Articles

“ವೀರಯೋಧ” ಅವರ ಕಥೆಯನ್ನು ಅವರ ಮುಂದೆ ಅಭಿನಯಿಸಿದ್ದು…

- ಚೇತನ್ ಸಿ ರಾಯನಹಳ್ಳಿ

ಇಷ್ಟು ದಿನಗಳಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಬಂದು ಹೋಗಿದ್ದಾರೆ. ಆದರೆ ಒಂದು ಬ್ಯಾಚ್ ನ ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ನನ್ನ ಹಿಂದೆಯೆ ಓಡಾಡಲು ಶುರುಮಾಡಿದ್ದರು. ಕಾರಣ ಇಷ್ಟೇ, ಅಷ್ಟು ಮಕ್ಕಳು ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರೇ ಆಗಿದ್ದರು. ನಾನೂ ಕೂಡ ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ನಾನು ಕೂಡ ರಂಗಭೂಮಿಯಿoದ ಬಂದವನಾಗಿದ್ದರಿAದ ಒಂದಿಷ್ಟು ಸಲುಗೆ ಆ ವಿದ್ಯಾರ್ಥಿಗಳ ಗುಂಪಿನ ಜೊತೆಗಿತ್ತು.

sri krishnadevaraya hampi

ಶಂತನು, ಶಶಾಂಕ್, ಗೌತಮ್, ಸಮರ್ಥ್ ಇವರುಗಳು ಪ್ರಮುಖರು. ‘ಪ್ರತಿಭಾಕಾರಂಜಿಯ ವಿಷಯ’. ಅದಕ್ಕೆ ಸಂಬoಧಿಸಿದ ಶಿಕ್ಷಕರಾಗಿ ನಾನು ಮತ್ತು ಹಿಂದಿ ಮೇಡಂ ಅಂಬುಜಾಕ್ಷಿ ಇದ್ದೆವು. ಬಹುತೇಕ ಈ ವಿದ್ಯಾರ್ಥಿಗಳೇ ಹೆಸರು ಕೊಟ್ಟಿದ್ದರು. ನಾಟಕ ಎಂದ ತಕ್ಷಣ ಇವರಿಗೆ ನಾನೇ ನೆನಪಾಗುತ್ತಿದ್ದೆ. ಈ ವಾನರ ಸೇನೆಯನ್ನು ಸೇರಿಸಿಕೊಂಡು ನಾಟಕವನ್ನು ಸಿದ್ಧಪಡಿಸಿದ್ದೂ ಆಯಿತು. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಅನೇಕ ಸ್ಫರ್ಧೆಗಳಲ್ಲಿ ಬಹುಮಾನವನ್ನು ಪಡೆದಿದ್ದಾಯಿತು. ಗೌತಮ್ ಸಾಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮಸ್ಥಾನ ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದ, ನಾಟಕಕ್ಕೆ ದ್ವಿತೀಯ ಸ್ಥಾನ ಬಂದದ್ದರಿoದ ಮುಂದಿನ ಹಂತದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬುದು ಇವರಿಗೆ ಅರಿವಾಯಿತು. ಎಲ್ಲರನ್ನೂ ಕರೆದು ಪ್ರಶಸ್ತಿಯೊಂದೇ ಮುಖ್ಯವಲ್ಲ ಬಿಡಿ. ನಿಮಗೆ ಉತ್ತಮವಾಗಿ ಅಭಿನಯಿಸಿದ್ದೇವೆ ಎಂಬ ತೃಪ್ತಿ ನಿಮಗೆ ಇದ್ದರೆ ಸಾಕು. ಭಾಗವಹಿಸುವ ಅವಕಾಶ ನಮ್ಮ ಶಾಲೆಯ ಅಷ್ಟು ಮಕ್ಕಳಲ್ಲಿ ನಿಮಗೆ ಮಾತ್ರ ಸಿಕ್ಕಿದೆ ಅದಕ್ಕೆ ಖುಷಿ ಇರಲಿ, ಪ್ರಶಸ್ತಿ ಬಂದಿದೆ ತಾನೇ ಸಂತಸದಿoದಿರಿ ಎಂದು ಧೈರ್ಯದ ನಾಲ್ಕು ಮಾತುಗಳನ್ನು ಆಡಿದ್ದಾಯಿತು. ಅಲ್ಲಿಂದ ಎಲ್ಲರೂ ತಮ್ಮ ಮನೆಗೆ ಹೋದದ್ದಾಯಿತು. ಮರುದಿನ ಎಲ್ಲರೂ ಯಾವಯಾವ ಸ್ಪರ್ಧೆಯಲ್ಲಿ ಬಹುಮಾನ ಬಂತು? ಭಾಗವಹಿಸಿದ್ದ ಮಕ್ಕಳನ್ನು ವಿಚಾರಿಸುತ್ತಿದ್ದರು. ಎಲ್ಲರೂ ಖುಷಿಯಿಂದ ಉತ್ತರಿಸುತ್ತಲಿದ್ದರು. ಅಂದು ಪ್ರಾರ್ಥನೆ ಎಲ್ಲಾ ಮುಗಿದ ಮೇಲೆ ನಮ್ಮ ಹಿಂದಿ ಟೀಚರ್ ‘ನೆನ್ನೆ ನಡೆದಿದ್ದ ಪ್ರತಿಭಾಕಾರಂಜಿಯಲ್ಲಿ ನಮ್ಮ ಶಾಲೆಯ ಮಕ್ಕಳು 18 ವಿಭಾಗದಲ್ಲಿ ಭಾಗವಹಿಸಿ 16 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾರೆ, ಅವರುಗಳು ವೇದಿಕೆಗೆ ಬಂದು ಪ್ರಶಸ್ತಿಯನ್ನು ಸ್ವೀಕರಿಸಬೇಕು’ ಎಂದರು ಪ್ರಶಸ್ತಿ ಪಡೆದ ಮಕ್ಕಳು ಸಂತಸದಿoದ ವೇದಿಕೆ ಬಂದು ಹಿರಿಯ ಶಿಕ್ಷಕರಿಂದ ಸ್ವೀಕರಿಸಿದರು.

