ಈತ ಒಂತರಾ ನನ್ನ ಪಟ್ಟಶಿಷ್ಯ ಅಂತ ಎಲ್ಲಾರೂ ಕರಿಯೋರು. ಓದಿನ ವಿಚಾರದಲ್ಲಿ ಪರವಾಗಿಲ್ಲ ಅನ್ನೋ ಅಷ್ಟು ಅಷ್ಟೇ. ಕೋಚಿಂಗ್‌ಕ್ಲಾಸ್ (ರುಬ್ಬಿಸಿಕೊಳ್ಳುವ) ವಿದ್ಯಾರ್ಥಿ. ಓದೋದು ಬರಿಯೋದನ್ನು ಬಿಟ್ಟು ಬೇರೆ ಏನಾದರೂ ಚಟುವಟಿಕೆ ಇದೆ ಅಂದರೆ ಈತನೇ ಮೊದಲಿಗೆ ಇರ್ತಿದ್ದ, ಪ್ರಾಮಾಣಿಕ ವಿದ್ಯಾರ್ಥಿ ಕೂಡ. ಎಲ್ಲಾದರೂ ಆತ ಶಾಲೆಯಲ್ಲಿ ಅಪ್ಪಿತಪ್ಪಿ ಸರಿಯಾದ ಉತ್ತರ ಕೊಟ್ಟಾಗಲೋ, ಯಾರಾದರೂ ಟೀಚರ್ ಒದ್ದು ಹೊರಗೆ ಹಾಕಿದಾಗಲೋ ಕೆಲವು ಶಿಕ್ಷಕರು ಹೇಳ್ತಾ ಇದ್ರು, ‘ಸರ್ ನಿಮ್ಮ ಶಿಷ್ಯನ ನೋಡಿ’ ಅಂತ ಆ ಮಟ್ಟಿಗೆ ಹತ್ರ ಆಗಿದ್ದ. ಆಗಾಗ ನನ್ನ ಹತ್ರನೂ ಹೊಡ್ತಾತಿಂತಾ ಇದ್ದ ಆದರೂ, ಬೇಸರಿಕೊಳ್ಳದೇ ನನ್ನ ಹಿಂದೇನೇ ಬರ್ತಾಇದ್ದ ಕೂಡ. ಈತನಿಗೆ ತರಗತಿಯಲ್ಲಿಇರೋದಕ್ಕಿಂತ ಹೊರಗೆ ಇರೋದೇ ಚೆಂದ ಅನ್ನಿಸೊದೇನೋ.
ಒಮ್ಮೆ ಪ್ರತಿಭಾಕಾರಂಜಿಯಲ್ಲಿ ಯಾರಾದರೂ ಭಾಗವಹಿಸೋರು ಇದ್ದರೆ ಹಾಲ್‌ಗೆ ಬನ್ನಿ ಅಂತ ಟೀಚರ್ ಹೇಳಿ ಹೋಗಿದ್ದಾರೆ. ಇವನು ಎದ್ದು ಹೋಗಿದ್ದಾನೆ. ಯಾವ ಕಾರ್ಯಕ್ರಮ ಕೊಡೋದು ಅಂತ ಗೊತ್ತಾಗದೇ ಎರಡು ತರಗತಿಗಳ ಸಮಯ ಹಾಡು, ನೃತ್ಯ, ಭಾಷಣ ಕಾರ್ಯಕ್ರಮ ನೋಡ್ತಾ ಕೂತಿದಾನೆ. ಇವನಿಗೆ ಕಾರ್ಯಕ್ರಮ ಏನು ಕೊಡ್ತಿಯಾ? ಅಂದಾಗ ನಾಟಕ ಮಾಡ್ತಿನಿ. ಅಂದಿದಾನೆ. ನಾಟಕಕ್ಕೆ ೮ ಜನ ಬೇಕು ಹೋಗು ಅಂದಾಗ ಶಾಲೆ ತುಂಬಾ ಓಡಾಡಿ ಅಷ್ಟೂ ಮಕ್ಕಳನ್ನು ಒಟ್ಟು ಸೇರಿಸಿದ್ದಾನೆ. ಅವನಲ್ಲಿರುವ ಸಂಘಟನಾ ಚತುರತೆ ಇಷ್ಟವಾಯಿತು. ಅವರೆಲ್ಲರನ್ನೂ ಸೇರಿಸಿ ನನ್ನ ಬಳಿಗೆ ಕರೆದುಕೊಂಡು ಬಂದ ‘ಸರ್ ನಮ್ಮಗಳಿಗೆ ಒಂದು ನಾಟಕ ಕಲಿಸಿಕೊಡಿ’ಎಂದ. ‘ಮರ್ಯಾದೆ ಇಂದ ಹೋಗಿ ತರಗತಿಲಿ ಇರೋದು ಕಲಿರಿ’‘ಸರ್ ಇದು ಕೂಡ ಮುಖ್ಯ ಅಲ್ವಾ ಸರ್? ನೀವು ತುಂಬಾ ನಾಟಕಗಳಲ್ಲಿ ಮಾಡಿದಿರಾ, ಮಾಡಿಸ್ತಾ ಇರ್ತಿರ ಅಂತ ಗೊತ್ತಿದೆ ಸಾರ್, ಯಾವುದಾದರೂ ಒಂದು ನಾಟಕ ಮಾಡಿಸಿ ದಯವಿಟ್ಟು ಇಲ್ಲ ಅನ್ಬೇಡಿ, ನಾವು ಮಾಡ್ತೀವಿ ಸರ್..’ ಇವನ ಮಾತು. (ತಯಾರು ಮಾಡಿದರೆ ಒಳ್ಳೆಯ ತಂಡ ಆಗತ್ತೆ ಅದರಲ್ಲಿ ಅನುಮಾನವೇ ಇಲ್ಲ ಅನ್ನೋ ರೀತಿ ಅವತ್ತು ಆ ಮಕ್ಕಳೆಲ್ಲಾ ಕಂಡರು) ಆಗಲಿ ನಾಳೆ ಸಂಜೆಯಿoದ ಶುರು ಮಾಡೋಣ ಎಂದಾಗ ಆಹಾ ಅದೇನೋ ‘ಯುದ್ಧ ಗೆದ್ದಷ್ಟು’ ಖುಷಿಯಿಂದ ಹೋದರು.
ಮರುದಿನ ಯಾವ ನಾಟಕ ಎಂದು ನಿರ್ಧರಿಸಲು ಶುರು ಮಾಡಿದೆವು. ಕೊಟ್ಟಿದ್ದ ವಿಷಯವನ್ನು ನೋಡಿದಾಗ ಮೂಢನಂಬಿಕೆ ಬಗ್ಗೆ ಇದ್ದದ್ದು ತಿಳಿದು ಒಂದು ನಾಟಕವನ್ನು ತಯಾರಿಸಿದೆವು. ಪ್ರತಿನಿತ್ಯವೂ ಮಕ್ಕಳು ಉತ್ಸಾಹದಿಂದ ಅಭಿನಯಿಸುತ್ತಿದ್ದರು, ಕೊಟ್ಟ ಸಂಭಾಷಣೆಯನ್ನು ಚೆನಾಗಿ ಹೇಳ್ತಾ ಇದ್ದರು. ಸ್ಫರ್ಧೆಯಲ್ಲಿ ನಾಟಕದ ಪ್ರದರ್ಶನವನ್ನು ಮಾಡಿದರು. ಅಂತಿಮವಾಗಿ ತೀರ್ಪು ಬಂದಾಗ ನಮ್ಮ ನಾಟಕಕ್ಕೆ ೧ ಪ್ರಶಸ್ತಿ ಬಂದಾಗ ಈ ಮಕ್ಕಳು ಕುಣಿದು ಕುಪ್ಪಳಿಸಿದ ರೀತಿ ಈಗಲೂ ಕಣ್ಣಮುಂದಿದೆ. ಅಂದಿನಿoದ ಇವನು ನನ್ನ ಜೊತೆಯಲ್ಲಿಯೇ ಇರಲು ಶುರು ಮಾಡಿದ.
