Articles

“ಪುಸ್ತಕದಲ್ಲಿ ಬರೆದ ಹೋಂವರ್ಕ್ ಪತ್ರಿಕೆಯಲ್ಲಿ!?”

- ಚೇತನ್ ಸಿ ರಾಯನಹಳ್ಳಿ

ಶಿಕ್ಷಕರು ಎಂದರೆ ಕೇವಲ ಕಲಿಸುವವರು ಎಂಬುದು ಮಾತ್ರವಲ್ಲ ಕೆಲವೊಮ್ಮೆ ವಿದ್ಯಾರ್ಥಿಗಳಿಂದ ಕಲಿಯುವುದು ಸಹ ಇದೆ. ಎಂಬುದನ್ನು ನನಗೆ ಚೆನ್ನಾಗಿ ಅರಿವು ಮೂಡಿಸಿದ್ದು ನನ್ನ ವಿದ್ಯಾರ್ಥಿನಿ ‘ಖುಷಿನವೀನ್’ ನಾನು ೯ನೇ ತರಗತಿಯಲ್ಲಿ ಕನ್ನಡ ತೃತೀಯ ಭಾಷೆಯ ಶಿಕ್ಷಕನಾಗಿದ್ದಾಗ, ಸುಧಾಮೂರ್ತಿ ಅವರ ‘ಮನದ ಮಾತು’ ಕೃತಿಯಿಂದ ಆಯ್ದ ‘ಸಂತೋಷದ ಒಳಗುಟ್ಟು’ ಎಂಬ ಪಾಠವಿತ್ತು. ಅದರ ವಿಷಯ ಎಲ್ಲಾ ಇದ್ದೂ ಏನು ಇಲ್ಲ ಎಂದು ಕೊರಗುವ ಶ್ರೀಮಂತ, ಇರುವುದರಲ್ಲೇ ಸಂತೋಷ ಕಂಡುಕೊಂಡ ಜೀವನ ನಡೆಸುವ ಮನೆಕೆಲಸದಾಕೆ. ಇದರ ಮಧ್ಯೆ ಶ್ರೀಮಂತ ವರ್ಗದಲ್ಲಿ ಮಗನ ಮೇಲೆ ೧೦೦% ಫಲಿತಾಂಶ ಬರಲೇಬೇಕು ಎಂಬ ಅತಿಯಾದ ಒತ್ತಡ. ಇವುಗಳನ್ನು ಮಕ್ಕಳ ಮಧ್ಯೆ ಚರ್ಚಿಸಲು ಒಂದು ವೇದಿಕೆಯನ್ನು ತಯಾರು ಮಾಡಬೇಕೆಂದುಕೊAಡು ತರಗತಿಯಲ್ಲಿ ಮಕ್ಕಳಿಗೆ ಮತ್ತೊಂದು ಕೆಲಸ. ‘ಪೋಷಕರು ಮಕ್ಕಳ ಮೇಲೆ ಒತ್ತಡವನ್ನು ಹೇರುವುದು ಎಷ್ಟರ ಮಟ್ಟಿಗೆ ಸರಿ? ಎಂಬ ವಿಷಯದ ಬಗ್ಗೆ ಒಂದು ಪುಟ ಬರೆದುಕೊಂಡು ಬರಬಹುದಾ?’ ಎಂದೆ. ಕೆಲವರು ಆಗಬಹುದೆಂದರು, ಇನ್ನೂ ಕೆಲವರು ಆಗದೇ ಹೋದರೂ ಆಗಬಹುದೆಂಬಂತೆ ತಲೆಯಾಡಿಸಿದರು. ಅವರುಗಳ ಮಧ್ಯೆ ಖುಷಿ, ‘ಸಾರ್, ಪೋಷಕರ ಜೊತೆಗೆ ಶಿಕ್ಷಕರನ್ನು ಸೇರಿಸಿಕೊಂಡು ವಿಷಯ ಬರೆಯಬಹುದಾ…?’ ಎಂದು ಸ್ವಲ್ಪ ಗಾಬರಿಯಿಂದಲೇ ಕೇಳಿದಳು. ‘ಅದನ್ನು ಕೇಳೋಕೆ ‘ಗಾಬರಿ’ ಯಾಕೆ ಪಡೋದು?’ ಎಂದೆ ಎಲ್ಲರೂ ‘ಗೊಳ್’ ಎಂದು ನಗಲು ಶುರು ಮಾಡಿದರು. ಯಾಕೆ ಏನಾಯ್ತು? ಯಾಕೆ ನಗ್ತಾ ಇದೀರಾ? ಎಂದಾಗ ಕಾರ್ತಿಕ್ ಎದ್ದು ನಿಂತು ಹೇಳಿದ, ‘ಸರ್ ಎಲ್ಲರೂ ಅವಳಿಗೆ “ಗಾಬರಿ” ಅಂತಾನೇ ಕರಿಯೋದು’ ಎಂದು ನಗಲು ಶುರು ಮಾಡಿದ. ಎಲ್ಲರಿಗೂ ಮತ್ತೊಮ್ಮೆ ನಕ್ಕರೆ ಹುಷಾರ್ ಎಂದು ಗದರಿದ್ದು ಆಯಿತು.
