ಪ್ರತೀವರ್ಷವೂ ಬಿಡುವಾದಾಗಲೆಲ್ಲ ಶಾಲೆಗೆ ತಪ್ಪದೇ ಬರುವ ವಿದ್ಯಾರ್ಥಿ ‘ರಾಹುಲ್‌ಬಾಳಿಗ’ ಒಂದೆರಡು ವರ್ಷ ಬರದೇ ಇದ್ದವನು ಇದ್ದಕ್ಕಿದ್ದಂತೆ ಶಾಲಾವಾರ್ಷಿಕೋತ್ಸವ ಸಮೀಪವಿದ್ದಾಗ ಶಾಲೆಗೆ ಬಂದಾಗ ಸಹಜವಾಗಿ ಮುಖ್ಯೋಪಾಧ್ಯಾಯರು, ‘ಏನು ಮಾಡ್ತಾ ಇದೀಯ ಈಗ?’ ಅಂದಾಗ, ‘ಸರ್ ಇಂಡಿಯನ್ ನೇವಿಯಲ್ಲಿ ಸೇವೆಸಲ್ಲಿಸ್ತಾ ಇದೀನಿ, ಈಗ 20ದಿನ ರಜೆ ಹಾಗಾಗಿ ಊರಿಗೆ ಬಂದ ತಕ್ಷಣ ಶಾಲೆಗೆ ಬಂದೆ’ ಆ ಕ್ಷಣವೇ ‘ಸೂಪರ್.. ಹಾಗಾದರೆ ಈ ಬಾರಿಯ ಶಾಲಾವಾರ್ಷಿಕೋತ್ಸವಕ್ಕೆ ಮುಖ್ಯಅತಿಥಿಯಾಗಿ ತಪ್ಪದೇ ಬರಲೇಬೇಕು’ ಎಂಬ ಬೇಡಿಕೆಗೆ ಬೇಡವೆಂದು ಕೊನೆಯದಾಗಿ ಒಪ್ಪಿಕೊಳ್ಳಬೇಕಾಯಿತು. ಶಾಲೆಯಲ್ಲಿ ಓದುತ್ತಿದ್ದಾಗ ಪ್ರಶಸ್ತಿ ತೆಗೆದುಕೊಳ್ಳುತ್ತಿದ್ದವ ಈಗ ಅದೇ ಶಾಲೆಯಲ್ಲಿ ಪ್ರಶಸ್ತಿಕೊಡುವಾಗ ಆಗುವ ಭಾವವೇ ಬೇರೆ.. ಬಹುತೇಕ ಮಕ್ಕಳು ಅವರ ಜೊತೆಗೆ ಪೋಟೋ ತೆಗೆದುಕೊಳ್ಳಲು ಮುಗಿಬಿದ್ದದ್ದು ಸುಳ್ಳಲ್ಲ. ಮುಂದಿನಬಾರಿ ಬರುವಾಗ ಮಕ್ಕಳಿಗೆ ಒಂದು ತರಗತಿಯನ್ನು÷ ತೆಗೆದುಕೊಳ್ಳಬೇಕು ಎಂಬ ಶಿಕ್ಷಕರ ಮಾತಿಗೆ ಒಪ್ಪಿದ್ದಾಯಿತು.
ಬಹಳ ದಿನಗಳ ನಂತರ ಕರ್ತವ್ಯ ಮುಗಿಸಿ ಮತ್ತೊಮ್ಮೆ ಎರಡು ವಾರಗಳ ಕಾಲ ರಜೆ ಎಂದು ತಿಳಿದಾಗ, ಮುಖ್ಯೋಪಾಧ್ಯಾಯರಿಗೆ, ಗಣಿತ-ಸಂಸ್ಕೃತ ಶಿಕ್ಷಕರಿಗೆ ತಾನು ಇರುವಲ್ಲಿಂದಲೇ ಕಾಲ್ ಮಾಡಿ, ‘ರಜೆಗೆ ಊರಿಗೆ ಬರುತ್ತಿದ್ದೇನೆ, ಹಾಗಾಗಿ ಶಾಲಾ, ಕಾಲೇಜ್ ಮಕ್ಕಳಿಗೆ ಸೇನೆ ಎಂದರೆ ಗಡಿಯಲ್ಲಿ ಮಾತ್ರವಲ್ಲ ಇತರ ಬೇರೆ ಬೇರೆ ವಿಭಾಗಗಳಲ್ಲಿ ವಿಪುಲವಾಗ ಅವಕಾಶಗಳಿವೆ, ಅವುಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಣ್ಣ ಮಾತುಕತೆ/ಸಂವಾದಕ್ಕೆ ತಯಾರಾಗಿದ್ದೇನೆ’ ಎಂಬ ಮಾತುಬಂದಿತು.
