Articles

‘ಗಿಡ ನೆಡೊದಷ್ಟೇ ಮುಖ್ಯ, ಕಲೆಗಳ ಬಗ್ಗೆ ಈಗ ಯೋಚನೆ ಬೇಡ’

- ಚೇತನ್ ಸಿ ರಾಯನಹಳ್ಳಿ

ಅದೊಂದು ಶನಿವಾರದ ದಿನ. ಅರ್ಥಾತ್ ಮಾರ್ನಿಂಗ್ ಕ್ಲಾಸ್. ಅವತ್ತು ಸಿಹಿಮೊಗೆ ಕ್ರಿಕೇಟ್ ಅಕಾಡೆಮಿಯವರು ಶಿವಮೊಗ್ಗ ನಗರದ ರಾಗಿಗುಡ್ಡದ ಸಮೀಪದ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಂದು ನಮ್ಮ ಶಾಲೆಯ ಮಕ್ಕಳಿಗೆ ಗಿಡನೆಡಲು ಅವಕಾಶವನ್ನು ನೀಡಿದ್ದರು.
ಆಗತಾನೇ ಮಕ್ಕಳು ಸಾಮೂಹಿಕ ಕವಾಯಿತನ್ನು ಮುಗಿಸಿ, ತಿಂಡಿಯನ್ನು ತಿಂದಾಗಿತ್ತು. ೮ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಬಸ್‌ನಲ್ಲಿ ಕರೆದುಕೊಂಡು ಹೋಗತೊಡಗಿದೆವು. ಕೆಲವು ಮಕ್ಕಳು ಕುತೂಹಲ ತಡೆಯದೆ, ‘ಸರ್ ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವುದು?’ ಎಂದರು ನಾವುಗಳು ಸುಮ್ಮನೇ ಬೇಕೇಂದು ‘ಪಿಕ್‌ನಿಕ್ ಹೋಗೋಣ ಅಂತ ಎಲ್ಲಿಗೆ ಅಂತ ಇನ್ನೂ ಗೊತ್ತಿಲ್ಲ’ ಎಂದೆವು. (ಒಂದು ರೀತಿಯಲ್ಲಿ ಅದು ಪಿಕ್‌ನಿಕ್ ಕೂಡ ಆಗಿತ್ತು)
ರಾಗಿಗುಡ್ಡದ ಹಿಂಭಾಗದ ರಸ್ತೆಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಇಳಿಸಲಾಯಿತು. ಸಿಹಿಮೊಗೆ ಕ್ರಿಕೇಟ್ ಅಕಾಡೆಮಿಯ ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಶಿವಮೊಗ್ಗದ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು. ಮೊದಲನೆಯದಾಗಿ ಪತ್ರಕರ್ತ ಶಿವಮೊಗ್ಗನಂದನ್ ಅವರು ಮಕ್ಕಳನ್ನು ಸ್ವಾಗತಿಸಿದರು. ಅಲ್ಲದೆ ಅದೆಲ್ಲವನ್ನು ವಿಡಿಯೋ ಸಹ ಮಾಡಿಕೊಳ್ಳತೊಡಗಿದರು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಮಕ್ಕಳಿಗೂ ಉದ್ದೇಶಿಸಿ ಇವತ್ತು ಮಕ್ಕಳನ್ನು ಕರೆಸಿರುವ ಉದ್ದೇಶ ಇಲ್ಲಿ ಎಲ್ಲಾ ಮಕ್ಕಳು ಸೇರಿ ವಿವಿಧ ರೀತಿಯ ಗಿಡಗಳನ್ನು ನೆಡುವುದಕ್ಕೆ ಸಂಬoಧಿಸಿದoತೆ, ಈಗಾಗಲೇ ಗುಂಡಿ ತೆಗೆದಿರುವ ಸ್ಥಳದಲ್ಲಿ ಗಿಡ ನೆಡುವುದು ಮತ್ತು ಎಲ್ಲಿ ಅವಶ್ಯಕತೆ ಇದೆ ಎನಿಸುವುದೋ ಅಲ್ಲಿ ಗುಂಡಿ ತೆಗೆಯಲು ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಹೇಗೆ ಎಚ್ಚರಿಕೆಯಿಂದ ಗುಂಡಿತೋಡಬೇಕು, ಅದರಲ್ಲಿ ಹೇಗೆ ಗಿಡವನ್ನು ನೆಡಬೇಕು, ಅದರ ಸುತ್ತ ನೀರನ್ನು ಇಂಗಿಸಲು ಪಾತಿಯನ್ನು ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಿದರು.

sri krishnadevaraya hampi


ಶಾಲಾ ಶಿಕ್ಷಕರು, ಬಸ್‌ಚಾಲಕರು ಮಕ್ಕಳ ಗುಂಪುಗಳನ್ನು ರಚಿಸಿ ನಿಗದಿ ಪಡಿಸಿದ್ದ ಸ್ಥಳದಲ್ಲಿ ಗಿಡಗಳನ್ನು ನೆಡೆಸಲು ವ್ಯವಸ್ಥೆಯನ್ನು ಮಾಡಿದರು. ಒಂದೊoದು ಗುಂಪಿನಲ್ಲಿ ಹಾರೆ, ಗುದ್ದಲಿ, ಗಿಡವನ್ನು ತೆಗೆದುಕೊಂಡು ಹೊರಟರು. ಗುಂಡಿಯನ್ನು ತೆಗೆಯಲು ಪೈಪೋಟಿ ಗಂಡು ಮಕ್ಕಳಲ್ಲಿ, ಹೆಣ್ಣುಮಕ್ಕಳಲ್ಲೂ ಆರಂಭವಾಯಿತು. ಮೊದಲಬಾರಿಗೆ ಗಿಡ ನೆಟ್ಟ ಅನೇಕ ಮಕ್ಕಳು ಇದರಲ್ಲಿದ್ದರು. ಗಿಡದ ಚೀಲವನ್ನು ಸರಿಯಾಗಿ ಕತ್ತರಿಸಿ ತೆಗೆದುಹಾಕಿ ಗಿಡವನ್ನು ನೆಟ್ಟು, ಪಾತಿಯನ್ನು ಮಾಡಿ ನೀರನ್ನು ಹಾಕಿ ಅದೇನೋ ಸಂತಸ ಗುಂಪಿನಲ್ಲಿ. ಅನೇಕ ಗಿಡಗಳು ಇದ್ದ ಕಾರಣ ಕೆಲವು ಮಕ್ಕಳು ಮತ್ತೊಂದು ಗಿಡವನ್ನು ತೆಗೆದುಕೊಂಡು ತಾವೇ ಗುಂಡಿ ತೋಡಿ ಅದರಲ್ಲಿ ಗಿಡವನ್ನು ನೆಟ್ಟು ಗೆಲುವನ್ನು ಸಾಧಿಸಿದವರಂತೆ ಸಂಭ್ರಮಿಸತೊಡಗಿದರು.

   
ಗಿಡನೆಡುವುದರಲ್ಲಿ ಹೇಗೆ ತೊಡಗಿಸಿಕೊಂಡಿದ್ದರೆoದರೆ ಹುಡುಗರ ಬಿಳಿಯ ಪ್ಯಾಂಟ್ ಮಣ್ಣಿಗೆ/ಕೆಸರಿಗೆ ತಾಗಿ ಕಲೆಯಾದರೆ, ‘ಗಿಡ ನೆಡೊದಷ್ಟೇ ಮುಖ್ಯ, ಕಲೆ ಬಗ್ಗೆ ಈಗ ಯೋಚನೆ ಬೇಡ’ ಎಂದು ಗುದ್ದಲಿ ಹಿಡಿದ ವಿದ್ಯಾರ್ಥಿಯೊಬ್ಬ ಅವರ ಗುಂಪಿನ ಗೆಳೆಯರಿಗೆ ಹೇಳುತ್ತಿದ್ದ. ಶಾಲೆಯ ಬಸ್‌ಚಾಲಕರಾದ ಸೋಮಣ್ಣ, ಲೋಹಿತ್ ಕೃಷಿಯಲ್ಲಿ ಅನುಭವ ಇದ್ದವರಾದ್ದರಿಂದ ಮಕ್ಕಳಿಗೆ ಮಾರ್ಗದರ್ಶನ ಮಾಡತೊಡಗಿದರು.
ಇದರ ಮಧ್ಯೆ ಒಂದು ಕಡೆಯಲ್ಲಿ ಗುಂಡಿ ತೋಡುವಾಗ ಅಲ್ಲಿ ‘ರೈತನ ಮಿತ್ರ ಎರೆಹುಳು’ ಕಂಡಿತು. ಕೆಲವರು ಗಾಬರಿಯಿಂದ, ಅದರ ಬಗ್ಗೆ ಮಾಹಿತಿ ಇದ್ದವರು ಕೂಗಿ ಕರೆದರು. ಹತ್ತಿರ ಹೋಗಿ ನೋಡಿ ಅದನ್ನು ಕೈಯಲ್ಲಿ ಹಿಡಿದುಕೊಂಡು ತೃತೀಯ ಭಾಷೆ ಕನ್ನಡದ ವಿದ್ಯಾರ್ಥಿಗಳನ್ನು ಕರೆದು ‘ಅಜ್ಜಿಯತೋಟ’ ಗದ್ಯಭಾಗದಲ್ಲಿ ಎರೆಹುಳು ಹೇಗೆ ರೈತನಿಗೆ ಸಹಾಯ ಮಾಡುತ್ತದೆ? ಅದರ ಎರೆಗೊಬ್ಬರ ಕೃಷಿಗೆ ಹೇಗೆ ಉಪಯೋಗಕ್ಕೆ ಬರುತ್ತದೆ? ಎಂಬ ಒಂದಿಷ್ಟು ವಿಚಾರಗಳನ್ನು ತಿಳಿಸಿದೆನು. ಅದನ್ನು ಕೆಲವರ ಕೈಗೆ ಹಾಕಲು ಹೋದರೆ ಕಿಟಾರೆಂದು ಕಿರುಚಿದರು. ಕೆಲವರು ಕಷ್ಟಪಟ್ಟು ಧೈರ್ಯದಿಂದ ಮುಂದೆ ಬಂದರು ಅವರ ಕೈಗೆ ಎರೆಹುಳು ಹಾಕುತ್ತಿದ್ದಂತೆ ಸ್ವಲ್ಪ ಹೆದರಿಕೆಯಿಂದಲೇ ಕೈಯಲ್ಲಿ ಹಿಡಿದುಕೊಂಡರು.

