ಮೈಸೂರು: ನಗರದ ಕರ್ಜನ್ ಪಾರ್ಕ್‌ನಲ್ಲಿ ಇರುವ ತೋಟಗಾರಿಕಾ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘ (ಹಾಪ್‌ಕಾಮ್ಸ್)ವು ಹಣ್ಣು-ತರಕಾರಿಯನ್ನು ಮೊಬೈಲ್ ಆ್ಯಪ್ ನೆರವಿನಿಂದ ಮಾರಾಟ ಮಾಡಲು ಪ್ರಾರಂಭಿಸಿದೆ.
ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಕೈ ಎಟುಕುವ ದರದಲ್ಲಿ ಹಣ್ಣು-ತರಕಾರಿಯನ್ನು ಮಾರಾಟ ಮಾಡುತ್ತಿರುವ ಹಾಪ್‌ಕಾಮ್ಸ್ ಕೋವಿಡ್ ವೇಳೆಯಲ್ಲಿ ಮನೆ-ಮನೆ ಬಾಗಿಲಿಗೆ ಸೇವೆಯನ್ನು ನೀಡಲು ಶುರು ಮಾಡಿತ್ತು. ಆ ಸಂದರ್ಭದಲ್ಲಿ ಆನ್‌ಕಾಲ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿ, ಫೋನ್ ಮೂಲಕ ಆರ್ಡರ್ ಪಡೆದುಕೊಂಡು ನಿಗದಿತ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಇತ್ತು. ಆದರೆ ಈಗ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಮಾರಾಟ ಸೇವೆಗೆ ಡಿಜಿಟಲ್ ಸ್ಪರ್ಶ ನೀಡಿದೆ.
ಬಳಕೆ ಹೇಗೆ?
ಆ್ಯಂಡ್ರಾಯ್ಡ್ ಹಾಗೂ ಇನ್ನಿತರ ಆಪರೇಟಿಂಗ್ ಸಿಸ್ಟಮ್ ಇರುವ ಮೊಬೈಲ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ಗೆ ಹೋಗಿ ಅಲ್ಲಿ ‘ಹಾಪ್‌ಕಾಮ್ಸ್ ಆನ್‌ಲೈನ್’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಗ್ರಾಹಕರು ಮೊಬೈಲ್ ನಂಬರ್ ಅನ್ನು ದಾಖಲಿಸಬೇಕು. ತದನಂತರ ಒನ್‌ಟೈಮ್ ಪಾಸ್‌ವರ್ಡ್ (ಒಟಿಪಿ)ಯನ್ನು ನಮೂದು ಮಾಡಿದ ತರುವಾಯ ಆ್ಯಪ್ ಬಾಗಿಲು ತೆರೆದುಕೊಳ್ಳುತ್ತದೆ. ಅಮೇಲೆ ಹೆಸರು, ವಿಳಾಸ, ಇ-ಮೇಲ್ ವಿಳಾಸ, ಪಿನ್‌ಕೋಡ್, ಮೊಬೈಲ್ ಸಂಖ್ಯೆಯನ್ನು ತುಂಬಿ ಆ್ಯಪ್ ಅನ್ನು ಆರ್ಡರ್ ಮಾಡುವ ಸ್ಥಿತಿಗೆ ಸನ್ನದ್ಧಗೊಳಿಸಿಕೊಳ್ಳಬೇಕು.
ಆ್ಯಪ್‌ನಲ್ಲಿ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಐಕಾನ್ ರೂಪುಗೊಳಿಸಲಾಗಿದ್ದು, ಹಣ್ಣು ಮತ್ತು ತರಕಾರಿಯ ಹೆಸರು, ಚಿತ್ರಗಳು, ಕೆಜಿಗೆ ಬೆಲೆ ಎಲ್ಲವೂ ಕಾಣುತ್ತವೆ. ಗ್ರಾಹಕರು ತಮಗೆ ಬೇಕಾದ ಹಣ್ಣು-ತರಕಾರಿ ಮುಂದೆ ಗುರುತು ಮಾಡಿ, ಆರ್ಡರ್ ಮಾಡಬಹುದು. ಆರ್ಡರ್ ಮಾಡಿದ ಒಂದು ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ಹಣು-ತರಕಾರಿ ತಲುಪುತ್ತದೆ.
ಕನಿಷ್ಠ ೨೦೦ ರೂಪಾಯಿ ಮೌಲ್ಯದ ಹಣ್ಣು-ತರಕಾರಿಯನ್ನು ಆರ್ಡರ್ ಮಾಡಿದರೇ ಮಾತ್ರ ಮನೆಗೆ ತಲುಪಿಸಲಾಗುತ್ತದೆ. ಹಣವನ್ನು ಸ್ಥಳದಲ್ಲೇ ನೀಡಬಹುದು, ಇಲ್ಲವೇ ಆನ್‌ಲೈನ್ ಪಾವತಿ ಕೂಡ ಮಾಡಬಹುದು.
ಹಾಪ್‌ಕಾಮ್ಸ್‌ನ ಈ ಆ್ಯಪ್ ಅನ್ನು ಸುಮಾರು 3 ಸಾವಿರ ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ನೂರಾರು ಜನರು ಇದರ ಮೂಲಕವೇ ಖರೀದಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ನಮ್ಮ ಮಿತಿಯನ್ನು ಅರಿತುಕೊಂಡು ಮೈಸೂರು ನಗರದ ಒಳಗೆ ಮಾತ್ರ ಸದ್ಯಕ್ಕೆ ಸೇವೆಯನ್ನು ನೀಡಲಾಗುತ್ತಿದೆ ಎಂದು ಆನ್‌ಲೈನ್ ಮಾರುಕಟ್ಟೆ ವ್ಯವಸ್ಥಾಪಕ ಪ್ರಮೋದ್ ‘ಆಂದೋಲನ’ಕ್ಕೆ ತಿಳಿಸಿದರು.