ನಮ್ಮ ಶಾಸ್ತ್ರ-ಸಂಪ್ರದಾಯಗಳು ಕೇವಲ ಮನುಷ್ಯನ ಬದುಕಿನ ಸುತ್ತಲ ಪರಿಸರಕ್ಕಷ್ಟೆ ರೂಪುಗೊಂಡಿಲ್ಲ. ವಿಶ್ವದ ಗ್ರಹಗತಿಗಳ ಚಲನಗತಿಯನ್ನಾಧರಿಸಿ ನಮ್ಮ ಸಂಸ್ಕೃತಿ–ಆಚರಣೆಗಳು ಆವಿಷ್ಕಾರಗೊಂಡಿವೆ. ಮನುಷ್ಯನ ಬದುಕಿನೊಂದಿಗೆ ಜೀವರಾಶಿಗಳಲ್ಲದೆ ಸಕಲ ಗ್ರಹಚರಗಳು ಒಳಗೊಂಡಿವೆ ಎಂಬುದನ್ನು ನಮ್ಮ ಋಷಿಗಳು ಗ್ರಹಿಸಿದ್ದಾರೆ.
ಮನುಷ್ಯನ ಹುಟ್ಟು ಬೆಳವಣಿಗೆಯೊಂದಿಗೆ ಗ್ರಹಗತಿಗಳ ಚಲನೆಯನ್ನು ಹೊಂದಿಸಿ ವಿಶ್ಲೇಷಿಸಿದ್ದಾರೆ. ಮನ್ವಂತರ-ಸಂವತ್ಸರಗಳ ಜೊತೆ ತಿಂಗಳು-ದಿನಮಾನಗಳು, ಗಂಟೆ-ನಿಮಿಷಗಳ ಎಣಿಕೆಯ ಮಧ್ಯೆ ಬರುವ ರಾಹು-ಯಮಗಂಡ-ಗುಳಿಕ ಕಾಲಗಳ ಗುಣಿತ ಯಾವ ಗಣಿತಶಾಸ್ತ್ರಕ್ಕೂ ಕಡಿಮೆಯದಲ್ಲ. ನಮ್ಮ ದೇಹಚಲನೆಯೊಂದಿಗೆ ಗ್ರಹಚಲನೆಗೂ ಸಂಬಂಧವಿದೆ. ಈ ಬ್ರಹ್ಮಾಂಡದಲ್ಲಿ ಚರಾಚರ ಎಲ್ಲವೂ ಸೃಷ್ಟಿಯೊಂದಿಗೆ ಪರಿಭ್ರಮಣೆಗೊಳಗಾಗಿವೆ ಎಂಬುದನ್ನು ವೈಜ್ಞಾನಿಕವಾಗಿ ರೂಪಿಸಿದ ಭಾರತೀಯ ಶಾಸ್ತ್ರಗಳು ಎಲ್ಲಾ ಕಾಲಕ್ಕೂ ಸಲ್ಲುವಂಥವು.
ಭಾರತೀಯ ಶಾಸ್ತ್ರಸಂಪ್ರದಾಯದಲ್ಲಿ ಪ್ರತಿಯೊಂದಕ್ಕೂ ಅರ್ಥವಿದೆ. ಪ್ರತಿ ಸಮಯಕ್ಕೂ ಆದ್ಯತೆ ಇದೆ. ಪ್ರತಿ ಕ್ಷಣವೂ ಶಾಸ್ತ್ರಕಣದಲ್ಲಿ ಆವಿರ್ಭವಿಸಿ ಬರುತ್ತವೆ. ಹೀಗಾಗಿ ವರ್ಷದ ಪ್ರತಿ ತಿಂಗಳಲ್ಲೂ ವೈವಿಧ್ಯಮಯವಾದ ಆಚರಣೆಗಳು ಚಾಲನೆಯಲ್ಲಿವೆ. ಅವುಗಳನ್ನು ಪಾಲಿಸುವವರ ಮನದಲ್ಲಿ ಸಾರ್ಥಕ್ಯದ ಭಾವವಿರುತ್ತದೆ. ಅವರ ಬದುಕಲ್ಲಿ ನೆಮ್ಮದಿ ಇರುತ್ತದೆ.