ಮನೆಯಲ್ಲಿ ಗಿಡಗಳನ್ನು ಬೆಳೆಸಿ, ಕೃಷಿಯ ಬಗ್ಗೆ ಸ್ವಲ್ಪವಾದರೂ ತಿಳಿದವರು ಹೆದರಿಕೆಯಿಲ್ಲದೆ ಕೈಯಲ್ಲಿ ಹಿಡಿದುಕೊಳ್ಳತೊಡಗಿದರು. ಎಲ್ಲರಿಗೂ ಹೇಳಿದೆ ಈ ಪಾಠ ಈಗಲೇ ಅರ್ಧಮುಗಿದಿದೆ ಯಾರಿಗಾದರೂ ಅನುಮಾನ ಇದ್ದರೆ ಈಗಲೇ ಕೇಳಿ ಬಗೆಹರಿಸಿಕೊಳ್ಳಿ ಅಂದೆ. ಕೆಲವರು ಇದು ಪಾಠ ಬೇರೆ ಇದೆಯಾ ನಮಗೆ? ಎನ್ನುವ ಯೋಚನೆಯಲ್ಲಿಯೇ ನೋಡತೊಡಗಿದರು. ಅಂತೂಇoತೂ ತರಗತಿಯಲ್ಲಿ ಕೇವಲ ಉದಾಹರಣೆಗಳೊಂದಿಗೆ ನಡೆದುಹೋಗುತ್ತಿದ್ದ ಪಾಠ ಇಂದು ಪ್ರಾಯೋಗಿಕವಾಗಿ ನಡೆಯಿತು. ಸಣ್ಣ ಪ್ರಮಾಣದಲ್ಲಿ ಕೃಷಿಯ ಬಗ್ಗೆ, ಎರೆಹುಳುವಿನ ಬಗ್ಗೆ ತಿಳಿದುಕೊಂಡರು.


