; ತಿಂಡಿ ಪೋತರಿಗೆ ಪ್ರತಿದಿನದಂತೆ ದಿನಕ್ಕೆ ಮೂರೇ ಬಾರಿ ತಿಂದರೆ ಆರು ಬಾರಿ ಇನ್ನೂ ವಿಶೇಷ ತಿನಿಸುಗಳನ್ನು ತಿನ್ನುವ ಪ್ಲಾನ್; ಸ್ವಲ್ಪ ಸ್ವಯಂ ಸೌಂದರ್ಯ ಪ್ರಜ್ಞೆ ಇರುವವರಿಗೆ ಕೂದಲಿಗೆ ಮೆಹಂದಿ ಹಚ್ಚಿ, ಮುಖಕ್ಕೆ ಮಣ್ಣು ಬಡಿಸಿಕೊಂಡು ಅರೆಗಣ್ಣು ತೆರೆದು ಆಕಾಶ ನೋಡುವ ಪ್ಲಾನ್… ಇನ್ನೂ ಏನೇನೋ!!

ಆದರೆ ನನಗೆ ಹಾಗಲ್ಲ. ನನಗೆ ಬರೀ ಎರಡೇ ಯೋಜನೆಗಳು; ಒಂದು-ಸ್ವಚ್ಛತಾ ಅಭಿಯಾನ, ಎರಡು- ಮಿಶನ್ ಪಾಕಶಾಲೆ. ಸ್ವಚ್ಛತಾ ಅಭಿಯಾನ ಒಂದು ಶಾರ್ಟ್‌ಕಟ್ ಪ್ಲಾನ್ ಏನೂ ಅಲ್ಲ. ಸೋಮವಾರದಿಂದ ಶನಿವಾರದವರೆಗಿನ ಮನೆ-ಆಫೀಸ್ ಜುಗಲ್ ಬಂದಿಯಲ್ಲಿ law of entropyಯ ಸಂಪೂರ್ಣ ಸಾಕ್ಷಾತ್ಕಾರ ನಮ್ಮ ಮನೆಯಲ್ಲಿಯೇ! Entropy (chaos) of the universe goes on increasing! ಗಡಿಬಿಡಿಯಲ್ಲಿ ಒಂದು ಮ್ಯಾಚಿಂಗ್ ಬ್ಲೌಸ್ ಹುಡುಕುವ ಭರದಲ್ಲಿ ಹೊರಗೆ ಬಂದಿರುವ ಹತ್ತು ಬ್ಲೌಸ್‌ಗಳನ್ನು ನೀಟಾಗಿ ಮಡಚಿಡುವಾಗ ಒಂದು ನಿರ್ಣಯ ಪಾಸ್ ಮಾಡಿಯೇ ಬಿಡುತ್ತೇನೆ. ಇನ್ನು ಮೇಲೆ ಆರು ದಿನಕ್ಕೆ ಆರು ಸೀರೆಯ ತರ ಎಲ್ಲ ಮ್ಯಾಚಿಂಗ್ ಸೆಟ್ ಭಾನುವಾರವೇ ತಯಾರಿಸಿಡುವುದು, ಇದು ಕೇವಲ ನಿರ್ಣಯ ವನಲ್ಲ, ಅದೇ ತರ ಆರು ಸೆಟ್‌ಗಳನ್ನು ಪ್ರತಿವಾರವೂ ನಾನು ತಯಾರಿಸಿಡುತ್ತೇನೆ. ಆದರೇನು ಮಾಡುವುದು? ಬೆಳ್ಳಗೆಯಾಗುತ್ತಿರುವಂತೆಯೇ ಯಾರಾದರೂ ಗೆಳತಿಯ ಫೋನ್ ರಿಂಗಾಗುತ್ತದೆ. ಚಪಾತಿ ಲಟ್ಟಿಸುತ್ತಿರುವಂತೆಯೇ ನನ್ನ ಬಾಯಿ ಮತ್ತು ಕಿವಿಯ ನಡುವೆ ಒಂದು ಒಳ್ಳೆಯ ಸಂವಹನ ಏರ್ಪಟ್ಟು ವಿಷಯ ಏನೆಂದು ಕೇಳಿದರೆ ಎದೆ ಬಡಿತ ಒಂದು ಕ್ಷಣ ನಿಲ್ಲುತ್ತದೆ. ಆ ಕಡೆಯಿಂದ ಗೆಳತಿ ವಾಣಿಯ ಮಧುರ(!) ವಾಣಿ ‘ಪಾಂಯ್ ಕೆಲಸೋ, ಇವತ್ತು ಎಲ್ಲರೂ ರೆಡ್ ಸ್ಯಾರಿ ಹಾಕೊಂಡು ಅಂತ ಪ್ಲಾನ್ ಮಾಡಿದ್ದೇವೆ. ರೋಲಿ ಎಲ್ಸಿಂಗೂ ರೆಡ್‌ರೋಡ್ ತರುತ್ತಾಳಂತೆ. ನೀನೂ ರೆಡ್ ಸ್ಯಾರಿನೇ ಹಾಕಿಕೊಂಡು ಬಾ’. ನನ್ನ ಉತ್ತರವ ನಿರೀಕ್ಷೆಯೇ ಇಲ್ಲದೇ ಫೋನ್ ಕಟ್ ಆಗುತ್ತದೆ. ನನ್ನ ಪರಿಸ್ಥಿತಿ ಯಾರಿಗೂ ಬೇಡ. ಯಾಕೆಂದರೆ ನನ್ನ ನಿರ್ಣಯದ ಪ್ರಕಾರ ತಯಾರಿಸಿಟ್ಟಿರುವ ಆರು ಸೆಟ್‌ಗಳಲ್ಲಿ ಒಂದೇ ಒಂದು ರೆಡ್ ಸೀರೆ ಇಲ್ಲ! ನನ್ನ ಹುಡುಕಾಟ, ಕಿತ್ತಾಟ ಮತ್ತೆ ಶುರು. ಅಲ್ಲಿಗೆ ಭಾನುವಾರದ ಮೊದಲನೇ ನಿರ್ಣಯ ಪಳ್ಳಾ!

ಇಲ್ಲಿಗೆ ನನ್ನ ಸ್ವಚ್ಛತಾ ಅಭಿಯಾನದ ಮೊದಲ ಹಂತದ ಘೋರ ಅಂತ್ಯದೊಂದಿಗೆ ಅಭಿಯಾನದ ಎರಡನೇ ಹಂತ ಶುರುವಾಗುತ್ತದೆ. ನನ್ನ ಮಗಳು ನನಗೆ ಕೊಟ್ಟ ಆಶ್ವಾಸನೆಯ ಮೇರೆಗೆ ಒಂದು ಬಾತ್‌ರೂಮನ್ನು ಸ್ವಚ್ಛ ಮಾಡಿಯೇ ತೀರುತ್ತಾಳೆ (ಆದರೆ ಮನೆಯಲ್ಲಿರುವದು ಮೂರು ಬಾತ್ ರೂಮ್!). ಇನ್ನು ನನ್ನ ಮಗ!! ಮುಂದಿನ ಎಲೆಕ್ಷನ್‌ನಲ್ಲಿ ಅವನಿಗೇನಾದರೂ ಟಿಕೆಟ್ ಕೊಟ್ಟರೆ ಅವನು ಗೆಲ್ಲುವುದು ಖಂಡಿತ. ಅಷ್ಟೊಂದು ಚೆನ್ನಾಗಿ ಆಶ್ವಾಸನೆ ನೀಡುತ್ತಾನೆ. (ರಾಜಕೀಯ ಪಕ್ಷಗಳು ಈ ಕಡೆಗೆ ಗಮನ ಹರಿಸಿ). ಅವನ ಕೈಯಿಂದ ಒಂದು ಕೆಲಸವೂ ಆಗುವುದಿಲ್ಲ; ಆಗುವುದಿಲ್ಲ. ಆದರೂ ನಾನು ಗದರಿಸಿಕೊಂಡೂ ಕೆಲಸ ಮಾಡಿಸುತ್ತಿರುವಾಗ ಒಂದು ಅಣಿಮುತ್ತು- ‘ಅಮ್ಮಾ! ಎಲ್ಲ ಇವತ್ತೇ ಮಾಡಿ ಮುಗಿಸಬೇಕಾ? ಮನೆಯಾ ಹೊರಗಡೆ ಬಲೆ ಕೆಂಗಡೆಯಿದೆ. ಯಾವ ತೊಂದರೆ ತಗೆದುಕೊಳ್ಳುತ್ತಿದ್ದೀಯಾ?