Latest News

ಸಾಧನೆಗೆ ತಾರತಮ್ಯವಿಲ್ಲ, ನಿಗದಿತ ತಯಾರಿ ಮುಖ್ಯ.

23/08/2021

ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಿಇಟಿ ತರಬೇತಿ ಸಮಾರೋಪದಲ್ಲಿ ಸಿಸಿಎಫ್ ಟಿ. ಹೀರಾಲಾಲ್ ನುಡಿ

sri krishnadevaraya hampi

ಸಾಧನೆ ಎನ್ನುವುದು ಸುಲಭವಾಗಿ ಬರುವುದಿಲ್ಲ. ಅದಕ್ಕೆ ನಗರ ಪ್ರದೇಶ, ಗ್ರಾಮೀಣ ಎನ್ನುವ ತಾರತಮ್ಯವಿಲ್ಲ. ಸತತವಾಗಿ ಅಧ್ಯಯನ ಮಾಡಿ ಗುರಿ ಸಾಧನೆಯಿಂದ ಹಿಂದೆ ಸರಿಯದವರು ಖಂಡಿತಾ ಯಶಸ್ವಿಯಾಗುತ್ತಾರೆ ಎಂದು ಮೈಸೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಟಿ.ಹೀರಾಲಾಲ್ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಜ್ಞಾನೋದಯ ಪದವಿ ಪೂರ್ವ ಕಾಲೇಜಿನ (ಜ್ಞಾನ ಶಾರದಾ) ಶ್ರೀ ವಿದ್ಯಾತೀರ್ಥ ಇನ್ಸ್‌ಸ್ಟಿಟ್ಯೂಟ್ ಆಫ್ ಕಲ್ಚರ್ ಸಹಯೋಗದಲ್ಲಿ ದಿನಾಂಕ:23.08.2021ರಂದು ಆಯೋಜಿಸಿದ್ದ 26 ದಿನಗಳ ಪಿಯು-ಸಿಇಟಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶುಭ ಹಾರೈಸಿ ಅವರು ಮಾತನಾಡಿದರು.

ಎಲ್ಲರಲ್ಲೂ ಜಾಣತನ ಇದ್ದೇ ಇರುತ್ತದೆ. ಇದರೊಟ್ಟಿಗೆ ನಿಮ್ಮ ಆಯ್ಕೆಗಳು ಸರಿಯಾಗಿರಲಿ. ಅಧ್ಯಾಪಕನೋ, ಎಂಜಿನಿಯರೋ, ವೈದ್ಯನೋ ಅಥವಾ ಸಾರ್ವಜನಿಕ ಸೇವಕನೋ ಎನ್ನುವುದನ್ನು ನಿರ್ಧರಿಸಿಕೊಂಡು ತಯಾರಿ ಮಾಡಿಕೊಳ್ಳಿ. ನಾನು ಹಳ್ಳಿಯಿಂದ ಬಂದವನು. ನನ್ನ ತಂದೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದವರು. ಆದರೆ ಶಿಕ್ಷಣವೇ ನನ್ನ ಮೊದಲ ಆದ್ಯತೆಯಾಗಿತ್ತು. ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದು ನಂತರ ಕೃಷಿಯಲ್ಲಿ ಪದವಿ ಪಡೆದು ಐಎಫ್ಎಸ್ ಪರೀಕ್ಷೆಯನ್ನು 24ನೇ gÁåAPïನೊಂದಿಗೆ ಉತ್ತೀರ್ಣನಾದೆ. ಅಂದರೆ ನಿಮ್ಮ ಗುರಿ, ಅಧ್ಯಯನದ ಕ್ರಮದಿಂದಲೇ ಬದುಕು ಕಟ್ಟಿಕೊಳ್ಳಬಹುದೇ ಹೊರತು ಅದೃಷ್ಟದಿಂದ ಅಲ್ಲವೇ ಅಲ್ಲ ಎಂದು ನುಡಿದರು.

ಗೂಗಲ್ ಎನ್ನುವುದು ಈಗ ಜ್ಞಾನದ ಆಗರ. ಇಂಟರ್‌ನೆಟ್ ಇದಕ್ಕೆ ಬೇಕಾದ ಪೂರಕ ಮಾರ್ಗ. ಹಿಂದೆಯೆಲ್ಲಾ ಮಾಹಿತಿಗೆ ಗ್ರಂಥಾಲಯಗಳಿಗೆ ಹೋಗಿ ಅಧ್ಯಯನ ಮಾಡಬೇಕಾಗಿತ್ತು. ತಂದೆ ತಾಯಿ ಯರನ್ನು ಬಿಟ್ಟು ಬೇರೆಲ್ಲವೂ ಇಂಟರ್‌ನೆಟ್‌ನಲ್ಲೇ ಸಿಗುತ್ತದೆ ಎನ್ನುವ ಪರಿಸ್ಥಿತಿಯಿದೆ. ಈಗ ಬೆರಳ ತುದಿಯಲ್ಲೇ ಮಾಹಿತಿ ಸಿಗುವುದರಿಂದ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಒಮ್ಮೆ ಮರ ಕಡಿಯಲು ವ್ಯಕ್ತಿಯೊಬ್ಬ 8ರಿಂದ 10 ಗಂಟೆ ತೆಗೆದುಕೊಂಡ. ಏಕೆಂದು ನೋಡಿದರೆ ಗರಗಸ ಮೊಂಡಾಗಿತ್ತು. ಅರ್ಧಗಂಟೆ ಅದಕ್ಕೆ ಸಾಣೆ ಹಿಡಿದ ನಂತರ ಮರ ಕತ್ತರಿಸಿದರೆ ಅರ್ಧ ಗಂಟೆಯಲ್ಲೇ ಕೆಲಸ ಮುಗಿಯಿತು. ನಿಮ್ಮ ಕೌಶಲ್ಯಗಳು ನಿಂತ ನೀರಾಗದಿರಲಿ. ಅವುಗಳಿಗೆ ಆಗಾಗ ಸಾಣೆ ಹಿಡಿಯುತ್ತಾ ಇರಿ. ಇದರಿಂದ ಖಂಡಿತಾ ನಿಮ್ಮಲ್ಲಿ ಬದಲಾವಣೆ ಕಾಣುತ್ತದೆ ಎಂದು ಹೀರಾಲಾಲ್ ಉದಾಹರಣೆ ನೀಡಿದರು.

ಯಶಸ್ಸು ಎಂದರೆ ಅಕಾರ, ದುಡ್ಡು ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಅಧಿಕಾರ, ದುಡ್ಡು ಎಲ್ಲರಿಗೂ ಬರಬಹುದು. ಇದರಿಂದ ಖಂಡಿತಾ ಯಶಸ್ಸು ಸಿಗುವುದಿಲ್ಲ. ನಿಮ್ಮ ಬಳಿ ಇರುವ ದುಡ್ಡು, ಅಧಿಕಾರವನ್ನು ಜನರ ಒಳಿತಿಗೆ ಬಳಸುವ ಮನೋಭಾವ ಬಳಸಿಕೊಂಡು ನಾಲ್ಕು ಜನ ನಿಮ್ಮಿಂದ ಖುಷಿಯಾದರೆ ಅದೇ ನಿಜವಾದ ಯಶಸ್ಸು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಆರ್.ರಾಜಣ್ಣ ಮಾತನಾಡಿ, ಯಾವುದೇ ಪರೀಕ್ಷೆ ಎದುರಿಸುವ ಮುನ್ನ ತಯಾರಿ ಮಾಡಿಕೊಳ್ಳಿ. ಜತೆಗೆ ವಿಶ್ಲೇಷಣಾತ್ಮಕವಾಗಿ ನೋಡುವುದನ್ನು ರೂಢಿಸಿಕೊಳ್ಳಿ. ಬದ್ದತೆ ಇದ್ದರೆ ಯಶಸ್ಸು ನಿಮ್ಮದೇ ಎಂದು ಸಲಹೆ ನೀಡಿದರು.

