Articles

‘ಈ ವರ್ಷ ಟೂರ್, ಶಾಲಾ ವಾರ್ಷಿಕೋತ್ಸವ ಇರುತ್ತದೆ ಅಲ್ವಾ?’

- ಚೇತನ್ ಸಿ ರಾಯನಹಳ್ಳಿ

ರಜೆ ಕಳೆದು ಶಾಲೆ ಆರಂಭ ಎಂದರೆ ಅದೆಷ್ಟೋ ಮಕ್ಕಳು ಇನ್ನೂ ಊರೂರು ಸುತ್ತಿಲ್ಲ, ಬೇಸಿಗೆ ಶಿಬಿರ ಮುಗಿದಿಲ್ಲ, ಊರಿಗೆ ಮತ್ತೊಮ್ಮೊ ಹೋಗಬೇಕು ಅದು-ಇದು ಎಂದು ಅನೇಕ ವಿದ್ಯಾರ್ಥಿಗಳು ರಜೆಯನ್ನು ಇನ್ನೂ ಸುಂದರವಾಗಿ ಕಳೆಯುವಲ್ಲಿ ಯೋಚಿಸುತ್ತಿದ್ದರೆ ಕೆಲವರು ಅಂತೂ ಶಾಲೆ ಆರಂಭವಾಗುತ್ತಿದೆ. ಮತ್ತೆ ಶಾಲಾ ಸಮವಸ್ತç ಧರಿಸುವ ಅವಕಾಶ ಬಂದಿದೆ, ಗೆಳೆಯ/ಗೆಳತಿಯರು ಎಲರೂ ಸಿಗುತ್ತಾರೆ, ಶಿಕ್ಷಕರನ್ನು ಭೇಟಿ ಮಾಡುವ ಅವಕಾಶ, ಈ ವರ್ಷ ಕೊರೋನಾ ಕಾಟ ಇಲ್ಲದೇ ಶಾಲಾ ಚಟುವಟಿಕೆಗಳು ಆರಾಮವಾಗಿ ಸಾಗಲಿ ಎಂದು… ಇನ್ನೊಂದೆಡೆ ದಿನ ಬೆಳಗ್ಗೆ ಬೇಗ ಏಳಬೇಕು, ಸಮವಸ್ತç ಜೋಡಿಸಿಕೊಳ್ಳಬೇಕು, ಹೋಮ್‌ವರ್ಕ್ ಬರೆಯಬೇಕು, ದಿನವೂ ಪ್ರಶ್ನೆ ಉತ್ತರಗಳನ್ನು ಕಲಿಯಬೇಕು… ಇನ್ನು ಪೋಷಕರು ರಜೆಯಲ್ಲಿ ಇವರನ್ನು ಹಿಡಿದಿಡಲು ಪಟ್ಟ ಕಷ್ಟಗಳನ್ನೆಲ್ಲಾ ನೆನಪಿಸಿಕೊಂಡು ಎಷ್ಟು ಬೇಗ ಇವರನ್ನು ಶಾಲೆಗೆ ಕಳಿಸಿದರೆ ಒಂದಿಷ್ಟು ಸರಿಯಾಗಿ ಓದುವುದು, ಬರೆಯುವುದನ್ನು ಕಲಿಯುತ್ತಾರೆ, ಇಲ್ಲದೇ ಹೋದಲ್ಲಿ ರಜೆಯಲ್ಲಿ ಬರೀ ತಿರುಗಿತಿರುಗಿ ಹೇಗಾಗಿದ್ದಾರೆ? ಎಂದು ಅಂದುಕೊಳ್ಳುತ್ತಾರೆ. ಹೀಗೆ ಒಬ್ಬೊಬ್ಬರದ್ದು ಒಂದೊAದು ರೀತಿಯ ಆಲೋಚನೆಗಳು ಇದ್ದೇ ಇರುತ್ತದೆ.

sri krishnadevaraya hampi

ಹೊಸದಾಗಿ ಬೇರೊಂದು ಶಾಲೆಗೆ ಮಕ್ಕಳು ಬರುವಾಗ ಹಳೆಯ ಶಾಲೆಯ ಗೆಳೆಯ/ಗೆಳತಿಯರು ನೆನಪುಗಳು, ಅವರಲ್ಲಿ ಇರುವ ಹೊಸ ಯೋಚನೆಗಳು ಹೊಸ ಗೆಳೆಯರು, ಹೊಸ ಶಿಕ್ಷಕರು ಅವರುಗಳ ಜೊತೆಗೆ ಹೊಂದಿಕೊಳ್ಳುವುದು, ಹೇಗೋ ಏನೋ ಎಂಬುದರಲ್ಲಿಯೇ ಮುಳುಗಿರುತ್ತಾರೆ. ಒಂದಿಷ್ಟು ಗೆಳೆಯರ ಗುಂಪುಗಳು ಮತ್ತೊಂದಿಷ್ಟು ಹೊಸಬರನ್ನು ಸೇರಿಸಿಕೊಳ್ಳದೇ ಇರುವುದು, ಯಾರೂ ಗೆಳೆಯ/ಗೆಳತಿಯರಿಲ್ಲದೇ ಒಬ್ಬಂಟಿಯಾಗಿ ಇರುವ ಕೆಲವು ವಿದ್ಯಾರ್ಥಿಗಳು. ಕೆಲವರಿಗೆ ಸಂತೋಷ, ಕೆಲವರಿಗೆ ಬೇಸರ. ಹಲವು ಭಾವಗಳ ಮಿಶ್ರಣದಂತಿರುತ್ತದೆ.

ಇನ್ನೇನು ನಾಳೆ ಶಾಲೆ ಆರಂಭ ಎನಿಸುವ ಹೊತ್ತಿಗೆ ಅದೇನು ಸಿದ್ದತೆಗಳು ಸಮವಸ್ತç, ಬ್ಯಾಗ್, ಊಟದ ಡಬ್ಬಿ, ಸಾಕ್ಸ್, ಶೂ, ಬೆಲ್ಟ್ ಎಂದು ಒಂದಿಷ್ಟು ಹುಡುಕಾಟಗಳು, ಹೊಸ ತರಗತಿಗೆ ಹೊರಟಿದ್ದೇವೆ ಎಂಬ ಸಣ್ಣ ಗತ್ತು, ನಡೆದುಕೊಂಡು ಹೋಗುವವರು, ಸೈಕಲ್ ಸರಿಯಾಗಿ ರಿಪೇರಿ ಮಾಡಿಸುವವರು, ಶಾಲಾ ಬಸ್‌ಗೆಂದು ಸಮಯಕ್ಕಿಂತ ಮುಂಚಿತವಾಗಿ ನಿಲ್ದಾಣಕ್ಕೆ ಬಂದು ನಿಲ್ಲುವವರು ಅದಕ್ಕೆ ಬೇಕಾದ ಸಕಲ ಸಿದ್ದತೆಗಳೊಂದಿಗೆ ತಯಾರಾಗುವವರು.
ಒಂದಿಷ್ಟು ಜನಕ್ಕೆ ನಾಳೆ ಯಾವ ತರಗತಿಗಳು ಇರಲಿವೆ? ಯಾರಾದರು ಜೊತೆಗಿದ್ದವರು ಶಾಲೆ ಬಿಟ್ಟು ಹೋಗಿದ್ದಾರಾ? ಅಥವಾ ಶಿಕ್ಷಕರು ಯಾರಾದರು ಹೊಸಬರು ಬಂದಿದ್ದಾರಾ? ಈ ಯೋಚನೆಗಳು. ಪೋಷಕರ ಒಂದಿಷ್ಟು ಬುದ್ಧಿವಾದಗಳು, ಈ ವರ್ಷವಾದರೂ ಚೆನ್ನಾಗಿ ಓದಿ ಬರೆದು ಒಳ್ಳೆಯ ಹೆಸರನ್ನು ಪಡೆಯಲು ಹೇಳುವ ಮಾತುಗಳು, ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಅದೇ ರೀತಿಯಲ್ಲಿ ಅಥವಾ ಅದಕ್ಕಿಂತಲೂ ಉತ್ತಮವಾಗಿ ಅಭ್ಯಾಸ ಮಾಡಲು, ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಒಂದಿಷ್ಟಾದರೂ ಒಳ್ಳೆಯ ಅಂಕಗಳನ್ನು ಪಡೆಯುವ ಪ್ರಯತ್ನ, ಕ್ರೀಡೆಯಲ್ಲಿರುವ ವಿದ್ಯಾರ್ಥಿಗಳು ಯಾವುದಾದರೂ ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ಬಗ್ಗೆ, ಹಾಡು-ನೃತ್ಯ ಇತರ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ಆಸಕ್ತಿ ಇರುವವರು ಶಾಲಾ ವಾರ್ಷಿಕೋತ್ಸವ ಆಗಲಿ ಅದರಲ್ಲಿ ಏನಾದರೂ ಕಾರ್ಯಕ್ರಮ ನೀಡುವ ಬಗ್ಗೆ ‘ಅಬ್ಬಾ’’ ಅದೆಷ್ಟು ಯೋಚನೆಗಳಿರುತ್ತವೆ ಎನಿಸಿತು. ಬಹುಶಃ ಶಾಲೆ ನಾಳೆ ಇದೆ ಎಂದು ಕೆಲವರಿಗೆ ಸರಿಯಾಗಿ ನಿದ್ದೆಯೇ ಬಂದಿರುವುದಿಲ್ಲವೇನೋ ಎಂಬ ಅನುಮಾನ.


ಬಹಳ ದಿನಗಳ ನಂತರ ಶಾಲೆಯಲ್ಲಿ ಮಕ್ಕಳ ಕಲರವ ಕಂಡಿತು. ಹಲವು ದಿನಗಳ ನಂತರ ನೋಡಿ ನಕ್ಕು ಶುಭಾಶಯಗಳನ್ನು ತಿಳಿಸುವ ಮಕ್ಕಳನ್ನು ನೋಡಿದಾಗ ನಮಗೂ ಸಂಭ್ರಮ. ಮಕ್ಕಳನ್ನು ಶಾಲೆಗೆ ಬಿಡಲು ಬಂದ ಪೋಷಕರು ಒಂದಿಷ್ಟು ನಮ್ಮ ಮಕ್ಕಳ ಬಗ್ಗೆ ಮುತುವರ್ಜಿವಹಿಸಿ ಎಂದು ಕೇಳಿದರೆ, ಎಸ್.ಎಸ್.ಎಲ್.ಸಿ ಓದುವ ಮಕ್ಕಳ ಪೋಷಕರು, ‘ಈ ವರ್ಷ ಮಕ್ಕಳ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲೆ ಹಾಕಿದ್ದೇವೆ, ಏನಾದರೂ ಮಾಡಿ’ ಎನ್ನುತ್ತಿದ್ದರು. ಬಹಳ ದಿನಗಳ ನಂತರ ಶಾಲೆಯಲ್ಲಿ ಮಕ್ಕಳ ಮಾತುಗಳು, ಕಾರಿಡಾರ್‌ನಲ್ಲಿ ಓಡಾಟ, ಕೆಲವರು ಗುಡ್‌ಮಾರ್ನಿಂಗ್ ಎಂದು ಹೇಳಿದರೆ, ಕೆಲವರು ಈ ವರ್ಷ ಈ ಶಿಕ್ಷಕರು ತರಗತಿ ತೆಗೆದುಕೊಳ್ಳುವುದಿಲ್ಲ ಏತಕ್ಕೆ ಶುಭಾಶಯಗಳನ್ನು ತಿಳಿಸಬೇಕು ಎನ್ನುವ ಮನೋಭಾವ. ಎಷ್ಟೋ ದಿನಗಳ ನಂತರ ಸಾಮೂಹಿಕವಾಗಿ ನಾಡಗೀತೆ, ರಾಷ್ಟಗೀತೆ ಕೇಳಿದಾಗ ಹೊಸ ಹುಮ್ಮಸ್ಸು ಮೂಡಿದ್ದು ಸುಳ್ಳಲ್ಲ. ಮೊದಲ ತರಗತಿಗೆ ತರಗತಿಯ ಶಿಕ್ಷಕರು ಹೋಗಿ ಎಲ್ಲಾ ಮಕ್ಕಳನ್ನು ರಜೆಯ ನಂತರದಲ್ಲಿ ಸ್ವಾಗತಿಸಿ, ಈ ಬಾರಿ ಎಸ್.ಎಸ್.ಎಲ್.ಸಿ ಹಾಗಾಗಿ ಆಟಗಳು, ಇತರ ಚಟುವಟಿಕೆಗಳು ಇರಲಿ, ಅದರೊಂದಿಗೆ ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಲು ತಿಳಿಸಿ ಬೇಡದ ಇನ್ಸ್ಟಾಗ್ರಾಮ್, ಮೊಬೈಲ್ ಬಳಕೆ ಕಡಿಮೆ ಮಾಡಲು ತಿಳಿಸಿದ್ದಾಯಿತು. ಏನಾದರೂ ಅನುಮಾನಗಳಿದ್ದಲ್ಲಿ ಕೇಳಿ ಎಂದಾಗ ಮೊದಲು ಬಂದ ಪ್ರಶ್ನೆ ‘ಈ ವರ್ಷ ಟೂರ್, ಶಾಲಾ ವಾರ್ಷಿಕೋತ್ಸವ ಇರುತ್ತದೆ ಅಲ್ವಾ? ಅಡುಗೆ ಸ್ಫರ್ಧೆ, ವಾರಾಂತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟಗಳು, ಸಾಂಸ್ಕೃತಿಕ ಸ್ಪರ್ಧೆಗಳು ಎಲ್ಲವೂ ಇರುತ್ತದಾ?’ ಎಂದು ಕೇಳುವವರೇ ಆಗಿದ್ದರು. ಆಗಬಹುದಾದ, ಗೊತ್ತಿರುವ, ಗೊತ್ತಿಲ್ಲದ ವಿಚಾರಗಳ ಬಗ್ಗೆ ಏನೇನು ಹೇಳಬೇಕೋ ಹೇಳಿ ತಿಳಿಸಿದೆವು.

ಇದೇ ಮೊದಲ ಬಾರಿಗೆ ಹೊಸದಾಗಿ ಶಾಲೆಗೆ ಬಂದ ಮಕ್ಕಳಿರುವ ತರಗತಿಗೆ ಹೋದಾಗ ಮೊದಲು ಕನ್ನಡದಲ್ಲಿ ನಿಮ್ಮ ಹೆಸರು, ಪೋಷಕರ ಹೆಸರು, ಮನೆ ವಿಳಾಸವನ್ನು ಬರೆಯಿರಿ ಎಂದಾಗ ಎಲ್ಲರ ‘ಕನ್ನಡದ ಪಾಂಡಿತ್ಯ’ ತಿಳಿಯಿತು. ಜೊತೆಗೆ ಈ ಬಾರಿಯ ಜವಾಬ್ದಾರಿ ಹೆಚ್ಚಾಯಿತು ಎನ್ನುವುದನ್ನು ಅರಿತೆನು. ಮಧ್ಯಾಹ್ನದ ಊಟದ ಸಮಯ. ಬಹಳ ದಿನಗಳ ನಂತರ ಗೆಳೆಯ- ಗೆಳತಿಯರು ಗುಂಪುಗುಂಪಾಗಿ ಕುಳಿತು, ಹಂಚಿಕೊಂಡು ತಿನ್ನುವುದನ್ನು ನೋಡಿ ಅದೆಷ್ಟು ದಿನಗಳಾಗಿದ್ದವು ಎನಿಸಿತು. ಮೊದಲ ದಿನವೇ ಆಟ ಆಡಲು ಕರೆದುಕೊಂಡು ಹೋಗಿ ಎಂದು ಕೇಳುತ್ತಿದ್ದರು. ಮೊದಲ ತರಗತಿಯೇ ಪಾಠವನ್ನು ಶುರು ಮಾಡಿದಾಗ, ಇವತ್ತು ಬೇಡ ಮೊದಲ ತರಗತಿ ಆಗಿರೋದರಿಂದ ಮಾತಾಡೋಣ ಎನ್ನುತ್ತಿದ್ದರು. ಇನ್ನೊಂದು ತರಗತಿಯಲ್ಲಿ ರಜೆಯನ್ನು ಹೇಗೆ ಕಳೆದಿರಿ? ಎಂಬ ಅನುಭವಗಳನ್ನು ಕುರಿತು ಬರೆಸಿದ್ದು, ಒಬ್ಬೊಬ್ಬರದ್ದು ಒಂದೊಂದು ವಿಭಿನ್ನ ಬರಹ. ಎಲ್ಲಾ ತರಗತಿಗಳು ಮುಗಿದು ಲಾಂಗ್‌ಬೆಲ್ ಆದಾಗ ಎಲ್ಲರೂ ಮನೆಗೆ ತರಗಳು ತಯಾರಾದರು. ಕೆಲವರು ನಾಳೆ ತಪ್ಪದೇ ಸಿಗೋಣ, ಇಲ್ಲದಿದ್ದರೆ ದ್ವಿತೀಯ ವಿಘ್ನ ಆಗಬಹುದೆಂದು ಬೀಳ್ಕೊಂಡು ಹೊರಟರು.

ಶಾಲೆಯ ಆರಂಭ ಎಂದರೆ ಅದೇನೋ ಹಲವು ಭಾವಗಳ ಮಿಶ್ರಣ. ವಿದ್ಯಾರ್ಥಿಗಳ ಜೀವನದಲ್ಲಿ ಸದಾ ನೆನಪಲ್ಲಿ ಉಳಿಯುವುದು, ಮತ್ತೆಮತ್ತೆ ನೆನಪಿಸಿಕೊಂಡಾಗ ತುಟಿಯಂಚಲ್ಲಿ ನಗು ತರಿಸುವುದು ಎಂದರೆ ಅದು ‘ಶಾಲಾ ಜೀವನ’ ಮಾತ್ರ. ಎಲ್ಲರಿಗೂ ಒಳ್ಳೆಯ ಶಾಲಾ ಜೀವನವೆಂಬುದು ಸಿಗುವುದಿಲ್ಲ ಎನ್ನುತ್ತಾರೆ. ಆದರೆ, ಸಿಕ್ಕ ಶಾಲಾ ಜೀವನವನ್ನು ಸುಂದರವಾಗಿಸಿಕೊಳ್ಳುವುದರಲ್ಲಿ ಬಹಳಷ್ಟು ಜನ ಎಡವುತ್ತಾರೆ. ಅವರವರ ಯೋಚನೆಗಳಂತೆ ನೆನಪುಗಳನ್ನು ಕಟ್ಟಿಕೊಳ್ಳಲು ಸಾಧ್ಯ. ನಮ್ಮನ್ನು ಬೆಳೆಸುವ ಚಿಂತನೆಗಳ ಬಗ್ಗೆ ತಲೆಕೆಡಿಸಿಕೊಂಡಾಗ ಅವು ಉತ್ತಮವಾಗಿಯೇ ಇರುತ್ತವೆ. ಆ ರೀತಿಯ ಯೋಚನೆಗಳು ಮೊಳಕೆಯೊಡೆಯುವುದೇ ‘ಶಾಲೆ’ ಎಂಬ ಪ್ರಮುಖ ಪರಿವರ್ತನೆಯ ಹಂತದಲ್ಲಿ…

Contact us for classifieds and ads : +91 9742974234



 
error: Content is protected !!