ಅಜೇಯ ಸಂಸ್ಕೃತಿ ಬಳಗದಿಂದ ಶಿವಮೊಗ್ಗ ನಗರದ ಶಾಲಾ ಮಕ್ಕಳಿಗೆ 1980 ರ ಕಾಲಗಟ್ಟದ ಗೀತೆಗಳಿಗೆ ನೃತ್ಯ ಮಾಡಲು ‘ಮಕ್ಕಳ ಹಬ್ಬ’ ವೇದಿಕೆಯನ್ನು ಕಲ್ಪಿಸಿದ್ದರು. ಅದರ ಸಂಚಾಲಕರಾಗಿದ್ದವರು ರಂಗಭೂಮಿಯ ಆಪ್ತರಾದ ಮೈನಾಸು (ಮೈನಾ ಸುಬ್ರಹ್ಮಣ್ಯ) ಒಮ್ಮೆ ಕಾಲ್‌ಮಾಡಿ, ‘ನೋಡು ಈ ತರಹ ಒಂದು ಕಾರ್ಯಕ್ರಮ ಮಾಡ್ತಾ ಇದೀವಿ, ನಿಮ್ಮ ಶಾಲೆಯ ಮಕ್ಕಳು ಭಾಗವಹಿಸಿದರೆ ಚೆನಾಗಿರತ್ತೆ, ಒಮ್ಮೆ ಶಾಲೆಯಲ್ಲಿ ಕೇಳಿ ನೋಡಬಹುದಾ?’ ‘ಆಗಲಿ’ ಎಂದು ಮರುಮಾತಿಲ್ಲದೆ ಹೇಳಿದೆ. ಶಾಲೆಯ ಮುಖ್ಯೋಪಾಧ್ಯಾಯರಿಗೆ ಈ ವಿಷಯ ತಿಳಿಸಲಾಗಿ ಆಗಬಹುದು ಎಂದರು. ಹಿಂದಿ ಶಿಕ್ಷಕಿ ಅಂಬುಜಾಕ್ಷಿ ಮೇಡಂಗೆ ಇದರ ಉಸ್ತುವಾರಿಯನ್ನು ನೀಡಲಾಯಿತು. ಬಹುತೇಕ 12 ಶಾಲಾ ಮಕ್ಕಳಿಗೂ ವಿವಿಧ ರೀತಿಯ ಹಳೆಯ ಹಾಡುಗಳನ್ನು ನೀಡಿದ್ದರು. ನಮ್ಮ ಶಾಲಾ ಮಕ್ಕಳಿಗೆ ‘ಇಳಿದು ಬಾ ತಾಯೇ ಇಳಿದು ಬಾ’ ಎಂಬ ಗೀತೆಯನ್ನು ನೀಡಲಾಯಿತು. ಈ ಹಾಡಿಗೆ ನೃತ್ಯಮಾಡಿಸುವುದು ಹೇಗೆ? ಎಂಬ ಆಲೋಚನೆ ಮೂಡಿತು. ವಿವಿಧ ಭರತನಾಟ್ಯ ತರಗತಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ಒಂದೆಡೆ ಸೇರಿಸಿ ಈ ಹಾಡಿಗೆ ನೃತ್ಯ ಮಾಡಬಹುದಾ? ಮಾಡುವುದಾದರೆ ಯಾವ ರೀತಿ ಮಾಡಬಹುದು? ಎಂದು ಶಿಕ್ಷಕಿ ಕೇಳಿದರು. ಎಲ್ಲ 9 ವಿದ್ಯಾರ್ಥಿನಿಯರು ಹಳೇಕಾಲದ ಹಾಡಿಗೆ ನೃತ್ಯ ಮಾಡಬೇಕಾ!? ಎಂದರು. ‘ಹಾಡು ಹಳೆಯದಾದರೇನು ಭಾವ ನವನವೀನ’ ಎಂದಾಗ ಶಾಲಿನಿ ಮುಂದೆ ಬಂದು, ‘ಮೇಡಂ ಹೀಗೆ ಮಾಡಬಹುದು, ಹಾಗೆ ಮಾಡಬಹುದು ಎಂಬ ಸಲಹೆಗಳನ್ನು ನೀಡಿದಾಗ, ‘ಸರಿ ನೀನೇ ಇದರ ಜವಾಬ್ದಾರಿ ತಗೋ’ ಎಂದು ಅವರೆಲ್ಲರಿಗೂ ಹಾಡನ್ನು ಮತ್ತೊಮ್ಮೆ ಕೇಳಿಸಿ ಯಾವ ರೀತಿಯಲ್ಲಿ ಹೆಜ್ಜೆಗಳು ಇರಬೇಕು ಎಂಬುದನ್ನು ಎಲ್ಲರೂ ಯೋಚನೆ ಮಾಡಿಕೊಂಡು ನಾಳೆಯಿಂದ ಅಭ್ಯಾಸ ಮಾಡಲು ಸಮಯವನ್ನು ನಿಗಧಿಪಡಿಸಿದ್ದಾಯಿತು.
