Articles

ಸರಿಯಾದ ಹೆಜ್ಜೆ ಹಾಕಿ ಸ್ಥಾನ ಪಡೆದಿದ್ದು…

- ಚೇತನ್ ಸಿ ರಾಯನಹಳ್ಳಿ

ಆಗಸ್ಟ್ 15, ಜನವರಿ 26 ಬರತ್ತೆ ಅಂದರೆ ಶಾಲೆಯಲ್ಲಿ ಬ್ಯಾಂಡ್, ಪಥಸಂಚಲನಕ್ಕೆ ತಂಡಗಳ ತಯಾರಿ, ಅಭ್ಯಾಸ ಆರಂಭ ಆಗತ್ತೆ. ಮಧ್ಯಾಹ್ನ ಬೇಗ ಊಟ ಮುಗಿಸಿ ಮಕ್ಕಳು ಅಭ್ಯಾಸಕ್ಕೆ ಬರೋರು, ಕೆಲವರಂತೂ ಗಡಿಬಿಡಿಲಿ ಊಟ ಮುಗಿಸಿದ್ರೆ ಇನ್ನೂ ಕೆಲವರು ಅಭ್ಯಾಸ ಮುಗಿಸಿ ಬೆಲ್ ಆದಮೇಲೆ ಓಡಿ ಬರೋರು. ಜಿಲ್ಲಾಡಳಿತದಿಂದ ನಡೆಯುವ ಈ ಕಾರ್ಯಕ್ರಮದ ಅಭ್ಯಾಸಕ್ಕೆ ಅಂತ ನಾಲ್ಕುದಿನ ಮುಂಚೆ ಬೆಳಗ್ಗೆ ಡಿ.ಎ.ಆರ್ ಮೈದಾನಕ್ಕೆ ಹೋಗಬೇಕಿರತ್ತೆ. ಪ್ರತಿಬಾರಿಯಂತೆ ಈ ಬಾರಿಯೂ ನಮ್ಮ ಶಾಲೆಯಿಂದ ಹುಡುಗರು ಮತ್ತು ಹುಡುಗಿಯರ ಒಂದೊಂದು ತಂಡಗಳು ಸಿದ್ದವಾಗಿತ್ತು.

sri krishnadevaraya hampi

ಬೆಳಗ್ಗೆ ಬೇಗ ಎದ್ದು ಬಂದ ಮಕ್ಕಳು ಮೈದಾನದಲ್ಲಿ ಅಭ್ಯಾಸ ಮಾಡ್ತಾ ಇದ್ರು, ಇನ್ನೂ ಕೆಲವರು ಅತ್ತೆಯ ಮನೆಗೆ ಬರೋ ಹಾಗೆ ನಿಧಾನವಾಗಿ ಬರ್ತಾನೇ ಇದ್ರು. ಪೊಲೀಸ್, ಹೋಮ್ ಗಾರ್ಡ್ಸ್, ಎನ್.ಸಿ.ಸಿ. ಸ್ಕೌಟ್ಸ್-ಗೈಡ್ ಜೊತೆಗೆ ವಿವಿಧ ಶಾಲೆಯ ಒಟ್ಟು ಸರಿಸುಮಾರು 25ಕ್ಕೂ ಹೆಚ್ಚಿನ ತುಕಡಿಗಳು ಇದ್ದವು. ಈಬಾರಿ ಪಥಸಂಚಲನದ ಮುಖ್ಯಸ್ಥರು ಬದಲಾಗಿದ್ದರು, ಇಷ್ಟೊಂದು ತಂಡಗಳು ಬೇಡ ಸರಿ ಆಗಲ್ಲ ಅಂತ ಒಂದಿಷ್ಟು ತಂಡಗಳನ್ನು ತೆಗೆದುಹಾಕ್ತಿನಿ ಅಂದ್ರು. ಮೊದಲಸುತ್ತಿನ ಅಭ್ಯಾಸದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಗತ್ಯಕ್ಕಿಂತ ಬಹಳ ಕಡಿಮೆ ಇದ್ದ ತಂಡಗಳನ್ನು ಮುಲಾಜಿಲ್ಲದೆ ತೆಗೆದುಹಾಕಿದರು.

