ನಗರದ ಪ್ರಮುಖ ರಸ್ತೆಗಳಾದ ಮೈಸೂರು-ಬೆಂಗಳೂರು ರಸ್ತೆ, ನಾರಾಯಣ ಶಾಸ್ತ್ರಿ, ಅಶೋಕ ರಸ್ತೆ, ಮಹಾತ್ಮಗಾಂಧಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ವಿನೋಬಾ ರಸ್ತೆ, ಧನ್ವಂತರಿ ರಸ್ತೆ, ಇವೀರ್ನ್ ರಸ್ತೆ, ವಾಲ್ಮೀಕಿ ರಸ್ತೆ, ಕೆ.ಆರ್.ಎಸ್ ರಸ್ತೆ ಹೀಗೆ ಹಲವು ಪ್ರಮುಖ ರಸ್ತೆಗಳನ್ನು ನಾನಾ ಕಾಮಗಾರಿಗಾಗಿ ಅಗೆದಿದ್ದು, ಮರು ಡಾಂಬರೀಕರಣ ಮಾಡದೇ ಇರುವುದರಿಂದ ಗುಂಡಿಮಯವಾಗಿದ್ದು, ನಿತ್ಯ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
- ಮೈಸೂರಿನಲ್ಲಿ ರಸ್ತೆಗಳನ್ನು ನಾನಾ ಕಾಮಗಾರಿಗಾಗಿ ಅಗೆದಿದ್ದು ಸಂಚಾರಕ್ಕೆ ತೊಂದರೆಯಾಗಿದೆ
- ನಗರದ ಪ್ರಮುಖ ರಸ್ತೆಗಳಲ್ಲಿ ನಿತ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ
- ದಸರೆ ಹಿನ್ನೆಲೆಯಲ್ಲಿ ನಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿಗೆ ಪಾಲಿಕೆ ಮುಂದಾಗಿದೆ
ಮೈಸೂರು: ಮಹಾನಗರ ಪಾಲಿಕೆಗೆ ಪ್ರತಿ ವರ್ಷ ರಸ್ತೆಯಲ್ಲಿ ಬಿದ್ದಿರುವ ಗುಂಡಿ-ಹಳ್ಳಗಳು ನೆನಪಾಗುವುದು ದಸರಾ ಮಹೋತ್ಸವದಲ್ಲಿ ಮಾತ್ರ! ಅಲ್ಲಿಯವರೆಗೂ ಗುಂಡಿ ಬಿದ್ದ ರಸ್ತೆಗಳಿಂದ ಸಾರ್ವಜನಿಕರು ಸೇರಿದಂತೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ನೆನಪಿಗೆ ಬರುವುದೇ ಇಲ್ಲ…!!
ಈ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ನಿತ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಅರಮನೆ ಸುತ್ತ ಸೇರಿದಂತೆ ಜಂಬೂ ಸವಾರಿ ಮಾರ್ಗ ಮತ್ತು ಚಾಮರಾಜ ಜೋಡಿ ರಸ್ತೆಯು ಹಲವು ವರ್ಷಗಳ ಹಿಂದೆಯೇ ಕಾಂಕ್ರಿಟ್ ರಸ್ತೆಯಾಗಿರುವುದರಿಂದ ಇದನ್ನು ಹೊರತು ಪಡಿಸಿ ಉಳಿದ ರಸ್ತೆಗಳಲ್ಲಿ ಸಂಚರಿಸಲು ಪಡಿಪಾಟಲು ಪಡುವಂತಾಗಿದೆ. ಇದು ಮೈಸೂರಿಗರ ಬೇಸರ. ನೂತನ ಮೇಯರ್ ಸುನಂದಾ ಫಾಲನೇತ್ರ ಅವರು ಇದನ್ನು ಗಮನಿಸಬೇಕಿದೆ.