…’ ಇತ್ಯಾದಿ. ಅವನು ಕೆಲಸ ಮಾಡಿಕೊಂಡರೆ ತೆಗೆದುಕೊಳ್ಳಬೇಡ ಎನ್ನುತ್ತಾನೆಯೇ ಹೊರತು ಆ ಕೆಲಸವನ್ನು ಇನ್ನೂ ಯಾರು ಮಾಡಬೇಕು ಅಥವಾ ಯಾವಾಗ ಮಾಡಬೇಕು ಎನ್ನುವ ಪ್ರಶ್ನೆಗೆ ಅವನ ಹತ್ತಿರ ಉತ್ತರವಿಲ್ಲ. ನಾನು ಉತ್ತರಕ್ಕಾಗಿ ಒತ್ತಾಯಿಸಿದರೆ ಉತ್ತರಕುಮಾರನಂತೆ ನಾಳೆ ನಾನೇ ಮಾಡುತ್ತೇನೆ ಎಂದನೋ ಹೊರತು ಆ ನಾಳೆ ಎಂದಿಗೂ ಬರುವುದಿಲ್ಲ.

ಹೀಗೆ ಬೆಳಿಗ್ಗೆ ಏಳು ಗಂಟೆಗೆ ಶುರುವಾದ ಸ್ವಚ್ಛತಾ ಅಭಿಯಾನ ಮಧ್ಯಾಹ್ನ ಎರಡಾದರೂ ಮುಗಿಯುವುದಿಲ್ಲ. ಇದೆಲ್ಲದರ ಮಧ್ಯೆ ನನ್ನ ಮಿಶನ್ ಪಾಕಶಾಲೆಯೂ ಯಶಸ್ವಿಯಾಗಬೇಕಾಗಿರುತ್ತದೆ. ಒಟ್ಟಿಗೆ ಸ್ವೀಟ್ ತಿನ್ನುವ ಇಚ್ಛೆಯಾದರೆ ಇನ್ನೊಬ್ಬರಿಗೆ ಖಾರ, ಹಾರ ಮಾಂಸಾಹಾರ ಅಡಿಗೆ ಬೇಕು. ನನ್ನ ಯಜಮಾನರಿಗೆ ಹತ್ತು ಗಂಟೆಯೊಳಗೆ ಮೂರು ಬಾರಿಯಾದರೂ ಕಾಫಿ ಸಮಾರಾಧನೆ ಆಗಬೇಕು. ಸ್ವತಃ ನಾನೇ ಮಾಡಿಕೊಡದಿದ್ದರೆ ಮತ್ತೊಂದು ಬಗೆಯ ಸಂಘರ್ಷಕ್ಕೆ ನಾನು ಒಳಗಾಗಬೇಕಾಗುತ್ತದೆ. ಅದೇನಂದರೆ ಬೆಳಗ್ಗೆ ತಾನೇ ತೊಳೆದಿದ್ದ

ಕಿಚನ್ ಕಟ್ಟೆ ಮತ್ತು ಗ್ಯಾಸ್ ಸ್ಟೌ ಅನ್ನು ಮತ್ತೊಮ್ಮೆ ತೊಳೆದು ಬರೆಸುವ ಸುವರ್ಣಾವಕಾಶ. ಯಾಕೆಂದರೆ ನಾನೇ ಕಾಫಿ ಕೊಡದಿದ್ದರೆ ತಾವೇ ಸ್ವತಃ ಕಾಫಿ ತಯಾರಿಸಿಕೊಳ್ಳುವ ನನ್ನ ಯಜಮಾನರು ಕಾಫಿ ಪಾತ್ರೆಗೆ ಹಾಲೇರಿದ ಗ್ಯಾಸ್ ಮೇಲಿರಿಸಿ ಶರೀಫಜ್ಜನಂತೆ ಆಕಾಶ ನೋಡುತ್ತ ಆತ್ಮಾವಲೋಕನ ಮಾಡಿಕೊಳ್ಳುತ್ತಿರುತ್ತಾರೆ. ಈ ಆತ್ಮಾವಲೋಕನದಲ್ಲಿ ಅವರು ಪ್ರತಿ ಮಗ್ಧರಾಗಿರುತ್ತಾರೆಂದರೆ ಕಾಫಿ ಉಕ್ಕಿ ಹರಿದು ಕಾವೇರಿ ನದಿಯಾಗಿರುತ್ತದೆ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಮುಂದಾಗಬಹುದಾದ ಅನಾಹುತ, ಅನಾನುಕೂಲಗಳನ್ನು ತಪ್ಪಿಸಲು ಅವರಿಗೆ ನಾನೇ ಆಗಿಂದಾಗ್ಗೆ ಕಾಫಿ ಸರಬರಾಜು ಮಾಡುತ್ತಿರುತ್ತೇನೆ.