ಮೊದಮೊದಲು ಹಿಂಜರಿದಿದ್ದ ವಿದ್ಯಾರ್ಥಿಗಳು ಎಲ್ಲರೂ ಬಹಳ ಆಸಕ್ತಿಯಿಂದ ಇದರಲ್ಲಿ ಭಾಗವಹಿಸಿದ್ದರು. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆ ಮಾತಿನ ಅರ್ಥವನ್ನು ಅಕ್ಷರಶಃ ಮಕ್ಕಳು ಅನುಭವಿಸಿ, ಅರ್ಥವನ್ನು ಕಂಡುಕೊoಡರು. ಎಲ್ಲರೂ ತಾವುಗಳು ತೆಗೆದುಕೊಂಡು ಹೋದ ಸಲಕರಣೆಗಳನ್ನು ತಂದು ಒಂದು ಕಡೆಯಲ್ಲಿ ಜೋಪಾನವಾಗಿ ಇಟ್ಟರು. ಲೆಕ್ಕದಲ್ಲಿ ಒಂದು ಕಡಿಮೆ ಬಂದಾಗ ಬಸ್‌ಚಾಲಕ ಗಾಡ್ವಿನ್ ಎಲ್ಲಾ ಕಡೆಗೂ ಸುತ್ತಾಡಿ ಪತ್ತೆ ಹಚ್ಚಿ ತಂದರು. ಮತ್ತೊಮ್ಮೆ ಅಧಿಕಾರಿಗಳು ‘ಗಿಡ ನೆಡುವುದಷ್ಟೇ ಮುಖ್ಯವಲ್ಲ ಬಿಡುವು ಮಾಡಿಕೊಂಡು ಬಂದು ಅದನ್ನು ನೋಡಿಕೊಂಡು ಆರೈಕೆ ಮಾಡುವುದರ ಮೂಲಕ ಪರಿಸರದ ಮೇಲಿನ ಪ್ರೀತಿಯನ್ನು ತೋರಿಸಿ, ಅಲ್ಲದೇ ಮನೆಯ ಸಮೀಪದಲ್ಲಿ ಗಿಡವನ್ನು ನೆಟ್ಟು, ಪೋಷಿಸಿ, ಬೆಳೆಸಿ ಇತರರಿಗೂ ಮಾರ್ಗದರ್ಶನ ನೀಡಿರಿ ಎಂಬ ಮಾತುಗಳನ್ನಾಡಿ ಎಲ್ಲರನ್ನೂ ಬೀಳ್ಕೊಟ್ಟರು.


ಶಾಲೆಗೆ ಬಂದ ಮಕ್ಕಳನ್ನು ನೋಡದರೆ ಗದ್ದೆ ಕೆಲಸಕ್ಕೆ ಹೋಗಿ ಬಂದವರoತೆ ಬಟ್ಟೆಗಳು ಕಲೆಗಳಿಂದ ತುಂಬಿದ್ದವು. ಕೇಳಿದವರಿಗೆಲ್ಲ ಖುಷಿಯಿಂದ ಗಿಡನೆಟ್ಟು ಬಂದ ವಿಷಯವನ್ನು ಹೆಮ್ಮೆಯಿಂದ ಹೇಳತೊಡಗಿದರು. ಉಳಿದ ವಿದ್ಯಾರ್ಥಿಗಳು ನಮಗೂ ಗಿಡ ನೆಡಲು ಕರೆದುಕೊಂಡು ಹೋಗುವುದು ಯಾವಾಗ? ಎಂದು ಕೇಳುತ್ತಿದ್ದರು.


ಅದೆಷ್ಟೋ ವಿದ್ಯಾರ್ಥಿಗಳು ಈಗಲೂ ತಾವು ನೆಟ್ಟ ಗಿಡಗಳಿಗೆ ಸೈಕಲ್‌ನಲ್ಲಿ ಹೋಗಿ ನೀರೆರೆದು ಬರುತ್ತಾರೆ. ತಾನು ನೆಟ್ಟ ಗಿಡ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಕೆಲವರು ಅವತ್ತೇ ಕೊನೆ ಮತ್ತೆ ಆಕಡೆಗೆ ಹೋಗಿಯೇ ಇಲ್ಲ… ಹಳ್ಳಿಯ ಮಕ್ಕಳಿಗೆ ಗಿಡನೆಡುವುದು ದೊಡ್ಡ ವಿಷಯವೇ ಅಲ್ಲ, ಆದರೆ ನಗರ ಕೇಂದ್ರಿತ ಮಕ್ಕಳಿಗೆ ಈ ರೀತಿಯ ಚಟುವಟಿಕೆಗಳು ಪಠ್ಯದ ಭಾಗವಾದರೆ ಚೆಂದ.


ನಾವು ಬೆಳೆಯಬೇಕು ಎಂದರೆ ಪರಿಸರ ಎಷ್ಟು ಮುಖ್ಯ ಎಂಬುದನ್ನು ಅರಿಯಲು, ಗಿಡಗಳನ್ನು ನೆಟ್ಟು ಬೆಳೆಸಲು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಸಾಗುವ ಮಕ್ಕಳು ಪರಿಸರವನ್ನು ಹಾಳು ಮಾಡುವುದಿಲ್ಲ ಎಂಬ ನಂಬಿಕೆಯನ್ನು ಈ ಸಂದರ್ಭದಲ್ಲಿ ಸಾರಿದ್ದಂತೂ ಸುಳ್ಳಲ್ಲ.

Contact us for classifieds and ads : +91 9742974234



 
error: Content is protected !!