ಕಾಡು ಪ್ರಾಣಿಗಳನ್ನು ಬೇಟೆಯಾಡಲು ಉರುಳು ಹಾಕಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಡೀಪುರ ಹುಲಿಯೋಜನೆ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯದ ಹಂಗಳ ಶಾಖೆಯ ಕಲೀಗೌಡನಹಳ್ಳಿ ಗಸ್ತಿನ ಕುರುಬರನಕಟ್ಟೆ ಕೆರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸಿಬ್ಬಂದಿಗಳು ಗಸ್ತು ತಿರುಗುವಾಗ 15 ಉರುಳುಗಳು ಹಾಗೂ ಒಂದು ವಾಟರ್ ಕ್ಯಾನ್ ಪತ್ತೆಯಾಗಿದ್ದು, ಸೂಕ್ಷ್ಮವಾಗಿ ಗಮನಿಸಿ ಯಾರೋ ದುಷ್ಕರ್ಮಿಗಳು ವನ್ಯಜೀವಿಗಳನ್ನು ಬೇಟೆಯಾಡಲು ಉರುಳುಗಳನ್ನು ಹಾಕಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಆರೋಪಗಳನ್ನು ಪತ್ತೆ ಹಚ್ಚಲು ಜು.1ರಂದು ರಾತ್ರಿ ಕಾದರೂ ಸಹ ಆರೋಪಿಗಳು ಪತ್ತೆಯಾಗಿಲ್ಲ. ಜು.2ರಂದು ಇಲಾ ಶ್ವಾನ ರಾಣಾ ಸಹಾಯದಿಂದ ಹೆಚ್ಚಿನ ತನಿಖೆ ಕೈ ಗೊಂಡಾಗ ಇಬ್ಬರು ಆರೋಪಿಗಳು ಉರುಳು ಹಾಕಿದ್ದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದಾಗ ಆರೋಪಿಗಳನ್ನು ಸಾಕ್ಷಿ ಸಮೇತ ಬಂಧಿಸಲಾಗಿದೆ.
ತಾಲ್ಲೂಕಿನ ಕಾಡಂಚಿನ ಚೆನ್ನಿಕಟ್ಟೆ ಕಾಲೋನಿಯ ಬಸಪ್ಪ ಮತ್ತು ಪುಟ್ಟರಾಜು ಬಂಧಿತ ಆರೋಪಿಗಳು, ಮೂವರು ತಲೆ ಮರೆಸಿಕೊಂಡಿದ್ದಾರೆ.
ಪ್ರಕರಣದಲ್ಲಿ 15 ಉರುಳು ಹಾಗೂ ಮೊಲದ ಮಾಂಸವನ್ನು ವಶ ಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಆರೋಪಿಗಳಾದ ಚೆನ್ನಿಕಟ್ಟೆಯ ಗೋಪಾಲ, ಕೃಷ್ಣ, ಬಸವರಾಜು ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ತಿಳಿಸಿದರು.