ಹಾಗೆ ನೋಡಿದರೆ ನನ್ನ ಭಾನುವಾರದ ಪವನ ಶುರುವಾಗುವುದೇ ಅಡುಗೆ ಮನೆಯಿಂದ. ಬೆಳಿಗ್ಗೆ ಎದ್ದ ತಕ್ಷಣ ಮೊದಲ ಕಿಚನ್ ಕಟ್ಟು ಹಾಗೂ ಗ್ಯಾಸ್ ಸ್ಟೌ ಅನ್ನು ಸ್ವಚ್ಛ ಮಾಡಿಕೊಳ್ಳುತ್ತೇನೆ. ಇಲ್ಲಿಯೂ ಒಂದು ಲೆಕ್ಕಾಚಾರ ಇದೆ. ಮೊದಲೇ ಅಡುಗೆ ಮನೆ ಸ್ವಚ್ಛವಾಗಿದ್ದರೆ ಮಾತ್ರ ಸಂಜೆ ಸ್ಪೆಷಲ್ ತಯಾರಾಗಲು ಸಾಧ್ಯ! ಇಲ್ಲದೇ ಹೋದರೆ ಸಂಜೆಯ ಸ್ಪೆಷಲ್ ಅಡುಗೆ ಕೆಫೆಯಲ್ಲಾಗಲಿ ಅಥವಾ ರೆಸ್ಟೋರೆಂಟ್‌ನಿಂದಲೇ ಬರಬೇಕಾಗುತ್ತದೆ. ಹಾಗೆ ಬಂದು ಅಡುಗೆಗೂ ನಮ್ಮ ಮನೆಯ ನುರಿತ ನಳಪಾಕಿಗರಿಂದ ಸ್ವಾಗತವೇನೂ ಸಿಗುವುದಿಲ್ಲ. ಎಲ್ಲಿ ತಿಂದರೂ, ತಿಂದಾದ ಮೇಲೆ ಮಗನ ಕಮೆಂಟ್ – ‘ನೀ ಏನೇ ಹೇಳು ಅಮ್ಮ, ನಿನ್ನ ಕೈ ರುಚಿಯೇ ಬೇರೆ! ಇದು ರುಚಿಯಲ್ಲ ಇದು ನನ್ನಿಂದ ಇನ್ನೂ ಇಷ್ಟು ಕೆಲಸ ತೆಗಿಸಿಕೊಳ್ಳುವ ಪ್ಲ್ಯಾನ್’ ಎನ್ನುವುದು. ನಿಜವಾಗಿಯೂ ನನ್ನ ಪಾಕಪ್ರವೀಣ್ಯದ ಹೊಗಳಿಕೆಯೋ ತಿಳಿಯುವುದೇ ಇಲ್ಲ. ಗಂಡ ಊಟ ಮಾಡಿ ಟಿವಿ ಮುಂದೆ ಕುಳಿತು ‘ಸುಮ್ಮನೆ ದುಡ್ಡು ದಂಡ! ಅರೋಗ್ಯಕ್ಕೂ ಒಳ್ಳೆಯದಲ್ಲ’ ಎಂದು ನಿದುಸುಯ್ಯುತ್ತಾರೆ (ಪಾರ್ಸಲ್ ನ ಕುಶಲಕ್ಕೆ ಇವರದ್ದೇ ಸಿಂಹಪಾಲು ಇವರದ್ದೇ!). ಹೀಗಾಗಿ ಇವೆಲ್ಲ ರಗಳೆಯೇ ಬೇಡ ಎಂದು ನಾನು ಅಡುಗೆ ಮನೆ ಸ್ವಚ್ಛ ಮಾಡಿ ಕುಕ್ಕರ್ ವಿಸಿಲ್ ಏರಲು ಅಲ್ಪ ಸ್ವಲ್ಪ ತಯಾರಿ ಮಾಡಿಕೊಳ್ಳುತ್ತೇನೆ.

