Articles

ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..?

- ಚೇತನ್ ಸಿ ರಾಯನಹಳ್ಳಿ

ಮಹಿಳಾ ದಿನಾಚರಣೆ ಪ್ರಯುಕ್ತ

sri krishnadevaraya hampi

ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..?

ಏನೆಂದು ಹೇಳುವುದು, ಹೇಗೆ ವರ್ಣಿಸುವುದು, ಯಾವ ರೀತಿಯಲ್ಲಿ ಚಿತ್ರಿಸುವುದು? ಪ್ರತಿಯೊಬ್ಬರ ಬದುಕಿನಲ್ಲೂ ‘ಅವಳು’ ಇಲ್ಲದೆ ಪರಿಪೂರ್ಣವೇ ಅಲ್ಲ.
ನವಮಾಸ ಹೊತ್ತು ಜಗಕ್ಕೆ ಪರಿಚಯಿಸಿದ ತಾಯಿ. ಮೊದಲ ಬಾರಿಗೆ ಮಗುವ ಮುಖವ ಕಂಡು ಆರೈಕೆ ಮಾಡಿ, ತಾಯಿಯ ಮಡಿಲಲ್ಲಿ ಮಲಗಿಸಿದ ದಾದಿ. ಅಕ್ಕರೆಯಿಂದ ನೋಡಿಕೊಂಡ ವೈದ್ಯಕೀಯ ಸಿಬ್ಬಂದಿಗಳು.

ನೀರುನಿಡಿ ಹೊಯ್ದು, ಚೆಂದದಿ ದೃಷ್ಟಿಬೊಟ್ಟು ಇಟ್ಟು, ಸಾಮ್ರಾಣಿಯ ಹೊಗೆಹಾಕಿ, ಜೋಲಿಯಲ್ಲಿಟ್ಟು ಜೋಗುಳವ ಹಾಡಿ ಮಲಗಿಸಿದ ಅಜ್ಜಿ. ಎತ್ತಿಕೊಳ್ಳಲು ಹಾತೊರೆಯುತ್ತಿದ್ದ ಅಕ್ಕಂದಿರು. ಹಗಲು-ಇರುಳು ನಿದ್ದೆ-ಎಚ್ಚರಗಳಲ್ಲಿ ಪಕ್ಕದಲ್ಲಿದ್ದು ಜೋಪಾನವಾಗಿ ಕಾಪಾಡಿದ, ಹೊತ್ತುಹೊತ್ತಿಗೂ ಅಮೃತ ಉಣಬಡಿಸಿದ ತಾಯಿಯ ಪ್ರೀತಿ. ಬೆಳೆಯುವಾಗ ಲಾಲನೆ-ಪಾಲನೆ ಮಾಡಿದ ಹಿರಿಯರು. ಕೈಯಬೆರಳು ಹಿಡಿದು ಅಕ್ಷರ ತಿದ್ದಿಸಿದ ಶಿಕ್ಷಕಿಯರು. ಮೊದಲ ಶಾಲಾದಿನಗಳಲ್ಲಿ ಸಿಕ್ಕ ಮುಗ್ದಮನಸ್ಸಿನ ಗೆಳತಿ, ಜೋಡಿಯಾಗಿ ನಿಂತು ಕುಣಿದು ಕುಪ್ಪಳಿಸಿದ ಬಾಲ್ಯದ ದಿನಗಳು, ‘ರಾಖಿ ಹಬ್ಬ’ಕ್ಕೆ ತಪ್ಪದೇ ಕಾದು ರಾಖಿಕಟ್ಟಿ, ಸಿಹಿ ತಿನ್ನಿಸಿ, ಒಂದಿಷ್ಟು ಹಣ ಬಿಡದೇ ಇಸ್ಕೊಂಡ ಸಹೋದರಿಯರು. ಪರೀಕ್ಷೆಯ ಸಮಯದಲ್ಲಿ ಅಲ್ಪ-ಸ್ವಲ್ಪ ಉತ್ತರ ಹೇಳಿಕೊಟ್ಟ ಗೆಳತಿಯರು, ಕೇಳಿದರೂ ಹೇಳಿಕೊಡದ, ತಿರುಗಿಯೂ ಹುಡುಗಿಯರು. ಆಪ್ತವಾಗಿ ಹರಟಿದ ದಿನಗಳು, ಗೆಳೆಯ-ಗೆಳತಿಯರು ಸೇರಿ ಹೋದ ಕಿರುಪ್ರವಾಸಗಳು.

ಮನಸ್ಸ ಕದ್ದ ಮನದನ್ನೆಯು, ಹೇಳಲಾಗದ ಭಾವನೆಗಳು, ಕೈಕೊಟ್ಟ ಪ್ರೇಯಸಿಯು, ಕಛೇರಿಯ ಕೆಲಸದಲ್ಲಿ ಜೊತೆಯಾದ ಸಹೋದ್ಯೋಗಿ, ಕೈಹಿಡಿದ ಸಹಧರ್ಮಿಣಿಯು, ಎಲ್ಲಾ ಕ್ಷಣಗಳಲ್ಲೂ ಜೊತೆಯಾಗುವ, ಸದಾ ಬೆನ್ನೆಲುಬಾಗಿ ಒಳಿತು-ಕೆಡಕಿನಲೂ ಕೈಬಿಡದೆ ಕೈಹಿಡಿದ ಹೆಂಡತಿಯು, ‘ಕೇಳಿದ್ದನ್ನೆಲ್ಲ ಮಾಡಿಕೊಡಲು ಸಮಯವಿಲ್ಲ’ವೆಂದು ಪ್ರೀತಿಯ ಬೆರೆಸಿ ಆಡುಗೆ ಮಾಡಿ ಉಣಬಡಿಸಿದ ಮಡದಿಯು, ಅಪ್ಪನೆಂಬ ಹೆಸರ ತಂದುಕೊಟ್ಟ ಮಗಳು. ಅಮ್ಮನ ಪ್ರತಿರೂಪದಂತೆ ಆಕೆ ನಗುವಳು, ನಮ್ಮೆಲ್ಲ ಕಷ್ಟಗಳ ಇಲ್ಲವಾಗಿಸುವಳು. ಕಠೋರತೆಯ ಮನಸ್ಸನ್ನು ಕ್ಷಣಮಾತ್ರದಲ್ಲೇ ನಗಿಸಿ ಎಲ್ಲ ನೋವುಗಳ ಮರೆಸುವವಳು. ಜವಾಬ್ದಾರಿಯನ್ನು ಕಲಿಸಿದವಳು, ಏನನ್ನೂ ಹೇಳದೇ ಎಲ್ಲವ ಕಲಿಸುವವಳು.

ಬೆಳೆದ ಮಗಳು ಉನ್ನತ ಶಿಕ್ಷಣಕ್ಕೆಂದು ಬೇರೆ ಊರಿಗೆ ತೆರಳುವಾಗ ಯಾರಿಗೂ ತಿಳಿಯದಂತೆ ಮಗುವಿನಂತೆ ಅತ್ತದ್ದು. ಅವಳಿಗೆ ಸನ್ಮಾನ ನಡೆದಾಗ ಖುಷಿಯಿಂದ ಚಪ್ಪಾಳೆ ತಟ್ಟಿದ್ದು, ಮದುವೆ ಮಾಡಿಕೊಡುವಾಗ ಏನೋ ಕಳೆದುಕೊಂಡಂತೆ ಅನಿಸಿದರೂ ಒಳ್ಳೆಯ ಮನೆಗೆ ಸೇರಿಸಿದೆವು ಎನ್ನುವ ಸಮಾಧಾನ. ಅವಳನ್ನು ಕಳಿಸಿಕೊಡುವಾಗ ಕಣ್ಣಂಚಲ್ಲಿ ತಿಳಿಯದೇ ಹನಿಗಳು ಮೂಡಿದ್ದು, ವಯಸ್ಸಾಗುತ್ತಾ ಹೋದಂತೆ ಅನಾರೋಗ್ಯಕ್ಕೆ ಸರಿಯಾದ ಸಮಯಕ್ಕೆ ಔಷಧಗಳನ್ನು ನೀಡಿ, ಪಥ್ಯವನ್ನು ತಾನೂ ಮಾಡಿ, ನನಗೂ ಮಾಡಿಸಲು ಹುರಿದುಂಬಿಸಿದ ಮಡದಿಯೇ ಮಮತೆ ತುಂಬಿದ ತಾಯಿಯಾಗಿದ್ದು. ಇಬ್ಬರೇ ಇದ್ದಾಗ ಕಿಚಾಯಿಸಿಕೊಂಡದ್ದು, ಹಾಸ್ಯಮಾಡಿದ್ದು, ಮಾತಿನ ಮೂಲಕ ಕಾಲು ಎಳೆದು ಮನಸಾರೆ ನಕ್ಕಿದ್ದು, ಏನೋ ನೆನಪಾಗಿ ಬಿಕ್ಕಿದ್ದು, ಒಲುವೆಯ ಕೈಗಳು ಕಣ್ಣೀರ ಒರೆಸಿ ಸಂತೈಸಿದ್ದು.