ಹಿಂದೂ ಪಂಚಾಂಗದ 12 ತಿಂಗಳಲ್ಲಿ ಎಂಟನೇ ತಿಂಗಳಾದ ಕಾರ್ತಿಕ ಮಾಸಕ್ಕೆ ವಿಶೇಷವಾದ ಆದ್ಯತೆ ಇದೆ. ಮಾಸಗಳಲ್ಲೆ ಶ್ರೇಷ್ಠ ಮಾಸ ಕಾರ್ತಿಕಮಾಸ ಅಂತ ಕರೆಯಲಾಗುತ್ತದೆ. ಇದು ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರಿಗೆ ಬಹು ಪ್ರಿಯವಾದ ಮಾಸ. ಆಷಾಡದ ಸುಳಿ-ಗಾಳಿಗೆ ತಣ್ಣಗೆ ಮಲಗಿದ್ದ ಶ್ರೀಮನ್ನಾರಾಯಣ ಕಾರ್ತಿಕದಲ್ಲಿ ಎದ್ದೇಳುತ್ತಾನೆ. ಆಗ ಅವನನ್ನು ದೀಪದಿಂದ ಬರಮಾಡಿಕೊಂಡರೆ ಶ್ರೇಯಸ್ಸು ಎಂಬ ಕಾರಣಕ್ಕೆ ಕಾರ್ತಿಕಮಾಸದಲ್ಲಿ ದೀಪ ಬೆಳಗಿಸುತ್ತೇವೆ. ಶಿವನು ತ್ರಿಪುರಾಸುರರ ನಾಶ ಮಾಡಿದ ತಿಂಗಳು ಕಾರ್ತಿಕಮಾಸವಾಗಿರುವುದರಿಂದ ವಿಪತ್ತಿನ ಅಂಧಕಾರ ಕಳೆದು, ವಿದ್ವತ್ತಿನ ಜ್ಞಾನ ಬೆಳೆದ ಅಂಗವಾಗಿ ದೀಪ ಬೆಳಗಿಸುವ ಸಂಪ್ರದಾಯವಿದೆ. ಭಾರತೀಯ ಸಂಸ್ಕೃತಿಯಲ್ಲಿ ಬೆಳಕು ಜ್ಞಾನದ ಸಂಕೇತವಾಗಿದೆ.
ಶ್ರೀಕೃಷ್ಣ ನರಕಾಸುರನನ್ನು, ಶ್ರೀ ಸುಬ್ರಹ್ಮಣ್ಯ ತಾರಕಾಸುರನನ್ನು, ಶ್ರೀ ವಾಮನನು ಬಲಿಚಕ್ರವರ್ತಿಯ ಹುಟ್ಟಡಗಿಸಿದ ದೀಪಾವಳಿಯೂ ಕಾರ್ತಿಕಮಾಸದಲ್ಲೇ ಬರುತ್ತೆ. ಇದರಿಂದಾಗಿ ಕಾರ್ತಿಕಮಾಸದಲ್ಲಿ ಮಾಡುವ ದೀಪಾರಾಧನೆ, ಪೂಜೆ-ವ್ರತಗಳು ಹೆಚ್ಚು ಫಲಪ್ರದಾಯವಾಗಿರುತ್ತೆ.
