Health

ರಾಷ್ಟ್ರೀಯ ಪೋಷಣಾ ಸಪ್ತಾಹ – 01 ರಿಂದ 07 ಸೆಪ್ಟೆಂಬರ್ 2021

ಪೂರ್ಣಿಮ ಭಟ್ಟ, ಆಹಾರ ತಜ್ಞರು.

‘FEED SMART RIGHT FROM START’

sri krishnadevaraya hampi

ಒಂದು ದೇಶ ಅಭಿವೃದ್ಧಿಯುತ ರಾಷ್ಟ್ರ ಎಂದು ಹೇಳಬೇಕಾದರೆ ಬೇರೆಲ್ಲವುಗಳ ಜೊತೆಗೆ ಆ ದೇಶದ ಜನರ ಆರೋಗ್ಯವೂ ಕೂಡ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕ್ಕೆ ಆಹಾರವೇ ಮೂಲವಾದುದರಿಂದ ಪ್ರಾರಂಭದಿಂದಲೇ ಉತ್ತಮ ಆಹಾರಾಭ್ಯಾಸವನ್ನು ರೂಢಿಸುವುದು, ರೂಢಿಸಿಕೊಳ್ಳುವುದು ಅತ್ಯಗತ್ಯ.

ಪ್ರತಿಯೊಂದು ಋತುಮಾನಕ್ಕೆ ತಕ್ಕಂತೆ, ಆಯಾ ಪ್ರದೇಶಗಳ ವಾತಾವರಣಕ್ಕೆ ಅನುಗುಣವಾಗಿ ಆಹಾರ ವೈವಿಧ್ಯತೆಯನ್ನು ನಮ್ಮ ಪೂರ್ವಿಕರು ಪರಿಚಯಿಸಿದ್ದರೂ ಕೂಡ ‘ಡಯಟ್, ‘ನ್ಯೂಟ್ರಿಷನ್’ ಹೆಸರಿನಲ್ಲಿ (ಸರಿಯಾಗಿ ಅರ್ಥೈಸಿಕೊಳ್ಳದೇ) ಆಹಾರದ ಮೂಲ ಗುಣಗಳನ್ನೇ ಕಳೆದುಕೊಂಡ ಪ್ಯಾಕೇಜ್ಡ್ ಫುಡ್, ಸಂಸ್ಕರಿಸಿದ ಆಹಾರಗಳಿಗೆ ಜನ ಮರುಳಾಗುತ್ತಿರುವುದು ಮತ್ತು ಅನೇಕ ರೋಗಗಳಿಗೆ ತುತ್ತಾಗುತ್ತಿರುವುದು ದುರದೃಷ್ಟಕರ.

ಡಯಟ್ ಎಂದರೆ ಕೇವಲ ಊಟವನ್ನು ಬಿಡುವುದು ಅಥವಾ ಕಡಿಮೆ ಆಹಾರ ಸೇವನೆ ಅಲ್ಲ, ನಮ್ಮ ದೇಹಕ್ಕೆ ಯಾವ ಆಹಾರ ಸೂಕ್ತ ಎಂದು ತಿಳಿದುಕೊಂಡು ಸರಿಯಾದ ಪೋಷಕಾಂಶಗಳನ್ನು ನೀಡುವುದು ಹಾಗೂ ಅನಾರೋಗ್ಯಕರವಾದುದನ್ನು ತ್ಯಜಿಸುವುದು. ಹೊರಗಿನಿಂದ ನಾವು ಎಷ್ಟು ಸುಂದರವಾಗಿದ್ದೇವೆ ಎನ್ನುವುದಕ್ಕಿಂತ ಆಂತರಿಕವಾಗಿ ಎಷ್ಟು ಸದೃಡರಿದ್ದೇವೆ ಎನ್ನುವುದು ಮುಖ್ಯ.

ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ, ದೇಹದ ರಕ್ತದ ಪ್ರಮಾಣ ಕಡಿಮೆ ಇದ್ದಲ್ಲಿ, ಸ್ವಲ್ಪ ಕೆಲಸ ಮಾಡಿದರೂ ಅತಿಯಾದ ಸುಸ್ತು, ಅಸಿಡಿಟಿ, ಮಲಬದ್ಧತೆ, ತೂಕದಲ್ಲಿ ಏರುಪೇರು ಇತ್ಯಾದಿ ಸಮಸ್ಯೆಗಳಿಗೆ ನಿರ್ಲಕ್ಷಿಸದೇ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಕೇವಲ ಮಾತ್ರೆಗಳಿಂದ ಪರಿಹಾರ ದೊರೆಯಲಾರದು.

