ವಿದ್ಯಾರ್ಥಿಗಳಲ್ಲಿ ಈ ಎಳವೆಯಲ್ಲಿ ಸೇವಾ ಮನೋಭಾವನೆ ಮೂಡಿಸಬೇಕು ಎಂಬ ಕಲ್ಪನೆ ಎಲ್ಲಾರಲ್ಲೂ ಇದ್ದೇ ಇರತ್ತೇ. ನಮ್ಮ ಶಾಲೆಯ ಸಂಸ್ಕೃತ ಶಿಕ್ಷಕರಾದ ಸ್ಕಂದರಾಘವ ಸರ್‌ಗೆ ಈ ಆಲೋಚನೆ ಬಂದಿದ್ದೇ ತಡಮಾಡದೆ ವಿದ್ಯಾರ್ಥಿಗಳಲ್ಲಿ ಈ ವಿಷಯ ತಿಳಿಸಿದರು. ಪ್ರತಿಭಾ, ಪೂಜ್ಯ, ಸುಶ್ಮಿತ, ಕವನ ಮತ್ತು ಮೇಘ ಒಂದಾಗಿ ಹೇಗೆ ಮತ್ತು ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದರು. ಆ ಸೇವೆಯನ್ನು ಮಾಡಲು ಹಣವನ್ನು ಹೇಗೆ ಒಂದುಗೂಡಿಸಬೇಕು? ಅದನ್ನು ಯಾರಿಗೆ ನೀಡಿದರೆ ಒಳಿತಾಗುವುದು? ಹೇಗೆ ಬಳಸುವುದು? ಎಂಬುದರ ಬಗ್ಗೆ ರೂಪುರೇಶೆಗಳನ್ನು ಹಾಕಿಕೊಂಡು ಬಂದರು. ಅದಕ್ಕೆ ಸಂಬoಧಿಸಿದoತೆ ಶಿಕ್ಷಕರ ಜೊತೆಯಲ್ಲಿ ತಾವು ಮಾಡಿರುವ ಸೇವೆಯ ‘ಸಂಕಲ್ಪ’ದ ಬಗ್ಗೆ ತಿಳಿಸಿದರು.
ಅವರುಗಳು ಮಾಡುವ ಈ ಸೇವೆಗೆ “ಸಂಕಲ್ಪo” ಎಂಬ ಹೆಸರನ್ನಿಟ್ಟರು. ಹಣವನ್ನು ವಿದ್ಯಾರ್ಥಿಗಳಿಂದ ಸಂಗ್ರಹಮಾಡುವುದು ಅಂದರೆ, ಅವರ ಜನುಮದಿನದಂದು ಸ್ವಲ್ಪ ಹಣವನ್ನು ಈ ಸೇವೆ ಮೀಸಲಿಡುವುದು, ಪೋಷಕರು ಕೊಟ್ಟ ಪಾಕೆಟ್‌ಮನಿಯನ್ನು ಉಳಿಸಿಕೊಂಡು, ಅನಗತ್ಯ ಖರ್ಚುಗಳನ್ನು ಮಾಡುವುದರಲ್ಲಿ ಸಣ್ಣ ಪ್ರಮಾಣದ ಉಳಿತಾಯದ ಮೂಲಕ, ಪಾನೀಪೂರಿ, ಗೋಬಿ ತಿನ್ನುವುದರಲ್ಲಿ ಸ್ವಲ್ಪ ಉಳಿಸುವುದು. (ಯಾವುದೇ ಕಾರಣಕ್ಕೂ, ಯಾರಿಗೂ ಒತ್ತಾಯ ಮಾಡುವಂತಿಲ್ಲ) ಜೊತೆಗೆ ಓದದೆ ಇಟ್ಟಿರುವ ಪುಸ್ತಕಗಳನ್ನು ಸಂಗ್ರಹಿಸುವುದು ಎಂದು ನಿರ್ಧರಿಸಿದರು.
ಒಂದು ಪುಟ್ಟಡಬ್ಬಿ ಮಾಡಿ ಅದರಲ್ಲಿ ಹಣವನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾದರು. ಸುಮಾರು ಒಂದುವಾರಗಳ ಕಾಲ ಅದು ಹಾಗೆಯೇ ಖಾಲಿಯೇ ಉಳಿದಿತ್ತು. ಸ್ವಲ್ಪ ದಿನದ ನಂತರ ಒಂದು ಅಭಿಪ್ರಾಯ ಸಂಗ್ರಹಕ್ಕೆ ಪುಸ್ತಕವೊಂದನ್ನಿಟ್ಟರು. ಮಾಡ್ತಾ ಇರೋ ಯೋಜನೆ ಸರಿ ಇದೆಯೇ? ಏನು ಸಲಹೆ ನೀಡಬಹುದು? ಎಂಬುದನ್ನು ಒಂದು ಚೆಂದದ ಕವನವನ್ನು ಬರೆದು ಹಾಕಿದೆವು. ಪ್ರತಿಕ್ರಿಯೆಗಳು ಆರಂಭವಾದವು, ಯಾವಾಗ ಅದರಲ್ಲಿ ಉತ್ತಮ ಯೋಜನೆ, ಒಳ್ಳೆಯದಾಗಲಿ, ‘ನಿಮ್ಮ ಯೋಜನೆಗೆ ನಮ್ಮ ಅಳಿಲು ಸೇವೆ, ಅಪ್ಪ ಕೊಟ್ಟ ಪಾಕೆಟ್ ಮನಿಯನ್ನು ಈ ಕೆಲಸಕ್ಕೆ ಬಳಸಿಕೊಳ್ಳಿ, ನನ್ನ ಜನುಮದಿನಕ್ಕೆಂದು ಮನೆಯಲ್ಲಿ ಕೊಟ್ಟ ಈ ಹಣ ಒಳ್ಳೆಯ ಕೆಲಸಕ್ಕಾಗಿ… ಎಂಬ ನುಡಿಗಳು ಅದರಲ್ಲಿ ಮೂಡಿದವೋ ಕ್ರಮೇಣ ಹಣದ ಸಂಗ್ರಹಣೆ ಹೆಚ್ಚಾಯಿತು. ಮಕ್ಕಳು ಮನೆಯಲ್ಲಿ ಓದದೇ ಹಾಗೆ ಇಟ್ಟಿದ್ದ ಪುಸ್ತಕಗಳು ಬರತೊಡಗಿತು. ದಿನದಿಂದ ದಿನಕ್ಕೆ ಈ ಯೋಜನೆಗೆ ಎಲ್ಲಾ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಸಹಾಯಾಸ್ತ ನೀಡುತ್ತಾ ಬಂದರು.
‘ಹನಿಹನಿಗೂಡಿದರೆ ಹಳ್ಳ ತೆನೆತೆನೆ ಗೂಡಿದರೆ ಬಳ್ಳ’ ಎಂಬ ಗಾದೆಮಾತಿನಂತೆ ಪ್ರತಿದಿನವೂ ಒಂದೊoದು ರೂಪಾಯಿಗಳೊಂದಿಗೆ ಪ್ರಾರಂಭವಾದ ಈ ಸೇವಾ ಯೋಜನೆ ವರ್ಷಾಂತ್ಯಕ್ಕೆ ೫ಸಾವಿರ ರೂಪಾಯಿಗಿಂತಲೂ ಹೆಚ್ಚಾಗಿತ್ತು. ಅದನ್ನು ಯಾವ ಸೇವೆಗೆ, ಹೇಗೆ ಬಳಸಬೇಕು ಎಂದು ನಿರ್ಧರಿಸಿದಾಗ, ನಗರದ ಪದವಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದ ಗೆಳೆಯರೊಬ್ಬರು ತಮ್ಮ ವಿದ್ಯಾರ್ಥಿ ಬಡತನದಲ್ಲಿ ಬೆಳೆದು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಆದರೆ ಹಣಕಾಸಿನ ಸಮಸ್ಯೆ ಇದೆ ಎಂಬ ವಿಷಯವನ್ನು ನಮ್ಮ ಶಿಕ್ಷಕರಿಗೆ ತಿಳಿಸಿದರು. ಈ ವಿಷಯದ ಬಗ್ಗೆ ನಮ್ಮ ವಿದ್ಯಾರ್ಥಿನಿಯರಲ್ಲಿ ತಿಳಿಸಿದಾಗ ‘ನಮ್ಮ ಈ ಯೋಜನೆ ಅರ್ಥಪೂರ್ಣವಾಗುವುದೇ ಇಂಥಹವರಿಗೆ ನೀಡಿದಾಗ’ ಎಂದರು. ಒಂದು ದಿನ ಶಾಲೆಗೆ ಆ ವಿದ್ಯಾರ್ಥಿನಿಯನ್ನು ಕರೆಸಿ ಅವರ ಮುಂದಿನ ಕೆಲಸಕ್ಕಾಗಿ ನಮ್ಮ ಈ ಪುಟ್ಟ ಸೇವೆಯ ಹಣವನ್ನು ನೀಡಿದಾಗ ಎಲ್ಲರಲ್ಲೂ ಸಾರ್ಥಕ ಭಾವ.