ಮೊತ್ತ ಮೊದಲ ನಾನು ಕೈಯಿರಿಸುವುದು ನನ್ನ ಮಗನ ರೂಮ್‌ಗೆ. ಅಲ್ಲಿ ಸಿಗುವುದು ಬರೀ ಅವ್ಯವಸ್ಥೆ (chaos). ಅವನ ಜೊತೆಗೆ ರೂಮ್‌ನಲ್ಲಿ ನನ್ನ ಅಕ್ಕನ ಮಗನೂ ಇರುತ್ತಾನೆ. ಅವನು ಒಂದು ದಿನದಲ್ಲಿ ಕನಿಷ್ಠ ಆರು ಶರ್ಟ್ ಬದಲಾಯಿಸುತ್ತಾನೆ (ಕಾರಣ ನನಗಂತೂ ಗೊತ್ತಿಲ್ಲ). ಆ ಎಲ್ಲ ಶರ್ಟ್‌ಗಳೂ ಹ್ಯಾಂಗರ್‌ನಲ್ಲಿ ಏಕೆ ನೇತಾಡುವುದಿಲ್ಲವೋ ನಾನಂತೂ ಕಾಣೆ. ಮಂಚದ ಮೇಲೆ, ಕುರ್ಚಿಯ ಮೇಲೆ, ಬಾಗಿಲ ಹಿಡಿಕೆಯಲ್ಲಿ… ಹೀಗೆ ಎಲ್ಲೆಂದರಲ್ಲಿ ಸಿಗುವ ಶರ್ಟ್‌ಗಳನ್ನು ಮಡಚಿಡುವಾಗ ನನಗೆ ಶ್ರೀಮತಿ ಹಿತೈಷಿ ಪ್ರೇಮಕ್ಕನ ನೆನಪಾಗುತ್ತದೆ. ‘ಜಗತ್ತಿನಲ್ಲಿ ಒಂದೂ ಗುಂಡು ಬಿಚ್ಚದೆ ಇರುವ ಜನರಿರುವುದಿಲ್ಲ… ನನ್ನ ಮಗನಿಗೆ ಮಾತ್ರ ಯಾರೂ ಕೆಲಸ ಕೊಡುವುದೇ ಇಲ್ಲ, ನನ್ನ ಗರ್ತಿ ಹೆಂಡತಿ ಎದ್ದು ಕುಶಲ ಪ್ರಶ್ನೆಗಳನ್ನು ಮಾಡುವ ಮೊದಲೇ ನಾನು ಎಲ್ಲವನ್ನೂ ಸ್ವಚ್ಛ ಮಾಡುತ್ತೇನೆ’ ಎಂದು ಹೇಳುತ್ತಾ ಮತ್ತೆ ನಿದ್ದೆಗೆ ಜಾರಿದ.

ಹಾಗೂ ಹೀಗೂ ಮೂರೂ ಬೆಡ್ ರೂಮ್‌ಗಳ ಸ್ವಚ್ಛತೆ ಮುಗಿಸಿ ಈಗ ಲಿವಿಂಗ್ ರೂಮ್‌ಗೆ ಬರುತ್ತೇನೆ. ಮಧ್ಯೆ ಮಧ್ಯೆ ಅಡುಗೆ ಮನೆಯಿಂದ ಹಾಲಿಗೆ, ಹಾಲಿನಿಂದ ಅಡುಗೆ ಮನೆಗೆ ನನ್ನ ಓಡಾಟ ನಡೆಯುತ್ತಲೇ ಇರುತ್ತದೆ. ಅಂತೂ ಇಂತೂ ಅವುಗಳನ್ನೆಲ್ಲ ಒಪ್ಪಗೊಳಿಸಿ ಮಿಷನ್ ಪಾಕಶಾಲೆಯನ್ನು ಪೂರ್ಣಗೊಳಿಸುವಷ್ಟರಲ್ಲಿ ಗಂಟೆ ಹನ್ನೆರಡಾಗಿರುತ್ತದೆ.

