ಮೈಸೂರು, ಸೆಪ್ಟೆಂಬರ್ 22; ಮೈಸೂರಿನ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇರುವ ಬಗ್ಗೆ ಬೆದರಿಕೆ ಕರೆ ಬಂದಿದೆ. ಗಾಬರಿಗೊಂಡು ಕಚೇರಿಯಿಂದ ಸಿಬ್ಬಂದಿಗಳು ಹೊರ ಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಬುಧವಾರ ಬೆದರಿಕೆ ಕರೆ ಬಂದಿದೆ. ಸ್ಥಳಕ್ಕೆ ಸ್ಪೋಟಕ ಪತ್ತೆ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
“ನಮ್ಮ ಕಚೇರಿಗೆ ಬೆದರಿಕೆ ಕರೆ ಬಂದಿಲ್ಲ. ಪೊಲೀಸರಿಗೆ ನೇರವಾಗಿ ಬಾಂಬ್ ಇರಿಸಿರೋದಾಗಿ ತಿಳಿಸಿದ್ದಾರೆ. ಕಾನ್ಸ್‌ಟೇಬಲ್ ಒಬ್ಬರು ಬೆಳಗ್ಗೆ 11.30ರ ಸುಮಾರಿಗೆ ಬಂದು ನನಗೆ ಮೆಸೇಜ್ ತೋರಿಸಿದರು” ಎಂದು ಜಂಟಿ ಆಯುಕ್ತ ಮಂಜುನಾಥ್ ಹೇಳಿದ್ದಾರೆ.
“ಸಂದೇಶದಲ್ಲಿದ್ದ ವಿಳಾಸ ಹಾಗೂ ಅಕ್ಕಪಕ್ಕದ ಕಚೇರಿಗಳ ಹೆಸರು ನೋಡಿ ಖಾತರಿ ಮಾಡಿಕೊಂಡೆ. ಆಗ ತಕ್ಷಣ ಮೀಟಿಂಗ್ ಬಿಟ್ಟು ನಾವು ಹೊರಗೆ ಬಂದೆವು. ಕಚೇರಿಯಲ್ಲಿ ಸುಮಾರು 80 ಮಂದಿ ಸಿಬ್ಬಂದಿ ಇದ್ದರು” ಎಂದು ಮಂಜುನಾಥ್ ತಿಳಿಸಿದ್ದಾರೆ.
ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇದೆ ಎಂದು ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ. ಲಕ್ಷ್ಮೀಪುರಂನಲ್ಲಿರುವ ಆಡಿಟರ್ ಕಚೇರಿ ಗೇಟ್ ನಲ್ಲಿ ದೊರೆತ ಬೆದರಿಕೆ ಪತ್ರ ಸಿಕ್ಕಿದೆ. ಇಂದು ಮಧ್ಯಾಹ್ನ 12 ರಿಂದ 1ಗಂಟೆ ಒಳಗೆ ಕಚೇರಿಯಲ್ಲಿ ಬಾಂಬ್ ಸ್ಪೋಟವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಕಚೇರಿಗೆ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿದರು. ಘಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ವಾಣಿಜ್ಯ ತೆರಿಗೆ ಕಚೇರಿ ಕಟ್ಟಡದ ಆವರಣದಲ್ಲಿದ್ದ ಲಾರಿ ಹಾಗೂ ವಾಹನಗಳು ಹೊರಕ್ಕೆ ಕಳಿಸಲಾಯಿತು. ಪೊಲೀಸರು ಇಡೀ ಕಚೇರಿ ಆವರಣದಲ್ಲಿ ಬಾಂಬ್ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಡಿಸಿಪಿ ಪ್ರದೀಪ್ ಗುಂಟಿ ಹೇಳಿಕೆ; “ಮೊದಲ ಹಂತದ ತಪಾಸಣೆ ಸಂಪೂರ್ಣವಾಗಿ ಮುಗಿದಿದೆ. ಯಾವ ಸ್ಪೋಟಕಗಳು ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್ ಕರೆ ಎಂದು ಅನಿಸುತ್ತಿದೆ. ಆದರೂ ಎರಡನೇ ಹಂತದಲ್ಲಿ ಮತ್ತೊಮ್ಮೆ ತಪಾಸಣೆ ನಡೆಸುತ್ತಿದ್ದೇವೆ. ಕಟ್ಟಡದ ಎಲ್ಲಾ ಕಡೆಯು ತಪಾಸಣೆ ಮುಕ್ತಾಯವಾಗಿದೆ. ಪತ್ರ ಬಂದಿರುವ ಬಗ್ಗೆಯು ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.