ಶಾಲೆಗೆ ಬಂದಾಗ, ಮಕ್ಕಳಿಗೆ ಸೇನೆಯಲ್ಲಿ ಇರುವ ವಿವಿಧ ವಿಭಾಗಗಳು, ಯಾವ ಯಾವ ಓದಿಗೆ ಯಾವ ಹುದ್ದೆ ಇದೆ, ಅದಕ್ಕೆ ಬೇಕಾದ ತಯಾರಿ ಹೀಗೆ ಹಲವಾರು ಮಾಹಿತಿಗಳನ್ನು ತಿಳಿಸಿ, ವಿದ್ಯಾರ್ಥಿಗಳು ಕೇಳಿದ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದೂ ಆಯಿತು. ಕೊನೆಯಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರಿಂದ ‘ಕಿರುಸನ್ಮಾನವನ್ನು ಸಬ್‌ಲೆಫ್ಟಿನೆಂಟ್ ರಾಹುಲ್‌ಬಾಳಿಗ ಸರ್ ಸ್ವೀಕರಿಸಬೇಕು’ ಎಂದಾಗ ‘ಸರ್, ನೀವುಗಳು ನನಗೆ ಗುರುಗಳು, ಆದರೆ ನೀವುಗಳು ನನಗೆ ಸರ್ ಅನ್ನಬೇಡಿ, ಮುಜುಗರ ಆಗತ್ತೆ ಅಲ್ಲದೆ ನನಗೆ ಇದೆಲ್ಲ ಬೇಡ, ನಾನು ಕೂತು ನೀವು ನಿಲ್ಲುವುದು ಸರಿ ಅನ್ಸಲ್ಲ ನನಗೆ’ ಎಂಬ ಮುಗ್ದತೆಗೆ ಮುಖ್ಯೋಪಾಧ್ಯಾಯರು, ‘ಈಗ ನೀವು ನಮ್ಮ ಅತಿಥಿ, ನಮ್ಮ ಶಾಲೆಯ ವಿದ್ಯಾರ್ಥಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆ, ದಯಮಾಡಿ ಸ್ವೀಕರಿಸಿ ಸರ್, ಇಲ್ಲ ಎಂದು ಹೇಳುವ ಹಾಗಿಲ್ಲ’ ಎಂದರು ಬಹುತೇಕ ಶಿಕ್ಷಕರು ತಮ್ಮ ವಿದ್ಯಾರ್ಥಿಯಾದರೂ ಈಗ ಎಲ್ಲರೂ ‘ಸರ್’ ಎಂದು ಸಂಭೋದಿಸಲು ಶುರುಮಾಡಿದಾಗ ಎಲ್ಲರ ಮಾತಿಗೂ ಒಪ್ಪಿದ್ದಾಯಿತು. ಸ್ವೀಕರಿಸಿದ್ದಾಯಿತು.
ಬಿಡುವಿದ್ದಾಗಲೆಲ್ಲ ಶಾಲೆಗೆ ತಪ್ಪದೇ ಭೇಟಿ ನೀಡುತ್ತಾ, ತಾನು ಆಡಿದ್ದು, ಗೆಳೆಯರೊಡನೆ ಕಳೆದ ಸಮಯ, ಶಿಕ್ಷಕರುಗಳ ಪಾಠಗಳು ಹೀಗೆ ಪ್ರತಿಯೊಂದು ಮೆಲುಕು ಹಾಕುತ್ತ ನೆನಪಿನಂಗಳಕ್ಕೆ ಜಾರುತ್ತಿದ್ದ. ರಜೆ ಸಿಗುವುದೇ ಕಡಿಮೆ, ಹೊಸತನದ ಊಟ, ವಾತಾವರಣ, ಹೊಂದಿಕೊಳ್ಳಲು ತೆಗೆದುಕೊಂಡ ಸಮಯ ಹೀಗೆ ಹಲವಾರು ಸೇನೆಯಲ್ಲಿನ ತನ್ನ ಅನುಭವಗಳನ್ನು ತಿಳಿಸುವಾಗ ಶಿಕ್ಷಕರೆಲ್ಲರೂ ವಿದ್ಯಾರ್ಥಿಗಳಂತೆ ಕೂತು ಆಲಿಸುತ್ತಿದ್ದೆವು.
