
ಬೆಂಕಿರಹಿತ ಅಡುಗೆ ಸ್ಪರ್ಧೆ ಮೂಲಕ ಮಹಿಳಾ ದಿನಾಚರಣೆಗೆ ಪೂರ್ವಭಾವಿ ಚಾಲನೆ
ಮೈಸೂರು :- ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ವತಿಯಿಂದ ಪೂರ್ವಭಾವಿಯಾಗಿ ಬೆಂಕಿರಹಿತ ಅಡುಗೆ ಸ್ಪರ್ಧೆಯನ್ನು ಆಯೋಜಿಸಿ ಮಹಿಳೆಯರ ಸೃಜನಶೀಲತೆ, ಆರೋಗ್ಯಕರ ಅಡುಗೆ ಪದ್ಧತಿ ಹಾಗೂ ಕುಟುಂಬ ಮೌಲ್ಯಗಳನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ನಗರದ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ ಈ ಕಾರ್ಯಕ್ರಮವು ಅಡುಗೆ ಕೌಶಲ್ಯ ಮಾತ್ರವಲ್ಲದೆ ಮಹಿಳಾ ಸಬಲೀಕರಣದ ಸಂದೇಶವನ್ನೂ ನೀಡಿತು.

ಕಾರ್ಯಕ್ರಮವನ್ನು ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿನೋದ ಅವರು ಉದ್ಘಾಟಿಸಿ ಮಾತನಾಡಿದರು. . ದೀಪ ಬೆಳಗಿಸುವ ಮೂಲಕ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಅಡುಗೆ ಮನೆಯ ಮಹತ್ವವನ್ನು ವಿವರಿಸಿ, “ಕುಟುಂಬದ ಎಲ್ಲಾ ಸದಸ್ಯರನ್ನು ಒಂದೇ ಬಂಧದಲ್ಲಿ ಬೆಸೆಯುವ ಸ್ಥಳ ಅಡುಗೆಮನೆ. ಅದು ಕೇವಲ ಆಹಾರ ತಯಾರಿಸುವ ಸ್ಥಳವಲ್ಲ, ಕುಟುಂಬದ ಪ್ರೀತಿ, ಮಮತೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಮಹಿಳೆಯ ಪ್ರೀತಿ ಮತ್ತು ಕಾಳಜಿಯ ಹೆಗ್ಗುರುತು ಅಡುಗೆಮನೆಯಾಗಿದೆ” ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದಾರೆ ಎಂಬುದನ್ನು ಅವರು ಪ್ರಶಂಸಿಸಿದರು. ಸಮಾಜದಲ್ಲಿ ಮಹಿಳೆಯರಿಗೆ ಅವಕಾಶಗಳು ಹೆಚ್ಚಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಆದರೂ ಕುಟುಂಬ ವ್ಯವಸ್ಥೆಯಲ್ಲಿ ಅಡುಗೆಮನೆಯ ಪಾತ್ರ ಕಡಿಮೆಯಾಗಬಾರದು ಎಂಬುದನ್ನು ಅವರು ಒತ್ತಿ ಹೇಳಿದರು.
ಇಂದಿನ ಜೀವನ ಶೈಲಿಯಲ್ಲಿ ಜನರು ಸಮಯದ ಅಭಾವದ ನೆಪದಲ್ಲಿ ಹೊರಗಿನ ಆಹಾರವನ್ನು ಹೆಚ್ಚು ಅವಲಂಬಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. “ಈಗಿನ ದಿನಗಳಲ್ಲಿ ನಾವು ಆಹಾರವನ್ನು ಆರ್ಡರ್ ಮಾಡಿದರೆ ಕೆಲವೇ ಕ್ಷಣಗಳಲ್ಲಿ ಮನೆಗೆ ತಲುಪುತ್ತದೆ ಎಂಬ ಆಲೋಚನೆ ಹೆಚ್ಚಾಗಿದೆ. ಆದರೆ ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಮತ್ತು ಶುಚಿಯಾದ ಆಹಾರಕ್ಕೆ ಪರ್ಯಾಯವಿಲ್ಲ. ಮಹಿಳೆಯರು ಹೊಸ ಹೊಸ ರೀತಿಯ ಅಡುಗೆಗಳನ್ನು ಪ್ರಯೋಗಿಸುತ್ತಾ ಕುಟುಂಬದ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು” ಎಂದು ಸಲಹೆ ನೀಡಿದರು.

