Latest News

ಕರ್ನಾಟಕ ರಾಜ್ಯದ  ಆರ್ಥಿಕ ಸ್ಥಿತಿಗತಿ, ಯೋಜನೆ ವೆಚ್ಚಗಳ ಬಗ್ಗೆ ಟೀಕೆ: ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ

ಮೈಸೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಆಡಳಿತದ ಟೀಕೆ

ಮೈಸೂರು:-  ಇಂದು ನಗರದ ಅತಿಥಿಗೃಹದಲ್ಲಿ ಮಾತಾನಾಡಿದ ಕೇಂದ್ರ ಸಚಿವ  ರಾಜ್ಯದ ಆರ್ಥಿಕ ಪರಿಸ್ಥಿತಿ, ಪ್ರಮುಖ ಅಭಿವೃದ್ಧಿ ಯೋಜನೆಗಳ ವೆಚ್ಚ ಹಾಗೂ ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಬೇರೆ ಬೇರೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ನಿರ್ವಹಣೆ, ಯೋಜನೆಗಳ ವೆಚ್ಚ ಏರಿಕೆ, ರಾಜಕೀಯ ಹೊಂದಾಣಿಕೆ ಹಾಗೂ ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳನ್ನು ಉಲ್ಲೇಖಿಸಿದರು.

ಕರ್ನಾಟಕ ರಾಜ್ಯದ ಆರ್ಥಿಕ ನಿರ್ವಹಣೆ ಕುರಿತ ಕುಮಾರಸ್ವಾಮಿ ಟೀಕೆ

ಕರ್ನಾಟಕ ರಾಜ್ಯದ ಆಡಳಿತದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಸರ್ಕಾರದ ಹಣಕಾಸು ನಿರ್ವಹಣೆ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸಾರ್ವಜನಿಕ ಯೋಜನೆಗಳಿಗೆ ಹಣ ಒದಗಿಸುವ ಕ್ರಮಗಳಲ್ಲಿ ಸಮರ್ಪಕ ಯೋಜನೆ ಕಾಣಿಸುತ್ತಿಲ್ಲ ಎಂದು ಅವರು ತಿಳಿಸಿದರು. ವಿಶೇಷವಾಗಿ ನಗರ ಮೂಲಸೌಕರ್ಯ ಯೋಜನೆಗಳಿಗಾಗಿ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಭಾರ ಹಾಕಲಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿನಗರ ಸಾರಿಗೆ ಯೋಜನೆಗಳ ವೆಚ್ಚ ನಿರ್ವಹಣೆಯ ಬಗ್ಗೆ ಅವರು ಮಾತನಾಡುತ್ತಾ, ಪ್ರಯಾಣ ದರ ಏರಿಕೆ ಮತ್ತು ಬೆಲೆ ಬದಲಾವಣೆಗಳು ತೀರಾ ಸಾಮಾನ್ಯ ಜನರ ಜೀವನಕ್ಕೆ ಪರಿಣಾಮ ಬೀರುತ್ತಿವೆ ಎಂದು ಹೇಳಿದರು. ಈ ಬಗ್ಗೆ ಕೇಂದ್ರ ಸರ್ಕಾರವು ತನ್ನ ಅಭಿಪ್ರಾಯವನ್ನು ಈಗಾಗಲೇ ರಾಜ್ಯಕ್ಕೆ ತಿಳಿಸಿರುವುದಾಗಿ ಅವರು ತಿಳಿಸಿದರು.