ಇದಾಗಿ ಹಲವು ದಿನಗಳೇ ಕಳೆದವು ಆಗ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ‘ಗೀತಭಾರತಿ’ ಎಂಬ ದೇಶಭಕ್ತಿಗೀತೆಗಳ ಕಾರ್ಯಕ್ರಮದಲ್ಲಿ ಸುಮಾರು 800 ಮಕ್ಕಳು ಹಾಡಲಿದ್ದಾರೆ, ಹಾಗೆಯೇ ಭಾರತೀಯ ಸೇನೆಯಲ್ಲಿ ಅತ್ಯುನ್ನತವಾದ ‘ಪರಮವೀರ ಚಕ್ರ’ ಪ್ರಶಸ್ತಿ ಪುರಸ್ಕೃತ ಯೋಗೇಂದ್ರ ಸಿಂಗ್ ಯಾದವ್ ಅತಿಥಿಗಳಾಗಿ ಬರಲಿದ್ದಾರೆ. ಅಲ್ಲಿ ನಮ್ಮ ಶಾಲೆಯ ಮಕ್ಕಳಿಗೆ 10 ನಿಮಿಷದೊಳಗೆ ದೇಶಭಕ್ತಿಯ ಬಗ್ಗೆ ಒಂದು ಮೂಕಾಭಿನಯವನ್ನು ಅಭಿನಯಿಸಬಹುದಾ? ಎಂಬ ಪ್ರಶ್ನೆಯನ್ನು ಆಯೋಜಕರು ನಮ್ಮ ಮುಖ್ಯೋಪಾಧ್ಯರಿಗೆ ಕೇಳಿದ್ದರಂತೆ. ಅವರು ನನ್ನ ಬಳಿ ಬಂದು ವಿಚಾರಿಸಿದರು, ಮಕ್ಕಳನ್ನು ಕೇಳಿ ತಿಳಿಸುವೆ ಎಂದೆ. ಮಕ್ಕಳನ್ನು ಕರೆದು ಕೇಳಿದೆ ಏನು ಮಾಡೋದು? ‘ಸರ್ ಅಂತ ದೊಡ್ಡ ವ್ಯಕ್ತಿ ಬರ್ತಾ ಇದಾರೆ ಅವರ ಮುಂದೆ ನಮ್ಮ ಪ್ರತಿಭೆಗೆ ಅವಕಾಶ ಸಿಕ್ಕಿರೋದೆ ದೊಡ್ಡ ವಿಷಯ. ಒಪ್ಕೊಳಿ ಸರ್ ಮಾಡೋಣ’ ಧನುಶ್ ನಾವುಡ ಹೇಳಿದ ಎಲ್ಲರೂ ಸೇರಿ ದನಿಗೂಡಿಸಿದರು. ನಮ್ಮ ಮುಖ್ಯೋಪಾಧ್ಯಾಯರಿಗೂ ತಿಳಿಸಿದ್ದಾಯಿತು. ಯಾವ ವಿಷಯವನ್ನು ಕುರಿತು ಮಾಡಬೇಕೆಂದು ಹೇಳಿದಾಗ ಬರುತ್ತಿರುವ ‘ಮಹಾನ್ ಯೋಧ’ ಅವರ ಬಗ್ಗೆಯೇ ಏಕೆ ಮಾಡಬಾರದು? ಎಂದು ನಮ್ಮ ಗುರುಗಳು ತಿಳಿಸಿದಾಗ ಆಗಬಹುದು ಎಂದು ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದೆವು. 18 ವರ್ಷವಿದ್ದಾಗಲೇ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಸರಿಸುಮಾರು 18 ಗುಂಡುಗಳು ದೇಹದಲ್ಲಿದ್ದರೂ ಹೋರಾಟ ಮಾಡಿದ ರೋಚಕ ಕತೆಯನ್ನು ತಿಳಿದುಕೊಂಡು, ಎಲ್ಲಾ ಮಕ್ಕಳನ್ನು ಕೂರಿಸಿಕೊಂಡು ಈ ವಿಚಾರವನ್ನು ಮಾತನಾಡಿ, ಹೇಗೆ ಮಾಡುವುದು? ಏನನ್ನು ಮಾಡುವುದು ಎಂದು ಚರ್ಚಿಸಿ,ಸ್ವಾತಂತ್ರ್ಯ ಚಳುವಳಿಯಿಂದ ಶುರುಮಾಡಿ, ಯೋಧ ಸೇನೆ ಸೇರುವುದು, ಅಲ್ಲಿಯ ತರಬೇತಿಗಳು, ಯುದ್ಧದ ಸಮಯದಲ್ಲಿ ಪ್ರದರ್ಶಿಸುವ ಧೈರ್ಯ, ಸಾಹಸ, ಸಾಧನೆಗಳನ್ನು ತಿಳಿಸುವುದು ಎಂದು ನಿರ್ಧಾರ ಮಾಡಲಾಯಿತು. ಮೂಕಾಭಿನಯದಲ್ಲಿ ಸಂಭಾಷಣೆಗಳು ಇರುವುದಿಲ್ಲ ಕೇವಲ ಅಭಿನಯ, ಹಿನ್ನೆಲೆ ಸಂಗೀತದಿoದ ನಾವು ಹೇಳುವ ವಿಷಯವನ್ನು ತಿಳಿಸಬೇಕಾಗಿತ್ತು. ಹಾಗಾಗಿ ಮೂಕಾಭಿನಯ ಎಂದರೆ ಏನು ಎಂಬುದನ್ನು ಇವರುಗಳಿಗೆ ತಿಳಿಸಿದ್ದಾಯಿತು.
ನಿಧಾನವಾಗಿ ಅಭ್ಯಾಸವನ್ನು ಶುರುಮಾಡಿದೆವು. ಒಂದಿಷ್ಟು ದಿನಗಳಲ್ಲಿ ಮಕ್ಕಳು ಬಹಳ ಆಸಕ್ತಿಯಿಂದ ಕಲಿತದ್ದು ಆಯಿತು. ನಾವು ಕಾಯುತ್ತಿದ್ದ ಆ ದಿನವೂ (08-08-2015) ಬಂದೇ ಬಿಟ್ಟಿತು. ವಿವಿಧ ಶಾಲೆಯ ಮಕ್ಕಳು ದೇಶಭಕ್ತಿಗೀತೆಯನ್ನು ಗುಂಪಲ್ಲಿ ಹಾಡುತ್ತಿದ್ದರು. ಅರ್ಧ ಕರ‍್ಯಕ್ರಮದ ನಂತರದಲ್ಲಿ ನಮ್ಮ ಮಕ್ಕಳ ಮೂಕಾಭಿನಯ. ಎಲ್ಲರನ್ನೂ ತಯಾರು ಮಾಡಿ, ಮೇಕಪ್, ವಸ್ತ್ರವಿನ್ಯಾಸವನ್ನು ಮಾಡಿ ಸಿದ್ದಗೊಳಿಸಿದ್ದಾಗಿತ್ತು. ಆರಂಭ ಆಗುವ ಮೊದಲೇ ನಾವು ತಿಳಿಸಿದ್ದೆವು, ‘ಇದು ಇಂದಿನ ಕಾರ್ಯಕ್ರಮದ ಅತಿಥಿಗಳಿಗೆ ಅರ್ಪಿಸುತ್ತಿದ್ದೇವೆ’ ಎಂದು ನಿಧಾನವಾಗಿ ಸ್ವಾತಂತ್ಯ ಚಳುವಳಿಯ ಮೊದಲ ಹೆಜ್ಜೆ , ಮಂಗಲಪಾoಡೆ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಮಹಾತ್ಮಾಗಾಂಧಿಯವರ ಒಂದೊoದೊ ಎಳೆಗಳನ್ನು ಸೇರಿಸಿ ತದನಂತರದಲ್ಲಿ ಸೇನೆಗೆ ಸೇರುವ ತರುಣ ತನ್ನ ಕುಟುಂಬವನ್ನು ಬಿಟ್ಟು ಬರುವುದು, ಸೇನೆಯ ತರಬೇತಿ, ಅಭ್ಯಾಸ, ಎದುರಾಗುವ ಸವಾಲುಗಳು, ಯುದ್ಧ, ಹೋರಾಟ, ವೀರತನದ ಬಗ್ಗೆ ಹೇಳಿ ಕೊನೆಯಲ್ಲಿ ಸೇನೆಯಲ್ಲಿರುವ ಎಲ್ಲಾ ಯೋಧರಿಗೂ ನಮನವನ್ನು ತಿಳಿಸಿದೆವು. ದೊಡ್ಡ ಕರತಾಡನ.