ಹಾಗೇ ಸುಮ್ಮನೆ ವಿಚಾರಿಸಿದಾಗ ಹಲವಾರು ಉತ್ತಮ ಗೀತೆಗಳಿದ್ದದ್ದು ತಿಳಿಯಿತು. ನಮಗೆ ಆ ಹಾಡನ್ನು, ಈ ಹಾಡನ್ನು ನೀಡಬಹುದಿತ್ತೇನೋ ಎಂದಾಗ ಮೈನಾಸು ಅಣ್ಣ, ‘ಇದರಲ್ಲಿ ಯಾರ ಪಾತ್ರವೂ ಇಲ್ಲ, ಚೀಟಿ ಹಾಕಿದಿವಿ, ಯಾವುದು ಬಂದಿದೆಯೋ ಅದನ್ನು ಮಾಡಲೇಬೇಕಿದೆ. ಹಾಗೆ ನೋಡಿದರೆ ಎಲ್ಲವೂ ವಿಶೇಷತೆ ಇರುವ ಹಾಡುಗಳನ್ನೇ ಆಯ್ಕೆ ಮಾಡಿರೋದು ಅಲ್ವಾ?’ ಎಂದು ನನಗೆ ಮರುಪ್ರಶ್ನೆ ಹಾಕಿದರು. ಹಾಡಿನ ಬಗ್ಗೆ ಸಮಸ್ಯೆಯೇ ಇಲ್ಲ ಏಕೆಂದರೆ ಬರೆದವರು ಕನ್ನಡದ ವರಕವಿ ದ.ರಾ.ಬೇಂದ್ರೆಯವರು. ಈ ಕಡೆ ಸಾಹಿತಿಯ ಮತ್ತು ಸಾಹಿತ್ಯದ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಲಾಯಿತು. ಅಂತೂ ಬಹುಬೇಗ ಎಲ್ಲರೂ ಸೇರಿ ಉತ್ತಮ ಹೆಜ್ಜೆಗಳನ್ನು ಹಾಕತೊಡಗಿದರು. ಹಾಡಿನ ಕೊನೆಯಲ್ಲಿ ಒಬ್ಬರೂ ಗಂಗೆಯಂತೆ, ನೀರಿನ ಪ್ರತಿಬಿಂಬದಂತೆ ಬರಲು ಎಲ್ಲರೂ ಆಕೆಯನ್ನು ಸ್ವಾಗತಿಸುತ್ತ ಇರುವ ರೀತಿಯಲ್ಲಿ ಮಾಡಿಕೊಳ್ಳಬೇಕೆಂದರು ಆದರೆ ಆ ಪಾತ್ರ ಮಾಡುವವರು ಯಾರು? ಎಂದಾಗ ಮೇಡಂ ಹೇಳಿದರು, ‘ಶಾಲಿನಿ ನೀನೇ ಅದನ್ನು ಮಾಡಿಬಿಡು, ಇಲ್ಲಿ ಇರೋರಲ್ಲಿ ನೀನೇ ಬಹಳ ಎತ್ತರ ಇರೋದು’ ಎಂದು ಪಾತ್ರವನ್ನು ಹಂಚಿದ್ದೂ ಆಯಿತು, ದಿನನಿತ್ಯವೂ ಸಂಜೆ, ತರಗತಿ ಬಿಡುವಿದ್ದಾಗ ಹೀಗೆ ಸಮಯವನ್ನು ಹೊಂದಿಸಿಕೊಂಡು ಎಲ್ಲರೂ ಸಿದ್ದತೆಗಳನ್ನು ಚೆನ್ನಾಗಿ ಮಾಡಿಕೊಂಡರು. ಸಮಯ ಸಾಲದಾದಾಗ ಎಲ್ಲರೂ ಒಮ್ಮೆ ಭಾನುವಾರ ಬೆಳಗ್ಗೆ ಬಂದು ಅಭ್ಯಾಸ ಮಾಡಿಕೊಳ್ಳಬಹುದಾ? ಎಂದು ಕೇಳಿದರು. ಮುಖ್ಯೋಪಾಧ್ಯಾಯರು, ‘ಯಾರಾದರೂ ಶಿಕ್ಷಕರು ನೀವು ಅಭ್ಯಾಸ ಮಾಡುವ ಸಮಯದಲ್ಲಿ ಬರುವುದಾದರೆ ಸರಿ, ಪೋಷಕರು ಒಪ್ಪಿಗೆ ನೀಡಿದರೆ ಮಾತ್ರ. ಇಲ್ಲದೇ ಹೋದರೆ ಶಾಲೆಯ ಅವಧಿಯಲ್ಲಿಯೇ ಮಾಡಿಕೊಳ್ಳಿರಿ’ ಈ ಮಾತಿಗೆ ಎಲ್ಲರೂ ಪೋಷಕರನ್ನು ಒಪ್ಪಿಸಿದರು. ಆದರೆ ಶಿಕ್ಷಕರನ್ನು ಒಪ್ಪಿಸುವಲ್ಲಿ ಆಗಲಿಲ್ಲ ಕಾರಣ ಹಿಂದಿ ಮೇಡಂ ಬೇರೆ ಕೆಲಸಗಳಿರುವುದರಿಂದ ಆಗುವುದಿಲ್ಲ ಎಂದರು. ಕೊನೆಗೆ ಚೆಂಡು ಬಂದು ನನ್ನ ಅಂಗಳದಲ್ಲಿ ಬಿತ್ತು. ಒಂದು ರೀತಿಯಲ್ಲಿ ಅಜೇಯ ಬಳಗದ ಜೊತೆಗೆ ಮಾತನಾಡಿದ್ದವನಾದ್ದರಿಂದ ಬೆಳಗ್ಗೆ ಇಂದ ಮಧ್ಯಾಹ್ನದವರೆಗೆ ಮಾತ್ರ ಅಭ್ಯಾಸ ಮಾಡುವ ಸಮಯವಾದರೆ ಸರಿ ಎಂದು ಒಪ್ಪಿಗೆ ನೀಡಿದ್ದಾಯಿತು.
ಮರುದಿನ ಶಾಲೆಯಲ್ಲಿ ಈ ಮಕ್ಕಳು ಮಾತ್ರ. ಪ್ರತಿನಿತ್ಯ ತರಗತಿಯಲ್ಲಿಅ ನೃತ್ಯದ ಅಭ್ಯಾಸ ಮಾಡುತ್ತಿದ್ದವರು ಅಂದು ‘ಶಾಲೆಯ ಮುಖ್ಯ ವೇದಿಕೆಯಲ್ಲಿ ಅಭ್ಯಾಸ ಮಾಡ್ತೀವಿ ಸರ್ ಹೇಗೂ ಇವತ್ತು ತರಗತಿಗಳಿಲ್ಲವಲ್ಲ’ ಎಂದು ಒಪ್ಪಿಗೆಯನ್ನು ಪಡೆದುಕೊಂಡರು. ಶಾಲೆಯಲ್ಲಿ ಮೈಕ್‌ನ ವ್ಯವಸ್ಥೆ ಕೂಡ ಇದ್ದದರಿಂದ ಹಾಗೂ ಹೀಗೂ ಸಂಪೂರ್ಣ ಹಾಡಿಗೆ ಹೆಜ್ಜೆಗಳನ್ನು ಹಾಕಿ ಅಭ್ಯಾಸದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿ ಮಾಡಿಮುಗಿಸಿದರು. ಒಂದಷ್ಟು ವಿರಾಮ, ಹಾಸ್ಯ, ಅಭ್ಯಾಸ, ನಗು ತುಂಬಿದ ಸಮಯದಲ್ಲಿ ನೃತ್ಯ ಮುಗಿಸಿ ಆಯಿತು.