ಕಣ್ಣಮುಂದೆ ಬೆಳೆದು ಮದುವೆಯಾಗಿ ಹೋದ ಮಗಳಿಗೆ ಪುಟ್ಟಮಗಳೊಬ್ಬಳು ಜನಿಸಿದ್ದು, ಅದರ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡದ್ದು, ಎತ್ತಿ ಆಡಿಸಿ ಬೆಳೆಸಿದ್ದು, ಬೆನ್ನಮೇಲೆ ಹೊತ್ತು ಆಟವಾಡಿಸಿ, ತಿರುಗಿಸಿ, ತಿನಿಸಿದ್ದು, ವಯಸ್ಸಾದವನು ಎಂಬುದನ್ನೇ ಮರೆಸಿದ್ದು. ಆಸ್ಪತ್ರೆಯಲ್ಲಿ ಮಲಗಿದಾಗ ‘ಎನೂ ಆಗಲ್ಲ ಭಯಪಡಬೇಡಿ ಸರ್’ ಎಂದ ಆ ಶುಶ್ರೂಷಕಿಯ ಭರವಸೆ ನೀಡುವ ಮಾತುಗಳು…

ಹೀಗೆ ಅದೆಷ್ಟು ನೆನಪಿನ ಬುತ್ತಿಗಳಲ್ಲಿ ವಿವಿಧ ರೂಪಗಳಲ್ಲಿ ‘ಅವಳು’ ತುಂಬಿರುವಳು. ಅವಳು ಪುರುಷನಿಗೆ ಸರಿಸಮಾನಳಲ್ಲ, ಅವನಿಗಿಂತಲೂ ಮಿಗಿಲಾದವಳು. ಆದರೆ ಆ ರೀತಿಯಲ್ಲಿ ಗೌರವ ಕೊಡುವ ನಮ್ಮ ಕರ್ತವ್ಯವನ್ನು ಮರೆತಿದ್ದೇವೆ. ಆಕೆಯೇ ಪ್ರಕೃತಿ, ಆಕೆಯೇ ಸೃಷ್ಠಿ, ಸಮಷ್ಠಿ ಎಲ್ಲವನ್ನೂ ಸರಿಯಾಗಿ ಅರಿತು ನಡೆದರೆ ಮಾತ್ರ ಬದುಕು ಸುಂದರ ನಮ್ಮಿಬ್ಬರಲ್ಲಿ ಯಾರು ಮೇಲು? ಎಂದು ತಿಳಿಯಹೊರಟರೆ ಯಾರಾದರೂ ಗೆಲ್ಲಬಹುದು, ಗೆಲುವಿನ ಭರದಲ್ಲಿ ಮೌಲ್ಯಗಳನ್ನೇ ಮರೆಯುತ್ತೇವೆ. ಗೆದ್ದರೂ ಸಂಭ್ರಮಿಸಲು ಜೊತೆಗಿರುವವರನ್ನೇ ಕಳೆದುಕೊಳ್ಳುತ್ತೇವೆ.

ಪ್ರತಿಯೊಬ್ಬರ ಕೆಲಸ, ಸಾಧನೆ, ಸಂಶೋಧನೆ ಎಲ್ಲದರಲ್ಲೂ ಅವಳ ಪ್ರಭಾವವೋ, ಬೆಂಬಲವೋ ಇದ್ದೇ ಇರುತ್ತದೆ.
ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ, ದಿನನಿತ್ಯದಲ್ಲೂ ಅವರ ಮೇಲಿರುವ ಗೌರವ ಇಮ್ಮಡಿಯಾಗಲಿ, ಸದಾ ಕಾಲವೂ ಅದು ಹಾಗೆಯೇ ಇರಲಿ. ಎಲ್ಲಾ ರೀತಿಯ ಪಾತ್ರಗಳ ಮೂಲಕ ಎಲ್ಲಾ ರೀತಿಯ ಪ್ರೀತಿಯ ನೀಡಿದ ಅವಳಿಗೆ ಏನೆಂದು ಕರೆಯೋಣ? ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..? ಬೇರೇನಾದರೂ ಹೇಳಬೇಕೆ..? ಹೇಳಿದರೂ ಆ ಪದಗಳು ಅವಳ ಮುಂದೆ ಗೌಣವೇ ಅಲ್ಲವೇ..?

ಮಹಿಳಾ ದಿನಾಚರಣೆಯ ಶುಭಾಶಯಗಳು

Contact us for classifieds and ads : +91 9742974234 
error: Content is protected !!