ಈಗ ಶುರು, ಟಾಯ್ಲೆಟ್ ತೊಳೆಯುವ ಅಭಿಯಾನ. ಮನೆಯಲ್ಲಿ ಮೂರು ಟಾಯ್ಲೆಟ್ ಇದೆ. ವಿಪರ್ಯಾಸವೆಂದರೆ ಯಾರಾದರೂ ಮನೆಗೆ ಬಂದರೆ ಟಾಯ್ಲೆಟ್, ಬಾತ್ ರೂಮ್ ಹೇಗೆ ತೊಳೆಯುತ್ತೀರಿ ಎಂದು ಕೇಳುವ ಅಕ್ಕಯಮ್ಮನವರು ನಮ್ಮ ಮನೆಗೆ ಒಂದು ಭಾನುವಾರ ಬಂದಿಲ್ಲ. ಪ್ರತಿ ಭಾನುವಾರವೂ ನನ್ನದೊಂದೇ ನಿರೀಕ್ಷೆ – ಅಕ್ಕಯಮ್ಮನವರು ನಮ್ಮ ಮನೆಗೆ ಇಂದು ಬರಬಹುದು; ನಮ್ಮ ಮನೆಯ ಟಾಯ್ಲೆಟ್, ಬಾತ್ ರೂಮ್ ಕೂಡ ಹೊಳಪು ಇರುವುದನ್ನು ನೋಡಲಿ ಎಂಬುದು ನನ್ನ ಆಸೆ. ಅಯ್ಯೋ! ಹನಿ ಭಾನುವಾರವೂ ಬರಲಿಲ್ಲ; ಹೀಗಾಗಿ ಎಲ್ಲ ಟಾಯ್ಲೆಟ್, ಬಾತ್ ರೂಮ್ ಸ್ವಚ್ಛ ಮಾಡುವ ಮಹಾನ್ ಅಭಿಯಾನದ ಹೊಣೆ ನನದ್ದೇ ಆಗಿರುತ್ತದೆ.

ಅಂತೂ ಇಂತೂ ಮುಗಿಸಿ ತಲೆ ಸ್ನಾನ ಮಾಡಿ ಬರುವಷ್ಟರಲ್ಲಿ ನನ್ನ ಸಂಜೆ ಸ್ಪೆಷಲ್ ಅಡುಗೆಯೂ ಸಿದ್ಧವಾಗಿರುತ್ತದೆ. ಅದನ್ನೇ ಹೇಗೋ ತಿಂದು ಮಕ್ಕಳು ಹರಟೆ ಹೊಡೆಯಲು ಶುರು ಮಾಡುತ್ತಾರೋ ಮಕ್ಕಳು ಟಿವಿಯಲ್ಲಿ ಕಾರ್ಟೂನ್ ನೋಡುತ್ತಾ ರೂಮಲ್ಲಿ ಹುದುಗಿಕೊಳ್ಳುತ್ತಾರೆ. ಮಕ್ಕಳ ಮಧ್ಯೆ ನಾನು ಕೂತು ಸಂಭಾಷಣೆ ಅಥವಾ ಕ್ವಿಜ್ ಆಡೋಣವೆಂದರೆ, ನನ್ನ ಪ್ರಶ್ನೆಗಳಿಗೂ ನನ್ನ ಮೊಬೈಲ್‌ನಲ್ಲಿ ಬರುವ ಹಲೋ ಅಥವಾ ಮೆಸೇಜ್ ಉತ್ತರ ಪಡೆಯುವುದರಲ್ಲಿಯೇ ಮಕ್ಕಳೊಂದಿಗೆ ಹರಟೆ ಹೊಡೆಯುವ ನನ್ನ ಆಸಕ್ತಿ ಇಂಗಿ ಹೋಗುತ್ತದೆ. ನಮ್ಮ ಬೆಡ್ ರೂಮ್‌ಗೆ ಬಂದು ನೋಡಿದರೆ ನನ್ನ ಯಜಮಾನರು ಬಾಬಾ ರಾಮದೇವ್ ಫೋಟೋ ಹಾಕಿರುವಂತೆ ಯೋಗ ಮಾಡುತ್ತಿರುತ್ತಾರೆ. ಅವರಿಗೆ ಅತ್ಯಂತ ಪ್ರಿಯವಾದ ಶವಾಸನದಲ್ಲಿ, ನಮ್ಮ ಯಜಮಾನರ ಪ್ರಕಾರ ಆಸನಗಳಲ್ಲಿ ಅತ್ಯಂತ ಶ್ರೇಷ್ಠವಾದುದೇ ಈ ಶವಾಸನ.

ಇಷ್ಟರಲ್ಲಿ ನನಗೆ ನಗು ಬರುತ್ತದೆ. ಇಡೀ ದಿನದ ಕೆಲಸ ಮುಗಿಸಿ – ನನ್ನ ಒಂದು ಎಂಟು ವಾರದಲ್ಲಿ ಆರು ದಿನ ಹೋಗಲು ಅವಕಾಶವಿರದ ನನಗೆ ಇಡೀ ಟಿವಿ ಮೇಲೆ ಪೂರ್ಣ ಸ್ವಾಮ್ಯ ಸಾಧಿಸುವ ಸದವಕಾಶ. ನನಗೆ ಇಷ್ಟವಾದ ಚಾನೆಲ್ ನೋಡುತ್ತಾ ಕುಳಿತುಕೊಳ್ಳುವಷ್ಟರಲ್ಲಿ ಸಂಜೆಯ ಚಹಾ ತಯಾರಿಸುವ ಸಮಯ ಬಂದಿರುತ್ತದೆ. ಅಲ್ಲಿಯೂ ಕೂಡ ವೈವಿಧ್ಯಮಯ ಆದೇಶಗಳು. ಈ ಎಲ್ಲ ಆದೇಶಗಳನ್ನು ಪೂರೈಸುವಷ್ಟರಲ್ಲಿ ಗಂಟೆ ಏಳಾಗಿರುತ್ತದೆ. ಮತ್ತೆ ರಾತ್ರಿಯ ಅಡುಗೆಯ ತಯಾರಿ! ಆಗಲೇ ನಾನೊಂದು ನಿರ್ಧಾರ ಮಾಡುತ್ತೇನೆ – ಮುಂದಿನ ಭಾನುವಾರ ಈ ಎಲ್ಲಾ ಕೆಲಸಗಳನ್ನು ಯಾರೂ ಮಾಡುವುದಿಲ್ಲ, ಆರಾಮಾಗಿ ಒಂಬತ್ತು ಗಂಟೆಗೆ ಎದ್ದು… ನನ್ನ ಆಲೋಚನೆ ಮುಗಿಯುವ ಮೊದಲೇ ಯಜಮಾನರು ಕೇಳುತ್ತಾರೆ ‘ಗಂಟೆ ಒಂಬತ್ತಾಯಿತು, ಇನ್ನೂ ಡಿನ್ನರ್ ರೆಡಿಯಾಗಿಲ್ಲವೇ?’

ಓಹ್! ಭಾನುವಾರ ಮುಗಿದೇ ಹೋಯಿತು. ಮತ್ತೆ ನಾಳೆಯಿಂದ ಆಫೀಸ್… ಮನಸ್ಸು ಯೋಚಿಸುತ್ತಲೇ ಮುಂದಿನ ಭಾನುವಾರಕ್ಕೆ ಪ್ಲ್ಯಾನ್ ಮಾಡಲು ಪ್ರಾರಂಭಿಸುತ್ತದೆ. ಹೀಗೆ ಕಳೆದ ನೂರಾರು ಭಾನುವಾರಗಳಂತೆ ಈ ಭಾನುವಾರವೂ ಕಳೆದೇ ಹೋಯಿತು! ಇರಲಿ ಬಿಡಿ, ಹೇಗೂ ಮುಂದಿನ ಭಾನುವಾರ ಇದ್ದೇ ಇದೆಯಲ್ಲ!

Contact us for classifieds and ads : +91 9742974234