ಗಣರಾಜ್ಯೋತ್ಸವಕ್ಕೆ ಸಂಬoಧಿಸಿದoತೆ ಶಿಕ್ಷಕರೆಲ್ಲರೂ ಸೇರಿ ಚರ್ಚಿಸುವಾಗ ಈಬಾರಿ ಧ್ವಜಾರೋಹಣವನ್ನು ನೆರವೇರಿಸುವುದು ಭಾರತೀಯಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ ‘ಲೆಫ್ಟಿನೆಂಟ್.ರಾಹುಲ್ ಬಾಳಿಗ’ ಅವರು ಎಂದಾಗ ಮುಖ್ಯೋಪಾಧ್ಯಾಯರು ತಿಳಿಸಿದಾಗ ಎಲ್ಲರೂ ಸಂತೋಷದಿoದ ಒಪ್ಪಿದ್ದಾಯಿತು. ಶಾಲೆಯಲ್ಲಿ ಓದಿದ ಹುಡುಗನೊಬ್ಬ ಆ ಶಾಲೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸುವುದೇ ಒಂದು ಹೆಮ್ಮೆ.
‘ಶಿಕ್ಷಕರು ಏನೇ ಕೇಳಿದರೂ ಇಲ್ಲ ಎಂದು ಹೇಳುವ ಹಾಗಿಲ್ಲ ಎಂಬುದನ್ನು÷ಸೇನೆಯಲ್ಲಿ ಮೊದಲು ಹೇಳಿಕೊಟ್ಟಿರುವುದು. ಹಾಗಾಗಿ ತಪ್ಪದೇ ಬರುತ್ತೇನೆ’ ಎಂದು ಒಪ್ಪಿಗೆಯ ಮಾತನ್ನಾಡಿದರು.
ಬೆಳಗ್ಗೆ ಶಾಲೆಗೆ ಬಂದು ಎಲ್ಲಾ ವಿದ್ಯಾರ್ಥಿಗಳ ಸಾಲಿನಲ್ಲಿ ನಿಲ್ಲುತ್ತಿದ್ದ ವಿದ್ಯಾರ್ಥಿ ಇಂದು ಅವರನ್ನು ಉದ್ದೇಶಿಸಿ ಅದೇ ಶಾಲೆಯಲ್ಲಿ ಮಾತನಾಡುವುದು ರೋಮಾಂಚನವಲ್ಲದೇ ಇನ್ನೇನು?
ಹೇಗೆ ಅನ್ನಿಸುತ್ತಿದೆ ಈ ಎಲ್ಲಾ ಅನುಭವಗಳು ಎಂದು ಒಮ್ಮೆ ಕೇಳಿದಾಗ. ‘ಶಾಲೆ ನನ್ನ ಬದುಕಿನ ಬಹಳ ಮುಖ್ಯಭಾಗ, ಇಲ್ಲಿ ಕಲಿತ ಶಿಸ್ತು ನನ್ನ ಬದುಕಿನ ಮಾರ್ಗವನ್ನು ಬದಲಾಯಿಸಿತು ಅದರಲ್ಲಿ ಯಾವುದೇ ಅನುಮಾನವಿಲ್ಲ. ಯಾರನ್ನೂ ಇಲ್ಲಿ ಸುಮ್ಮನೆ ಇರಲು ಬಿಡುತ್ತಿರಲಿಲ್ಲ ಹಿಂಜರಿಯುತ್ತಿದ್ದ ನನ್ನನ್ನು ಆಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ, ಥ್ರೋಬಾಲ್ ತಂಡದ ನಾಯಕನಾಗಿ ಮಾಡಿದ ದೈಹಿಕಶಿಕ್ಷಕ ಬಸವರಾಜ್ ಸರ್ ತುಂಬಿದ ಉತ್ಸಾಹ ಜಿಲ್ಲಾ ಮಟ್ಟದ ತನಕ ತಂಡವನ್ನು ಮುನ್ನಡೆಸುವಂತೆ ಮಾಡಿತು, ಇಂದು ಅವರೇ ನನಗೆ ‘ಸಲ್ಯೂಟ್ ಗೌರವ’ ಕೊಟ್ಟದ್ದು