Latest News

ಮಹಿಳೆ ದುರ್ಬಳಲ್ಲ, ಸಬಲಳು : ಹುಣಸೂರು ನಗರಸಭಾ ಆಯುಕ್ತೆ ಮಾನಸ

ಹುಣಸೂರು:- ಮಹಿಳೆ  ದುರ್ಬಳಲ್ಲ ಅವಳು ಸಬಲಳು  ಎಂದು ಹುಣಸೂರು ನಗರಸಭಾ ಆಯುಕ್ತರಾದ ಮಾನಸ ಮೇಡಂ ರವರು ಹೇಳಿದರು. ಇವರು ದಿನಾಂಕ : 13-03-2026 ರ ಶುಕ್ರವಾರ ಹುಣಸೂರು ನಗರದ ಕಲ್ಕುಣಿಕೆಯ ಗುರುಗಳ ಕಟ್ಟೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ  ಮತ್ತು ದಲಿತ ಮಹಿಳಾ ಒಕ್ಕೂಟವು ಆಯೋಜಿಸಿದ್ದ “ಮಹಿಳಾ ದಿನಾಚರಣೆಯ ಅಂಗವಾಗಿ” ಬಡ ಮಹಿಳೆ ಪಾರ್ವತಮ್ಮಳ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮಹಿಳೆಯರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಹಿಳೆಯರಾದ ನಾವು ಅಸಹಾಯಕರು ಎಂಬ ಭಾವನೆಯನ್ನು ಬಿಡಬೇಕು.  ನಾನು ಅನಾಥಳು, ನನಗೆ ಯಾರೂ ಇಲ್ಲ, ನನ್ನಿಂದ ಆಗುವುದಿಲ್ಲ, ಎಂಬ ಮನಸ್ಥಿತಿಯಿಂದ ನಾವು ಹೊರಬರಬೇಕು. ಇತಿಹಾಸದ ಕೆಲವು ಘಟನೆಗಳನ್ನು ನಾವು ನೋಡಿದಾಗ ಯಾವುದೇ ಬದಲಾವಣೆ ಒಂದು ಮಹಿಳೆಯಿಂದಲೇ ಆಗಿರುತ್ತದೆ. ಶಿಕ್ಷಣದಿಂದ ವಂಚಿತರಾಗಿ ಅಜ್ಞಾನದಿಂದ ಬಳಲುತ್ತಿದ್ದ ಬಹುಜನರಿಗೆ ಜ್ಯೋತಿಬಾ ಫುಲೆ ರವರ ಪತ್ನಿಯಾದ ಸಾವಿತ್ರಿಬಾಯಿ ಫುಲೆ ರವರು ದಲಿತರ ಕೇರಿಗಳಿಗೆ ಹೋಗಿ ಅವರ ಮಕ್ಕಳಿಗೆ ಶಿಕ್ಷಣ ಕಲಿಸುವ ಸಂದರ್ಭದಲ್ಲಿ ಅವರಿಗೆ ಅನೇಕ ರೀತಿಯ ತೊಂದರೆಗಳನ್ನು ಕೊಡಲಾಗಿತ್ತು. ಅದಕ್ಕೆ ಸಾವಿತ್ರಿಬಾಯಿ ಫುಲೆ ರವರು ಎದೆಗುಂದದೆ ಶಿಕ್ಷಣ ವಂಚಿತ ಸಮುದಾಯಗಳಿಗೆ ಶಿಕ್ಷಣವನ್ನು ಹೇಳಿಕೊಟ್ಟರು. ಇದರಿಂದ ಸಾವಿರಾರು ವರ್ಷಗಳಿಂದ ಅಜ್ಞಾನದಿಂದ ಕೂಡಿದ್ದ ಬಹುಪಾಲು ಸಮಾಜಗಳು ಜ್ಞಾನವನ್ನು ಪಡೆಯುವಂತಾಯಿತು.