ಎರಡನೇ ಸುತ್ತಿನ ಅಭ್ಯಾಸದಲ್ಲಿ ನಮ್ಮ ಶಾಲೆಯ ಹುಡುಗರ ತಂಡ ಉತ್ತಮವಾಗಿ ಹೆಜ್ಜೆ ಹಾಕಿದರು. ಆದರೆ ವಿದ್ಯಾರ್ಥಿನಿಯರ ತಂಡ ಕೈಬೀಸುವಲ್ಲಿ, ಸರಿಯಾಗಿ ಹೆಜ್ಜೆ ಹಾಕುವಲ್ಲಿ ಸ್ವಲ್ಪ ತಪ್ಪುಮಾಡಿದರು. ಮತ್ತೊಂದು ಶಾಲೆಯ ಮಕ್ಕಳು ಕೂಡ ತಪ್ಪು ಮಾಡಿದರು, ಆ ಎರಡೂ ಶಾಲೆಗಳನ್ನು ಬೇಡ ತೆಗೆದುಬಿಡಿ ಎಂದು ಮೈಕ್ ನಲ್ಲಿ ಹೇಳಿದರು. ಮರುಮಾತಿಲ್ಲದೆ ವಿದ್ಯಾರ್ಥಿನಿಯರ ತಂಡ ಹಿಂದಕ್ಕೆ ಬರಬೇಕಾಯಿತು. ಅಷ್ಟರಲ್ಲಿ ಹರ್ಷಿತ, ಪೂರ್ವಿಕ, ಅನನ್ಯ, ನೂರ್ ಫಾತೀಮ, ನಿಸರ್ಗ ಮೊದಲಾದವರು ಆಗಲೇ ಅಳಲು ಶುರುಮಾಡಿದರು, ಈ ವಿದ್ಯಾರ್ಥಿನಿಯರ ನಡುವಿನ ವಾತಾವರಣ ಮೋಡಮುಸುಕಿದ ಹಾಗೆ, ಮಂಜುಕವಿದ ಹಾಗಿತ್ತು.

ದೈಹಿಕಶಿಕ್ಷಕರು, ಮುಖ್ಯೋಪಾಧ್ಯಾಯರ ಜೊತೆಯಲ್ಲಿ ಇದ್ದಾಗ ನಮ್ಮ ಬಳಿಗೆ ಬಂದರು ನಾವು ಏನು ಮಾಡೋ ಹಾಗಿಲ್ಲ ಅಂತ ಹೇಳಿದ್ವಿ. ಆದರೆ ಇವು ಸುಮ್ಮನೆ ಇರೋ ಜಾಯಮಾನದವರು ಅಲ್ಲ, ಪೂರ್ವಿಕ, ‘ಸರ್ ನಾವು ಹೋಗಿ ಅವರ ಹತ್ರ ಮಾತಾಡ್ತಿವಿ. ನಾಳೆ ಸರಿಯಾಗಿ ಅಭ್ಯಾಸ ಮಾಡಿಕೊಂಡು ಬರ್ತಿವಿ, ಅವಾಗಲೂ ಚೆನಾಗಿ ಬರಲಿಲ್ಲ ಅಂದರೆ ಆಗ ಬೇಕಾದರ ತೆಗೆದುಹಾಕಿ ನಮಗೆ ಒಂದು ಚಾನ್ಸ್ ಕೊಡಿ ಅಂತ ಕೇಳ್ತಿವಿ’ ಮುಖ್ಯೋಪಾಧ್ಯಾರು ನಿಮ್ಮಇಷ್ಟ ಕೇಳಿನೋಡಿ ಎಂದರು. ತಡ ಮಾಡದೇ ಅಷ್ಟೂ ವಿದ್ಯಾರ್ಥಿನಿಯರು ಅವತ್ತಿನ ಅಭ್ಯಾಸ ಮುಗಿದನಂತರದಲ್ಲಿ ಅವರ ಬಳಿ ಹೋಗಿ ನಾಳೆ ಸರಿಯಾಗಿ ನಾವು ಪಥಸಂಚಲನ ಮಾಡದೇ ಹೋದರೆ ತೆಗೆದುಹಾಕಿ, ದಯವಿಟ್ಟು ಒಂದು ಅವಕಾಶ ನೀಡಿ ಸರ್’ ಎಂದಾಗ ಅವರು, ‘ನಾಳೆಗೆ ಒಂದು ಅವಕಾಶ ಕೊಡ್ತೀವಿ, ನಾಳೆನೂ ಸರಿಆಗಲಿಲ್ಲ ಅಂದರೆ ತೆಗಿತೀವಿ ನೆನಪಲ್ಲಿ ಇರಲಿ’ ಎಂದು ಹೊರಟು ಹೋದರು.

ಈ ಮಕ್ಕಳ ಶ್ರಮದಿಂದಾಗ ಇನ್ನೂ ಉಳಿದ ಶಾಲಾ ಮಕ್ಕಳಿಗೆ ಅವಕಾಶ ಸಿಗುವ ಹಾಗೆ ಆಯ್ತು. ಅಲ್ಲೇ ಇದ್ದ ಹೋಂಗಾರ್ಡ್ನ ಒಬ್ಬರು ಅಲ್ಲಿಯೇ ಮಕ್ಕಳಿಗೆ ಪಥಸಂಚನಲದ ಅಭ್ಯಾಸ ಮಾಡಿಸಿದರು, ಶಾಲೆಲೂ ಅಭ್ಯಾಸ ಮಾಡಿ ಚೆನಾಗಿ ಆಗತ್ತೆ ಅಂದರು. ಶಾಲೆಲಿ ಏನು ಅಭ್ಯಾಸ ಅಂದರೆ, ಮಧ್ಯಾಹ್ನ ಎರಡು ತರಗತಿ ಇವರಿಗೆ ಅಭ್ಯಾಸ ಮಾಡೋಕೆ ಕೊಟ್ಟರು. ಸುಸ್ತುಆಗಿ ಸಾಕು ನಿಲ್ಲಿಸಿ ಅಂತ ನಾವುಗಳು ಹೇಳಿದರೂ ಕೇಳಲಿಲ್ಲ ಇನ್ನು ಸ್ವಲ್ಪ ಹೊತ್ತು ಅಭ್ಯಾಸ ಮಾಡ್ಕೋತೀವಿ ಅಂತ ಸಾಕಾಗೋ ಅಷ್ಟು ಮಾಡಿದರು. ಮರುದಿನ ಬೆಳಗ್ಗೆ 6.30ಕ್ಕೆ ಮೈದಾನದಲ್ಲಿ ಎಲ್ಲರೂ ಹಾಜರಿದ್ದರು, ಅಲ್ಲಿಯೂ ಸ್ವಲ್ಪ ಹೊತ್ತು ಅಭ್ಯಾಸ ಆಯ್ತು, ಹೋಂಗಾರ್ಡ್್ಸ, ಪೊಲೀಸ್‌ನವರು ಹೆಜ್ಜೆ, ಕೈಬೀಸುವ ಬಗ್ಗೆ ಮತ್ತೊಮ್ಮೆ ತಿಳಿಸಿಕೊಟ್ಟರು. ಎಲ್ಲಾ ತಂಡಗಳು ತಮ್ಮ ಜಾಗದಲ್ಲಿ ಬಂತು ನಿಂತವು ನಮ್ಮಗಳಿಗೆ ಕೊನೆಯಲ್ಲಿ ಜಾಗ ಕೊಡಲಾಗಿತ್ತು. ಮುಖ್ಯ ಅಧಿಕಾರಿಗಳು ಬಂದರು ಶುರು ಆಯ್ತು.