ಜ್ಞಾನ ಶಾರದಾ ಶಿಕ್ಷಣ ಸಂಸ್ಥೆ ವತಿಯಿಂದ ಎಸ್.ವಿ.ವೆಂಕಟೇಶ್, ವಿವಿ ಹಣಕಾಸು ಅಧಿಕಾರಿ ಡಾ. ಎ. ಖಾದರ್ ಪಾಷ, ಡೀನ್ಗಳಾದ ಡಾ.ಅಶೋಕ ಕಾಂಬ್ಳೆ, ಡಾ. ಷಣ್ಮುಖ, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿಗಳಾದ ಕೆ.ಜಿ.ಕೊಪ್ಪಲು ಗಣೇಶ್, ಹೊನ್ನೂರು ಸಿದ್ದೇಶ್ ಹಾಜರಿದ್ದರು. ಇದೇ ವೇಳೆ 450 ಪುಟಗಳ ಡಿಜಿಟಲ್ ಹೊತ್ತಿಗೆಯನ್ನು ಸಿಸಿಎಫ್ ಟಿ. ಹೀರಾಲಾಲ್ ಬಿಡುಗಡೆ ಮಾಡಿದರು.

ವಿಜಯಸಂಕೇಶ್ವರರ ಯಶಸ್ಸಿನ ಉದಾಹರಣೆ

ಆರಂಭದಲ್ಲೇ ಟಿ.ಹೀರಾಲಾಲ್ ಅವರು ಉದ್ಯಮಿ ವಿಜಯಸಂಕೇಶ್ವರ ಯಶಸ್ಸಿನ ಹಿಂದಿನ ಅಂಶವನ್ನು ಉಲ್ಲೇಖಿಸಿದರು. ಝೀ ವಾಹಿನಿಯಲ್ಲಿ ಪ್ರಸಾರವಾದ ಸಾಧಕರ ಸರಣಿಯಲ್ಲಿ ರಮೇಶ್ ಅರವಿಂದ್ ಅವರು ವಿಜಯ ಸಂಕೇಶ್ವರ ಅವರಿಗೆ ಪ್ರಶ್ನೆ ಹಾಕುತ್ತಾರೆ. ನಿಮ್ಮ ಸಂಪಾದನೆ ಹಾಗೂ ಯಶಸ್ಸಿನ ಹಿಂದಿನ ಗುಟ್ಟೇನು ಎಂದು. ಆಗ ಯಾವುದೇ ವ್ಯಕ್ತಿ ಸಾಧನೆ ಮಾಡುವಾಗ ಕಷ್ಟ ಎದುರಿಸಬೇಕು. ಹಾಗೆಂದು ಛಲವನ್ನು ಎಂದೂ ಬಿಡಬಾರದು. ಛಲ ಬಿಡದೇ ಕೈಗೊಂಡ ನಿರ್ಧಾರಕ್ಕೆ ಬದ್ದವಾಗಿ ಕೆಲಸ ಮಾಡಬೇಕು. ಅದೇ ನನ್ನ ಯಶಸ್ಸಿನ ಗುಟ್ಟು ಎಂದು ವಿಜಯ ಸಂಕೇಶ್ವರ ಅವರು ಹೇಳಿದ್ದರು. ಇದು ಈಗಿನ ಯುವಕರಿಗೆ ಮಾದರಿಯಾಗಬೇಕು ಎಂದು ನುಡಿದರು.

ಪಿಯುಸಿ ಹಂತದಲ್ಲಿಯೇ ಮುಂದೆ ಯಾವ ಕೋರ್ಸ್ ಮಾಡುತ್ತೇನೆ ಎನ್ನುವ ನಿರ್ಣಯ ಮಾಡಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ತಿಳಿದುಕೊಂಡು ತಯಾರಿ ಆರಂಭಿಸಿರಿ.

-ಟಿ.ಹೀರಾಲಾಲ್, ಸಿಸಿಎಫ್ ಮೈಸೂರು

Contact us for classifieds and ads : +91 9742974234



 
error: Content is protected !!