ಮರುದಿನ ತರಗತಿಗೆ ಬಂದಾಗ ಎಲ್ಲರೂ ಅಷ್ಟೋಇಷ್ಟೋ ಬರೆದಿದ್ದರು, ಕೆಲವರಂತೂ ಪಕ್ಕದವರು ಹೇಗೆ ಬರೆದಿದ್ದರೋ ಹಾಗೆ ಅದನ್ನೇ ನೋಡಿಕೊಂಡು ಗೀಚಿದ್ದು ಇತ್ತು. ಆದರೆ ಈ ಮಗು ಬರೋಬ್ಬರಿ ೧೦ ಪುಟದಷ್ಟು ಬರೆದುಕೊಂಡು ಬಂದಿತ್ತು. ಸರಿ ಎಲ್ಲವನ್ನು ಸಂಗ್ರಹಿಸಲು ಹೇಳಿದೆ ಪಾಠ ಶುರುಮಾಡಿದ್ದು ಆಯಿತು. ತರಗತಿ ಮುಗಿದ ನಂತರ ಆರಾಮಾಗಿ ಕೂತು ನೋಡಿದೆ, ಯಾವುದೋ ಪತ್ರಿಕೆಯಲ್ಲಿನ ಲೇಖನದಂತೆ ಈ ಮಗುವಿನ ಬರಹ ಕಂಡಿತು. ಇತರ ಶಿಕ್ಷಕರಿಗೂ ಇದನ್ನು ತೋರಿಸಿದೆ. ಎಲ್ಲಾ ಮಕ್ಕಳಿಗೆ ಅವರ ಹೋಂವರ್ಕ್ ಅನ್ನು ಹಿಂದಿರುಗಿಸಿದೆ ಆದರೆ, ಈ ಮಗುವಿಗೆ ಅದನ್ನು ಎರಡುಮೂರು ದಿನವಾದರೂ ಕೊಡಲೇ ಇಲ್ಲ. ಬಂದು ಕೇಳಿದಳು, ‘ತುಂಬಾ ಬರೆದಿದ್ದೆಯಲ್ಲ ಅದಕ್ಕೆ ಸ್ವಲ್ಪ ತಡ ಆಗತ್ತೆ ಕೊಡೊಕೆ’ ಎಂದು ಹೇಳಿ ಕಳಿಸಿದೆ. ತದನಂತರ ಅಷ್ಟನ್ನೂ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ, ನಮ್ಮ ಶಾಲೆಗೆ ಬರುತ್ತಿದ್ದ ಪತ್ರಿಕೆಗೆ ಆ ಬರಹವನ್ನು ಕಳಿಸಿದೆ. ನಾಲ್ಕೈದು ದಿನವಾದರೂ ಪತ್ರಿಕೆಯಲ್ಲಿ ಬರಲಿಲ್ಲ. ಕಾದೂಕಾದೂ ಸಾಕಾಯಿತು. ಯಾಕೋ ಈ ಬರಹ ಪತ್ರಿಕೆಯಲ್ಲಿ ಬರಲೇ ಇಲ್ಲವಲ್ಲ, ಬಹುಶಃ ಬರವಣಿಗೆ ಸಾಕಾಗಲಿಲ್ಲವೇನೋ ಅಂದುಕೊಂಡು ಸುಮ್ಮನಾದೆ. ಪತ್ರಿಕೆಯವರು ನನಗೆ ಕಾಲ್ ಮಾಡಿ ಆ ಮಗುವಿನ ಸಂಪೂರ್ಣ ಮಾಹಿತಿ ತಗೊಂಡು, ನಾಳೆ ಬರತ್ತೆ ನೋಡಿ ಸರ್ ಎಂದರು.