ಆರಂಭದಿಂದಲೇ ಮಗುವಿನ ಪೋಷಣೆ :-

happy cute kid boy eat healthy food

ನಮ್ಮ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಮಕ್ಕಳನ್ನು ಗಮನಿಸಿದಾಗ, ಅನೇಕ ಮಕ್ಕಳಲ್ಲಿ ದೇಹದ ರಕ್ತ(ಹೀಮೊಗ್ಲೋಬಿನ್ ಅಂಶ) ಕಡಿಮೆ ಇರುವುದು ಕಂಡುಬರುತ್ತ್ತಿದೆ. ಇವುಗಳಿಗೆ ಮುಖ್ಯ ಕಾರಣ ತಾಯಂದಿರಲ್ಲಿ ತಿಳುವಳಿಕೆಯ ಕೊರತೆ ಅಥವಾ ತಪ್ಪು ತಿಳುವಳಿಕೆ. ಮಗುವಿಗೆ ಹುಟ್ಟಿನಿಂದ 6 ತಿಂಗಳವರೆಗೆ ತಾಯಿಯ ಹಾಲೇ ಸಂಪೂರ್ಣ ಆಹಾರ. 6 ತಿಂಗಳ ನಂತರ ಧಾನ್ಯಗಳು, ಬೇಳೆಗಳು, ಹಣ್ಣು, ಬೇಯಿಸಿದ ತರಕಾರಿ, ಸೊಪ್ಪುಗಳನ್ನು ಒಂದೊಂದಾಗಿ ರೂಢಿಸಬೇಕು. ಇಲ್ಲವಾದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಮಗುವಿನ ಬೆಳವಣಿಗೆ ನಿಧಾನವಾಗುತ್ತದೆ. ಯಾವ ವಯಸ್ಸಿನಲ್ಲಿ ನಮ್ಮ ಮಗುವಿಗೆ ಯಾವರೀತಿಯ ಆಹಾರಗಳನ್ನು ನೀಡಬೇಕು ಎಂಬುದನ್ನು ಅರಿತಿರಬೇಕು.

ಪಾಲಕರ ಕರ್ತವ್ಯ :

  • ಮಕ್ಕಳಿಗೆ ಚಿಕ್ಕಂದಿನಿಂದಲೇ ನಿಮ್ಮ ಸಾಂಪ್ರದಾಯಿಕ ಆಹಾರಗಳ ಮಹತ್ವ ತಿಳಿಸಿ.
  • ಆಹಾರವನ್ನು ವ್ಯರ್ಥ ಮಾಡದಂತೆ ಗಮನವಹಿಸಿ.
  • ಪ್ಯಾಕೇಜ್ಡ್ ಅಥವಾ ಜಂಕ್ ಫುಡ್‍ಗಳು(ಪಿಜ್ಜಾó, ಬರ್ಗರ್, ಕೋಲ್ಡ್‍ಡ್ರಿಂಕ್ಸ್ ಇತ್ಯಾದಿ) ದೊಡ್ಡಸ್ತಿಕೆಯ ಸಂಕೇತವಾಗದಿರಲಿ.
  • ನಿಮ್ಮ ಊರುಗಳಲ್ಲಿಯೇ ಬೆಳೆಯುವ ಹಣ್ಣು, ತರಕಾರಿ ಮುಂತಾದ ಆಹಾರ ಬೆಳೆಗಳ ಬಗೆಗೆ ತಿಳಿಸಿಕೊಡಿ.
  • ಇದನ್ನೇ ತಿನ್ನಬೇಕೆಂಬ ಕಟ್ಟಳೆಗಳನ್ನು ವಿಧಿಸಬೇಡಿ. ಆರೋಗ್ಯಕ್ಕೆ ಪೂರಕ ಆಹಾರಗಳಲ್ಲಿ ಅವರಿಗೆ ಇಷ್ಟದ ಆಹಾರಗಳನ್ನು ಆಯ್ಕೆ ಮಾಡಲು ಬಿಡಿ.
  • ಮನೆಯಲ್ಲಿ ತಯಾರಿಸುವ ಆಹಾರಗಳಾದರೂ ಆಕರ್ಷಕವಾಗಿರಲಿ.
  • ಊಟ ಮಾಡುವಾಗ ಟಿ.ವಿ. ಮೊಬೈಲ್ ಬಳಕೆ ಬೇಡ. ಪ್ರತಿದಿನ ಒಂದು ಹೊತ್ತಾದರೂ ಎಲ್ಲರೂ ಒಟ್ಟಿಗೇ ಕುಳಿತು ಸಂತೋಷದಿಂದ ಊಟ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ.
  • ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯವನ್ನು ಯಾವುದೇ ರೀತಿಯ ನ್ಯೂಟ್ರಿಷನ್ ಕಂಪನಿಗಳು ನಿರ್ಧರಿಸದಿರಲಿ.
  • ಭವಿಷ್ಯದ ಕನಸಿನ ಕುಡಿಗಳು ಉತ್ಸಾಹದ ಚಿಲುಮೆಗಳಾಗಿರಬೇಕೇ ಹೊರತು ಆಸ್ಪತ್ರೆಗಳ ಹಾಸಿಗೆಯಲ್ಲಿ ನಲುಗುವಂತಾಗಬಾರದು.
Contact us for classifieds and ads : +91 9742974234



 
error: Content is protected !!