ನಾವೂ ಬದುಕುವ ನಮ್ಮೊಡನೆ ನಮಗಾಸರೆಯಾಗಿಹ ಪರಿಸರವನ್ನೂ ಉಳಿಸಿಕೊಳ್ಳಲು ಸಂಕಲ್ಪ ಮಾಡುವ
ಬರಹ: ಮೂ.ಕು.ಸ್ವಾಮಿ. June 05, 2021
ಬೆಳೆಯಿರಿ ಗಿಡ,ಮರ ಅಳಿಯದಿರಲಿ ಪರಿಸರ, ಉಸಿರ ನೀಡಿ ಸರ್ವರ ಬದುಕನ್ನೂ ಸುಂದರಗೊಳಿಸಲಿ ಪರಿಸರ. ನಾವಿಂದು ೪ ಜಿ ಯುಗದಲ್ಲಿದ್ದೇವೆ.ಪಟ್ಟಣದಲ್ಲೇ ವಾಸ, ಕಾಂಕ್ರೀಟ್ ಕಾಡು, ಮಮತೆ ಪ್ರೀತಿ, ವಾತ್ಸಲ್ಯಗಳಿಗೂ ಬರ. ಕೂಡು ಕುಟುಂಬವಿಲ್ಲ, ಕುಳಿತು ಉಣ್ಣುವ ವ್ಯವಧಾನವಿಲ್ಲ, ಎಲ್ಲವೂ ಅಯೋಮಯ. ಮಳೆಗಾಲ, ಬೇಸಿಗೆ, ಚಳಿಗಾಲವೆಂಬ ಪರಿವೆಯೂ ಅರಿವಿಗೆ ಬಾರದಾಗಿದೆ.
ಮಾನವ ಜೀವಸಂಕುಲ ಇಂದು ವಿವೇಚನಾ ಶೂನ್ಯನಾಗಿ ಪ್ರಕೃತಿ ನೀಡಿರುವ ಸ್ವಾಭಾವಿಕ ಸಂಪತ್ತನ್ನು ಎಗ್ಗಿಲ್ಲದೆ ವಿನಾಶಗೊಳಿಸುತ್ತಿದ್ದಾನೆ. ಇದರ ಧೂರ್ತಫಲವೇ ಮಣ್ಣಿನ ಸವಕಳಿ, ನೆರೆಹಾವಳಿ, ಅಕಾಲಿಕ ಮಳೆ, ಅಮೂಲ್ಯವಾದ ವನಸಂಪತ್ತು, ವನ್ಯಜೀವಿಗಳೊಂದಿಗೆ ಜೀವಜಲದ ಸೆಲೆಗಳು, ಒಟ್ಟಾರೆಯಾಗಿ ಜೀವಸಂಕುಲ ವಿನಾಶದತ್ತ ಮುಖಮಾಡಿದೆ.
ಸಧ್ಯ ಪ್ರಸ್ತುತವಿರುವ ಮರಗಿಡಗಳು, ಪ್ರಾಣಿ ಪಕ್ಷಿಗಳು, ಅಂತರ್ಜಲದ ಸದ್ಬಳಕೆ, ಜಲಚರಗಳ ಸಂರಕ್ಷಣೆಗೆ ಸುರಕ್ಷತಾ ಕಾರ್ಯಯೋಜನೆ ರೂಪಿಸಿ ಕಲ್ಯಾಣ ಕೈಂಕರ್ಯ ಕೈಗೊಳ್ಳದಿದ್ದಲ್ಲಿ ಮನುಕುಲಕ್ಕೆ ಗಂಡಾಂತರ ತಪ್ಪಿದ್ದಲ್ಲ. ಮಾನವ ಇಂದು ತನ್ನ ಸ್ವಾರ್ಥತೆಗಾಗಿ, ಸ್ವಹಿತಾಸಕ್ತಿಯ ಸಾಧನೆಗೆ ಪರಿಸರದ ಮೇಲೆ ನಿರಂತರ ದಾಂಗುಡಿ ಇಡುತ್ತಿದ್ದಾನೆ. ಇದರ ಪ್ರತಿಫಲವನ್ನೂ ಸ್ವತಃ ಅನುಭವಿಸುತ್ತಲೂ ಇದ್ದಾನೆ.