ಶಾಲೆಯಲ್ಲಿ ಯಾವುದೇ ಕರ‍್ಯಕ್ರಮವಿದ್ದರೆ ವೇದಿಕೆಯ ಹಿಂಭಾಗದ ಕೆಲಸದಲ್ಲಿ ಈತ ನನಗೆ ಸಹಾಯಕನಾಗಿ ಇರುತ್ತಿದ್ದ. ರಸಪ್ರಶ್ನೆ ನಡೆಸುವಾಗ ಹಾಡನ್ನು ಗುರುತಿಸುವ ಸುತ್ತು ಇರೋದು, ‘ಸರ್ ನಾನು ಗಿಟಾರ್ ನುಡಿಸ್ತಿನಿ ನೀವು ಯಾವುದಾದರೂ ಹಾಡು ಹೇಳಿ ಸರ್ ನಾನು ತಯಾರು ಮಾಡಿಕೊಂಡು ಬರ್ತಿನಿ’ ಆಗಲಿ ಪ್ರಯತ್ನ ಮಾಡುವ ಅನ್ಕೊಂಡೆ ಮೂರು ದಿನಗಳಲ್ಲಿ ೪ ಹಾಡುಗಳ ಪಲ್ಲವಿಯನ್ನು ಕಲಿತು ಬಂದಿದ್ದ. ಇವನ ಜೊತೆಗೆ ಅನನ್ಯಎಂ.ಕೆ ಗಿಟಾರ್‌ನಲ್ಲಿ, ಆದಿತ್ಯ ಸಿದ್ದಾಂತಿ ಕೀಬೋರ್ಡ್ನಲ್ಲಿ ಜೊತೆಯಾದರು. ರಸಪ್ರಶ್ನೆಯಲ್ಲಿ ವಾದ್ಯಗಳಲ್ಲಿ ನುಡಿಸಿದ ಹಾಡುಗಳನ್ನು ಕೇಳಿದ್ದು ಕೂಡ ಬಹುತೇಕ ಮಕ್ಕಳಿಗೆ ಖುಷಿ ಕೊಟ್ಟಿತು. ‘ಇವನು ಇದನ್ನು ಬೇರೆ ಕಲಿತಿದಾನೋ? ಓದಲ್ಲ ಬರಿಯಲ್ಲ ಅನ್ಕೊಂಡಿದ್ವಿ, ಪರವಾಗಿಲ್ಲ ಸರ್ ನಿಮ್ಮ ಶಿಷ್ಯ’ಎಂದು ಕೆಲವು ಟೀಚರ್‌ಗಳು. ಹೌದಲ್ವಾ ಒಳ್ಳೆಯ ಶಿಷ್ಯ ಸಿಕ್ಕಿದ ಪರವಾಗಿಲ್ಲ ಅನ್ಕೊಂಡೆ. ಒಮ್ಮೆ ಅವನ ಪೋಷಕರು ಶಾಲೆಗೆ ಬಂದಾಗ, ‘ಎಲ್ಲಾದರಲ್ಲೂ ಇದಾನೆ, ಓದೋದರಲ್ಲಿ ಬಿಟ್ಟು, ನೀವು ಸ್ವಲ್ಪ ಹೇಳಿ ಸರ್ ನಿಮ್ಮ ಮಾತು ಕೇಳೇಕೇಳ್ತಾನೆ’ಅಂದಿದ್ರು, ಅದಾದ ಮೇಲೆ ಒಮ್ಮೆ ಆತನನ್ನು ಕರೆದು ಹೇಳಿದೆ, ‘ಶಂತನು, ಬೇರೆ ಎಲ್ಲಾದರಲ್ಲೂ ಇದಿಯ, ಸ್ವಲ್ಪ ಓದುವ ಬಗ್ಗೆಯೂ ಗಮನ ಇರಲಿ, ಪರೀಕ್ಷೆಲಿ ಬರೆಯೋದೇ ಮುಖ್ಯಕಣೋ’‘ಆಗಲಿ ಸರ್ ನಿಮ್ಮ ಶಿಷ್ಯ ಓದಲ್ಲ ಅಂತ ಯಾರೂ ಹೇಳಬಾರದು ಆದಷ್ಟು ಪ್ರಯತ್ನ ಮಾಡ್ತಿನಿ’ ಅಂದಿನಿoದ ಓದಿನ ಕಡೆಗೂ ಗಮನ ಹರಿಸಿದ. ೧೦ನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣನಾದನು. ಈಗ ಆತ ಇಂಜಿಯರಿoಗ್ ಮಾಡುತ್ತಿದ್ದಾನೆ. ಕಾಲೇಜ್‌ನಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನಾಟಕವನ್ನು ಸಿದ್ಧಪಡಿಸಿದ್ದಾನೆ. ಕಾಲೇಜ್‌ನ ಸಾಂಸ್ಕೃತಿಕ ಪ್ರತಿನಿಧಿಯಾಗಿ ಆಯ್ಕೆಯೂ ಸಹ ಆಗಿದ್ದಾನೆ. ಆಗಾಗ ಕಾಲ್ ಮಾಡಿ ವಿಚಾರಿಸುತ್ತ, ಊರಿಗೆ ಬಂದರೆ ಶಾಲೆಗೆ ತಪ್ಪದೇ ಬಂದಾಗ ತನ್ನ ಬೆಳವಣಿಗೆಯ ಬಗ್ಗೆ ಹೇಳ್ತಾ ‘ಸರ್ ಶಾಲೆಲಿ ಎಲ್ಲಾ ಶಿಕ್ಷಕರು ನನಗೆ ಬೈದದ್ದು, ಹೊಡೆದದ್ದು, ಹೋಂವರ್ಕ್ ಮತ್ತೆಮತ್ತೆ ಬರೆಸಿದ್ದು, ಉತ್ತರ ಹೇಳೋತನಕ ಬಿಡದೇಇದ್ದದ್ದು, ಜೊತೆಗಿದ್ದು ಹಲವಾರು ರೀತಿಯಲ್ಲಿ ಬೆನ್ನುತಟ್ಟಿ ಪ್ರೋತ್ಸಾಹಿಸಿ ಬೆಳಸಿದ್ದು ಇವೆಲ್ಲವನ್ನೂ ಈಗಲೂ ನೆನೆಸಿಕೊಳ್ಳುತ್ತೇನೆ. ನಿಮ್ಮ ಶಿಷ್ಯ ಒಳ್ಳೆಯ ವಿದ್ಯಾರ್ಥಿ ಅಂತ ನಿರೂಪಿಸ್ತಾ ಇದೀನಿ ಸಾರ್’ ಎಂದಾಗ ಅದೇನೋ ಒಂದು ಸಮಾಧಾನ.
ಪ್ರತಿಯೊಬ್ಬ ಶಿಕ್ಷಕರಿಗೂ ಈ ರೀತಿಯ ಪಟ್ಟಶಿಷ್ಯ ಎಂದು ಕರೆಸಿಕೊಳ್ಳುವ ಒಬ್ಬ ವಿದ್ಯಾರ್ಥಿ ಪ್ರತೀ ವರ್ಷ ಇದ್ದೇ ಇರೋದು ಗೊತ್ತಿರೋ ವಿಷಯ. ಎಲ್ಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಿದಾಗ ಅದು ಶಿಕ್ಷಣ ಕ್ಷೇತ್ರದಲ್ಲೋ, ಇತರ ಸಾಂಸ್ಕೃತಿಕ ವಲಯದಲ್ಲೋ ಉತ್ತಮ ಹೆಸರನ್ನು ಗಳಿಸಿದರೆ, ಆ ಸಮಯದಲ್ಲಿ ಆ ವಿದ್ಯಾರ್ಥಿ ಶಿಕ್ಷಕರನ್ನು ನೆನಪಿಸಿಕೊಂಡು ತನ್ನ ಬೆಳವಣಿಗೆಯ ಬಗ್ಗೆ ತಿಳಿಸುತ್ತಾ, ಉತ್ತಮ ದಾರಿಯಲ್ಲಿ ಸಾಗುತ್ತಿದ್ದೇನೆ ಎಂದು ತಿಳಿಸಿದರೆ ಅದೆಷ್ಟು ಅದಮ್ಯವಾದ ಸಂತೋಷ, ಸಾರ್ಥಕತೆ ಶಿಕ್ಷಕರ ಬಾಳಲ್ಲಿ…