ಬೆಂಕಿರಹಿತ ಅಡುಗೆ ಸ್ಪರ್ಧೆಯಲ್ಲಿ ೨೫ ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಸುಮಾರು ೪೦ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ಪದಾರ್ಥಗಳನ್ನು ತಯಾರಿಸಿ ಪ್ರದರ್ಶಿಸಿದರು. ವಿವಿಧ ತರದ ಆರೋಗ್ಯಕರ ತಿಂಡಿಗಳು, ಸಿಹಿ ಪದಾರ್ಥಗಳು, ಹಣ್ಣುಗಳ ಸಂಯೋಜನೆಗಳಿಂದ ತಯಾರಿಸಿದ ವಿಶೇಷ ತಿನಿಸುಗಳು, ಸಲಾಡ್ಗಳು, ಪೌಷ್ಟಿಕ ಮಿಶ್ರಣಗಳು ಹಾಗೂ ಮಕ್ಕಳಿಗೆ ಇಷ್ಟವಾಗುವ ವಿನೂತನ ತಿಂಡಿಗಳು ಎಲ್ಲರ ಗಮನ ಸೆಳೆದವು. ಸ್ಪರ್ಧಾರ್ಥಿಗಳ ಕಲಾತ್ಮಕ ಪ್ರದರ್ಶನ ಮತ್ತು ಆಹಾರದ ವಿನ್ಯಾಸವೂ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಹಾಲು ಉತ್ಪನ್ನಗಳನ್ನು ಬಳಸಿಕೊಂಡು ತಯಾರಿಸಿದ ಆರೋಗ್ಯಕರ ಪದಾರ್ಥಗಳು ವಿಶೇಷ ಮೆಚ್ಚುಗೆ ಪಡೆದವು. ಕೆಲ ಮಹಿಳೆಯರು ಮಿಲೆಟ್ಸ್ ಮತ್ತು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಬಳಸಿ ಪೌಷ್ಟಿಕ ತಿನಿಸುಗಳನ್ನು ತಯಾರಿಸಿ ಪ್ರದರ್ಶಿಸಿದರು. ಆರೋಗ್ಯ ಮತ್ತು ರುಚಿ ಎರಡನ್ನೂ ಒಟ್ಟಿಗೆ ಒದಗಿಸುವ ಈ ರೀತಿಯ ಅಡುಗೆಗಳು ಇಂದಿನ ಪೀಳಿಗೆಗೆ ಮಾದರಿಯಾಗಿವೆ ಎಂದು ಹಲವರು ಅಭಿಪ್ರಾಯಪಟ್ಟರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರು ತಮ್ಮ ಅಡುಗೆ ಕೌಶಲ್ಯವನ್ನು ಪ್ರದರ್ಶಿಸುವುದರ ಜೊತೆಗೆ ಹೊಸ ಹೊಸ ತಿನಿಸುಗಳನ್ನು ಕಲಿಯುವ ಅವಕಾಶವೂ ದೊರಕಿತು ಎಂದು ಸಂತೋಷ ವ್ಯಕ್ತಪಡಿಸಿದರು. ಈ ರೀತಿಯ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಪರಸ್ಪರ ಸ್ನೇಹ ಹಾಗೂ ಸಹಕಾರ ಮನೋಭಾವವನ್ನು ವೃದ್ಧಿಸುತ್ತವೆ ಎಂದು ಅವರು ಹೇಳಿದರು.
