Latest News

ರಂಗಾಯಣದಲ್ಲಿ ದಸರಾ ರಂಗೋತ್ಸವ, ನಾಟಕ ಪ್ರದರ್ಶನ

AskMysuru 05/10/2021

ಕೊರೊನಾ ಸಾಂಕ್ರಾಮಿಕ ರೋಗದಿಂದ ಕಳೆದ ವರ್ಷ ನವರಾತ್ರಿ ರಂಗೋತ್ಸವಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಅನುದಾನ ಕೊರತೆ ನಡೆವೆಯೂ ನವರಾತ್ರಿ ರಂಗ ಉತ್ಸವ ನಡೆಸಲಾಗುತ್ತಿದೆ.

sri krishnadevaraya hampi
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನವರಾತ್ರಿ ಸಮಯದಲ್ಲಿ ರಂಗಾಯಣ ಎಂಟು ದಿನ ದಸರಾ ರಂಗೋತ್ಸವ ಆಯೋಜಿಸುತ್ತಿದೆ.

ಮೈಸೂರು ದಸರಾ ಸಮಯದಲ್ಲಿ ಅರಮನೆ ವೇದಿಕೆ ಹೊರತುಪಡಿಸಿ ರಂಗಾಯಣದಲ್ಲಿ ಮಾತ್ರ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯುತ್ತಿದ್ದು, ಅ. 7 ರಿಂದ 14 ರವರೆಗೆ 8 ದಿನಗಳ ನಡೆಯುವ ದಸರಾ ರಂಗೋತ್ಸವದಲ್ಲಿ 8 ನಾಟಕ ಪ್ರದರ್ಶನಗೊಳ್ಳಲಿವೆ.

ಕೊರೊನಾ ಸಾಂಕ್ರಾಮಿಕ ರೋಗದಿಂದ ಕಳೆದ ವರ್ಷ ನವರಾತ್ರಿ ರಂಗೋತ್ಸವಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಅನುದಾನ ಕೊರತೆ ನಡೆವೆಯೂ ನವರಾತ್ರಿ ರಂಗ ಉತ್ಸವ ನಡೆಸಲಾಗುತ್ತಿದೆ. ಪ್ರತಿ ದಸರಾದಲ್ಲಿ ರಂಗಾಯಣಕ್ಕೆ ನವರಾತ್ರಿ ರಂಗೋತ್ಸವಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. ಈ ವರ್ಷ ಅನುದಾನಕ್ಕೆ ಮನವಿ ಮಾಡಿದ್ದೇವೆ. ಜಿಲ್ಲಾಡಳಿತದಿಂದ ಉತ್ತರ ಬಂದಿಲ್ಲ. ಆದರೂ 8 ದಿನಗಳ ದಸರಾ ರಂಗೋತ್ಸವ ಆಯೋಜಿಸಿದ್ದೇವೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ಕೊರೊನಾದಿಂದ ಕಳೆಗುಂದಿದ್ದ ಮೈಸೂರಿಗೆ ದಸರಾದಿಂದ ಬಂತು ಹೊಸ ಕಳೆ
ಅ. 7ರಂದು ಸಂಜೆ 6ಕ್ಕೆ ದಸರಾ ರಂಗೋತ್ಸವವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಾಮೇಶ್ವರಿ ವರ್ಮ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್‌ ಜವಳಿ, ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ ಸಂವಿಧಾನ ಆಶಯಗಳನ್ನು ಹೇಳುವ ಮತ್ತು ಸಂವಿಧಾನವನ್ನು ಪರಿಚಯಿಸುವ ಸೂತ್ರಧಾರ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಕಲಾವಿದರು ನಟಿಸುತ್ತಿದ್ದಾರೆ ಎಂದು ತಿಳಿಸಿದರು. ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಇದ್ದರು.

ರಾಮೇಶ್ವರಿ ವರ್ಮಗೆ ಗೌರವ
6 ದಶಕಗಳಿಂದ ನಟಿ, ನಿರ್ದೇಶಕಿ, ಸಂಘಟಕರಾಗಿ ಆಧುನಿಕ ರಂಗಭೂಮಿ ಕಟ್ಟಿ ಬೆಳೆಸಿದ ರಾಮೇಶ್ವರಿ ವರ್ಮ ಅವರಿಗೆ ಈ ವರ್ಷ ದಸರಾ ರಂಗ ಗೌರವ ನೀಡಲಾಗುತ್ತಿದೆ. ಸಮತೆಂತೋ ರಂಗಭೂಮಿ ಸಂಸ್ಥೆ ಸ್ಥಾಪಕ ಸದಸ್ಯರಾಗಿ, ಸಮುದಾಯ ತಂಡದಲ್ಲೂಸಕ್ರಿಯ ಕಾರ್ಯಕರ್ತೆಯಾಗಿ ದುಡಿದಿದ್ದಾರೆ. 1997ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.


ಯಾವ್ಯಾಗ ಯಾವ ನಾಟಕ?
~ ಅ. 7ರಂದು ಸಂಜೆ 6.30ಕ್ಕೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಶಿವಮೊಗ್ಗ ರಂಗಯಣ ತಂಡ ಡಾ.ಬೇಲೂರು ರಘುನಂದನ್‌ ರಚನೆ, ಕೃಷ್ಣಮೂರ್ತಿ ಕವತ್ತಾರ್‌ ನಿರ್ದೇಶನದಲ್ಲಿಹತ್ಯಾಕಾಂಡ (ವಿಧುರಾಶ್ವಥದ ವೀರಗಾಥೆ) ನಾಟಕ ಪ್ರದರ್ಶನ.

~ ಅ. 8ರಂದು ಶಿವಮೊಗ್ಗ ರಂಗಾಯಣ ತಂಡ ಕೆ.ವಿ.ಸುಬ್ಬಣ್ಣ ರಚನೆ, ಬಿ.ಆರ್‌.ವೆಂಕಟರಮಣ ಐತಾಳ ನಿರ್ದೇಶನದ ಚಾಣಕ್ಯ ಪ್ರದರ್ಶನ.

~ ಅ. 9, 10ರಂದು ರಂಗಾಯಣದ ಭೂಮಿಗೀತದಲ್ಲಿ ಡಾ.ಎಸ್‌.ಎಲ್‌.ಭೈರಪ್ಪ ಅವರ ಮಹಾರಂಗ ಪ್ರಯೋಗ ಪರ್ವ ನಾಟಕ ಪ್ರದರ್ಶನ.

~ ಅ. 11, 12ರಂದು ಸಂಜೆ 6.30ಕ್ಕೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಎಸ್‌.ರಾಮನಾಥ ರಚನೆ, ಆರ್‌.ಸಿ.ಧನಂಜಯ ನಿರ್ದೇಶನದ ಸೂತ್ರಧಾರ ನಾಟಕ.

~ ಅ. 13, 14ರಂದು ಭೂಮಿಗೀತ ರಂಗಮಂದಿರದಲ್ಲಿ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ, ವೈದೇಹಿ ರಚನೆಯ, ಬಿ.ವಿ.ಕಾರಂತ ನಿರ್ದೇಶನದ ಮೂಕನ ಮಕ್ಕಳು ನಾಟಕವನ್ನು ರಂಗಾಯಣದ ಕಿರಿಯ ರೆಪರ್ಟರಿ ತಂಡ ಪ್ರದರ್ಶಿಸಲಿದೆ.

Contact us for classifieds and ads : +91 9742974234



 
error: Content is protected !!