ಯಾವುದೇ ಸಮಸ್ಯೆಯನ್ನು ನನ್ನಿಂದಾಗದು ಎನ್ನುವುದನ್ನು ಬಿಟ್ಟು ಎಲ್ಲವೂ ನನ್ನಿಂದ ಆಗುತ್ತದೆ ಎಂದು ಧೈರ್ಯದಿಂದ ಸಮಸ್ಯೆಗಳನ್ನು ಮೆಟ್ಟಿ ನಿಂತು ಜೀವನದಲ್ಲಿ ಮುನ್ನುಗ್ಗಬೇಕು. ಕೌಟುಂಬಿಕ ಸಮಸ್ಯೆಗಳಾಗಲೀ, ಸಾಮಾಜಿಕ ಸಮಸ್ಯೆಗಳಾಗಲೀ ತಾಳ್ಮೆ ವಹಿಸಿ ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ಪ್ರ ಜೆಗಳನ್ನಾಗಿ ರೂಪಿಸುವ ಹೊಣೆ ಮಹಿಳೆಯರ ಮೇಲೆ ಇದೆ. ಯಾವುದೋ ಒಂದು ಸಮಸ್ಯೆಯನ್ನು ಮುಂದಿಟ್ಟುಕೊಂಡು ಇಡೀ ಜೀವನವನ್ನು ಹಾಳು ಮಾಡಿಕೊಳ್ಳಬಾರದು.

ಒಂದು ಕುಟುಂಬ ಅಭಿವೃದ್ಧಿಹೊಂದಬೇಕಾದರೆ ಮಹಿಳೆಯರ ಪಾತ್ರ ತುಂಬಾ ಅಗತ್ಯವಾಗಿ ಬೇಕಾಗಿರುತ್ತದೆ. ಸಮಾಜದಲ್ಲಿ ಒಬ್ಬ ಗಣ್ಯವ್ಯಕ್ತಿ ನಾಯಕನಾಗಿದ್ದಾನೆ ಎಂದರೆ ಅದರ ಹಿಂದೆ ಮಹಿಳೆಯ ಶ್ರಮವಿರುತ್ತದೆ. ಮಹಿಳೆಯನ್ನು ಹೊರತುಪಡಿಸಿ ಈ ಪ್ರಪಂಚದಲ್ಲಿ ಯಾವುದನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಪುರುಷ ಸಮಾಜ ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರನ್ನು ನೋಡುವ ದೃಷ್ಟಿಕೋನವು ಬದಲಾಗಬೇಕು. ದಸಂಸ ದ ನಿಂಗರಾಜ್ ಮಲ್ಲಾಡಿ ರವರ ತಂಡ ಬಡ ಮಹಿಳೆ ಪಾರ್ವತಮ್ಮಳಿಗೆ ಹೋರಾಟದ ಮೂಲಕವೇ ನಿವೇಶನ ಕೊಡಿಸಿ ಸರ್ಕಾರದಿಂದ ಮನೆ ಕಲ್ಪಿಸಿ ಕೊಟ್ಟು ಈ ಮನೆಗೆ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ನನ್ನಿಂದ ಮಾಡಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಹುಣಸೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ವೈದ್ಯಾಧಿಕಾರಿಗಳಾದ ಡಾ. ಸುಜಾತ ರವರು ಮಾತನಾಡಿ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅಡಿಗೆ ಮನೆಗಳೇ ಒಂದು ರೀತಿಯ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಬೇಕು. ಪ್ರತಿದಿನ ನಾವು ಬಳಸುವ ಆಹಾರ ಪದ್ಧತಿಗಳು ಬದಲಾಗಬೇಕು.  ವ್ಯಾಯಾಮ, ಧ್ಯಾನಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾಡಿ ರೋಗಗಳೇ ಬಾರದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳಬೇಕು. ಎಲ್ಲಾದಕ್ಕೂ ಆಸ್ಪತ್ರೆಯನ್ನೇ ಅವಲಂಬಿಸಬಾರದು.

ಮಹಿಳೆ ಆರೋಗ್ಯವಂತಳಾಗಿದ್ದರೆ ಆ ಕುಟುಂಬ ಆರೋಗ್ಯವಾಗಿರುತ್ತದೆ. ಆ ಕುಟುಂಬ ಆರೋಗ್ಯವಾಗಿದ್ದರೆ ಸಮಾಜವೇ ಆರೋಗ್ಯವಾಗಿರುತ್ತದೆ. ದ್ವೇಷ ಅಸೂಯೆ ಕೋಪಗಳನ್ನು ಬಿಟ್ಟು, ಪ್ರೀತಿ, ಕರುಣೆ, ಸಹನೆಗಳನ್ನು ಮೈ ಗೂಡಿಸಿಕೊಳ್ಳಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಥಿತಿ ನಮ್ಮದಾಗಬೇಕು. ಆಗ ಮಾತ್ರ ಪ್ರತಿಯೊಬ್ಬ ಮಹಿಳೆಯೂ ಮಾನಸಿಕವಾಗಿ ಆರೋಗ್ಯವಂತಳಾಗಿರಲು ಸಾಧ್ಯವಿದೆ.

