ನಾಡಹಬ್ಬ ದಸರಾ ಉತ್ಸವಕ್ಕೆ ಈ ಬಾರಿ ಹೆಚ್ಚುವರಿ 2 ಆನೆಗಳ ಆಯ್ಕೆ ಒಟ್ಟು 14 ಆನೆಗಳ ಆಯ್ಕೆ, ಅರಣ್ಯ ಇಲಾಖೆ.
AskMysuru 24/08/2021 Festival
ಮೈಸೂರು: ಕೋವಿಡ್ ಭೀತಿಯ ನಡುವೆ ಈ ಬಾರಿಯೂ ನಾಡಹಬ್ಬ ದಸರಾ ಉತ್ಸವಕ್ಕೆ ಸಿದ್ಧತೆ ಪ್ರಾರಂಭಿಸಲಾಗಿದೆ. ದಸರಾ ಉತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂಸವಾರಿ ಮೆರವಣಿಗೆಗೆ ಅರಣ್ಯ ಇಲಾಖೆ ಈ ಬಾರಿ 14 ಆನೆಗಳನ್ನು ಆಯ್ಕೆ ಮಾಡಿದೆ.
ದಸರಾ ಆಚರಣೆ ಸಂಬಂಧ ಹೈ ಪವರ್ ಕಮಿಟಿ ಸಭೆಗೂ ಮುನ್ನ ಡಿಸಿಎಫ್ ಕರಿಕಾಳನ್ ನೇತೃತ್ವದಲ್ಲಿ ಅರಣ್ಯಧಿಕಾರಿಗಳು 14 ಆನೆಗಳನ್ನ ಆಯ್ಕೆ ಮಾಡಿದ್ದಾರೆ. ಚಾಮರಾಜನಗರ ಮತ್ತು ಕೊಡುಗೆ ಜಿಲ್ಲೆಗಳ ವಿವಿಧ ಆನೆ ಶಿಬಿರಗಳಲ್ಲಿರುವ ಆನೆಗಳನ್ನು ದಸರಾ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ. ಆನೆಗಳ ಪಟ್ಟಿಯನ್ನು ಬೆಂಗಳೂರಿನ ಮುಖ್ಯ ಅರಣ್ಯ ಕಚೇರಿಗೆ ಕಳುಹಿಸಲಾಗಿದೆ. ಕೇಂದ್ರ ಕಚೇರಿಯಲ್ಲಿ ಆನೆಗಳ ಪಟ್ಟಿಗೆ ಅಂಕಿತ ಹಾಕಿದ ನಂತರ ಆನೆಗಳನ್ನು ಮೈಸೂರಿಗೆ ಕರೆ ತರಲು ಕ್ರಮ ವಹಿಸಲಾಗುತ್ತದೆ.
ಆನೆಕಾಡು, ದುಬಾರೆ, ಮತ್ತಿಗೋಡು,ಬಂಡೀಪುರ ಆನೆ ಶಿಬಿರದಿಂದ ಆನೆಗಳ ಆಯ್ಕೆ ಮಾಡಲಾಗಿದೆ. ಸದ್ಯ ವಿಕ್ರಮ್, ವಿಜಯಾ, ಅಭಿಮನ್ಯು, ಗೋಪಾಲಸ್ವಾಮಿ, ಭೀಮಾ, ಮಹೇಂದ್ರ, ಧನಂಜಯ, ಪ್ರಶಾಂತ್, ಗೋಪಿ, ಹರ್ಷ, ಕಾವೇರಿ, ಲಕ್ಷ್ಮಣ, ಚೈತ್ರಾ, ಮಹಾರಾಷ್ಟ್ರ ಭೀಮಾ ಆನೆಗಳು ಪಟ್ಟಿಯಲ್ಲಿ ಇವೆ.
ಕಳೆದ ಬಾರಿಯಂತೆ ಈ ಬಾರಿಯೂ ಸರಳ ದಸರಾ ಆಚರಿಸಿದರೆ ಪಟ್ಟಿಯಲ್ಲಿರುವ 14 ಆನೆಗಳ ಪೈಕಿ 7 ಆನೆಗಳನ್ನು ಮಾತ್ರ ನಗರಕ್ಕೆ ಕರೆಯಿಸಿಕೊಳ್ಳಲಾಗುವುದು. ಕಳೆದ ವರ್ಷ ಸರಳ ದಸರಾ ಆಚರಣೆ ಹಿನ್ನೆಲೆ 5 ಆನೆಗಳನ್ನು ಕರೆಸಿಕೊಳ್ಳಲಾಗಿತ್ತು. ಈ ಬಾರಿ ಆನೆಗಳ ಆರೋಗ್ಯದ ಹಾಗೂ ಮುಂಜಾಗ್ರತಾ ದೃಷ್ಟಿಯಿಂದ ಎರಡು ಆನೆಗಳನ್ನ ಹೆಚ್ಚುವರಿಯಾಗಿ ಕರೆಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಸಹ ಸರಳವಾಗಿ ದಸರಾ ಆಚರಿಸುವ ಸಾಧ್ಯತೆ ಇದೆ. ಅಕ್ಟೋಬರ್ ವೇಳೆಗೆ ಕೋವಿಡ್ ಮೂರನೇ ಅಲೆ ಪ್ರಾರಂಭಗೊಳ್ಳಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಸರಳವಾಗಿ ದಸರಾ ನಡೆಯುವ ಸಾಧ್ಯತೆ ಇದೆ.