ಸತತ 8 ಬಾರಿ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಹೊತ್ತಿದ್ದ ದಸರಾ ಆನೆ ಅರ್ಜುನ ಇನ್ನು ನೆನಪು ಮಾತ್ರ
Venkatesh, Mysuru.
ಅರ್ಜುನ. ಹೆಸರಿಗೆ ತಕ್ಕಂತೆಯೇ ಇದ್ದ. ಕಂಬದಂಥ ಕಾಲು, ಗಟ್ಟಿ ಮುಟ್ಟಾದ ಮೈಕಟ್ಟು, ಬೆಟ್ಟವನ್ನೂ ಅಲುಗಾಡಿವಷ್ಟು ಶಕ್ತಿಶಾಲಿ. ತಾನು ಎಷ್ಟೇ ಬಲಾಢ್ಯನಾಗಿದ್ರೂ ಅಷ್ಟೇ ಸೌಮ್ಯ ಸ್ವಭಾವ. 750 ಕೆಜಿಯ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ತಾಯಿ ವಿಗ್ರಹ ಹೊತ್ತು ಹೆಜ್ಜೆ ಹಾಕುತ್ತಿದ್ರೆ ಇಡೀ ರಾಜಬೀದಿಯೇ ಕಂಪಿಸುತ್ತಿತ್ತು. ಲಕ್ಷಾಂತರ ಕಂಗಳು ಅರ್ಜುನನ ಮೇಲೆಯೇ ನೆಟ್ಟಿರುತ್ತಿತ್ತು. ಕೋಟ್ಯಂತರ ಅಭಿಮಾನಿಗಳನ್ನ ಸಂಪಾದಿಸಿದ್ದ ಅದೇ ಅರ್ಜುನ ಇಂದು ನಮ್ಮೊಂದಿಗಿಲ್ಲ. ಚಾಮುಂಡೇಶ್ವರಿಯ ಪ್ರೀತಿಯ ಪುತ್ರ ಚಿರನಿದ್ರೆಗೆ ಜಾರಿದ್ದಾನೆ. ಅರಣ್ಯಾಧಿಕಾರಿಗಳ ಯಡವಟ್ಟಿಗೆ ತಾನೇ ಬಲಿಯಾಗಿ ಹೋಗಿದ್ದಾನೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಇನ್ನೆಂದು ಬಾರದೂರಿಗೆ ಹೊರಟುಬಿಟ್ಟಿದ್ದಾನೆ. ಸೌಮ್ಯ ಸ್ವಭಾವದ ಅರ್ಜುನನ ಸಾವು ಕರುನಾಡ ಪಾಲಿಗೆ ದೊಡ್ಡ ಆಘಾತ ನೀಡಿದೆ. ಅಷ್ಟಕ್ಕೂ ಅರ್ಜುನನಿಗೆ ಏನಾಯ್ತು..? ಆತನ ಸಾವಿಗೆ ಹೊಣೆ ಯಾರು..?
ಸತತ 8 ವರ್ಷ ನಾಡದೇವಿ ಚಾಮುಂಡೇಶ್ವರಿಯ ಮೂರ್ತಿಯನ್ನ ಹೊತ್ತು ದಸರಾವನ್ನ ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಅರ್ಜುನ ಇನ್ನೇನಿದ್ರೂ ನೆನಪು ಮಾತ್ರ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಸೌಮ್ಯ ಸ್ವಭಾವದ ಅರ್ಜುನ ಕೊನೇ ಗಳಿಗೆಯಲ್ಲೂ ಹೋರಾಡುತ್ತಲೇ ಪ್ರಾಣ ಬಿಟ್ಟಿದ್ದಾನೆ. ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೊಸದೇನೂ ಅಲ್ಲ. ಈಗಲೂ ಸಹ ಆನೆಗಳ ಹಾವಳಿ ಮಿತಿ ಮೀರಿದೆ. ಹೀಗಾಗೇ ಕಾಡಾನೆಗಳನ್ನ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಲು ಮತ್ತು ರೇಡಿಯೋ ಕಾಲರ್ ಅಳವಡಿಸಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಂದ್ರಂತೆಯೇ ಸೋಮವಾರ ಸಕಲೇಶಪುರದ ಯಸಳೂರು ಬಳಿ ಕಾಡಾನೆ ಸೆರೆ ಹಿಡಿಯಲು ಅಧಿಕಾರಿಗಳ ತಂಡ ತೆರಳಿತ್ತು.
