Latest News

ಮಾರ್ಚ್ 11ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತ ಸಾಧ್ಯತೆ: ಬೇಡಿಕೆ ಈಡೇರಿಕೆಗಾಗಿ ವೈದ್ಯರ ಹೋರಾಟ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸರ್ಕಾರಿ ವೈದ್ಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾರ್ಚ್ 11 ರಿಂದ ಹಂತ ಹಂತವಾಗಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈಮುಷ್ಕರದ  ಹೋರಾಟದಿಂದ ಸರ್ಕಾರಿ ಆಸ್ಪತ್ರೆಗಳ ಹೊರರೋಗಿಗಳ ಸೇವೆ (ಒಪಿಡಿ) ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಅಗತ್ಯ ಇದ್ದಲ್ಲಿ ತುರ್ತು ಚಿಕಿತ್ಸಾ ಸೇವೆಗಳು ಮಾತ್ರ ಮುಂದುವರಿಯಲಿವೆ ಎಂದು ಮುಷ್ಕರಕ್ಕೆ ಸಜ್ಜಾಗಿರುವ ವೈದ್ಯರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರ ಸಂಘಗಳು ಸಂಯುಕ್ತವಾಗಿ ಈ ನಿರ್ಧಾರ ಕೈಗೊಂಡಿದ್ದು, ಮಾರ್ಚ್ 11ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದಾರೆ. ಈ ಅವಧಿಯಲ್ಲಿ ಸಾಮಾನ್ಯ ರೋಗಿಗಳ ಪರೀಕ್ಷೆ ಮತ್ತು ಚಿಕಿತ್ಸೆ ಸೇವೆಗಳು ಸ್ಥಗಿತಗೊಳ್ಳಲಿದ್ದು, ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ರಾಜ್ಯ ಸರ್ಕಾರವು ವೈದ್ಯರ ಸಮಸ್ಯೆಗಳ ಕುರಿತು ಸ್ಪಂದಿಸದಿದ್ದರೆ ಮಾರ್ಚ್ 16ರಿಂದ ಮುಷ್ಕರವನ್ನು ಮತ್ತಷ್ಟು ಹೆಚ್ಚು ತೀವ್ರಗೊಳಿಸಿ ವೈದ್ಯರೆಲ್ಲರು ಕೆಲಸಕ್ಕೆ ಬರದೆಇರುವ  ಮೂಲಕ ಪ್ರತಿಭಟನೆ ನಡೆಸಲು ವೈದ್ಯರು ತೀರ್ಮಾನಿಸಿದ್ದಾರೆ. ಇದರಿಂದ ರಾಜ್ಯದ ಸಾಮನ್ಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:- ಮೈಸೂರು ಸಿಸಿಬಿ ಪೊಲೀಸರ ದಾಳಿ: ರೂ.10.30 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ವಶ – 4 ಆರೋಪಿಗಳ ಬಂಧನ

ಈ ಕುರಿತು ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರನಾಥ್ ಮೇಟಿ ಅವರು, ಆರೋಗ್ಯ ಇಲಾಖೆಯಲ್ಲಿ ಹಲವು ಸಮಸ್ಯೆಗಳು ಮುಂದುವರಿದಿವೆ ಎಂದು ರಾಜ್ಯ ಸರ್ಕಾರವನ್ನು ಆರೋಪಿಸಿದರು. ವೈದ್ಯರ ನೇಮಕಾತಿ ಮತ್ತು ವರ್ಗಾವಣೆ ಕಾಲಕಾಲಕ್ಕೆ ಪ್ರಕ್ರಿಯೆಗಳು ಸರಿಯಾಗಿ ನಡೆಯುತ್ತಿಲ್ಲ. ಹಲವು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಆಸ್ಪತ್ರೆಗಳಿಗೆ ಅಗತ್ಯವಾದ ಔಷಧಗಳ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ ಎಂದು ಅವರು ದೂರಿದರು. ಕೆಲವೊಮ್ಮೆ ಔಷಧಗಳ ಕೊರತೆ ಇದ್ದರೂ ದಾಖಲೆಗಳಲ್ಲಿ ಲಭ್ಯವಿರುವಂತೆ ತೋರಿಸಲಾಗುತ್ತಿದೆ. ಸರ್ಕಾರದ ನಿಯಮದ ಪ್ರಕಾರ ರೋಗಿಗಳಿಗೆ ಹೊರಗಡೆ ಔಷಧ ಖರೀದಿಸಲು ಚೀಟಿ ನೀಡಬಾರದು ಎಂಬ ನಿಯಮ ಇದ್ದರೂ, ಆಸ್ಪತ್ರೆಯಲ್ಲಿ ಔಷಧ ಸಿಗದ ಕಾರಣ ಅನಿವಾರ್ಯವಾಗಿ ಹೊರಗೆ ಬರೆಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ:- ಕಾಂಗ್ರೆಸ್ ಕಾರ್ಯಕರ್ತರಿಗೆ ದ್ರೋಹವೆಂದ ಅಮಿತ್ ದೇವರಹಟ್ಟಿ ಆರೋಪ

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಮಾತನಾಡಿ, ವೈದ್ಯರ ಹೋರಾಟಕ್ಕೆ ತಮ್ಮ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಅಧಿಕಾರಿಗಳು ವೈದ್ಯರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಆರೋಗ್ಯ ಇಲಾಖೆ ರಾಜ್ಯದ ಪ್ರಮುಖ ಇಲಾಖೆಗಳಲ್ಲೊಂದು ಆಗಿದ್ದು, ವೈದ್ಯರ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವುದು ಅಗತ್ಯ ಎಂದು ಹೇಳಿದರು.

ವೈದ್ಯರ ಬೇಡಿಕೆಗಳನ್ನು ಸರ್ಕಾರ ಶೀಘ್ರವಾಗಿ ಪರಿಗಣಿಸಿ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳು ಮುಂಚಿತವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಒಳಿತು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಫೆಬ್ರುವರಿ 30 ಸಿನಿಮಾ ಬಿಡುಗಡೆಗೆ ಉತ್ತಮ ಸ್ಪಂದನೆ: ನಿರ್ದೇಶಕ ಎಂ.ಎಲ್. ಪ್ರಶಾಂತ್

Contact us for classifieds and ads : +91 9742974234