ಕುಡಿಯುವ ನೀರಿಗೆ ಹಾಹಾಕಾರ, ಉಸಿರಾಡಲು ಗಾಳಿಯಿಲ್ಲದೆ ಜೀವನ್ಮರಣದ ನಡುವೆ ಹೋರಾಟ, ಮರಳು ದಂಧೆ, ಪರಿಸರ ವಿನಾಶದ ಕಾರಣದಿಂದಾಗಿ ಪ್ರಾಣಿ ಪಕ್ಷಿಗಳ ಆವಾಸಸ್ಥಾನಕ್ಕೆ ಕುಂದುಂಟಾಗಿ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಆಹಾರವರಸಿ ವಾಸಸ್ಥಾನ ಬಯಸಿ ನಾಡಿಗೆ ಲಗ್ಗೆ ಇಡುತ್ತಲಿವೆ. ಭವಿತವ್ಯವ ಮನಗಂಡು ಈಗಿನಿಂದಲೇ ಜಾಗೃತರಾಗಿ ಪರಿಸರವನ್ನು ಸಂರಕ್ಷಿಸುವ, ಜೀವಸಂಕುಲವನ್ನು ಸಮತೋಲಿಸುವ ಪರಿಸರದ ಕಾರ್ಯಕ್ಕೆ ಅಡ್ಡಗಾಲು ಹಾಕದಿರುವುದು ಸುಕ್ಷೇಮವೆನಿಸುತ್ತದೆ.
ಚಿತ್ರಪಟಗಳಲ್ಲಷ್ಟೇ ಸೊಗಸಾಗಿ, ವರ್ಣಮಯವಾಗಿ ನೋಡಿಕೊಂಡು ಇರುವುದನ್ನು ಸರಿಸಿ ನೈಜತೆಯನ್ನು, ಸ್ವಾಭಾವಿಕವಾದ ಜೀವಸೆಲೆಯ ಅನಾವರಣಗೊಳಿಸಲು ಸರ್ವರೂ ಸಜ್ಜಾಗಿ ಕಾರ್ಯೋನ್ಮುಖರಾಗಬೇಕಿದೆ. ಪರಿಸರ ಸಮತೋಲನ, ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ ಮತ್ತು ಜವಾಬ್ದಾರಿ. ನಾವೂ ಬದುಕುವ ನಮ್ಮೊಡನೆ ನಮಗಾಸರೆಯಾಗಿಹ ಪರಿಸರವನ್ನೂ ಉಳಿಸಿಕೊಳ್ಳಲು ಸಂಕಲ್ಪ ಮಾಡುವ.
ಇಂತಹ ಉತ್ತಮ ಚಿಂತನೆಗಳು, ಕಾಳಜಿಯಿಂದಷ್ಟೇ ಜೀವಿಗಳ ಸಮತೋಲನ ಸಾಧ್ಯವಾಗುವುದು. ಇಲ್ಲದಿದ್ದರೆ ಎಗ್ಗಿಲ್ಲದೆ ತೊಂದರೆಗೊಳಗಾದ ಪ್ರಕೃತಿ ವಿಕಾರವಾದರೆ ಪರಿಸರವು ಮುನಿದು ಮಾನವನೊಡನೆ ಇಡೀ ಜೀವಸಂಕುಲವನ್ನೇ ತನ್ನೊಡಲೊಳಿ ಆಪೋಷಣೆ ಮಾಡಿಕೊಂಡು ಸರ್ವನಾಶ ಮಾಡಿಬಿಡುವುದರಲ್ಲಿ ಲವಲೇಷದ ಅನುಮಾನವೂ ಇಲ್ಲ.
ಎಚ್ಚರ ಮಾನವ ಎಚ್ಚರ!! ನೀ ಅರಿತು ಬಾಳು ಸದ್ವಿಚಾರ ನಿನ್ನ ಭವಿತವ್ಯದ ಪೀಳಿಗೆಗೂ ಉಳಿಸು ಕ್ಷೇಮದಿ ಪರಿಸರ.
…
Cover Pic: Vivek Srin
Follow Ask Mysuru for more updates.
Comments are closed.