ಚಿಕ್ಕ ವಯಸ್ಸಿನಲ್ಲೀಯೇ ಬಾಲ್ಯ ವಿವಾಹಗಳನ್ನು ಮಾಡಬಾರದು, ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆಯನ್ನು ಯಾರೂ ಮಾಡಬಾರದು. ಇದು ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿ ಸಮಾಜದಲ್ಲಿ ಅಸಮತೋಲನ ಉಂಟಾಗಿ ಅಧಃಪತನವಾಗುವ ಅಪಾಯ ಎದುರಾಗಲಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಕುಣಿಕೆ ಗ್ರಾಮದ ಶ್ರೀಮತಿ ಭವ್ಯರಾಜೇಶ್ ನಾಯಕ ರವರು ಮಾತನಾಡಿ  ಮಹಿಳೆಯರು ದುಂದು ವೆಚ್ಚವನ್ನು ಕಡಿಮೆ ಮಾಡಿ ಸರಳ ಜೀವನದತ್ತ ಯೋಚನೆ ಮಾಡಬೇಕು. ಹೆಣ್ಣು ಮಕ್ಕಳ ಮದುವೆಗೆ ಇದ್ದ ಆಸ್ತಿಗಳನ್ನು ಮಾರಿ ಮಗಳ ಜೀವನ ಹಸನಾಗಲೀ ಎಂದು  ವಿಜೃಂಭಣೆಯಿಂದ ಮದುವೆ ಮಾಡಿ ವರದಕ್ಷಿಣೆಯನ್ನು ಕೊಟ್ಟು ಗಂಡನ ಮನೆಗೆ ಕಳುಹಿಸಿದರೆ ಕೆಲವೇ ದಿನಗಳಲ್ಲಿ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಂಡನ ಮನೆಯಿಂದ ಬಂದ ಸುದ್ಧಿಯನ್ನು ಕೇಳುವ ಬದಲು ಆ ಹೆಣ್ಣು ಮಗಳಿಗೆ ಆತ್ಮಸ್ಥೈರ್ಯ ತುಂಬಿ ಎಷ್ಟೇ ಕಷ್ಟ ಬಂದರೂ ಸಮಸ್ಯೆಗಳನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿ ಸಮಾಜದಲ್ಲಿ  ಅವಮಾನಿಸಿ, ಅಪಮಾನಿಸಿದವರ ಎದುರೇ ಬದುಕಿ ತೋರಿಸುವ ಗಟ್ಟಿತನವನ್ನು ಹೆಣ್ಣು ಮಕ್ಕಳಲ್ಲಿ ಬೆಳೆಸಬೇಕು.

ಹೆಣ್ಣು ಮಕ್ಕಳು ಹುಟ್ಟಿದಾಗ ತಾತ್ಸಾರದಿಂದ ಕಾಣುವುದನ್ನು ಬಿಟ್ಟು ಶಿಕ್ಷಣ ಕೊಡಿಸಿ ಸಮಾಜದ ಉನ್ನತ ಸ್ಥಾನಗಳಿಗೆ ಹೋಗುವಂತೆ ತಂದೆ ತಾಯಿಯರು ಮನಸ್ಸು ಮಾಡಬೇಕು. ಹೆಣ್ಣು ಮಕ್ಕಳಿಗೆ ಜೀವನದ ಸುಖ ಕಷ್ಟಗಳ ಬಗ್ಗೆ ಕುಟುಂಬವು ಮೊದಲೇ ತಿಳಿಸಿ ಅವಳಿಗೆ ಎಲ್ಲಾ ರೀತಿಯ ಅರಿವನ್ನು ಮೂಡಿಸಿರಬೇಕು. ಯಾವುದೇ ಸಂಕಷ್ಟದ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಿಂದ ಹೊರಬರಬೇಕು. ಸಮಸ್ಯೆಗಳಿಗೆ  ಹೆದರಿ ಓಡಿ ಹೋಗಬಾರದು. ಬದಲಾಗಿ ಸಮಸ್ಯೆಗಳೇ ನಮ್ಮಿಂದ ಓಡಿ ಹೋಗುವಂತಹ ಮನಸ್ಥಿತಿಯನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದರು.

ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು  ಪ್ರಾಸ್ತಾವಿಕವಾಗಿ ಮಾತನಾಡಿ ದಸಂಸ ವು ನೊಂದವರು, ಹಸಿದವರು, ಬೀದಿಯಲ್ಲಿ ಬಿದ್ದ ಯಾವುದೇ ಜಾತಿಯ ಬಡವರ ಕಷ್ಟಗಳಿಗೆ ಸದಾ ಸ್ಪಂದಿಸಿ ಹೋರಾಟ ಮಾಡುತ್ತಾ  ಅವರ ಬದುಕಿನಲ್ಲಿ ಬೆಳಕು ಚೆಲ್ಲುವ ಕೆಲಸ ಮಾಡುತ್ತಾ ಬರುತ್ತಿದೆ. ಅದರಂತೆ ಕಲ್ಕುಣಿಕೆ ಗ್ರಾಮದ ನಾಯಕ ಸಮಾಜದ ಪಾರ್ವತಮ್ಮ ಎಂಬುವರು ವಾಸಿಸಲು ಮನೆಯಿಲ್ಲದೆ ಬೀದಿಯಲ್ಲಿ ಮಲಗುವ ಸ್ಥಿತಿ ಇದ್ದಾಗ ಇವರಿಗೆ ಹೋರಾಟದ ಮೂಲಕವೇ ನಿವೇಶನ ಕೊಡಿಸಿ ವಾಸಿಸಲು ಮನೆ ಮಂಜೂರಾತಿ ಮಾಡಿಸಿ ಈ ಮನೆಗೆ ಇಂದು ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಟ್ಟು ಇವರ ನೋವಿನ ಬದುಕಿಗೆ ಸ್ಪಂದಿಸಿ ಘನತೆ ಗೌರವದಿಂದ ಬದುಕಲು ದಸಂಸ ವು ಶ್ರಮಿಸಿದೆ. ಇದನ್ನು ನಾವು ಅತ್ಯಂತ ಮಹತ್ವದ ಕಾರ್ಯವೆಂದೇ ಭಾವಿಸಿರುತ್ತೇವೆ.

ಈ ದಿಕ್ಕಿನಲ್ಲಿ ಎಲ್ಲಾ ಜಾತಿಯ ಬಡವರು ಡಾ. ಬಿ.ಆರ್ ಅಂಬೇಡ್ಕರ್ ರವರು ಹೇಳಿದಂತೆ ತಮ್ಮ ಸಮಸ್ಯೆಗಳಿಗೆ ಸಂಘಟಿತರಾಗಿ ಹೋರಾಟ ಮಾಡಿ ಪರಿಹಾರವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ  ಇದೆ ಎಂದರು.

ಈ ಸಂದರ್ಭದಲ್ಲಿ ದಸಂಸ ದ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಅಬ್ದುಲ್ ಮಾಲೀಕ್, ನಾಗನಹಳ್ಳಿ ಮಹದೇವ, ದಲಿತ ಹಿರಿಯ ಮುಖಂಡರಾದ ಬಸವಲಿಂಗಯ್ಯ, ಕೆಎಂ ವಾಡಿ ಗ್ರಾಮದ ಗೌರಮ್ಮ, ದಲಿತ ಮಹಿಳಾ ಒಕ್ಕೂಟದ ಲಕ್ಷ್ಮಿ, ನೇತ್ರ  ಎನ್ ಎಸ್ ತಿಟ್ಟು, ಅಂಬೇಡ್ಕರ್ ನಗರದ ದಾಸಪ್ಪ ಶೋಭಮ್ಮ,  ಕಲ್ಕುಣಿಕೆ ಗ್ರಾಮದ ರಾಜೇಶ್ ನಾಯಕ, ಸಿದ್ದರಾಜು, ಚಂದ್ರನಾಯಕ, ರಾಜನಾಯಕ, ಪುಟ್ಟನಾಯಕ, ಕುಮಾರನಾಯಕ, ಪುಟ್ಟಸ್ವಾಮಿ, ಮಹಿಳೆಯರಾದ ಮಂಜುಳಾ, ಮಂಗಳ, ಗೀತಾ, ಲಕ್ಷ್ಮಿ, ಶಿವಮ್ಮ, ಕಾವೇರಿ, ಕವಿತಾ, ಜ್ಯೋತಿ, ಪಾರ್ವತಿ, ಮಹದೇವಿ, ಜಯಮ್ಮ, ಚನ್ನಾಜಮ್ಮ, ಹುಚ್ಚಮ್ಮ, ದೇವಮ್ಮ  ಪುಟ್ಟಸಿದ್ದಮ್ಮ ಮುಂತಾದ ನೂರಾರು ಜನರು ಈ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.  ನಾಲ್ಕು ಜನ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು

Contact us for classifieds and ads : +91 9742974234