ನಗರದ ಪ್ರಮುಖ ರಸ್ತೆಗಳಾದ ಮೈಸೂರು-ಬೆಂಗಳೂರು ರಸ್ತೆ, ನಾರಾಯಣ ಶಾಸ್ತ್ರಿ, ಅಶೋಕ ರಸ್ತೆ, ಮಹಾತ್ಮಗಾಂಧಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ವಿನೋಬಾ ರಸ್ತೆ, ಧನ್ವಂತರಿ ರಸ್ತೆ, ಇವೀರ್ನ್ ರಸ್ತೆ, ವಾಲ್ಮೀಕಿ ರಸ್ತೆ, ಕೆ.ಆರ್.ಎಸ್ ರಸ್ತೆ ಹೀಗೆ ಹಲವು ಪ್ರಮುಖ ರಸ್ತೆಗಳನ್ನು ನಾನಾ ಕಾಮಗಾರಿಗಾಗಿ ಅಗೆದಿದ್ದು, ಮರು ಡಾಂಬರೀಕರಣ ಮಾಡದೇ ಇರುವುದರಿಂದ ಗುಂಡಿಮಯವಾಗಿದ್ದು, ನಿತ್ಯ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ದಂಡವಿದೆ, ನಿರ್ವಹಣೆಯಿಲ್ಲ
ಅನುಮತಿ ಪಡೆಯದೇ ರಸ್ತೆ ಅಗೆಯುವ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ದಂಡ ವಿಧಿಸುವ ಪಾಲಿಕೆ, ಅದೇ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕಾಳಜಿವಹಿಸದೇ ನಿರ್ಲಕ್ಷ್ಯವಹಿಸುತ್ತಿದೆ ಎನ್ನುತ್ತಾರೆ ಮೇಟಗಳ್ಳಿಯ ನಿವಾಸಿ ಚಂದ್ರು.
ಸಂಚಾರ ಪೊಲೀಸರ ಕಾಳಜಿ
ನಗರದ ಹೃದಯ ಭಾಗದಲ್ಲಿನ ಪ್ರಮುಖ ರಸ್ತೆಗಳು ಸೇರಿದಂತೆ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿ ಸುಗಮ ಸಂಚಾರ ದೃಷ್ಟಿಯಿಂದ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಮೈಸೂರು ನಗರ ಪೊಲೀಸರು, ಪಾಲಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನಾಗಿಲ್ಲ. ಕೆಲವೆಡೆ ಕರ್ತವ್ಯ ನಿರತ ಪೊಲೀಸರೇ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.
ದೂರು ದಾಖಲಾಗಲ್ಲ
ರಸ್ತೆಯಲ್ಲಿ ಗುಂಡಿ ಅಥವಾ ಹಳ್ಳದಿಂದ ಅಪಘಾತಕ್ಕೀಡಾಗಿ ಗಾಯಗೊಂಡರೆ ಅಥವಾ ಮೃತಪಟ್ಟರೆ, ಸಂಬಂಧಪಟ್ಟವರು, ರಸ್ತೆಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ದೂರು ನೀಡದೇ ಇರುವುದರಿಂದ ರಸ್ತೆ ನಿರ್ವಹಣೆ ಜವಾಬ್ದಾರಿ ಇರುವ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು.
ದಸರೆ ಹಿನ್ನೆಲೆಯಲ್ಲಿ ನಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿಗೆ ಪಾಲಿಕೆ ಮುಂದಾಗಿದೆ. ಆದರೆ ಈ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ದಸರೆ ವೇಳೆ ಅರೆಬರೆಯಲ್ಲಿ ಕಾಮಗಾರಿ ಮಾಡಿ, ನಿಲ್ಲಿಸುತ್ತಾರೆ. ಎಲ್ಲಾ ವಾರ್ಡ್‌ಗಳಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು ಎನ್ನುತ್ತಾರೆ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್.
ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗುತ್ತದೆ. ಆದರೆ ಉಳಿದ ಸಮಯದಲ್ಲಿ ನಿರ್ಲಕ್ಷ್ಯವಹಿಸಲಾಗುತ್ತದೆ. ಇದರಿಂದ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದು, ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದೇ ರಸ್ತೆಗಳು ಗುಂಡಿಮಯವಾಗಲು ಕಾರಣ.
ಕೆ.ವಿ.ಶ್ರೀಧರ್, ಪಾಲಿಕೆ ಸದಸ್ಯ
ನಗರದಲ್ಲಿ ಪ್ರಮುಖವಾಗಿರುವ 30ಕ್ಕೂ ಹೆಚ್ಚು ಪ್ರಮುಖ ರಸ್ತೆಗಳಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ಗುಂಡಿಮುಚ್ಚುವ ಕಾಮಗಾರಿ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ನಡೆಸಲಾಗುವುದು.
ಜಿ.ಲಕ್ಷ್ಮೀಕಾಂತ್ ರೆಡ್ಡಿ, ಆಯುಕ್ತ, ನಗರ ಪಾಲಿಕೆ
ಮೈಸೂರು ನಗರದಲ್ಲಿ ರಸ್ತೆಯಲ್ಲಿನ ಗುಂಡಿಯಿಂದಾಗಿ ಅಪಘಾತಗಳಾಗಿ ಸಾವು ಅಥವಾ ಗಾಯಗೊಂಡಿರುವ ಬಗ್ಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.
ಗೀತಾ ಪ್ರಸನ್ನ, ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಗ