Articles

ಅನ್ನಂ ನ ನಿಂದ್ಯಾತ್; ತದ್ ವೃತಮ್

ಪೂರ್ಣಿಮ ಭಟ್ಟ, ಆಹಾರ ತಜ್ಞರು.

ಅನ್ನಂ ನ ನಿಂದ್ಯಾತ್; ತದ್ ವೃತಮ್

sri krishnadevaraya hampi

“ಶರೀರಮಾದ್ಯಂ ಖಲು ಧರ್ಮಸಾಧನಮ್” – ಶರೀರವೇ ಸಕಲ ಕಾರ್ಯ ಸಾಧನೆಗೆ ಮೊದಲಲ್ಲವೇ? ಉತ್ತಮ ಚಿಂತನೆಗಳಿಗೆ..ಉದಾತ್ತ ಕೆಲಸಗಳಿಗೆ ಸ್ವಸ್ಥ ದೇಹ ಬಹು ಮುಖ್ಯ. ಸದೃಡ ದೇಹಕ್ಕೆ ಆಹಾರವೇ ಮೂಲ.ಯುನೈಟೆಡ್ ನೇಷನ್ ನ ಆಹಾರ ಮತ್ತು ಕೃಷಿ ಸಂಸ್ಥೆ ಪ್ರತಿ ವರ್ಷದ ಅಕ್ಟೋಬರ್ ೧೬ ನ್ನು ವಿಶ್ವ ಆಹಾರ ದಿನವನ್ನಾಗಿ ಘೋಷಿಸಿದೆ. ಇದರ ಮೂಲ ಉದ್ದೇಶವೆಂದರೆ ಪ್ರತಿಯೊಬ್ಬರೂ ಸಹ ಹಸಿವು ಮತ್ತು ಅಪೌಷ್ಟಿಕತೆಯಿಂದ ಮುಕ್ತರನ್ನಾಗಿ ಮಾಡುವುದು.

ಈಗಲೂ ಸಹ ಶೇಕಡಾ ೪೫ ಕ್ಕೂ ಹೆಚ್ಚಿನ ಮಕ್ಕಳ ಸಾವಿಗೆ  ಅಪೌಷ್ಟಿಕತೆಯೇ ಕಾರಣವಾಗಿದೆ. ಭವಿಷ್ಯದ ಸೃಜನಶೀಲ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕಾದ ಮನಸ್ಸುಗಳು ಹಸಿವಿನ ಚಿಂತೆಯಲ್ಲಿ ಮುಳುಗಿದರೆ ಅಭಿವೃದ್ಧಿಯ ಕನಸು ನನಸಾಗಲಾರದು.ಅನ್ನದಾತ ಬೆವರು ಹರಿಸಿ ವರ್ಷಪೂರ್ತಿ ದುಡಿಯುತ್ತಾನೆ. ನಮಗೆ ಅಂಗಡಿಯಲ್ಲಿ ಕೊಂಡುಕೊಳ್ಳುವಾಗ ಒಂದು ಕೆ.ಜಿ. ಅಕ್ಕಿಯ ಬೆಲೆ ತಿಳಿಯುವುದು..ಕಷ್ಟಪಟ್ಟು ಬೆಳೆದಾಗ ಮಾತ್ರ ಒಂದೊಂದು ಅಗುಳಿನ ಬೆಲೆಯೂ ಅರಿವಾಗುವುದು.ಊಟವನ್ನು ವ್ಯರ್ಥ ಮಾಡುವ ಮೊದಲು ಇದನ್ನು ನೆನಪಿಸಿಕೊಳ್ಳೋಣ.ಮನೆಯ ಮಕ್ಕಳಿಗೆ ಕಲಿಸಬೇಕಾದ ಮುಖ್ಯ ಪಾಠವಿದು. ನಮಗೆ ಆಹಾರ ಸೇವಿಸುವ ಹಕ್ಕಿದೆಯೇ ಹೊರತು ವ್ಯರ್ಥ ಮಾಡುವ ಹಕ್ಕಿಲ್ಲ.

  • ಪ್ರತಿ ನಿತ್ಯದ ಅಡಿಗೆಗಳನ್ನು ಮಾಡುವಾಗ ಆದಷ್ಟು ಅಳತೆ ಇಟ್ಟುಕೊಂಡೇ ತಯಾರಿಸಿ.ಏಕೆಂದರೆ ಮಿಕ್ಕಿದ ಊಟ ಹಳ್ಳಿಗಳಲ್ಲಾದರೆ ಪಶು-ಪ್ರಾಣಿಗಳಿಗೆ ಕೊಡಬಹುದು…ಪಟ್ಟಣಗಳಲ್ಲಿ ಇದೂ ಕೂಡ ಕಷ್ಟ.ಮೋರಿಗೆ ಎಸೆದ ಆಹಾರ ಯಾರಿಗೂ ದಕ್ಕದೇ ಹೋಗುವುದು.
  • ಹಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ನನ್ನನ್ನು ಚಿಂತನೆಗೆ ಈಡು ಮಾಡಿತು.ಅದೇನೆಂದರೆ ಬಡವನೊಬ್ಬ ತನ್ನ ಮತ್ತು ಕುಟುಂಬದವರ ಹೊಟ್ಟೆ ತುಂಬಿಸಲು ತುತ್ತು ಅನ್ನಕ್ಕಾಗಿ ನಡೆಯುತ್ತಿದ್ದ.ಇನ್ನೊಬ್ಬ ತಿಂದ ಅನ್ನ ಜೀರ್ಣವಾಗಲು ನಡೆಯುತ್ತಿದ್ದ.
  • ಮದುವೆ ಮುಂಜಿ ಅಥವಾ ಇನ್ನಾವುದೇ ಕಾರ್ಯಗಳಲ್ಲಿ ನಾನಾ ರೀತಿಯ ಭಕ್ಷಗಳನ್ನು ಮಾಡಿ(ಕೆಲವೊಮ್ಮೆ ಎಲ್ಲವನ್ನೂ ನೋಡಲು ಸಹ ಆಗುವುದಿಲ್ಲ) ಅರ್ಧದಷ್ಟು ಆಹಾರ ಕಸದ ತೊಟ್ಟಿಯನ್ನು ಸೇರುತ್ತದೆ.
  • ಇನ್ನು ನಾನು ಗಮನಿಸಿದ್ದೇನೆಂದರೆ ಹೊಟೆಲ್ ಅಥವಾ ರೆಸ್ಟೋರೆಂಟ್ ಗಳಿಗೆ ಹೋದಾಗ ತನ್ನಬಳಿ ತಿನ್ನಲು ಆಗುತ್ತೋ ಇಲ್ಲವೋ ಯೋಚಿಸದೇ ಎಲ್ಲವನ್ನೂ ಆರ್ಡರ್ ಮಾಡಿ ಊಟವನ್ನು ಪೂರ್ತಿ ತಿನ್ನದೇ ಬಿಡುವುದು.

ಇನ್ನು ಕೆಲವರಿಗೆ ಊಟವನ್ನು  ಪೂರ್ತಿ ತಿಂದರೆ ಅದು ಟೇಬಲ್ ಮ್ಯಾನ್ನರ್ಸ್ ಅಲ್ಲವಂತೆ.ತಮ್ಮ ಘನತೆಗೆ ಧಕ್ಕೆ ಬರುವುದಂತೆ. ಮೊದಲು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಈ ರೀತಿಯ ಮನೋವ್ಯಾಧಿಯನ್ನು ವಾಸಿ ಮಾಡಿಕೊಳ್ಳುವುದು ಅಗತ್ಯ.

