Articles

ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ

ಕುಪ್ಪಹಳ್ಳಿ ಮಂಜುನಾಥ್

ರೈತರ ಆತ್ಮಹತ್ಯೆ

ದುಡುಕಬೇಡಿ ರೈತರೇ
ನಾಡಿನನ್ನದಾತರೇ
ದುಡಿವ ನೀವೇ ಮಡಿದ ಮೇಲೆ
ಯಾರು ಜಗಕೆ ಆಸರೆ ||

sri krishnadevaraya hampi

ಬಾಳಿನಲ್ಲಿ ಕಷ್ಟಸುಖಗಳೆರಡು ಸಹಜವಲ್ಲವೇ
ಇರುಳು ಕಳೆದ ಮೇಲೆ ಮತ್ತೆ ಹಗಲು ಬರುವುದಿಲ್ಲವೇ
ಸಾಲಕಂಜಿ ಶೂಲಕೇಕೆ ಕೊರಳ ನೀಡುತ್ತಿರುವಿರಿ
ಆತ್ಮಹತ್ಯೆ ಮಹಾಪಾಪ ಎನ್ನುವ ನಿಜವರಿಯಿರಿ ||

ತಾಯಿಹಾಲು ಮಗುವಿಗೆಂದು ಕೊಲ್ಲುವ ನಂಜಾಗದು
ಬೆಳೆವಭೂಮಿ ದುಡಿಯುವವರಿಗೆಂದು ವಿಷವನುಣಿಸದು
ನಾಣ್ಯದೆರಡು ಮುಖಗಳಂತೆ ಲಾಭ ನಷ್ಟವಲ್ಲವೇ
ಸೋಲಿನ ಸೋಪಾನಗಳಲ್ಲಿ ಗೆಲುವಿನ ಗುರಿಯಿಲ್ಲವೇ ||

ಹಬ್ಬಗಳಲಿ ಬೇವು ಬೆಲ್ಲ ಬೆರಸಿಕೊಂಡು ತಿನ್ನುವಿರಿ
ನೋವು ನಲಿವು ಬಾಳಲತೆಯ ಹೂವು ಮುಳ್ಳು ಎನ್ನುವಿರಿ
ಬರುವ ನೋವುಗಳಿಗೆ ಅಂಜಿ ಏಕೆ ವಿಷವ ಕುಡಿವಿರಿ
ಮಡದಿ ಮಕ್ಕಳೆದೆಯ ನೋವ ಒಮ್ಮೆ ಮನದಿ ನೆನೆಯಿರಿ ||

ಕಳೆದುಕೊಂಡ ಕೊರಳಮುತ್ತು ಹುಡುಕಿದಾಗ ಸಿಗುವುದು
ಒಮ್ಮೆ ಹೋದ ನಮ್ಮ ಜೀವ ಎಂದೂ ಮರಳಿಬಾರದು
ಅರಿತು ಏಕೆ ನಿಮ್ಮ ಮನೆಗೆ ನೀವೇ ಬೆಂಕಿಯಿಡುವಿರಿ
ಬದುಕಿ ಬಾಳುವವರನೇಕೆ ಜೀವಸಹಿತ ಸುಡುವಿರಿ ||

ಸದಾ ನಿಮ್ಮ ಸೇವೆಗಾಗಿ ಸರ್ಕಾರದ ನೆರವಿದೆ
ವಿವಿಧ ಯೋಜನೆಗಳ ಕದವು ನಿಮಗಾಗಿಯೆ ತೆರೆದಿದೆ
ಅಧಿಕ ಬಡ್ಡಿ ಸಾಲದ ಬಲೆಗೆಂದು ಬೀಳಬೇಡಿರಿ
ಏನೆ ಬರಲಿ ಎಲ್ಲರೊಡನೆ ಹಂಚಿಕೊಂಡು ಬಾಳಿರಿ ||

———-

ಬರಹ: ಕುಪ್ಪಹಳ್ಳಿ ಮಂಜುನಾಥ್

Follow us on:

https://fb.com/askmysuru

https://instagram.com/askmysuru

Contact us for classifieds and ads : +91 9742974234



 

Comments are closed.

error: Content is protected !!