Latest News

ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಸರ್ಕಾರಿ ಶಾಲೆಯ 500 ಮಕ್ಕಳಿಗೆ ನೋಟ್ಬುಕ್ ಹಾಗೂ  ದಿನಸಿ ಕಿಟ್ ವಿತರಣೆ

ಮೈಸೂರು :-  ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶ್ರೀ ಬಾಲ ಮಂಜುನಾಥಸ್ವಾಮಿಗಳಿಗೆ ಶ್ರೀ ವಿದ್ಯಾನಂದ ಸ್ವಾಮಿಗಳು ಎಂಬ ನಾಮವನ್ನು ಅನುಗ್ರಹಿಸಿದ ಪುಣ್ಯ ಕಾರ್ಯಕ್ರಮದ ಸ್ಮರಣಾರ್ಥ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು ಜರುಗಿದವು.

ಗುರುವಾರ ಬೆಳಗ್ಗೆ ಹೂಟಗಳ್ಳಿಯಲ್ಲಿರುವ ಕನ್ನಡಾಂಬೆ ರಕ್ಷಣಾ ವೇದಿಕೆ ಕಚೇರಿ ಎದುರು ಅಧ್ಯಕ್ಷ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಿಧ ಸರ್ಕಾರಿ ಶಾಲೆಗಳ ೫೦೦ಕ್ಕೂ ಹೆಚ್ಚು ಮಕ್ಕಳಿಗೆ ನೋಟ್ಬುಕ್ ವಿತರಣೆ ಮಾಡಲಾಯಿತು. ಅಲ್ಲದೇ ಎರಡು ವೃದ್ಧಾಶ್ರಮಗಳಿಗೆ ಆಹಾರ, ದಿನಸಿ ಕಿಟ್ಗಳ ವಿತರಣೆ, ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣಾ ಶಿಬಿರಗಳು ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು.

ಸಮಾರಂಭವನ್ನು ಹೆಸರಾಂತ ಸಾಹಿತಿ ಜಯಪ್ಪ ಹೊನ್ನಾಳಿ ಉದ್ಘಾಟಿಸಿ ಮಾತನಾಡಿ, ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶ್ರೀ ಬಾಲ ಮಂಜುನಾಥಸ್ವಾಮಿಗಳಿಗೆ ಶ್ರೀ ವಿದ್ಯಾನಂದ ಸ್ವಾಮಿಗಳು ಎಂಬ ಅಭಿದಾನ ಪ್ರಧಾನ ಕಾರ್ಯಕ್ರಮದ ಸ್ಮರಣಾರ್ಥ 500ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ನೋಟ್ಬುಕ್ ವಿತರಣೆ, ಆರೋಗ್ಯ ತಪಾಸಣೆ, ಕಣ್ಣು ತಪಾಸಣೆ, ವೃದ್ಧಾಶ್ರಮಗಳಿಗೆ ದಿನಸಿಕಿಟ್ ವಿತರಣೆ ಮತ್ತು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರು ಇಂದು ಸಮಾಜಪರ, ಸಮಷ್ಠಿಪರ ಲೋಕೋಪಕಾರ, ಶಿಸ್ತುಬದ್ಧ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಷಯ, ಕನ್ನಡಾಂಬೆ ರಕ್ಷಣಾ ವೇದಿಕೆ ಕನ್ನಡಪರ ಸಂಘಟನೆಗಳಿಗೆ ಮಾದರಿ ಎನಿಸಿದೆ ಎಂದರು.

ಅಭಿದಾನ ಪ್ರಧಾನ ಪಡೆದ ಸುಂದರ ಸ್ಮೃತಿ ಮಧುರ ಕ್ಷಣದ ದ್ಯೋತಕವಾಗಿ ಇದು ಅರ್ಥಪೂರ್ಣ ಕಾರ್ಯಕ್ರಮ, ಸಮಾಜಕ್ಕೆ ಉಪಕಾರಿಯಾಗುವ ಮಾದರಿ ಕಾರ್ಯಕ್ರಮ, ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಪ್ರಜ್ಞೆಯೆ ಪರಮಾತ್ಮ ಎನ್ನುವ ಕಾಲದಲ್ಲಿ ನಾವಿದ್ದೇವೆ,

ಸಂತರು ಎಂದರೆ ಇಡೀ ಸಮಾಜವೇ ತನ್ನದೆಂದು ಕೊಂಡವರು, ಲೋಕ ಸಂಸಾರಿ, ಕತ್ತಲೆಯಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವವರು,