  • ಹಲವು ಕಾರ್ಯಕ್ರಮಗಳಲ್ಲಿ ಎಷ್ಟು ಜನ ಬರಬಹುದೆಂಬ ಒಂದು ಅಂದಾಜು ಇಲ್ಲದ ಸಂದರ್ಭದಲ್ಲಿ ಹೆಚ್ಚಾದ ಆಹಾರಗಳನ್ನು ಹಸಿವಿನಿಂದ ಇರುವವರಿಗೆ ಅಗತ್ಯ ಇರುವವರಿಗೆ ತಲುಪಿಸುವಂತಹ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿರುವುದು ಶ್ಲಾಘನೀಯ. ಕಾರ್ಯಕ್ರಮ ಸಂಘಟಿಸುವ ಮೊದಲು ನೀವೂ ಕೂಡ ನಿಮ್ಮ ಊರಿನಲ್ಲಿರುವ ಇಂತಹ ಸಂಸ್ಥೆಗಳಿದ್ದರೆ ಸಂಪರ್ಕಿಸಬಹುದು.
  • ಅನ್ನದಾತ ದೇಶದ ಬೆನ್ನೆಲಬು. ಆದರೆ ಬೆನ್ನೆಲಬು ಬಾಗದೇ ತಲೆಯೆತ್ತಿ ನಡೆಯುವಂತಾಗುವುದು ಮುಖ್ಯ..ನಾನೊಬ್ಬ ರೈತ ಎಂದು ಯಾವುದೇ ಹಿಂಜರಿಕೆಯಿಲ್ಲದೇ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಬೇಕು.ಆಹಾರ ಬೆಳೆಗಳಿಗೂ ಕೂಡ ಸೂಕ್ತ ಬೆಲೆ ಮತ್ತು ಮಾರುಕಟ್ಟೆ…ವೈಜ್ಞಾನಿಕ ಉಪಕರಣಗಳು ದೊರೆತು ಕೃಷಿ ಮತ್ತು ಆಹಾರ ವಿಭಾಗದಲ್ಲಿ ಇನ್ನಷ್ಟು ಪ್ರಾಧಾನ್ಯತೆ ದೊರೆಯುವ ಅಗತ್ಯವಿದೆ.

ಸಂಸ್ಕ್ರತ ದಲ್ಲಿ “ಅನ್ನಂ ನ ನಿಂದ್ಯಾತ್; ತದ್ ವೃತಮ್” ಎಂಬ ನುಡಿಯಿದೆ ಅಂದರೆ ಎಂದಿಗೂ ತಿನ್ನುವ ಆಹಾರವನ್ನು ದೂಷಿಸಬಾರದು ಅದೊಂದು ವೃತವಿದ್ದಂತೆ. ಎಷ್ಟೋ ಜನ ಒಂದು ಹೊತ್ತಿನ ಗಂಜಿಗೂ ಸಹ ಬೇಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ…ನಾವು ನೆಮ್ಮದಿಯಿಂದ ಊಟ ಮಾಡುತ್ತಿದ್ದೇವೆ ಎಂದಮೇಲೆ ಅದಕ್ಕೆ ಎಂದೂ ಅಗೌರವ ತೋರಬಾರದು.ನಮ್ಮ ಸಂಸ್ಕೃತಿಯಲ್ಲಿ ಆಹಾರ ತಯಾರಿಸಲು..ಸೇವಿಸಲು ಉತ್ಕ್ರಷ್ಟವಾದ ಪದ್ಧತಿಗಳಿವೆ.ಅವುಗಳನ್ನೆಂದೂ ಕಡೆಗಾಣಿಸದೇ ಆರೋಗ್ಯವನ್ನು ಕಾಪಾಡಿಕೊಂಡು ನಾವೂ ಬೆಳೆಯೋಣ ಇತರರನ್ನೂ ಬೆಳೆಯಲು ಸಹಕರಿಸೋಣ.

Contact us for classifieds and ads : +91 9742974234



 
error: Content is protected !!