ಒಂದು ದಿನ ನಗರದ ಕುವೆಂಪು ರಂಗಮಂದಿರದಲ್ಲಿ ಕರ‍್ಯಕ್ರಮ. ಎಲ್ಲರೂ ಒಂದೇ ಬಣ್ಣದ ವಸ್ತುವನ್ನು ಹಾಕಲು ನಿರ್ಧರಿಸಿದರು. ಸಂಜೆ ಕರ‍್ಯಕ್ರಮ. ಶಾಲಾವಾರ್ಷಿಕೋತ್ಸವ ಆಗಿದ್ದರೆ ಎಲ್ಲಾ ನಮ್ಮ ಶಾಲೆಯ ಮಕ್ಕಳೇ ಇರುತ್ತಿದ್ದರು. ಇಲ್ಲಿ ನಗರದ ಸರಿಸುಮಾರು 12 ಶಾಲೆಯ ಮಕ್ಕಳು, ಅವರ ಪೋಷಕರು, ಶಾಲಾ ಶಿಕ್ಷಕರು ಭಾಗವಹಿಸಿದ್ದರು. ಅಂತೂ ಇಂತೂ ನಮ್ಮ ಶಾಲೆಯ ಮಕ್ಕಳ ನೃತ್ಯದ ಸಮಯವೂ ಬಂದಿತು. ನಮ್ಮ ಶಾಲಾಮಕ್ಕಳು ನಿಜಕ್ಕೂ ಸುಂದರವಾಗಿ ಅಭಿನಯಿಸಿದರು, ಎಲ್ಲರೂ ಜೋರಾಗಿ ಚಪ್ಪಾಳೆಯನ್ನು ಸಹ ತಟ್ಟಿದರು. ನಿರೂಪಕರು ಮಾತನಾಡಿ, ಹಾಡನ್ನು ಬದಲಾಯಿಸಲು ಸಾಧ್ಯವೇ? ಎಂದು ಕೇಳಿದ್ದರು ಈಗ ನೋಡಿದರೆ ಎಲ್ಲರೂ ಈ ಹಾಡಿಗೆ ನೃತ್ಯ ಮಾಡಿರುವ ಬಗ್ಗೆ, ಜೊತೆಗೆ ಈ ನೃತ್ಯವನ್ನು ಮಕ್ಕಳೇ ಹೆಜ್ಜೆಗಳನ್ನು ಕಲಿತು ಮಾಡಿರುವುದು, ಯಾವ ನೃತ್ಯಶಿಕ್ಷಕರಿಲ್ಲದೇ ತಾವುಗಳೇ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದಾಗ ನಮ್ಮ ಮಕ್ಕಳ ಮೊಗದಲ್ಲಿದ್ದ ಸಂತೋಷ ಈಗಲೂ ಕಣ್ಣಮುಂದಿದೆ. ಈ ನೃತ್ಯದ ಹಿಂದೆ ಮಕ್ಕಳ ಜವಾಬ್ದಾರಿ ತೆಗೆದುಕೊಂಡ ಹಿಂದಿ ಮೇಡಂ ರನ್ನು ವೇದಿಕೆಗೆ ಕರೆದರು ಮಕ್ಕಳ ಜೊತೆಗಿದ್ದಾಗ ಪ್ರತಿಯೊಬ್ಬರಿಗೂ ಭಾರತದ ಹಿರಿಮೆಯನ್ನು ಮೆರೆದ ಸಾಧಕರ ಪುಸ್ತಕಗಳನ್ನು ನೀಡಲಾಯಿತು.
ಅಜೇಯ ಬಳಗ ನಿಜಕ್ಕೂ ಮಕ್ಕಳಲ್ಲಿ ಸಾಹಿತ್ಯ ಸಂಸ್ಕೃತಿಯ ಬಗ್ಗೆ ವಿಭಿನ್ನ ರೀತಿಯಲ್ಲಿ ಯೋಚಿಸಿ, ಅದನ್ನು ಮಕ್ಕಳ ಮೂಲಕ ಮಾಡಿಸಿ, ಈಗಲೂ ಸಹ ಹಳೆಯ ಹಾಡುಗಳು ಎಷ್ಟು ಮಧುರ ಎನಿಸುತ್ತವೆ. ಸಾಹಿತ್ಯವೇ ಕೇಳದ, ವಾದ್ಯಗಳ ಅಬ್ಬರದ ಇಂದಿನ ಸಂಗೀತದ ನಡುವೆ ಎಲ್ಲಾ ಹಳೆಯ ಹಾಡುಗಳು ಮಾಡಿದ ಮೋಡಿ ಮಾತ್ರ ಅವರ್ಣನೀಯ.