ಮರುದಿನ ಶಾಲೆಗೆ ಬಂದಾಗ ಆ ಪತ್ರಿಕೆಯಲ್ಲಿ ನಮ್ಮ ಶಾಲೆಯ ಈ ಮಗುವಿನ ಬರಹ. ಅದೆಷ್ಟು ‘ಖುಷಿ’ ಸಂತೋಷ, ಎಲ್ಲಾ ಶಿಕ್ಷಕರಿಗೂ ಅದನ್ನು ತೋರಿಸಿದ್ದಾಯಿತು. ಮುಖ್ಯೋಪಾಧ್ಯಾಯರು ಮೆಚ್ಚಿದರು, ‘ನೋಟಿಸ್ ಬೋರ್ಡ್ಗೆ ಈ ಬರಹದ ಒಂದು ಕಾಪಿಯನ್ನು ಹಾಕಿ’ ಎಂದರು, ಹಾಕಿದ್ದು ಆಯಿತು. ಆಗ ತರಗತಿಗಳು ನಡೆಯುತ್ತಲೇ ಇದ್ದವು. ಊಟಕ್ಕೆ ಬೆಲ್ ಆದ ನಂತರ ಆ ಮಗುವಿಗಾಗಿ ಕಾದೆ ಬಂದಾಗ ಹೇಳಿದೆ, ‘ಅವತ್ತು ಮನೆಕೆಲಸ ಅಂತ ಬರೆಯೋಕೆ ಕೊಟ್ರೆ ಏನೇನೆಲ್ಲಾ ಬರೆದಿದಿಯಾ ಅಲಾ? ಎಲ್ಲಾ ಟೀಚರ್‌ಗಳು ಓದಿದಾರೆ ಅದನ್ನ…’ (ಪಾಪ ಆ ಮಗು ಕ್ಷಣಕಾಲ ಬೇಸರವಾದಂತೆ ತೋರಿತು) ‘ಸರಿ ಹೋಗು, ಹಾಗೆ ನೋಟಿಸ್ ಬೋರ್ಡ್ ನೋಡ್ಕೊಂಡು ಹೋಗು’ ಎಂದು ಸ್ವಲ್ಪ ಗತ್ತಿನಿಂದಲೇ ಹೇಳಿದೆ. ಪಾಪಚ್ಚಿ, ‘ಸರಿಸರ್, ಸಾರಿಸರ್..’ ಅಂದು ಹೊರಟಿತು. ಅದಾಗಲೇ ನೋಟಿಸ್‌ಬೋರ್ಡ್ ಹತ್ತಿರ ಹಲವು ಮಕ್ಕಳು ಜಮಾಯಿಸಿದ್ದಾರೆ. ಇವಳನ್ನು ಕಂಡು, ‘ಖುಷಿ ನಿನ್ನ ಹೆಸರು ಪೇಪರ್‌ಲಿ ಬಂದಿದೆ’ ‘ನೀನು ಪೇಪರ್‌ಗೆಲ್ಲಾ ಬರಿತೀಯಾ?’ ಸೂಪರ್ ಕಣೆ ನೀನು, ‘ಅಭಿನಂದನೆಗಳು, ಹೀಗೆ ಬರವಣಿಗೆ ಮುಂದುವರೆಸು’ ಹಾಗೇ..ಹೀಗೆ.. ಹೇಳ್ತಾ ಇದ್ದರು. ಇದೆಲ್ಲ ಒಂದು ಕನಸು ಅನ್ನುವಂತೆ ನೋಡಿದ ಮಗು ತನ್ನ ಕನ್ನಡಕ ಸರಿ ಮಾಡಿಕೊಂಡು ತಾನು ಮನೆಕೆಲಸ ಎಂದು ಬರೆದ ಬರಹ ಇದು, ತನ್ನ ಹೆಸರು, ತರಗತಿ, ಶಾಲೆ ಹೆಸರು ಎಲ್ಲವನ್ನು ನೋಡಿ ಕಣ್ಣು ಸ್ವಲ್ಪ ಒದ್ದೆಯಾಗಿತ್ತು, ‘ಖುಷಿ’ಖುಷಿಯಿಂದ ನನ್ನ ಬಳಿಬಂದು, ‘ಸರ್ ತುಂಬಾ ಧನ್ಯವಾದಗಳು’ ‘ಅಯ್ಯೋ ಇದರಲ್ಲಿ ನಂದೇನು ಪಾತ್ರ ಇಲ್ಲ. ತುಂಬಾ ಚೆನಾಗಿ ಬರೆದಿದ್ದೆ. ಒಳ್ಳೆಯ ಬರಹಗಾರ್ತಿ ಆಗೋ ಲಕ್ಷಣಇದೆ. ಮುಂದುವರೆಸು ಬಿಡಬೇಡ, ಆ ಪತ್ರಿಕೆಯವರು ಕೂಡ ಬರವಣಿಗೆ ಚೆನಾಗಿದೆ ಅಂದರು, ಬರೆದದ್ದು ೯ನೇ ತರಗತಿಯ ಮಗು ಅಂತಾನೇ ಅನ್ನಿಸ್ತಿಲ್ಲ, ಪ್ರಬುದ್ಧ ಬರವಣಿಗೆ’ ಅಂತ ಹೇಳಿದ್ದನ್ನು ಹಾಗೆ ಹೇಳಿದೆ. ಶುಭವಾಗಲಿ ಹಾಗೆ ಮುಂದುವರೆಸು, ಅಭಿನಂದನೆಗಳು. ಎಂದು ತಿಳಿಸಿ ಹೊರಟೆ. ಅದೆಷ್ಟು ಸಂಭ್ರಮ ಆ ಮಗುವಿನ ಮುಖದಲ್ಲಿ, ಅದೇನೋ ಸಾಧನೆ ಮಾಡಿದ ಅನುಭವ, ಎಲ್ಲರೂ ಆಕೆಯನ್ನು ಒಂದು ರೀತಿಯಲ್ಲಿ ಸೆಲಬ್ರಿಟಿ ಮಾಡಿದ್ದರು. ಅಂದಿನಿಂದ ಒಳ್ಳೆಯ ಪ್ರಯತ್ನ ಬರವಣಿಗೆಯಲ್ಲಿ ಮಾಡತೊಡಗಿದಳು.
ಅನೇಕ ಕವನಗಳನ್ನು, ಒಂದಿಷ್ಟು ಬರವಣಿಗೆಗಳನ್ನು ಮಾಡಿದ್ದಾಳೆ. ಶಾಲೆ ಮುಗಿಸಿ ಈಗ ಸರಿ ಸುಮಾರು ೬ ವರ್ಷಗಳು ಕಳೆದಿವೆ. ಈ ಸಮಯದಲ್ಲಿ ಆ ಮಗು ರಚಿಸಿದ ಅನೇಕ ಕವನಗಳು ಪ್ರಕಟವಾಗಿವೆ, ಬಹುಮಾನಗಳು ಬಂದಿವೆ. ನನ್ನ ವಿದ್ಯಾರ್ಥಿ ಈ ರೀತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಶಿಕ್ಷಕನಾಗಿ ನನಗೆ ಸಂತೋಷದ ವಿಷಯ. ಇಂದಿಗೂ ತನ್ನ ಬರವಣಿಗೆಯನ್ನು ನನಗೆ ಕಳುಹಿಸಿ ‘ಒಮ್ಮೆ ಸರಿ ಇದೆಯಾ ನೋಡಿ ಸರ್? ಇನ್ನೂ ಏನಾದರೂ ಬದಲಾವಣೆ ಆಗಬೇಕಿತ್ತಾ?’ ಎಂದು ಕೇಳುವಾಗ ಬರವಣಿಗೆಯ ಮೂಲಕ ಬದಲಾಗಿರುವ, ಮುಗ್ದತೆಯಲ್ಲಿ ಬದಲಾಗದೇ ಹಾಗೆ ಉಳಿದಿರುವ ಈ ಮಗು ನನಗೆ ಸದಾ ಸೋಜಿಗ ಮತ್ತು ‘ಖುಷಿ’ಯ ಆಗರ…

sri krishnadevaraya hampi
Contact us for classifieds and ads : +91 9742974234 
error: Content is protected !!