ಶೃಂಗೇರಿ ಶಾರದಾ ಪೀಠವು 1200 ವರ್ಷಗಳ ಹಳೆಯ ಪ್ರಾಚೀನ ಮಠವಾಗಿದ್ದು, ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ದಕ್ಷಿಣ ದಿಕ್ಕಿನದು ಇದಾಗಿದೆ. ಆದಿ ಶಂಕರಾಚಾರ್ಯರು ಇಲ್ಲಿಯೇ 12 ವರ್ಷಗಳ ಕಾಲ ವಾಸಿಸಿ, ಅದ್ವೈತ ವೇದಾಂತವನ್ನು ಪ್ರಚಾರ ಮಾಡಿದರು. ಇಂತಹ ಪ್ರಾಚೀನ ಇತಿಹಾಸವುಳ್ಳ ಮಠದ ಗುರುಗಳಾದ ಶ್ರೀ ವಿಧುಶೇಖರ ಭಾರತೀ ಅವರು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ದೇವಾಲಯದ ಶ್ರೀಗಳಾದ ಶ್ರೀ ಬಾಲಮಂಜುನಾಥ ಸ್ವಾಮಿಗಳಿಗೆ ಶ್ರೀ ವಿದ್ಯಾನಂದ ಸ್ವಾಮಿಗಳು ಎಂಬ ನಾಮಕರಣ ಮಾಡಿದ ಹಿನ್ನಲೆಯಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಇಂತಹ ಸಮಾಜಮುಖಿ ಕಾರ್ಯಕ್ರಮ ನಡೆಸಿರುವುದು ಸ್ವಾಗತಾರ್ಹ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜ ಸೇವಕ ರಘುರಾಮ್ ವಾಜಿಪೇಯಿ ಮಾತನಾಡಿ, ಶೃಂಗೇರಿ ಶ್ರೀಗಳ ಪ್ರೇರಣೆಯಿಂದ ಸನ್ಯಾಸ ಧೀಕ್ಷೆ ಪಡೆದ ಬಾಲ ಮಂಜುನಾಥ ಸ್ವಾಮಿಗಳು ಇದೀಗ ಶ್ರೀ ವಿಧುಶೇಖರ ಭಾರತೀ ಶ್ರೀಗಳಿಂದ ಶ್ರೀ ವಿದ್ಯಾನಂದ ಸ್ವಾಮಿ ಎಂಬ ಅಭಿದಾನ ಪಡೆದ ಹಿನ್ನಲೆ ಕನ್ನಡಾಂಬೆ ರಕ್ಷಣಾ ವೇದಿಕೆ ಯಾವುದೇ ಆಡಂಬರವಿಲ್ಲದೇ, ಹೋಮ ಹವನಕ್ಕೆ ಹಣ ಖರ್ಚು ಮಾಡದೆ, 500 ಮಕ್ಕಳಿಗೆ ನೋಟ್ಬುಕ್ ವಿತರಣೆ ಮಾಡಿದ್ದು ಅತ್ಯುತ್ತಮ ಕೆಲಸ ಎಂದರು.

ವಿಸ್ತಾರ ಆಸ್ಪತ್ರೆ ಆರೋಗ್ಯ ತಪಾಸಣೆ, ವಾಸನ್ ಐ ಕೇರ್ನಿಂದ ಕಣ್ಣಿನ ತಪಾಸಣೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಪೊಲೀಸ್ ಸೊಸೈಟಿ ಅಧ್ಯಕ್ಷರಾದ ಎಸ್.ರವಿ, ಹೂಟಗಳ್ಳಿ ಚಿಕ್ಕಣ್ಣ, ಲಲಿತಾ ನಾಗೇಶ್, ರವಿಗೌಡ, ಹರೀಶ್ ಯಾದವ್, ಕರೀಗೌಡ, ಮಹಿಳಾ ಘಟಕದ ಅಧ್ಯಕ್ಷರಾದ ತಾರ, ಸಿಂಧುವಳ್ಳಿ ಶಿವಕುಮಾರ್, ಕಿಕ್ಕೇರಿ ಕಿರಣ, ಮಂಜು ತೇಜೂರ್, ಹುಣಸೂರು ಪರಮೇಶ್, ಲೂಯೀಸ್, ಹೊನ್ನೇಗೌಡ, ರಶ್ಮೀಸಿಂಗ್, ಸೌಭಾಗ್ಯ, ವಿಷ್ಣು, ಶಿವಲಿಂಗಯ್ಯ, ಪುಟ್ಟಸ್ವಾಮಿ, ಜಯಲಕ್ಷ್ಮಿ, ಹರೀಶ್, ವತ್ಸಲ, ಮುಖ್ಯ ಶಿಕ್ಷಕರಾದ ಶಿವಪ್ಪ, ಸತೀಶ್, ಮಧು ಮುಂತಾದವರು ಇದ್ದರು.

 

ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಸರ್ಕಾರಿ ಶಾಲೆಯ 500 ಮಕ್ಕಳಿಗೆ ನೋಟ್ಬುಕ್ ವಿತರಣೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ದಿನಸಿ ಕಿಟ್ ವಿತರಣೆ, ಆರೋಗ್ಯ ತಪಾಸಣೆ, ಕಣ್ಣು ತಪಾಸಣೆ ಮತ್ತು ಅನ್ನಸಂತರ್ಪಣೆ ಮಾಡುವ ಮೂಲಕ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶ್ರೀ ಬಾಲ ಮಂಜುನಾಥಸ್ವಾಮಿಗಳಿಗೆ ಶ್ರೀ ವಿದ್ಯಾನಂದ ಸ್ವಾಮಿಗಳು ಎಂಬ ನಾಮವನ್ನು ಅನುಗ್ರಹಿಸಿದ ಪುಣ್ಯ ಕಾರ್ಯಕ್ರಮದ ಸ್ಮರಣೆ ಮಾಡಿದ್ದೇವೆ. ಈ ಸಾಮಾಜಿಕ ಸೇವಾ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ಬಿ.ಬಿ.ರಾಜಶೇಖರ್, ಅಧ್ಯಕ್ಷರು, ಕನ್ನಡಾಂಬೆ ರಕ್ಷಣಾ ವೇದಿಕೆ

Contact us for classifieds and ads : +91 9742974234