ಮುಂದಿನ ಬದಲಾದ ಶೈಕ್ಷಣಿಕ ವರ್ಷದಲ್ಲಿ ಈ ಯೋಜನೆಯನ್ನು ಹೇಗೆ ಮುಂದುವರಿಸಬಹುದು ಎಂದುಕೊoಡೆವು. ರಜೆದಿನಗಳಲ್ಲಿ ಜಯತ್ ಫೋನ್‌ಮಾಡಿ, ‘ಸರ್ ಯಾವುದಾದರೂ ಅನಾಥಾಶ್ರಮ, ವೃದ್ಧಾಶ್ರಮ ಅಥವಾ ಬೇರೆಯಾವುದಾದರು ಸೇವಾ ಸಂಘಸAಸ್ಥೆಗಳ ಬಗ್ಗೆ ಮಾಹಿತಿ ಇದ್ದರೆ ಕೊಡಿ’ ಎಂದ. ಏಕೆ ಇಷ್ಟೆಲ್ಲಾ ಪೀಠಿಕೆ? ಏನು ವಿಷಯ? ಯಾತಕ್ಕಾಗಿ? ಎಂದು ವಿಚಾರಿಸಿದಾಗ, ‘ಸರ್ ಈ ಬಾರಿಯ ಸಂಕಲ್ಪoನ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇವೆ ಈ ಯೋಜನೆಯಲ್ಲಿ ನಮ್ಮ ಗೆಳೆಯರೆಲ್ಲರೂ ಜೊತೆಯಾಗಿ ಮುಂದುವರಿಸೋಣ ಎಂದಿದ್ದಾರೆ. ಅಲ್ಲದೇ ಈ ಬಾರಿ ನಮ್ಮ ಶಾಲೆಗೆ ಬಂದ ಹೊಸ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ತಿಳಿಸಿಹೇಳುವುದು, ಯಾವ ರೀತಿಯ ಸಹಾಯವನ್ನು ಮಾಡಬಹುದು ಎಂಬ ಹಲವು ಅಂಶಗಳನ್ನುಳ್ಳ ಪಟ್ಟಿ ತಯಾರಿಸಿದ್ದೇವೆ. ಹಾಗಾಗಿ ನೀವು ತಿಳಿಸುವ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸೋಣ ಎಂದು’ ಈ ಮಾತನ್ನು ಕೇಳಿದಾಗ ಆಶ್ಚರ್ಯ ಮತ್ತು ಆನಂದವಾಯಿತು. ಶ್ರಾವ್ಯ ಪವಾರ್ ಸಂಕಲ್ಪo ಗಾಗಿ ತಾನೆ ಸ್ವತಃ ಹಣದ ಸಂಗ್ರಹಣೆಗಾಗಿ ಪೆಟ್ಟಿಗೆಯೊಂದನ್ನು ತಂದದ್ದು, ಹೀಗೆ ಇಂದಿಗೂ ಪ್ರತೀವರ್ಷವೂ ಒಂದಿಷ್ಟು ಮಕ್ಕಳು ತಾವಾಗಿಯೇ ಅದರ ಉಸ್ತುವಾರಿ ತೆಗೆದುಕೊಳ್ಳುತ್ತಲೇ ಇದ್ದಾರೆ. ಓದಿನಲ್ಲಿ ಮುಂದಿರುವ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಅನಾಥ ಆಶ್ರಮಕ್ಕೆ, ‘ಪುಲ್ವಾಮ ಧಾಳಿ’ಯಲ್ಲಿ ಮಡಿದ ಸೈನಿಕರಿಗೆ, ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ರಾಜ್ಯ, ರಾಷ್ಟçಮಟ್ಟದ ಶಿಬಿರದಲ್ಲಿ ಭಾಗವಹಿಸಿದ್ದ ಸ್ಕೌಟ್-ಗೈಡ್‌ನ ರೇಂಜರ್‌ಗೆ ಹೀಗೆ ಪ್ರತೀವರ್ಷವೂ ಈ ಸೇವೆ ನಿರಂತರವಾಗಿ ಸಾಗುತ್ತಲೇ ಬರುತ್ತಿದೆ.
ಮಕ್ಕಳ ಮನಸ್ಸು ಬಿಳಿಯ ಹಾಳೆಯ ಹಾಗೆ ಅದರಲ್ಲಿ ಏನನ್ನು ಬರೆಯುತ್ತೇವೆಯೋ ಅದು ಹಾಗೇ ಉಳಿಯುತ್ತದೆ. ಸಣ್ಣವರಿದ್ದಾಗ ಏನಾದರೂ ಒಳ್ಳೆಯ ವಿಷಯಗಳನ್ನು, ಕೆಲಸಗಳನ್ನು ಮಾಡಲು ತಿಳಿಸಿದರೆ ಅದು ಜೀವನಪರ್ಯಂತ ಉಳಿಯುವುದರಲ್ಲಿ ಅನುಮಾನವೇ ಇಲ್ಲ. ಒಂದು ದೃಢವಾದ ಸಂಕಲ್ಪ ಎಲ್ಲಾ ಮಕ್ಕಳಲ್ಲೂ ಒಂದೊಳ್ಳೆಯ ಬದಲಾವಣೆಗೆ ಕಾರಣವಾಗಿದೆ. ನಿಜ ಹೇಳಬೇಕೆಂದರೆ ಈ ಮಕ್ಕಳು ಮುಂದೆ ಒಳ್ಳೆ ಕೆಲಸಗಳನ್ನು ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಕೆಟ್ಟದ್ದಂತೂ ಮಾಡಲು ಸಾಧ್ಯವೇ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ, ಮಾಡಿಸುತ್ತಾರೆ, ಮಾಡುತ್ತಲೇ ಇರುತ್ತಾರೆ. ಎಂಬ ನಂಬಿಕೆ ಈಗ ದೃಢವಾಗಿದೆ. ಇಂತಹ ಮಕ್ಕಳ ಸಂಖ್ಯೆ ಎಲ್ಲೆಡೆಯೂ ಹೆಚ್ಚಾಗಲಿ…