ದೇಹ-ಮನಸ್ಸು-ಬುದ್ಧಿಯಾದ ತ್ರಿಕರಣಗಳನ್ನು ಶುದ್ಧಿಯಾಗಿಟ್ಟುಕೊಂಡು ಧರ್ಮಕಾರ್ಯಗಳನ್ನು ಮಾಡಿದರೆ ಶ್ರೇಷ್ಠ ಫಲ ದೊರೆಯುತ್ತದೆ. ಮನೆಯ ಮುಂದೆ ಒಂದು ಸಣ್ಣ ದೀಪ ಬೆಳಗಿಸಿದರೂ, ಬೌದ್ಧಿಕ-ಮಾನಸಿಕ-ಆಧ್ಯಾತ್ಮಿಕ ಬೆಳವಣಿಗೆಯಲ್ಲದೆ, ಭೌತಿಕ ಬೆಳವಣಿಗೆಗೂ ಸಹಾಯಕವಾಗುತ್ತದೆ. ಪುರಾಣಗಳಲ್ಲೆ ಅತಿದೊಡ್ಡದಾದ ಸ್ಕಾಂದಪುರಾಣದಲ್ಲೂ ಕಾರ್ತಿಕಮಾಸಾಚರಣೆ ಶ್ರೇಷ್ಠತೆಯ ವಿವರವಿದೆ.
ಮನುಷ್ಯರಲ್ಲಿ ಹುದುಗಿರಬಹುದಾದ ತಮೋಗುಣಗಳನ್ನು ದಮನಿಸಿ, ರಜೋಗುಣಗಳನ್ನು ಉದ್ದೀಪಿಸುವ ನಮ್ಮ ಶಾಸ್ತ್ರಸಂಪ್ರದಾಯಗಳು ಸದಾ ಸಮಾಜದ ಹಿತ ಕಾಯುವ ಕೆಲಸ ಮಾಡುತ್ತವೆ. ಅದರ ತತ್ವಗುಣಗಳು ಸದಾ ಕಾಲ ಸತ್ವಪೂರ್ಣವಾಗಿರುತ್ತವೆ. ಆಗಾಗ್ಗೆ ಮನುಷ್ಯನಲ್ಲಿ ಪುಟಿದೇಳುವ ದುರಾಸೆ-ಸ್ವಾರ್ಥ ಚಿಂತನೆಗಳು, ದ್ರೋಹ-ವಂಚನೆಗಳ ಮೋಹಗಳನ್ನು ನಿಗ್ರಹಿಸುವ ಶಕ್ತಿ ನಮ್ಮ ಶಾಸ್ತ್ರಸಂಪ್ರದಾಯಗಳಲ್ಲಿದೆ. ಪರರನ್ನು ತನ್ನಂತೆ ಪೋಷಿಸುವ-ಪ್ರೇಮಿಸುವ ಒಳ್ಳೆಯ ಬುದ್ಧಿ ನೀಡುವ ರಜೋಗುಣಗಳನ್ನು ಪ್ರಚೋದಿಸುವ ಶಕ್ತಿ ಸದಾಚರಣೆಗಳಲ್ಲಿವೆ. ಆಚಾರ-ವಿಚಾರಗಳನ್ನು ಪಾಲಿಸದೆ ಮನಸೋ ಇಚ್ಛೆ ವರ್ತಿಸುವವರಲ್ಲಿ ಕೆಟ್ಟ ಗುಣಗಳು ಹುಟ್ಟುತ್ತವೆ. ಇಂಥ ತಮೋಗುಣ ಹೆಚ್ಚಿರುವವರು ಮನುಷ್ಯರಾಗಿರದೆ ದೈತ್ಯರಾಗಿರುತ್ತಾರೆ. ರಾಕ್ಷಸಗುಣಗಳನ್ನು ತೊಡೆದು, ಮಾನವೀಯ ಗುಣಗಳನ್ನು ಪ್ರೇರೇಪಿಸುವ ಆಚರಣೆಗಳು ನಮ್ಮ ಬದುಕಿಗೆ ಪೂರಕ. ಇಂಥ ಸದಾಚಾರದ ಪ್ರತೀಕವಾದ ಕಾರ್ತಿಕಮಾಸವನ್ನು ಶುದ್ದ ಮನಸ್ಸಿನಿಂದ ಆಚರಿಸಿದರೆ, ‘ಸಚ್ಚಿದಾನಂದ’ದ ಒಳ್ಳೆಯ ಮನಸ್ಸು ಪ್ರಾಪ್ತವಾಗುತ್ತದೆ.