ಸ್ಪರ್ಧೆಗೆ ತೀರ್ಪುಗಾರರಾಗಿ ಶ್ರೀ ವಿದ್ವಾನ್ ರಘು ಹಾಗೂ ಡಾ. ವಿನೋದ ಅವರು ಭಾಗವಹಿಸಿ ಸ್ಪರ್ಧಾರ್ಥಿಗಳಿಂದ ತಯಾರಿಸಲಾದ ಪದಾರ್ಥಗಳನ್ನು ಪರಿಶೀಲಿಸಿದರು. ತಿನಿಸಿನ ರುಚಿ, ಆರೋಗ್ಯಪರತೆ, ವಿನ್ಯಾಸ ಮತ್ತು ಸೃಜನಶೀಲತೆಯನ್ನು ಆಧರಿಸಿ ಮೌಲ್ಯಮಾಪನ ಮಾಡಲಾಯಿತು. ಸ್ಪರ್ಧಾರ್ಥಿಗಳಲ್ಲಿ ಕಂಡುಬಂದ ಉತ್ಸಾಹ ಮತ್ತು ಹೊಸತನವನ್ನು ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷರಾದ ಶ್ರೀಮತಿ ಶೋಭ ಜೆ ಅವರು ವಹಿಸಿದ್ದರು. ಮಾತನಾಡಿದ ಅವರು ಮಹಿಳೆಯರ ಪ್ರತಿಭೆಯನ್ನು ಗುರುತಿಸಲು ಮತ್ತು ಉತ್ತೇಜಿಸಲು ಇಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು. ಮಹಿಳೆಯರು ಕುಟುಂಬದ ಜೊತೆಗೆ ಸಮಾಜದ ಅಭಿವೃದ್ಧಿಗೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.
ಸ್ಪರ್ಧೆಯ ನಂತರ ಮಹಿಳೆಯರಿಗಾಗಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಆಟಗಳಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಕ್ರಮವು ಸ್ನೇಹಪೂರ್ಣ ಹಾಗೂ ಹರ್ಷಭರಿತ ವಾತಾವರಣದಲ್ಲಿ ಸಾಗಿತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಯುವ ಮುಖ್ಯ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದರು. ಈ ಕಾರ್ಯಕ್ರಮವು ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ಆರೋಗ್ಯಕರ ಜೀವನ ಶೈಲಿಗೆ ಪ್ರೇರಣೆ ನೀಡುವಲ್ಲಿ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಈ ಬೆಂಕಿರಹಿತ ಅಡುಗೆ ಸ್ಪರ್ಧೆ ಮಹಿಳೆಯರ ಪ್ರತಿಭೆ, ಶ್ರಮ ಮತ್ತು ಸೃಜನಶೀಲತೆಯ ಪ್ರದರ್ಶನವಾಗಿದ್ದು, ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯರ ಮಹತ್ವವನ್ನು ಮತ್ತೊಮ್ಮೆ ಸಾರಿತು. ಇಂತಹ ಕಾರ್ಯಕ್ರಮಗಳು ಮಹಿಳೆಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಪರಸ್ಪರ ಕಲಿಕೆ ಮತ್ತು ಅನುಭವ ಹಂಚಿಕೊಳ್ಳುವ ಉತ್ತಮ ಅವಕಾಶವನ್ನು ಒದಗಿಸುತ್ತವೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ವ್ಯಕ್ತವಾಯಿತು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘದ ಕಾರ್ಯದರ್ಶಿಯಾದ ರಾಣಿ ಮಹೇಶ್ ಹಾಗೂ ಪದಾಧಿಕಾರಿಗಳಾದ ಸುನಂದ, ಯೋಗಾವತಿ, ಸೀತಮ್ಮ, ಶೋಭ ಧನಂಜಯ್, ಅನಿತ, ವಿಜಯಲಕ್ಷ್ಮಿ, ಲಾವಣ್ಯ ಹಾಗೂ ಚಂದ್ರಕಲ ಸೇರಿದಂತೆ ಅನೇಕ ಸದಸ್ಯರು ಸಹಕರಿಸಿದರು. ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಅತ್ಯಂತ ಉತ್ಸಾಹಭರಿತವಾಗಿ ನಡೆಯಿತು.
ಮಹಿಳಾ ದಿನಾಚರಣೆಯ ಸಂಭ್ರಮಕ್ಕೆ ಮುನ್ನುಡಿ ಬರೆದ ಈ ಕಾರ್ಯಕ್ರಮ ಮಹಿಳೆಯರಲ್ಲಿ ಹೊಸ ಉತ್ಸಾಹ ಮೂಡಿಸಿ, ಆರೋಗ್ಯಕರ ಆಹಾರ ಪದ್ಧತಿಗಳ ಮಹತ್ವವನ್ನು ಸಮಾಜಕ್ಕೆ ತಿಳಿಸುವಲ್ಲಿ ಯಶಸ್ವಿಯಾಯಿತು.

