1. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾಪ ಶ್ರೀ ರಾಮಕೃಷ್ಣ ಹೆಗಡೆಯವರ ಸರ್ಕಾರವಿದ್ದಾಗಲಿಂದಲೂ ಇದುವರೆಗೆ ಹಲವು ಬಾರಿ ಬಂದಿದ್ದು ಪರಿಸರ ಪ್ರೇಮಿಗಳ,ಪರಿಸರ ತಜ್ಞರ ಮತ್ತು ನಾಗರೀಕರ ತೀವ್ರ ವಿರೋಧದ ಕಾರಣದಿಂದ ಇದು ಕಾರ್ಯಗತವಾಗಿಲ್ಲ.
2 ದಿನಾಂಕ: 21-8-2012 ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು
ವೃತ್ತ,ಮೈಸೂರು ಇವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ಇವರಿಗೆ ಪತ್ರ ಬರೆದು ( ಪತ್ರ ಸಂಖ್ಯೆ – ಸಿ 1 / ಎಲ್.ಎನ್.ಡಿ./ಎಫ್. ಸಿ/107/2012-13 ದಿ.21-8-2012 ) ಚಾಮುಂಡಿ ಬೆಟ್ಟಕ್ಕೆ ಹೋಗಲು ರೋಪ್ ವೇ ಅವಶ್ಯಕತೆ ಇರುವುದಿಲ್ಲ ಎಂದು ಹಲವಾರು ಕಾರಣಗಳನ್ನು ನೀಡಿ ಪತ್ರ ಬರೆದಿದ್ದರು. ( ಪತ್ರ ಲಗತ್ತಿಸಲಾಗಿದೆ)
3. 2022 ರ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಸುಮಾರು 70 ಸಾವಿರ ಆನ್ ಲೈನ್ ನಲ್ಲಿ ಸಹಿ ಮತ್ತು 50 ಸಾವಿರಕ್ಕೂ ಹೆಚ್ಚು ಭೌತಿಕ ಸಹಿ ಸಂಗ್ರಹಿಸಿಲಾಗಿತ್ತು
4. 2022 ರ ಏಪ್ರಿಲ್ 3 ರಂದು ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ವಿವಿಧ ತಜ್ಞರ ಜೊತೆ ದುಂಡು ಮೇಜಿನ ಸಭೆ ನಡೆಸಲಾಗಿತ್ತು. ಇದರಲ್ಲಿ ಸ್ಟ್ರಕ್ಚರಲ್ ಇಂಜಿನಿಯರ್ ಮೇಜರ್ ಜನರಲ್ ( ನಿ ) ಸುಧೀರ್ ಒಂಬತ್ಕೆರೆ, ಪರಿಸರ ತಜ್ಞ ಮತ್ತು ಲೇಖಕ ನಾಗೇಶ್ ಹೆಗಡೆ, ವನ್ಯಜೀವಿ ತಜ್ಞ ಕೃಪಾಕರ,ಜಲ ತಜ್ಞ ಪ್ರೊಫೆಸರ್ ಯು ಎನ್ ರವಿಕುಮಾರ್, ಭೂ ವಿಜ್ಞಾನಿ ಪ್ರೊಫೆಸರ್ ಎಂ ಆರ್ ಜನಾರ್ದನ,ಪರಂಪರೆ ತಜ್ಞ ಪ್ರೊಫೆಸರ್ ಎನ್ ಎಸ್ ರಂಗರಾಜು,ಪಕ್ಷಿ ವೀಕ್ಷಕ ಶಿವಪ್ರಕಾಶ್ ಅಡವಣ್ಣಿ, ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಮತ್ತು ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ ಇವರುಗಳು ಭಾಗವಹಿಸಿ ತಮ್ಮ ತಜ್ಞ ವರದಿಗಳನ್ನು ಮಂಡಿಸಿದ್ದರು.
5. ಮೈಸೂರು ಸಂಸ್ಥಾನದ ರಾಜ ವಂಶಸ್ಥರಾದ ಶ್ರೀಮತಿ ಪ್ರಮೋದಾ ದೇವಿಯವರು ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ ಎಂದು ಹೇಳಿದ್ದರು
6. ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರು
ಬೆಟ್ಟಕ್ಕೆ ‘ಪ್ರಸಾದ್ ‘ ಯೋಜನೆ ಬೇಡ ಎಂದು ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು ಮತ್ತು ಬೆಟ್ಟಕ್ಕೆ ರೋಪ್ ವೇ ಬೇಡ ಎಂದಿದ್ದರು.
7. ನಾಡಿನ ಹಿರಿಯ ರಾಜಕಾರಣಿ ಮತ್ತು ಸಂಸದ ಶ್ರೀನಿವಾಸ್ ಪ್ರಸಾದ್ ಅವರು ತಮ್ಮ (ಬಿಜೆಪಿ ) ಸರ್ಕಾರ 2022-23 ರ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದ ರೋಪ್ ವೇ ಯೋಜನೆಯ ನಿರ್ಧಾರವನ್ನೇ ವಿರೋಧಿಸಿದ್ದರು.
8. ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡರು ಮತ್ತು ಕಾಂಗ್ರೆಸ್ ಪಕ್ಷದ ಹಲವು ನಾಯಕರು ತೀವ್ರವಾಗಿ ವಿರೋಧಿಸಿದ್ದರು.
9. ದೇವನೂರ ಮಹಾದೇವ, ಪ್ರಧಾನ ಗುರುದತ್ತ , ಪಂಡಿತ್ ರಾಜೀವ್ ತಾರಾನಾಥ
ಇವರು ಸೇರಿದಂತೆ ನಾಡಿನ ಖ್ಯಾತ ಸಾಹಿತಿಗಳು, ಕಲಾವಿದರು ಮತ್ತು ಗಣ್ಯರು ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು
10. ದಿನಾಂಕ : 06/07/2022 ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ರೋಪ್ ವೇ ಯೋಜನೆ ಕೈಬಿಡಲು ನಿರ್ಣಯ ಮಾಡಿದ್ದರು.
ಚಾಮುಂಡಿ ಬೆಟ್ಟದ ಬಗ್ಗೆ ಲಕ್ಷಾಂತರ ಜನರಿಗೆ ತೀವ್ರ ಭಾವನಾತ್ಮಕ ಸಂಬಂಧವಿದೆ. ಚಾಮುಂಡೇಶ್ವರಿಯನ್ನು ನಾಡಿನ ಅಧಿದೇವತೆ ಎಂದು ಪೂಜಿಸುತ್ತಾರೆ. ಇಲ್ಲಿ ನಡೆಯುವ ದಸರಾ ವಿಶ್ವ ವಿಖ್ಯಾತ. ಬೆಟ್ಟ ಮೈಸೂರಿನ ಹೆಮ್ಮೆಯ ಪಾರಂಪರಿಕ ತಾಣ ಮತ್ತು ಮೈಸೂರಿನ ಅಸ್ಮಿತೆ. ಹಾಗಾಗಿ ಚಾಮುಂಡಿ ಬೆಟ್ಟದ ವಿಷಯ ಬಹಳ ಸೂಕ್ಷ್ಮ. ಮಾನ್ಯ ಮುಖ್ಯ ಮಂತ್ರಿಗಳು ಮೈಸೂರಿನವರು ಮತ್ತು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ರಾಜಕೀಯ ಉತ್ತುಂಗಕ್ಕೇರಿದ್ದಾರೆ. ಚಾಮುಂಡಿ ಬೆಟ್ಟದ ರಕ್ಷಣೆಯನ್ನು ಮಾನ್ಯ ಮುಖ್ಯ ಮಂತ್ರಿಗಳು ಮಾಡುತ್ತಾರೆ ಎಂದು ಜನರು ನಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಹಾಕುವುದರಿಂದ ಆಗುವ ಅಪಾಯ ಮತ್ತು ಅನಾಹುತಗಳ ಬಗ್ಗೆ ವಿವಿಧ ತಜ್ಞರು ನೀಡಿದ ವರದಿಗಳನ್ನು ಅವರಿಗೆ ಕೊಟ್ಟು ಈ ಯೋಜನೆ ಕೈಬಿಡುವಂತೆ ವಿನಂತಿಸಲು ‘ಚಾಮುಂಡಿ ಬೆಟ್ಟ ಉಳಿಸಿ ಸಮಿತಿ’ ತೀರ್ಮಾನಿಸಿದೆ