ಅರ್ಜುನ ಸೇರಿದಂತೆ ನಾಲ್ಕು ಸಾಕಾನೆಗಳೊಂದಿಗೆ ಸೋಮವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ನಡೆಯುತ್ತಿತ್ತು. ನಾಲ್ಕು ಆನೆಗಳ ಪೈಕಿ ಅರ್ಜುನನೂ ಈ ಆಪರೇಷನ್ನಲ್ಲಿ ಭಾಗಿಯಾಗಿದ್ದ. ಆದ್ರೆ ಹತ್ತಾರು ಪುಂಡಾನೆಗಳು, ಹುಲಿಗಳನ್ನ ಪಳಗಿಸಿದ್ದ ಅರ್ಜುನನಿಗೆ ಮಾತ್ರ ಈ ದಿನ ಕರಾಳವಾಗಿತ್ತು. ಇಂಥಾದ್ದೊಂದು ಘನಘೋರ ದುರಂತ ಸಂಭವಿಸಬಹುದು ಅನ್ನೋ ಸಣ್ಣ ಸುಳಿವೂ ಯಾರಿಗೂ ಇರಲೇ ಇಲ್ಲ. ಯಾಕಂದ್ರೆ ಕಾರ್ಯಾಚರಣೆ ವೇಳೆ ಕಾಡಾನೆ ಮತ್ತು ಸಾಕಾನೆಗಳ ನಡುವೆ ರಣಭೀಕರ ಕಾಳಗ ನಡೆದಿತ್ತು. ಒಂಟಿಯಾಗಿ ಓಡಾಡುತ್ತಾ ಸಿಕ್ಕಿದ್ದನ್ನೆಲ್ಲಾ ತಿಂದು ಕೊಬ್ಬಿದ್ದ ಸಲಗದ ಆರ್ಭಟಕ್ಕೆ ಸಾಕಾನೆಗಳು ದಿಕ್ಕಾಪಾಲಾಗಿ ಓಡಿದ್ದವು. ಆದ್ರೆ ಪುಂಡಾನೆ ವಿರುದ್ಧ ಅರ್ಜುನ ಮಾತ್ರ ಸೆಣಸಾಡುತ್ತಲೇ ಇದ್ದ. ಏಕಾಂಗಿಯಾಗಿ ಹೋರಾಟ ಮುಂದುವರಿಸಿದ್ದ. 64 ವರ್ಷ ವಯಸ್ಸಿನ ಅರ್ಜುನನಿಗೆ ಕಾದಾಡುವ ಛಲ ಇದ್ದರೂ ಅವನ ದೇಹ ಅದಕ್ಕೆ ಸ್ಪಂದಿಸಲೇ ಇಲ್ಲ.
ಕಾಡೇ ನಡುಗುವಂತೆ ಘೀಳಿಡುತ್ತಿದ್ದ ಕಾಡಾನೆ ಮತ್ತು ಅರ್ಜುನನ ನಡುವೆ ಸುಮಾರು ಹೊತ್ತು ಕಾಳಗ ನಡೆದಿತ್ತು. ಎರಡು ಆನೆಗಳ ಕಾಳಗ ತಾರಕಕ್ಕೇರುತ್ತಿದ್ದಂತೆ ಅರ್ಜುನನ ಮಾವುತರು ಮೇಲಿನಿಂದ ಇಳಿದು ಓಡಿ ಹೋಗಿದ್ರು. ಈ ವೇಳೆ ಕಾಡಾನೆಯ ಭೀಕರ ಏಟಿಗೆ ಅರ್ಜುನ ಕುಸಿದು ಬಿದ್ದಿದ್ದಾನೆ. ಅರ್ಜುನನ ಹೊಟ್ಟೆ ಭಾಗಕ್ಕೆ ಕಾಡಾನೆ ದಂತದಿಂದ ತಿವಿದಿದ್ದು, ತೀವ್ರ ರಕ್ತಸ್ರಾವದಿಂದ ಬಿಟ್ಟಿದ್ದಾನೆ. ಅರ್ಜುನ ನಿಸ್ತೇಜನಾಗಿ ಮಲಗಿದ್ರೆ ಮಾವುತನ ಕರುಳೇ ಕಿತ್ತು ಬಂದಂತಾಗಿತ್ತು. ಬೆಟ್ಟದಂತೆ ಬಿದ್ದಿದ್ದ ಅರ್ಜುನನನ್ನ ತಬ್ಬಿ ಕಣ್ಣೀರು ಹಾಕುತ್ತಿದ್ದ. ಹತ್ತಾರು ಪುಂಡಾನೆಗಳನ್ನ ಪಳಗಿಸಿದ್ದ ಅರ್ಜುನನ ಸಾವು ಅರಣ್ಯಾಧಿಕಾರಿಗಳಿಗೂ ನುಂಗಲಾರದ ತುತ್ತಾಗಿತ್ತು. ಅರ್ಜುನನ ಕಳೇಬರದ ಸುತ್ತ ನಿಂತು ಕಣ್ಣಾಲೆಗಳನ್ನ ತುಂಬಿಕೊಂಡಿದ್ರು. ಯಾಕಂದ್ರೆ ಹತ್ತಾರು ಆನೆಗಳು ದಸರಾದಲ್ಲಿ ಅಂಬಾರಿಯನ್ನ ಹೊತ್ತಿವೆ. ಆದ್ರೆ ಯಾವ ಆನೆಯೂ ಅರ್ಜುನನಷ್ಟು ಬಲಶಾಲಿಯಾಗಿರಲಿಲ್ಲ, ಅವನಷ್ಟು ಸೌಮ್ಯ ಸ್ವಭಾವವೂ ಇರಲಿಲ್ಲ. 8 ವರ್ಷಗಳ ಕಾಲ ದಸರಾ ಗಜಪಡೆಯ ಕ್ಯಾಪ್ಟನ್ ಆಗಿ ಅಂಬಾರಿ ಹೊರುತ್ತಿದ್ದ ಅರ್ಜುನನಿಗೆ 2020ರಲ್ಲಿ 60 ವರ್ಷ ವಯಸ್ಸಾಗಿತ್ತು. ಹೀಗಾಗಿ ನಿಯಮದಂತೆ ಆತನಿಗೆ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ನೀಡಲಾಗಿತ್ತು.
