
ಮೈಸೂರು:- ನಗರದ ಕಲಾಮಂದಿರದಲ್ಲಿ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಕಾರ್ಯಕ್ರಮದ ಎರಡನೇ ದಿನವಾದ ಇಂದು ‘ಅಯಾಮೋತ್ಸವ – ಸಂಗೀತ, ನೃತ್ಯ, ನಾಟಕಗಳ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕಾಳಚನ್ನೇಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಆಯಾಮ ಸಂಸ್ಥೆಯ ಸ್ಥಾಪಕಿ ಹಾಗೂ ನಿರ್ದೇಶಕಿ ಡಾ. ಶಾಂಭವಿ ಸ್ವಾಮಿ ಅವರು ಹಲವು ವರ್ಷಗಳಿಂದ ಆಯಾಮ ಸಂಸ್ಥೆಯ ಮೂಲಕ ಗ್ರಾಮೀಣ ಹಾಗೂ ನಗರ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತವನ್ನು ಕಲಿಸುವ ಮೂಲಕ ಸಂಗೀತ, ನಾಟಕ, ನೃತ್ಯಗಳ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಬೆಳೆಸುವಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಆಯಾಮ ಸಂಸ್ಥೆ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಪ್ರೊ. ಕಾಳಚನ್ನೇಗೌಡ ಅವರು ಪ್ರಶಂಸಿಸಿದರು.

ಮಾನವ ಜೀವನದ ಬೆಳವಣಿಗೆಯನ್ನು ವಿವರಿಸಿದ ಅವರು, ಮನುಷ್ಯ ಅಲೆಮಾರಿಯಾಗಿ ಬದುಕುತ್ತಿದ್ದ ಕಾಲದಿಂದ ಕಾಲಕ್ಕೆ ನೆಲೆ ನಿಂತು ಕೃಷಿ ಕಲಿತ ನಂತರ ಕಲೆ, ಸಂಗೀತ ಮತ್ತು ನೃತ್ಯಗಳ ಕಡೆ ಗಮನ ಹರಿಸಿದ್ದಾನೆ ಎಂದು ಹೇಳಿದರು. ಬುಡಕಟ್ಟು ಸಮಾಜದಿಂದ ಇಂದಿನ ಸಮಾಜದವರೆಗೂ ವಿಭಿನ್ನ ಕಲಾ ಪ್ರಕಾರಗಳು ಬೆಳೆಯುತ್ತ ಬಂದಿದ್ದು, ಪ್ರತಿ ಪ್ರದೇಶಕ್ಕೆ ಅನುಗುಣವಾಗಿ ಬಳಸುವ ವಾದ್ಯೋಪಕರಣಗಳೂ ವಿಭಿನ್ನವಾಗಿವೆ ಎಂದು ತಿಳಿಸಿದರು. ಹಸಿವು ತೀರಿಸಿಕೊಂಡ ನಂತರ ಮನರಂಜನೆ ಮಾನವನ ಜೀವನದಲ್ಲಿ ಅತ್ಯಂತ ಮುಖ್ಯವಾದ ಅಂಶವಾಗಿದೆ ಎಂದರು.

ನಂತರ ಮಾತನಾಡಿದ ರಂಗಭೂಮಿ ಹಾಗೂ ಚಲನಚಿತ್ರ ನಟ ಬಲರಾಜ್ ವಾಡಿ ಅವರು, ಇಂದಿನ ಯುವಕರಲ್ಲಿ ಬದ್ಧತೆ (ಕಮಿಟ್ಮೆಂಟ್) ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಮೊಬೈಲ್ ಯುಗದಲ್ಲಿ ಯುವಕರು ಗಾಳಿಪಟಕ್ಕೆ ಸೂತ್ರವಿಲ್ಲದಂತೆ ಚಲಿಸುತ್ತಿದ್ದು, ಅವರನ್ನು ಒಳ್ಳೆಯ ದಾರಿಗೆ ತರಲು ಕಲೆ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಹೇಳಿದರು.

ಕಾರ್ಯಕ್ರಮದ ಪ್ರಸ್ತಾವಿಕವಾಗಿ ಡಾ. ಶಾಂಭವಿ ಸ್ವಾಮಿ ಅವರು ಆಯಾಮ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಆಯಾಮದ ಅಧ್ಯಕ್ಷರಾದ ಸ. ವೆ. ರ. ಸ್ವಾಮಿ, ಸದಸ್ಯರಾದ ಶ್ರೀಮತಿ ಲಕ್ಷ್ಮಮ್ಮ, ನಿರಂತರದ ಶ್ರೀನಿವಾಸ್ ಪಾಲಳ್ಳಿ, ಪೋಷಕರು ಹಾಗೂ ನೂರಾರು ಪ್ರೇಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ನ ಮಕ್ಕಳಿಂದ, ಡಾ. ಶಾಂಭವಿ ಸ್ವಾಮಿ ನಿರ್ದೇಶನದ ‘ಜನನಿ’ ನೃತ್ಯರೂಪಕ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿತು


