
ಮೈಸೂರು :- ನಗರದ ಹೊಸಮಠದ ವಾತ್ಸಲ್ಯ ಬಿ.ಎಡ್. ಕಾಲೇಜಿನಲ್ಲಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂಥ್ ಆರ್ಗನೈಜೇಷನ್(AIDYO)ನಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್.ಆಸ್ಪತ್ರೆಯ ಮನೋವೈದ್ಯ ಡಾ.ಎಂ.ಕಿಶೋರ್ ರವರು. ‘ತಾರುಣ್ಯದ ತಲ್ಲಣಗಳು-ತಜ್ಞರ ವಿಶ್ಲೇಷಣೆ ‘ ಪುಸ್ತಕವನ್ನು ಬಿಡುಗಡೆ ಮಾಡಿ ಉಪನ್ಯಾಸ ನೀಡಿದರು.

ಮಕ್ಕಳು ಮತ್ತು ಯುವಜನರು ಮಾದಕ ವಸ್ತುಗಳು, ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಗೀಳಿಗೆ ತುತ್ತಾಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿವೆ. ಇದರಿಂದ ಅವರನ್ನು ಹೊರತರುವಲ್ಲಿ ಶಿಕ್ಷಣ ವ್ಯವಸ್ಥೆ ಸೋತಿದೆ. ಇಂತಹ ವ್ಯಸನಗಳಿಗೆ ಮನೋರಂಜನ ಕ್ಷೇತ್ರದ ಪ್ರಭಾವವು ಹೆಚ್ಚಿದ್ದು ಅದನ್ನು ತಡೆಯಬೇಕಿದೆ. ಮೊಬೈಲ್ ತಯಾರಿಕೆಗೆ ಕೋಟ್ಯಂತರ ಹಣ ಹೂಡುತ್ತಿರುವ ಅಮೆಜಾನ್, ಗೂಗಲ್ ಮುಂತಾದ ಕಂಪನಿಗಳು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿವೆ. ಸರ್ಕಾರ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಲೇಶಿಯಾದಲ್ಲಿ 16 ವರ್ಷದ ಕೆಳಗಿರುವ ಮಕ್ಕಳಿಗೆ ಮೊಬೈಲನ್ನು ನಿರ್ಬಂಧಿಸಿರುವುದು ಒಳ್ಳೆಯ ನಿರ್ಧಾರ. ಆನ್‌ಲೈನ್ ಪ್ರಪಂಚದಿಂದ ಮನುಷ್ಯರಲ್ಲಿ ಮೃಗಿಯ ಪ್ರವೃತ್ತಿ ಹೆಚ್ಚುತ್ತಿದೆ. ಸಮಾಜದ ವಾತಾವರಣ ಹಾಳಾಗಿರುವುದರಿಂದ ಯುವಜನರಲ್ಲಿ ಮಾನಸಿಕ ರೋಗಗಳು, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹಾಗಾಗಿ ಒಳ್ಳೆಯ ಸಾಮಾಜಿಕ ವಾತಾವರಣ ನಿರ್ಮಿಸಬೇಕು.ಮಕ್ಕಳಿಗೆ ಸರಿ, ತಪ್ಪುಗಳನ್ನು ಹೇಳಿಕೊಡಬೇಕು.ಅವರಲ್ಲಿ ಮಾನವೀಯ ಗುಣಗಳು, ಸೇವಾ ಮನೋಭಾವ ಬೆಳೆಸಬೇಕು. ಅವರನ್ನು ಪ್ರೀತಿ, ಆತ್ಮೀಯತೆ ಮತ್ತು ಸ್ನೇಹಮಯ ಬದುಕಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
200 ವರ್ಷಗಳಲ್ಲಿ ಇಡೀ ವಿಶ್ವದ ಮಹಿಳೆಯರ ಅಭಿವೃದ್ಧಿಗೆ ಕಾರಣವಾಗಿರುವ ಎರಡು ವಿಷಯಗಳೆಂದರೆ ಶಿಕ್ಷಣ ಮತ್ತು ಗರ್ಭನಿರೋಧಕಗಳ ಲಭ್ಯತೆ.ಇದು ಸ್ವತಂತ್ರ ನಿರ್ಧಾರಗಳಿಗೆ, ದೇಹದ ಮೇಲಿನ ಹಕ್ಕಿನ ರಕ್ಷಣೆಗೆ ಸಹಕರಿಸಿವೆ. ಇಂದು ಕೆಲವು ದೇಶಗಳಲ್ಲಿ ಇದರ ವಿರುದ್ಧ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟರು.
ನಂತರ ಮಾತನಾಡಿದ ಸಂಘಟನೆಯ ಮಾಜಿ ಅಧ್ಯಕ್ಷರಾದ ಎಂ.ಉಮಾದೇವಿಯವರು, ‘ವ್ಯಸನಗಳಿಂದ ಹೊರಬರಲು ಮಹಾನೀಯರ ಬಗ್ಗೆ ಓದಬೇಕು. ಉನ್ನತ ವ್ಯಕ್ತಿತ್ವ, ಮೌಲ್ಯಗಳು ಮತ್ತು ಆದರ್ಶಗಳನ್ನು ರೂಢಿಸಿಕೊಳ್ಳಬೇಕು. ಸಮಾಜವನ್ನು ಸರಿದಾರಿಗೆ ತರಲು ‘ತಾರುಣ್ಯದ ತಲ್ಲಣಗಳು’ ಪುಸ್ತಕದ ಓದು ಸಹಕಾರಿಯಾಗುತ್ತದೆ’ ಎಂದರು.
ವಾತ್ಸಲ್ಯ ಬಿ.ಎಡ್ ಕಾಲೇಜು ಪ್ರಾಂಶುಪಾಲರು ಮಹೇಶ್ ದಳಪತಿ, ಸಂಯೋಜಕ ಜಯ ಪ್ರಕಾಶ್, ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಸುನಿಲ್.ಟಿ.ಆರ್, ಕಾರ್ಯದರ್ಶಿ ಸುಮ.ಎಸ್ ಹಾಜರಿದ್ದರು.