ಎಂದಿಗೂ ಮರೆಯಲಾಗದ್ದು, ಪಾಠಗಳ ಬಗ್ಗೆ ಏನಾದರೂ ಗೊಂದಲವಿದ್ದರೆ ಮನೆಗೆ ಹೋದಾಗಲೂ ಬೇಸರವಿಲ್ಲದೇ ತಿಳಿಸುತ್ತಿದ್ದ ಸುಧೀಂದ್ರಸರ್, ಸದಾ ಉತ್ತಮ ಚಿಂತನೆಗಳನ್ನು ರೂಢಿಸಿಕೊಳ್ಳಲು ತಿಳಿಸುತ್ತಿದ್ದ ಸ್ಕಂದಸರ್, ಪಾಠಗಳ ಜೊತೆಗೆ ಬದುಕಿನ ಮೌಲ್ಯಗಳನ್ನು ತಿಳಿಸಿದ ವರ್ಮಾಸರ್.. ಹೀಗೆ ಎಲ್ಲರೂ ಎಲ್ಲಾ ವಿದ್ಯಾರ್ಥಿಗಳಿಗೂ ತೋರಿಸುತ್ತಿದ್ದ ಕಾಳಜಿ, ಅವುಗಳ ಫಲವಾಗಿ ತಾನು ಇಂದು ಹೀಗೆ ಇದ್ದೇನೆ. ಅಲ್ಲದೇ ಇಂದಿನ ದಿನವನ್ನು ಜೀವನದಲ್ಲಿ ಎಂದಿಗೂ ಮರೆಯಲಾರೆ. ಒಮ್ಮೆ ಅನಿಸುತ್ತೆ ಇದೆಲ್ಲವೂ ನಿಜವೇ?’ ಎಂದು ಎನ್ನುವ ಸಣ್ಣ ಅನುಮಾನದೊಳಗು ‘ಲೆಫ್ಟಿನೆಂಟ್ ಒಳಗೂ ಕಾಣುವ ಶಾಲೆಯ ವಿದ್ಯಾರ್ಥಿ’.
ಅನೇಕ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಕನಸು ತಾನು ಕಲಿತ, ಓದಿದ ಶಾಲೆ/ಕಾಲೇಜುಗಳಲ್ಲಿ ತಾನು ಅತಿಥಿಯಾಗಿರುವುದು. ಆ ಸಮಯದ ವರ್ಣನೆ ಮಾಡಲು ಅಸಾಧ್ಯ, ಪ್ರಶಸ್ತಿ ಪಡೆಯುತ್ತಿದ್ದವ ಅದನ್ನು ನೀಡುವಾಗ, ಧ್ವಜಾರೋಹಣ ನೋಡುತ್ತಿದ್ದವ ತಾನೇ ಅದನ್ನು ನೆರವೇರಿಸುವುದು, ಪಾಠಮಾಡಿದ ಶಿಕ್ಷಕರುಗಳು ಹೆಮ್ಮೆಯಿಂದ ತನ್ನ ವಿದ್ಯಾರ್ಥಿಗೆ ‘ಸರ್’ ಎಂದು ಕರೆಯುವ ಆ ಸಮಯ ಎಲ್ಲ ವಿದ್ಯಾರ್ಥಿಗಳ ಬಾಳಲ್ಲಿ ಬಂದರೆ ಅದೆಷ್ಟು ಚೆಂದ. ಆದರೆ ಆ ಸಾಧನೆಯ ಮಾರ್ಗ ಸುಲಭವಲ್ಲ…
ಜೀವನದಲ್ಲಿ ಒಮ್ಮೆ ತಾನು ಓದಿದ ಶಾಲೆ/ಕಾಲೇಜ್ ಗೆ ತಾನು ಅತಿಥಿಯಾಗಿ ಹೋಗುವ ರೀತಿಯಲ್ಲಿ ಬೆಳೆದುನಿಲ್ಲುವುದು ಸಾಮಾನ್ಯ ಅಲ್ಲ. ಅಲ್ಲದೇ ತಮ್ಮ ವಿದ್ಯಾರ್ಥಿಗಳು ಸಮಾಜ ಕಟ್ಟುವ, ದೇಶ ರಕ್ಷಿಸುವ ಕೆಲಸದಲ್ಲಿದ್ದಾರೆಂದು ತಿಳಿದು ಶಿಕ್ಷಕರೆಲ್ಲರೂ ಸೇರಿ ‘ಸಲ್ಯೂಟ್’ ಎನ್ನುವುದು ಹೆಮ್ಮೆಯ ವಿಚಾರವೇ ಸರಿ…