ಇವರೆಲ್ಲರೂ ಇದೇ ಜೀವನದಲ್ಲಿ ಕಟ್ಟಕಡೆಯ ಪಥಸಂಚಲನ, ಮತ್ತೆ ಅವಕಾಶ ಸಿಗದೇ ಇಲ್ಲವೇನೋ ಅನ್ನೋ ಹಾಗೆ ಹೆಜ್ಜೆ ಹಾಕಿದರು. ಅಂತೂಇಂತೂ ಎಲ್ಲಾ ಮುಗೀತು. ಆದರ ಕೆಲವು ತಂಡಗಳ ಸೇರ್ಪಡೆ ಬಗ್ಗೆ ಇನ್ನೂ ಏನನ್ನೂ ಹೇಳಿರಲಿಲ್ಲ, ಎಲ್ಲಾ ಮುಗಿಸಿ ಎಲ್ಲಾ ತಂಡದವರನ್ನು ವಾಪಸ್ ಕಳಿಸುವಾಗ ಮೈಕ್‌ನಲ್ಲಿ, ‘ಸಾಂದೀಪನಿ ಹುಡುಗಿಯರ ತಂಡ ನಾಳೆನೂ ಬರಬೇಕು’ ಎಂದಾಗ ಇವರಲ್ಲಿ ಆದ ಖುಷಿ ಅಷ್ಟಿಷ್ಟಲ್ಲ.. ಹೇಳೋಕೆ ಪದಗಳು ಸಾಕಾಗಲ್ಲ. ಎಲ್ಲರೂ ಖುಷಿಯಿಂದ ಒಬ್ಬರಿಗೊಬ್ಬರು ವಿಶ್ ಮಾಡ್ತಾ, ಯಸ್‌ಲೇ… ಅಂತ ಅನ್ಕೊಳ್ತ ಇದ್ರೆ, ಪೂರ್ವಿಕ ಮತ್ತೆ ಕಣ್ಣು ಒದ್ದೆ ಮಾಡ್ಕೊಂಡಳು, ಈ ಬಾರಿ ಸಂತೋಷದಿಂದ ಅಂತೆ. ಕೊನೆಯಲ್ಲಿ ಎಲ್ಲಾ ಸಿದ್ದತೆಗಳನ್ನು ಮುಗಿಸಿ ರಾಷ್ಟ್ರೀಯ ಹಬ್ಬದ ದಿನ ಶಾಲಾ ಸಮವಸ್ತ್ರ, ಕೈಗೆ ಬ್ಯಾಂಡ್, ಗ್ಲೌಸ್, ಪಾಲೀಶ್ ಮಾಡಿದ ಶೂ, ಸರಿಯಾಗಿ ಕಟ್ಟಿದ ಜಡೆ, ತಲೆಯ ಮೇಲೆ ಬಿಳಿ ಟೊಪ್ಪಿಗೆ, ಅದರ ಮೇಲೆ ಧ್ವಜವನ್ನು ಹಾಕಿ ಸಿದ್ದರಾಗಿ ತಮಗೆ ಕೊಟ್ಟ ಜಾಗದಲ್ಲಿ ನಿಂತರು. ಶಿವಮೊಗ್ಗದ ಅಂದಿನ ಉಸ್ತುವಾರಿ ಸಚಿವರು ಶ್ರೀ.ಕಾಗೋಡು ತಿಮ್ಮಪ್ಪ ಧ್ವಜಾರೋಹಣ ಮಾಡಿದರು ಹೆಮ್ಮೆಯಿಂದ ಹೆಜ್ಜೆ ಹಾಕಿ ಎಲ್ಲ ತಂಡಗಳಲ್ಲಿ ಸರಿಸಮನಾಗಿ ಸೇರಿಹೋದರು.

ಒಮ್ಮೆ ತೆಗೆದುಹಾಕಿದಾಗ ಅದನ್ನು ಸವಾಲೆಂದು ಸ್ವೀಕರಿಸಿ, ಮತ್ತೆ ಅವರ ಬಳಿಹೋಗಿ ಅವಕಾಶ ಕೇಳಿ, ಅದನ್ನು ಸರಿಯಾಗಿ ಬಳಸಿಕೊಂಡು ಪ್ರದರ್ಶನ ನೀಡಿದ್ದು, ಈ ವಿದ್ಯಾರ್ಥಿನಿಯರಲ್ಲಿದ್ದ ಒಗ್ಗಟ್ಟು, ಸಂಘಟಿತ ಪ್ರಯತ್ನ ಇದಕ್ಕೆ ಸಂದ ಗೆಲುವು ಅಂದರೆ ತಪ್ಪಾಗಲಿಕ್ಕಿಲ್ಲ. ಅವತ್ತು ಅವರುಗಳು ಕಲಿಸಿದ್ದು ದೊಡ್ಡ ಪಾಠ. ‘ಎಲ್ಲಿ ಸೋತಿದಿವಿ ಅನ್ಕೋತಾರೋ ಅಲ್ಲೇ ಗೆದ್ದು ಬೀಗಬೇಕು’ ಅದಕ್ಕೆ ಬೇಕಾದ ಪ್ರಯತ್ನ ಮಾಡಿದರೆ ಖಂಡಿತವಾಗಿ ಯಶಸ್ಸು ನಮಗೆ ಸಿಗತ್ತೆ ಅನ್ನೋದನ್ನ ಸಾಬೀತು ಮಕ್ಕಳಿಗೆ ಮಕ್ಕಳಿಗೊಂದು ಸಲಾಮ್…

Contact us for classifieds and ads : +91 9742974234 
error: Content is protected !!