ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿರಸಿ ನಗರದ ಕೆಹೆಚ್ಬಿ ಕಾಲೋನಿಯಲ್ಲಿ ಹೃದಯ ಕಲುಕುವ ಹ* ಪ್ರಕರಣ ಬೆಳಕಿಗೆ ಬಂದಿದೆ. ಮೃತ ಪತ್ನಿಯ ಸಹೋದರಿಯನ್ನು ಮದುವೆಯಾಗಲು ಸಿದ್ಧರಾಗಿದ್ದ ವೈದ್ಯರನ್ನು ಅಜ್ಞಾತರು ಬರ್ಬರವಾಗಿ ಹ*ಗೈದಿರುವ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಹ*ಯಾದವರು ಡಾ. ರಮೇಶ್ ಕಲಗುಟಕರ್ (51) ಎಂದು ಗುರುತಿಸಲಾಗಿದೆ. ಎಂಟು ತಿಂಗಳ ಹಿಂದೆ ಅವರ ಪತ್ನಿ ಸಾವನ್ನಪ್ಪಿದ್ದು, ಆ ಬಳಿಕ ಕುಟುಂಬದ ಒಪ್ಪಿಗೆ ಪಡೆದು ಪತ್ನಿಯ ಸಹೋದರಿಯನ್ನೇ ವಿವಾಹವಾಗಲು ನಿರ್ಧರಿಸಿದ್ದರು. ಇದೇ ಸೋಮವಾರ (ಏಪ್ರಿಲ್ 20) ಮದುವೆ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಮದುವೆ ಸಿದ್ಧತೆಗಳು ಜೋರಾಗಿದ್ದವು.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಡಾ. ರಮೇಶ್ ಅವರು ಮದುವೆಗಾಗಿ ಬ್ಯಾಂಕ್ನಿಂದ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದಿದ್ದರು. ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ದರೋಡೆ ಉದ್ದೇಶದಿಂದಲೇ ಹ* ನಡೆದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಮನೆ ಒಳಗೇ ದಾಳಿ ನಡೆಸಿರುವ ಸುಳಿವುಗಳು ಸಿಕ್ಕಿದ್ದು, ಪರಿಚಿತರ ಕೈವಾಡವೂ ಇರಬಹುದೆಂಬ ಅನುಮಾನಕ್ಕೂ ಪೊಲೀಸ್ ತನಿಖೆ ತಿರುಗಿದೆ.
ಘಟನೆ ತಿಳಿಯುತ್ತಿದ್ದಂತೆ ಶಶಿಕಾಂತ ವರ್ಮಾ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೃ* ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಸಿರಸಿ ಮಾರ್ಕೆಟ್ ಪೊಲೀಸ್ ಠಾಣೆ ನಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕುಟುಂಬದ ಮಾಹಿತಿ ಪ್ರಕಾರ, ಡಾ. ರಮೇಶ್ ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಒಬ್ಬ ವೈದ್ಯರಾಗಿದ್ದು, ಇನ್ನೊಬ್ಬ ಎಂಜಿನಿಯರಿಂಗ್ ಅಭ್ಯಾಸದಲ್ಲಿದ್ದಾರೆ. ಮದುವೆಯ ಸಂಭ್ರಮಕ್ಕೆ ಸಜ್ಜಾಗಿದ್ದ ಮನೆಗೆ ಕ್ಷಣಾರ್ಧದಲ್ಲಿ ದುರಂತದ ನೆರಳು ಬೀಳಿದ್ದು, ಬಂಧುಗಳು ಮತ್ತು ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಈ ಹ*ಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ದರೋಡೆ, ವೈಯಕ್ತಿಕ ದ್ವೇಷ ಅಥವಾ ಕುಟುಂಬ ಸಂಬಂಧಿತ ಕಾರಣಗಳ ಬಗ್ಗೆ ಹಲವು ರೀತಿಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ವಿವರಗಳು ತನಿಖೆಯ ನಂತರವೇ ಬಹಿರಂಗವಾಗುವ ನಿರೀಕ್ಷೆಯಿದೆ.