ಕರ್ನಾಟಕದಲ್ಲಿ ಎತ್ತಿನಹೊಳೆ ಯೋಜನೆ ಬಗ್ಗೆ ಪ್ರಶ್ನೆಗಳು

ರಾಜ್ಯದಲ್ಲಿ ಎತ್ತಿನಹೊಳೆ ಯೋಜನೆಯ ಕುರಿತು ಮಾತನಾಡಿದ ಅವರು, ಯೋಜನೆಯ ಪ್ರಾರಂಭಿಕ ವೆಚ್ಚ ಮತ್ತು ಈಗಿನ ಅಂದಾಜು ವೆಚ್ಚದ ನಡುವಿನ ವ್ಯತ್ಯಾಸವನ್ನು ತಿಳಿಸಿದರು . ಮೊದಲು  ಕಡಿಮೆ ವೆಚ್ಚದಲ್ಲಿ ರೂಪುಗೊಂಡ ಯೋಜನೆ ತದನಂತರ ಹಲವು ಪಟ್ಟು ಹೆಚ್ಚಾಗಿರುವುದು ಗಮನಾರ್ಹ ಎಂದು ಹೇಳಿದರು.

ಈ ಸಂಬಂಧ ಗುತ್ತಿಗೆ ಪ್ರಕ್ರಿಯೆ, ಕಾರ್ಯಗತಗೊಳಿಸುವಿಕೆ ಹಾಗೂ ವೆಚ್ಚ ನಿಯಂತ್ರಣ ಕುರಿತಾಗಿ ಸ್ಪಷ್ಟತೆ ಬೇಕೆಂದು ಅಭಿಪ್ರಾಯಪಟ್ಟರು. ಲೆಕ್ಕಪತ್ರ ಪರಿಶೀಲನಾ ವರದಿಗಳತ್ತ ಗಮನ ಹರಿಸಬೇಕೆಂದು ಅವರು ಸೂಚಿಸಿದರು. ಈ ಯೋಜನೆ ಕುರಿತ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಸ್ಥಳೀಯ ರಾಜಕೀಯ ಮತ್ತು ಚುನಾವಣಾ ಬಗ್ಗೆಚರ್ಚೆ

ರಾಜ್ಯದಲ್ಲಿನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷ ರಾಜಕೀಯ ಹೊಂದಾಣಿಕೆ ಕುರಿತಂತೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. ಜೆಡಿಎಸ್ ಪಕ್ಷದೊಳಗಿನ ಪರಿಸ್ಥಿತಿ ಸ್ಥಿರವಾಗಿದ್ದು, ನಮ್ಮ ಪಕ್ಷದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ನಮ್ಮಸಹಕಾರ ಮುಂದುವರಿಯುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಅವರು ನೇರ ಉತ್ತರ ನೀಡದೆ, ರಾಜಕೀಯ ಭವಿಷ್ಯ ಕುರಿತು ಊಹಾಪೋಹ ಮಾಡುವುದು ತಮ್ಮ ಕೆಲಸವಲ್ಲ ಎಂದು ಪ್ರತಿಕ್ರಿಯಿಸಿದರು. ಕೇಂದ್ರ ಸಚಿವರಈ ಹೇಳಿಕೆ ರಾಜಕೀಯ ವಲಯದಲ್ಲಿ ವಿವಿಧ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಯಿತು.

ದೇಶದ ಕೇಂದ್ರ ಬಜೆಟ್ ಮತ್ತು ನೀರುದ್ಯೊಗಿಗಳಿಗೆ ಉದ್ಯೋಗಾವಕಾಶ

ಕೇಂದ್ರ ಬಜೆಟ್ ಕುರಿತು ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ಉದ್ಯೋಗಾವಕಾಶ ಹೆಚ್ಚಿಸುವ ಸಲುವಾಗಿ ಹಲವು ಕ್ರಮಗಳನ್ನು ಕೇಂದ್ರ ಬಜೆಟ್ ಒಳಗೊಂಡಿದೆ ಎಂದು ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ಕೆಲವು ಔಷಧಿಗಳಿಗೆ ತೆರಿಗೆ ಸಡಿಲಿಕೆ ನೀಡಲಾಗಿದೆ ಎಂದು ತಿಳಿಸಿದರು. ಕೈಗಾರಿಕಾ ವಲಯಕ್ಕೂ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ವಿವರಿಸಿದರು.

ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ ಎಂಬ ಆರೋಪಗಳನ್ನು ಅವರು ತಳ್ಳಿ ಹಾಕಿದರು. ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಮೀಸಲು ಇಡಲಾಗಿದೆ ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಕೈಗಾರಿಕಾ ಯೋಜನೆ

ಮಂಡ್ಯ ಜಿಲ್ಲೆಯಲ್ಲಿ ಆಟೋಮೊಬೈಲ್ ಸಂಶೋಧನಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಅವರು ವಿಶೇಷವಾಗಿ ಪ್ರಸ್ತಾಪಿಸಿದರು. ಈ ಯೋಜನೆಗೆ ಅಗತ್ಯ ಭೂಮಿ ಒದಗಿಸಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಹೇಳಿದರು. ಜಿಲ್ಲಾಡಳಿತಕ್ಕೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೈಗಾರಿಕಾ ವಲಯ ವಿಸ್ತರಣೆಗೆ ಕೇಂದ್ರ ಬದ್ಧವಾಗಿದೆ ಎಂದು ಅವರು ಹೇಳಿದರು. ಈ ಯೋಜನೆಯ ಮೂಲಕ ಸ್ಥಳೀಯ ಮಟ್ಟದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವ್ಯಕ್ತಪಡಿಸಿದರು.

ರಾಜ್ಯ ಮತ್ತು ಕೇಂದ್ರದ ನಡುವೆ ಸಮನ್ವಯ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ಅಭಿವೃದ್ಧಿ ಯೋಜನೆಗಳ ಬಗ್ಗೆ ಸಂವಾದ ನಡೆಯಬೇಕು ಎಂದು ಹೇಳಿದರು. ಕೇಂದ್ರದ ವಿವಿಧ ಯೋಜನೆಗಳನ್ನು ರಾಜ್ಯಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕೃಷಿ ಉತ್ಪನ್ನ ಬೆಲೆ ಸ್ಥಿರತೆ ಸೇರಿದಂತೆ ಕೆಲವು ವಿಚಾರಗಳಲ್ಲಿ ಕೇಂದ್ರ ನೀಡಿದ ಬೆಂಬಲವನ್ನು ಅವರು ಉದಾಹರಿಸಿದರು. ಪರಸ್ಪರ ದೋಷಾರೋಪಣೆ ಬಿಟ್ಟು ಸಹಕಾರದ ಮನೋಭಾವ ಅಗತ್ಯ ಎಂದು ಹೇಳಿದರು.

ಪಕ್ಷ ರಾಜಕೀಯ ಕುರಿತು ಏನು ಪ್ರತಿಕ್ರಿಯಿಸದ ಕೇಂದ್ರ ಸಚಿವರು

ಚಾಮುಂಡೇಶ್ವರಿ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಕೆಲವು ನಾಯಕರ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದರು. ಪಕ್ಷದ ಶಿಸ್ತು ಮತ್ತು ನಿಷ್ಠೆ ಪ್ರಮುಖವಾಗಿದ್ದು, ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರ ಬಗ್ಗೆ ಪಕ್ಷ ತನ್ನ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಈ ಕ್ಷೇತ್ರದೊಂದಿಗೆ ತಮ್ಮ ಭಾವನಾತ್ಮಕ ನಂಟು ಇದೆ ಎಂದು ಹೇಳಿದ ಅವರು, ಮುಂದಿನ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳು ಸಿದ್ಧರಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಭವಿಷ್ಯದ ರಾಜಕೀಯ ನಿರೀಕ್ಷೆ

ಮುಂದಿನ ಚುನಾವಣೆಯ ಕುರಿತು ಮಾತನಾಡಿದ ಅವರು, ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆ ಇದೆ ಎಂದು ಹೇಳಿದರು. ಪಕ್ಷ ಸಂಘಟನೆ ಬಲಪಡಿಸುವ ಕೆಲಸ ಮುಂದುವರಿಯುತ್ತಿದೆ ಎಂದು ಹೇಳಿದರು.

Contact us for classifieds and ads : +91 9742974234