ಪ್ರಸ್ತುತ 64 ವರ್ಷದ ಅರ್ಜುನನನ್ನ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿ ಪೋಷಣೆ ಮಾಡಲಾಗುತ್ತಿತ್ತು. ಅಂಬಾರಿ ಹೊರದೇ ಇದ್ದರೂ ದಸರೆಯಲ್ಲಿ ಭಾಗಿಯಾಗುತ್ತಿದ್ದ. ಅತ್ಯಂತ ಬಲಶಾಲಿಯಾಗಿದ್ದ ಅರ್ಜುನನನ್ನ ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ನವೆಂಬರ್ 24ರಿಂದ ಹಾಸನ ಭಾಗದಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಮತ್ತು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಅರ್ಜುನ ಭಾಗಿಯಾಗಿದ್ದ. ಈಗಾಗಲೇ 5 ಕಾಡಾನೆಗಳನ್ನ ಸೆರೆ ಹಿಡಿಯಲಾಗಿತ್ತು. ಪ್ರತೀ ಬಾರಿ ತನ್ನ ಪುತ್ರನಿಗೆ ಕಾವಲಾಗಿರುತ್ತಿದ್ದ ನಾಡದೇವಿಯ ಆಶೀರ್ವಾದ ಸೋಮವಾರ ಮಾತ್ರ ಅರ್ಜುನನ ಪಾಲಿಗೆ ದಕ್ಕಲೇ ಇಲ್ಲ. ಆದ್ರಿಲ್ಲಿ ಅಧಿಕಾರಿಗಳದ್ದು ತಪ್ಪು ಎನ್ನಬೇಕೋ, ಕಾರ್ಯಾಚರಣೆ ವೇಳೆ ಎಲ್ಲವೂ ಕೈ ಮೀರಿ ಹೋಗಿತ್ತೋ ಗೊತ್ತಿಲ್ಲ. ಆದ್ರೆ ಅಂಬಾರಿಯನ್ನ ಹೊತ್ತು ನಾಡಹಬ್ಬದ ಸಂಭ್ರಮ ಹೆಚ್ಚಿಸಿದ್ದ ಅರ್ಜುನನನ್ನ ನಾವು ಕೊನೇ ಕ್ಷಣದವರೆಗೆ ರಾಜನಂತೆ ನೋಡಿಕೊಳ್ಳಬೇಕಾಗಿತ್ತು. ಇಳಿವಯಸ್ಸಿನಲ್ಲಿ ಮಗುವಿನಂತೆ ಜೋಪಾನ ಮಾಡುವ ಜವಾಬ್ದಾರಿ ನಮ್ಮದಾಗಿತ್ತು.
ಅಂಬಾರಿ ಹೊರುವ ವೇಳೆ ರಾಜನಂತೆ ಇರುತ್ತಿದ್ದ ಅರ್ಜುನ ಕೊನೇ ಕ್ಷಣದಲ್ಲಿ ಅದೆಷ್ಟು ನೋವು ತಿಂದಿದ್ದನೋ, ಅದೆಷ್ಟು ಯಾತನೆ ಅನುಭವಿಸಿದ್ದನೋ, ಅದೆಷ್ಟು ನರಳಾಡಿದ್ದನೋ ಗೊತ್ತಿಲ್ಲ. ಅವನ ಸಂಕಟ ನೆನೆಸಿಕೊಂಡರೆ ನಮ್ಮ ಕಣ್ಣುಗಳೂ ಒದ್ದೆಯಾಗುತ್ತವೆ. ನಮ್ಮ ಕರುಳೇ ಕಿವುಚಿದಂತಾಗುತ್ತೆ. ನಮಗಾಗಿಯೇ ಬದುಕಿದ್ದ ನಿನ್ನನ್ನು ಕಡೇ ಕ್ಷಣದಲ್ಲಿ ಸುಖವಾಗಿ ನೋಡಿಕೊಳ್ಳದ ನಮ್ಮನ್ನು ಕ್ಷಮಿಸಿಬಿಡು ಅರ್ಜುನ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿ ಬಾ. ಚಾಮುಂಡೇಶ್ವರಿ ಮಗನಾಗಿ ಅಂಬಾರಿಯನ್ನು ಹೊತ್ತು ಸಾಗುವಂತಾಗಿಲಿ ಎಂದು ಪ್ರಾರ್ಥಿಸೋಣ.