ಆಯೋಜಕರು ಮಕ್ಕಳನ್ನು ಒಂದು ಕ್ಷಣ ವೇದಿಕೆಯಲ್ಲಿ ನಿಲ್ಲಿಸಿ ಸಿಕ್ಕ ಕಡಿಮೆ ಅವಧಿಯಲ್ಲಿ ಸ್ವಾತಂತ್ಯ ಚಳುವಳಿಯ ಹಾದಿ, ಯೋಧರ ಬದುಕಿನ ಬಗ್ಗೆ ಅದೆಷ್ಟು ಸೊಗಸಾಗಿ ಅಭಿನಿಯಿಸಿದ್ದೀರಿ, ಮತ್ತೊಮ್ಮೆ ಜೋರಾದ ಚಪ್ಪಾಳೆ ನೀಡಿ ಈ ಮಕ್ಕಳಿಗೆ ಎಂದಾಗ, ಮಕ್ಕಳು ಅದೇನೋ ಸಾಧಿಸಿದ ಹೆಮ್ಮೆ. ಪ್ರತಿಯೊಬ್ಬರೂ ತುಂಬಾ ಸುಂದರವಾಗಿ ಮಾಡಿದಿರಿ, ಅಭಿನಂದನೆಗಳು ಎಂದು ತಿಳಿಸುತ್ತಲೇ ಇದ್ದರೂ ನಮ್ಮ ಮಕ್ಕಳು ಆ ಖುಷಿಯನ್ನು ಅನುಭವಿಸುತ್ತಿದ್ದರು. ಒಂದೇ ಒಂದು ಬೇಸರವೆಂದರೆ ಆ ವೀರ ಯೋಧರ ಜೊತೆಯಲ್ಲಿ ಒಂದು ಭಾವಚಿತ್ರ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು. ಆದರೆ ಅವರು ನಮ್ಮ ಅಭಿನಯವನ್ನು ವೀಕ್ಷಿಸಿರುವುದೇ ನಮಗೆ ಹೆಮ್ಮೆ ಎಂದು ಮಕ್ಕಳೇ ಮಾತನಾಡಿಕೊಳ್ಳುತ್ತಿದ್ದರು.

ಕೇವಲ ಮನೋರಂಜನೆಗಾಗಿ ಅಲ್ಲ ಮನೋವಿಕಾಸಕ್ಕಾಗಿ ನಾವು ಮಾಡುತ್ತಿರುವ ಚಟುವಟಿಕೆಗಳು ಎಂಬುದು ಮಕ್ಕಳಿಗೆ ಅರಿವಾಗಿತ್ತು, ಸೈನಿಕರ ಸಾಧನೆಯ ಬಗ್ಗೆ ಹೆಮ್ಮೆಯ ಭಾವ ಮೂಡಿತ್ತು, ದೇಶದ ಬಗ್ಗೆ ದೇಶಭಕ್ತಿಯ ಬಗ್ಗೆ ಮಕ್ಕಳು ಆಸಕ್ತಿಯಿಂದ ತಿಳಿಯಲು ಪ್ರಾರಂಭಿಸಿದರು. ಇವುಗಳನ್ನೆಲ್ಲಾ ನೋಡಿದಾಗ ಮಕ್ಕಳು ದೇಶಕ್ಕೆ ಏನಾದರೂ ಉತ್ತಮ ಕೊಡುಗೆ ನೀಡುತ್ತಾರೆಯೇ ಹೊರತು ದೇಶಕ್ಕೆ ಮಾರಕವಾಗುವುದಿಲ್ಲ, ದೇಶದ ಸಂಪತ್ತನ್ನು ಹಾಳುಮಾಡುವುದಿಲ್ಲ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುತ್ತಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ, ಸಂದೇಹವೂ ಇಲ್ಲ ಎಂಬ ಭಾವನೆ ನನ್ನಲ್ಲಿ ಮೂಡಿಸಿದ್ದಾರೆ. ಹಾಗೆ ಇದನ್ನು ಮುಂದುವರೆಸಿಕೊoಡು ಹೋಗುತ್ತಾರೆ ಎಂಬ ನಂಬಿಕೆ ಸದಾ ಇರುತ್ತದೆ…

Contact us for classifieds and ads : +91 9742974234 
error: Content is protected !!